ಹಳ್ಳಿ ಉಳಿಸಿ ಸ್ವಾಮಿ: ಗ್ರಾಮಸ್ಥರ ಮನವಿ

7

ಹಳ್ಳಿ ಉಳಿಸಿ ಸ್ವಾಮಿ: ಗ್ರಾಮಸ್ಥರ ಮನವಿ

Published:
Updated:

ಕೊರಟಗೆರೆ: ತಾಲ್ಲೂಕಿನ ತಣ್ಣೇನಹಳ್ಳಿ ಗ್ರಾಮದ ಜನ ಮಂಡಿಸಿದ ಬೇಡಿಕೆ ಇದು.

ಹಳ್ಳಿಗಳಲ್ಲಿ ಸೂಕ್ತ ಮೂಲ ಸೌಕರ್ಯಗಳಿಲ್ಲ. ಕೂಲಿ ಕೆಲಸ ಸಿಗುತ್ತಿಲ್ಲ. ಯುವಕ- ಯುವತಿಯರು ಬೆಂಗಳೂರಿನ ಗಾರ್ಮೆಂಟ್ಸ್ ಕಾರ್ಖಾನೆಗಳಿಗೆ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ. ಶೀಘ್ರ ಸಮಸ್ಯೆ ಪರಿಹರಿಸಲು ಗಮನ ಹರಿಸದಿದ್ದರೆ ಹಳ್ಳಿಗಳು ಖಾಲಿಯಾಗುತ್ತವೆ ಎಂದು ಗ್ರಾಮಸ್ಥರು ವಿವರಿಸಿದರು.ಕೂಲಿ ಕೆಲಸ ಹುಡುಕಿಕೊಂಡು ಅನೇಕರು ಬೇರೆ ಜಿಲ್ಲೆಗಳಿಗೆ ಹೋಗುತ್ತಿದ್ದಾರೆ. ಸರ್ಕಾರ ಶೀಘ್ರ ಗಮನ ಹರಿಸದಿದ್ದರೆ ಮುಂದೊಂದು ದಿನ ಹಳ್ಳಿಗಳು ಖಾಲಿಯಾಗುತ್ತವೆ ಎಂದು ಖೇದ ವ್ಯಕ್ತಪಡಿಸಿದರು.ಬರದ ಛಾಯೆ

ಜನರ ಮಾತು ಕೇಳಿದಾಗ ಜಿಲ್ಲೆಯಲ್ಲಿ ಬರದ ಛಾಯೆ ಇರುವುದು ಗೋಚರಿಸುತ್ತದೆ. ಜಿಲ್ಲೆಯ ಪರಿಸ್ಥಿತಿ ಕುರಿತು ನಾವು ಕೇಂದ್ರದ ಉನ್ನತಾಧಿಕಾರ ಸಮಿತಿಗೆ ವರದಿ ಸಲ್ಲಿಸುತ್ತೇವೆ. ಅನುದಾನ ಬಿಡುಗಡೆ ಮಾಡುವುದು ಅವರ ಕೆಲಸ. ರಾಜ್ಯದಲ್ಲಿ ಇಂಧನ (ವಿದ್ಯುತ್) ಕೊರತೆ ಇರುವ ಕುರಿತು ಮಾಹಿತಿ ಇದೆ. ಆದರೆ ಈ ಸಮಸ್ಯೆ ಪರಿಹರಿಸಬೇಕಾದ್ದು ರಾಜ್ಯದ ಕೆಲಸ. ನಾವು ಅಗತ್ಯ ಸೌಲಭ್ಯವನ್ನು ಮಾತ್ರ ಒದಗಿಸಬಹುದು ಎಂದು ಬರ ಅಧ್ಯಯನ ತಂಡದ ಪ್ರತಿನಿಧಿಗಳು ಹೇಳಿದರು.ಮೇವು ನಿಧಿ ಸ್ಥಾಪಿಸಿ: ಜಯಚಂದ್ರ

ಶಿರಾ: ಪ್ರತಿ ಹೋಬಳಿ ಕೇಂದ್ರದಲ್ಲಿ ಮೇವು ನಿಧಿ ಸ್ಥಾಪಿಸಿ ರೈತರಿಗೆ ಸಹಾಯಧನದಡಿ ಮೇವು ವಿತರಿಸುವಂತೆ ಶಾಸಕ ಟಿ.ಬಿ.ಜಯಚಂದ್ರ ಮನವಿ ಮಾಡಿದರು.ತಾಲ್ಲೂಕಿನ ಭೂತಪ್ಪನಗುಡಿ ಬಳಿ ಸ್ಥಾಪಿಸಿರುವ ಗೋಶಾಲೆಗೆ ಸೋಮವಾರ ಸಂಜೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಬರದ ಹಿನ್ನೆಲೆಯಲ್ಲಿ ವಾಣಿಜ್ಯ ಬ್ಯಾಂಕ್‌ಗಳು ರೈತರಿಗೆ ನೀಡಿರುವ ಸಾಲವನ್ನು ಮರುಪಾವತಿ ಮಾಡುವಂತೆ ಒತ್ತಾಯಿಸದಂತೆ ಸೂಚಿಸುವಂತೆ ಕೇಂದ್ರ ತಂಡಕ್ಕೆ ಕೋರಿದರು.ಸಂಜೆ 4ಗಂಟೆಗೆ ತಾಲ್ಲೂಕಿಗೆ ಆಗಮಿಸಿದ ಕೇಂದ್ರ ಬರ ಅಧ್ಯಯನ ತಂಡ ಪೂರ್ವ ನಿಗದಿತ ಕಸಬಾ ಹೋಬಳಿ ಬೋರಸಂದ್ರಕ್ಕೆ ಭೇಟಿ ನೀಡದೆ ನೇರ ಭೂತಪ್ಪನಗುಡಿ ಗೋಶಾಲೆಗೆ ತೆರಳಿ ವೀಕ್ಷಣೆ ನಡೆಸಿ ಅಧಿಕಾರಿಗಳು, ರೈತರು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದರು.ಗಂಡಿಹಳ್ಳಿಮಠ ಹಾಗೂ ಭೂತಪ್ಪನಗುಡಿಯಲ್ಲಿ ಗೋಶಾಲೆ ಆರಂಭಿಸಲಾಗಿದ್ದು, ಈವರೆಗೆ ರಾಸುಗಳಿಗೆ ಮೇವು ನೀಡಲಾಗಿದೆ. ಇದರಿಂದ 809 ಕುಟುಂಬಗಳಿಗೆ ಪ್ರಯೋಜನವಾಗಿದೆ ಎಂದು ತಾಲ್ಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗೌ.ಮು.ನಾಗರಾಜು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

ತಾಲ್ಲೂಕಿನ ರೈತರಿಂದ ಮತ್ತಷ್ಟು ಗೋಶಾಲೆ ತೆರೆಯುವಂತೆ ಬೇಡಿಕೆ ಇದೆ. ಅಲ್ಲದೆ ಮೇವು ಬೀಜಕ್ಕೂ ಬೇಡಿಕೆ ಬರುತ್ತಿದೆ ಎಂದು ತಿಳಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ದೊಡ್ಡಯ್ಯ, ಉಪವಿಭಾಗಾಧಿಕಾರಿ ಸಿ.ಅನಿತಾ, ತಹಶೀಲ್ದಾರ್ ನಾಗಹನುಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಕೆ.ಬಡೀರಣ್ಣ, ಅರೇಹಳ್ಳಿ ರಮೇಶ್, ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗರಾಜು ಮತ್ತಿತರರು ಇದ್ದರು.ಕೆರೆ ಹೂಳೆತ್ತಿಸಲು ಮನವಿ

ಮಧುಗಿರಿ: ತಾಲ್ಲೂಕಿನ ಹೊಸಕೆರೆ, ಬಿದರಕೆರೆ, ಬೇಡತ್ತೂರು, ಆಪ್ಪೆನಹಳ್ಳಿ ಗ್ರಾಮಗಳಲ್ಲಿ ಫೋರೈಡ್‌ಯುಕ್ತ ನೀರು ಬಳಕೆಯಾಗುತ್ತಿದೆ. ಇದರಿಂದ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಸ್ಥಳೀಯರು ಬರ ಅಧ್ಯಯನ ತಂಡದ ಮುಖಂಡ ನಂದಕುಮಾರ್ ಅವರಿಗೆ ವಿವರಿಸಿದರು.ಹಲವು ಗ್ರಾಮಗಳಲ್ಲಿ ಕೆರೆಗಳನ್ನು ವೀಕ್ಷಿಸಿದ ನಂತರ ರೈತರೊಂದಿಗೆ ಕೇಂದ್ರದ ಪ್ರತಿನಿಧಿಗಳು ಸಂವಾದ ನಡೆಸಿದರು. ಬೆಳೆ ವಿಮೆ, ಶಾಶ್ವತ ನೀರಾವರಿ, ಕೆರೆಗಳ ಹೂಳೆತ್ತಿಸುವ ಕುರಿತು ರೈತರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಎಲ್ಲೆಡೆ ಜಲಕ್ಷಾಮ ತಲೆದೋರಿದೆ. ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಸಿಗದೆ ರೈತರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಮುಂಗಾರು ಮಳೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಒದಗಿಸಲು ಸೂಚಿಸಬೇಕೆಂಧು ರೈತರು ವಿನಂತಿಸಿದರು.ಉಪವಿಭಾಗಾಧಿಕಾರಿ ಸಿ.ಅನಿತಾ, ತಹಶೀಲ್ದಾರ್ ಆರ್.ನಾಗರಾಜಶೆಟ್ಟಿ, ತಾ.ಪಂ ಕಾರ್ಯನಿರ್ವಣಾಧಿಕಾರಿ ಎಚ್.ಡಿ.ಮಹಲಿಂಗಯ್ಯ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry