ಹಳ್ಳಿ ಘಮಲಿನ ಬಯಲು ಸಿನಿಮಾ

7

ಹಳ್ಳಿ ಘಮಲಿನ ಬಯಲು ಸಿನಿಮಾ

Published:
Updated:

ಬೆಂಗಳೂರು: ನೀಲಿ ಆಗಸ ಕಪ್ಪಾಗುತ್ತಿದೆ. ತಾರೆಗಳು ಮಿನುಗತೊಡಗಿವೆ. ಅಲ್ಲೆಲ್ಲೋ ಇಂಪಾದ ದನಿ `ಮಧುರ ಮಧುರವೀ ಮಂಜುಳಗಾನ' ಎನ್ನುತ್ತಿದೆ. ವಿಹಾರಕ್ಕೆ ಬಂದವರು ಇದೇನಿದು ಎಂಬ ಅಚ್ಚರಿಯೊಂದಿಗೆ ಗುಂಪುಗೂಡುತ್ತಿದ್ದಾರೆ. ಮರುಕ್ಷಣದಲ್ಲೇ ಬೆಳ್ಳಿತೆರೆಯ ಮೇಲೆ ದೃಶ್ಯವೊಂದು ಮೂಡುತ್ತಿದೆ...ನಗರದ ಸ್ವಾತಂತ್ರ್ಯ ಉದ್ಯಾನದ ತೆರೆದ ನಾಟಕ ಮಂದಿರದಲ್ಲಿ ಪಾಸ್ ತೋರಿಸಿ ಎನ್ನುವವರಿಲ್ಲ. ಸರತಿ ಸಾಲಿನಲ್ಲಿ ನಿಲ್ಲಬೇಕಿರಲಿಲ್ಲ. ಇದೇ ಆಸನದಲ್ಲಿ ಕೂರಿ ಎಂದು ತಾಕೀತು ಮಾಡುವವರೂ ಇರಲಿಲ್ಲ. ಅಲ್ಲಿದ್ದದ್ದು ಸಿನಿಮಾ ಮಾತ್ರ. ಹುಲ್ಲು ಹಾಸು, ಕಲ್ಲು ಬೆಂಚು ಹೀಗೆ ಎಲ್ಲೆಂದರಲ್ಲಿ ಕುಳಿತು ಜನ ಪುಕ್ಕಟ್ಟೆ ಸಿನಿಮಾ ಸವಿದರು. ಕೆಲವರು ನಿಡಿದಾಗಿ ಕಾಲು ಚಾಚಿ, ಗೋಡೆಗೆ ಬೆನ್ನೊರಗಿಸಿ, ಕಡಲೆಬೀಜ ಮೆಲ್ಲುತ್ತ ಬಣ್ಣದ ಲೋಕದಲ್ಲಿ ಕರಗಿ ಹೋದರು.ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಬಯಲು ಚಿತ್ರ ಪ್ರದರ್ಶನಕ್ಕೆ ಸ್ಫೂರ್ತಿ ಗೋವಾದಲ್ಲಿ ನಡೆಯುವ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ. ಅಲ್ಲಿ ಸಮುದ್ರ ತೀರದಲ್ಲಿ ನಡೆಯುವ ಸಿನಿಮಾ ಪ್ರದರ್ಶನವನ್ನು ಅನುಸರಿಸಿ ಇಲ್ಲಿ ಬಯಲು ಚಿತ್ರೋತ್ಸವ ಆಯೋಜಿಸಲಾಯಿತು.ಒಟ್ಟು ಆರು ದಿನಗಳ ಕಾಲದಲ್ಲಿ ನಡೆದ ಪ್ರದರ್ಶನದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಜನಪ್ರಿಯ ಹಾಗೂ ಸದಭಿರುಚಿಯ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು. ಕನ್ನಡದ `ಬಂಗಾರದ ಮನುಷ್ಯ', `ಸ್ತ್ರೀ ಶಕ್ತಿ', `ನಾಗರಹಾವು' ಚಿತ್ರಗಳ ಜೊತೆಗೆ ತೆಲುಗಿನ `ಸಾಗರ ಸಂಗಮಂ', ತಮಿಳಿನ `ಬಾಷಾ' ಹಾಗೂ ಮಲಯಾಳಂನ `ಟ್ರಾಫಿಕ್' ಚಿತ್ರಗಳು ಪ್ರದರ್ಶನ ಕಂಡವು.ಪ್ರತಿ ಚಿತ್ರವೂ ಪ್ರದರ್ಶನಗೊಳ್ಳುತ್ತಿದ್ದುದು ಅಪ್ಪಟ ಹಳ್ಳಿ ಸಿನಿಮಾ ಮಾದರಿಯಲ್ಲಿ. ಹಳ್ಳಿಯ ಟೆಂಟ್ ಒಂದರಲ್ಲಿ `ನಮೋ ವೆಂಕಟೇಶ' ಹಾಡು ಮೊಳಗುವಂತೆ ಇಲ್ಲಿಯೂ ಹಾಡುಗಳೇ ನಾಂದಿ ಹಾಡಿದವು. ಚಿತ್ರ ಪ್ರದರ್ಶನಕ್ಕೆ ಸುಮಾರು ಅರ್ಧಗಂಟೆ ಮುನ್ನ ನಾಡಿನ ಪ್ರಸಿದ್ಧ ಗಾಯಕ ಗಾಯಕಿಯರು ಚಿತ್ರಗೀತೆಗಳನ್ನು ಉಣಬಡಿಸುತ್ತಿದ್ದರು. ಅದು ಪ್ರದರ್ಶನಕ್ಕೆ ನೀಡುವ `ಕರೆಯೋಲೆ'.ಬಯಲು ಉತ್ಸವದ ಉದ್ಘಾಟನಾ ಚಿತ್ರ `ಬಂಗಾರದ ಮನುಷ್ಯ' ನೋಡಲು ಸುಮಾರು ನಾನ್ನೂರು ಮಂದಿ ಸೇರಿದ್ದರು. `ಸಾಗರ ಸಂಗಮಂ' ಚಿತ್ರಕ್ಕೂ ಅದ್ದೂರಿ ಪ್ರತಿಕ್ರಿಯೆ. ಚಿತ್ರದ ನಿರ್ದೇಶಕ ಕೆ. ವಿಶ್ವನಾಥ್ ಅವರಿಗೆ ಸಾಮಾನ್ಯ ಪ್ರೇಕ್ಷಕರಿಂದ ಪ್ರಶ್ನೆಗಳ ಸುರಿಮಳೆ. ಭಾನುವಾರವಾದ್ದರಿಂದ ತಮಿಳಿನ `ಬಾಷಾ' ಚಿತ್ರ ಬೇರೆ ಖದರು ಪಡೆದಿತ್ತು. ಗುರುವಾರ ಪ್ರದರ್ಶನಗೊಂಡ ನಾಗರಹಾವು ವೀಕ್ಷಿಸಲು ಅನೇಕ ವರ್ಗದ ಜನ ಬಂದದ್ದು ವಿಶೇಷವಾಗಿತ್ತು.ಸಂಘಟಕರು ಮೊದಲು ಸಭೆ ಸೇರಿದಾಗ ನಗರದ ನ್ಯಾಷನಲ್ ಕಾಲೇಜು ಮೈದಾನ, ಅಥವಾ ಮಲ್ಲೇಶ್ವರ ಆಟದ ಮೈದಾನದಲ್ಲಿ ಬಯಲು ಸಿನಿಮೋತ್ಸವ ನಡೆಸಲು ಚಿಂತಿಸಿದ್ದರು. ಆದರೆ ಬಿಬಿಎಂಪಿಯ ಕೆಲವು ಅಧಿಕಾರಿಗಳು ನಗರದ ಮಧ್ಯ ಭಾಗದಲ್ಲಿರುವುದರಿಂದ, ಸಂಚಾರಕ್ಕೂ ಅನುಕೂಲಕರವಾಗಿರುವುದರಿಂದ ಸ್ವಾತಂತ್ರ್ಯ ಉದ್ಯಾನದ ಹೆಸರು ಪ್ರಸ್ತಾಪಿಸಿದರು. ಪ್ರೇಕ್ಷಕರ ಹೊರತಾಗಿ ಬೇರೆಯವರು ಸುಲಭವಾಗಿ ಪ್ರವೇಶಿಸಲು ಇಲ್ಲಿ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮುಂದಿನ ವರ್ಷವೂ ಇಲ್ಲಿಯೇ ಚಿತ್ರೋತ್ಸವ ನಡೆಸಲು ಸಂಘಟಕರು ನಿರ್ಧರಿಸಿದ್ದಾರೆ.`ಸ್ತ್ರೀ ಶಕ್ತಿ' ಚಿತ್ರ ವೀಕ್ಷಣೆಗೆ ಬಂದ ಹಿರಿಯ ನಾಗರಿಕ ಪ್ರಕಾಶ್‌ಮೂರ್ತಿ, `ಮನೆ ಮಂದಿಯೆಲ್ಲಾ ಕುಳಿತು ನೋಡುವಂತಹ ಸಿನಿಮಾಗಳನ್ನು ಪ್ರದರ್ಶಿಸಲಾಗಿದೆ. ಚಳಿ ಎನ್ನುವುದನ್ನು ಹೊರತುಪಡಿಸಿದರೆ ಇಲ್ಲಿ ಎಲ್ಲವೂ ಚೆನ್ನಾಗಿದೆ. ಕೆಲವರು ಶಾಲು ಹೊದ್ದು, ಸ್ವೆಟರ್ ತೊಟ್ಟು ಸಿನಿಮಾ ವೀಕ್ಷಿಸಿದ್ದು ವಿಶೇಷವಾಗಿತ್ತು. ಚಿಕ್ಕಂದಿನಲ್ಲಿ ಬಯಲಿನಲ್ಲಿ ಕುಳಿತು ಸಿನಿಮಾ ನೋಡಿದ್ದ ನಮಗೆ ಈಗ ಮತ್ತೊಮ್ಮೆ ಅಂತಹ ಅವಕಾಶ ದೊರೆತದ್ದು ಸಂತಸ ತಂದಿದೆ' ಎಂದರು.ಉತ್ಸವಕ್ಕೆ ದೊರೆತ ಪ್ರತಿಕ್ರಿಯೆ ಕುರಿತು ಸಿನಿಮೋತ್ಸವದ ಸಂಘಟಕರಲ್ಲಿ ಒಬ್ಬರಾದ ಚಿತ್ರ ನಿರ್ದೇಶಕ ನಾಗೇಂದ್ರ ಬಾಬು ಹರ್ಷ ವ್ಯಕ್ತಪಡಿಸಿದರು. `ಸಾಮಾನ್ಯರ ನಾಡಿಮಿಡಿತ ಏನೆಂಬುದು ಬಯಲು ಸಿನಿಮೋತ್ಸವದಿಂದ ತಿಳಿಯುತ್ತಿತ್ತು. ಜಯನಗರ, ಬಸವನಗುಡಿ ಮತ್ತಿತರ ಪ್ರದೇಶಗಳಲ್ಲಿ ಸಾಂಸ್ಕೃತಿಕ ವಾತಾವರಣ ಸೃಷ್ಟಿಸುವ ಕೇಂದ್ರಗಳಿವೆ.

ಆದರೆ ಹಳೆ ಬೆಂಗಳೂರಿನ ಭಾಗಗಳಾದ ಕಾಟನ್‌ಪೇಟೆ, ನಗರ್ತ ಪೇಟೆ, ಚಿಕ್ಕಪೇಟೆ, ಬಳೆಪೇಟೆ, ಮಲ್ಲೇಶ್ವರ, ಶೇಷಾದ್ರಿಪುರದ ಸಿನಿಮಾಸಕ್ತರಿಗೆ ಬಯಲು ಸಿನಿಮೋತ್ಸವ ಉತ್ತಮ ಅವಕಾಶ ಕಲ್ಪಿಸಿದೆ. ಮುಂಚೂಣಿ, ಜನಪ್ರಿಯ ಸಿನಿಮಾಗಳಿಂದ ಸಿನಿಮೋತ್ಸವ ದೂರ ಎಂಬ ಮಾತನ್ನು ಬಯಲು ಪ್ರದರ್ಶನ ಅಳಿಸಿಹಾಕಿದೆ' ಎನ್ನುವುದು ಅವರ ಮಾತು.`ಸ್ತ್ರೀ ಶಕ್ತಿ' ಚಿತ್ರದ ನಿರ್ದೇಶಕ ಎಸ್.ವಿ. ಸುರೇಶ್, `ಗುಜರಾತ್ ಸರ್ಕಾರ ಹಮ್ಮಿಕೊಂಡಿದ್ದ ಅಹಮದಾಬಾದ್ ಚಿತ್ರೋತ್ಸವಕ್ಕೆ ನನ್ನ ಚಿತ್ರ ಆಯ್ಕೆಯಾಗಿತ್ತು. ಅಲ್ಲಿ ಸಿನಿಮಾ ಪ್ರದರ್ಶನಕ್ಕೆ ಅನನ್ಯ ವ್ಯವಸ್ಥೆಯನ್ನೇನೂ ಕಲ್ಪಿಸಿರಲಿಲ್ಲ. ಸಿನಿಮೋತ್ಸವಗಳ ಏಕತಾನತೆಯನ್ನು ಮುರಿಯಲು ಇಂತಹ ಪ್ರದರ್ಶನಗಳು ಶ್ರಮಿಸುತ್ತವೆ' ಎಂದರು.ಪ್ರದರ್ಶನ ಕಾಣುತ್ತಿದ್ದ ಚಿತ್ರತಂಡದ ಸದಸ್ಯರ ಜತೆಗೆ ಕೆಲವು ತಾರೆಯರೂ ಆಗಮಿಸಿದ್ದು ಬಯಲು ಚಿತ್ರ ಪ್ರದರ್ಶನಕ್ಕೆ ವಿಶೇಷ ಕಳೆ ತಂದಿತ್ತು. ದೊಡ್ಡವರು ತಮ್ಮ ನೆಚ್ಚಿನ ನಟ ನಿರ್ದೇಶಕರನ್ನು ಕಂಡು ಪುಳಕಗೊಂಡರೆ ಮಕ್ಕಳು ಆಟೊಗ್ರಾಫ್ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಮುಂದಿನ ವರ್ಷವೂ ಪ್ರದರ್ಶನ

ಬಯಲು ಸಿನಿಮೋತ್ಸವಕ್ಕೆ ದೊರೆತ ಮನ್ನಣೆ ಅಭೂತಪೂರ್ವವಾಗಿದೆ. ಪ್ರತಿದಿನ ಸರಾಸರಿ ಮುನ್ನೂರು ಮಂದಿ ಚಿತ್ರ ವೀಕ್ಷಿಸಿದ್ದಾರೆ. ಮುಂದಿನ ವರ್ಷದ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ವೇಳೆಯೂ ಇಂತಹ ಪ್ರದರ್ಶನ ಆಯೋಜಿಸಲಾಗುವುದು.

ತಾರಾ ಅನೂರಾಧ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry