ಹಳ್ಳಿ ನೋಟದ ಬೆಡಗು ಚಾರಣದ ಬೆರಗು

7
ಸುತ್ತಾಣ

ಹಳ್ಳಿ ನೋಟದ ಬೆಡಗು ಚಾರಣದ ಬೆರಗು

Published:
Updated:

ಕೃತಿ ಸೌಂದರ್ಯದ ಆರಾಧಕರಿಗೆ, ಸುಮ್ಮನೇ ಸುಂದರ ತಾಣಕ್ಕೆ ಭೇಟಿ ನೀಡಿ ಖುಷಿ ಹೊಂದುವವರಿಗೆ, ದೈವಭಕ್ತಿಯ ಜಾಡು ಹಿಡಿದು ದೇವಾಲಯಗಳ ಸನ್ನಿಧಿ ಬಯಸುವವರಿಗೆ ಹೀಗೆ ಎಲ್ಲರಿಗೂ ಹೇಳಿ ಮಾಡಿಸಿದಂತಹ ಜಾಗ ನಾಗಮಲೆ.ಬೆಟ್ಟದ ಮೇಲೆ ಬೃಹದಾಕಾರದ ಬಂಡೆಯೊಂದು ವಿಭಜನೆಗೊಂಡಿದ್ದು, ಒಂದು ಭಾಗವು ಹಾವಿನ ಮುಖ ಮತ್ತೊಂದು ಭಾಗವು ಲಿಂಗ ರೂಪವನ್ನು ಹೋಲುತ್ತದೆ. ಇದೊಂದು ಪ್ರಕೃತಿ ಸೃಷ್ಟಿಯೇ ಹೊರತು ಬೇರೇನೂ ಅಲ್ಲ.

ನನ್ನ ಗೆಳೆಯರೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರಟಾಗ ನನಗೆ ವಿಸ್ಮಯವಾಗಿ ಕಣ್ಣಿಗೆ ಕಂಡಿದ್ದು ಈ ನಾಗಮಲೆ. ಹಾಗೆಯೇ ಆರು ಬೆಟ್ಟಗಳ ಕಾಲು ನಡಿಗೆಯು ಮನಸ್ಸಿಗೆ ಚೈತನ್ಯವನ್ನು ತುಂಬಿತು.ಈ ಸ್ಥಳವು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲಕ್ಕೆ ಸಮೀಪವಿದೆ.  ಬೆಂಗಳೂರಿನಿಂದ 210 ಕಿ.ಮೀ. ಪ್ರಯಾಣಿಸಿದರೆ ಈ ಸ್ಥಳ ಸೇರಬಹುದು. ಮೊದಲಿಗೆ ‘ನಡುಮಲೆ’ ಅಂದರೆ ಪ್ರಸಿದ್ಧ ಮಹದೇಶ್ವರ ಸ್ವಾಮಿಯ ದೇವಸ್ಥಾನವನ್ನು ನೋಡಬಹುದು. ಆನಂತರ ಅಲ್ಲಿಂದ ಸುಮಾರು 9 ಕಿ.ಮೀ. ಕಾಡಿನ ಮಧ್ಯೆ ಬೆಟ್ಟವನ್ನು ಹತ್ತುತ್ತಾ ಈ ನಾಗಮಲೆ ದೇವಸ್ಥಾನವನ್ನು ಸೇರಬಹುದು.ನಡುಮಲೆಯಿಂದ ನಾಗಮಲೆಗೆ ಸಾಗಲು ಪ್ರತ್ಯೇಕವಾಗಿ ಯಾವುದೇ ರೀತಿಯ ರಸ್ತೆಯನ್ನು ನಿರ್ಮಿಸಿಲ್ಲ. ಅಂದರೆ ಒರಟು ಕಲ್ಲುಗಳ ಜೊತೆ, ಕಿರಿದು ಮತ್ತು ಕಡಿದಾದ ದಾರಿಯಲ್ಲೇ ಸಾಗಬೇಕು. ಈ ದಾರಿಯಲ್ಲಿ ಸುಮಾರು ಐದು ಕಿ.ಮೀ. ಹಳೆ ಜೀಪುಗಳ ವಾಹನ ಸೌಕರ್ಯವಿದೆ.  ಕಡಿದಾದ ದಾರಿಯ ಈ ಜೀಪ್‌ ಪಯಣ ಯಾತ್ರಿಕರಿಗೆ ಸಾಹಸಯಾತ್ರೆಯ ಅನುಭವ ನೀಡುತ್ತದೆ.ಹಳ್ಳಿ ನೋಟದ ಸೊಬಗು

ಈ ಬೆಟ್ಟದ ಸುತ್ತ ಸುಮಾರು ಹಳ್ಳಿಗಳು ಇವೆ. ಆದರೆ  ನಾಗಮಲೆಗೆ ತಲುಪುವ ದಾರಿಯಲ್ಲಿ ಒಂದೆರಡು ಹಳ್ಳಿಗಳು ಸಿಗುತ್ತವಷ್ಟೆ. ಶಾಂತ, ಸುಂದರವಾಗಿರುವ ಆ ಹಳ್ಳಿಗಳ ಸೊಬಗನ್ನು ನೋಡುವುದೇ ಅಪೂರ್ವ ಅನುಭವ. ದಿನ ಬೆಳಗಾದರೆ ಅಲ್ಲಿ ಮಕ್ಕಳಿಂದ ಹಿಡಿದು, ಹಿರಿಯ ನಾಗರಿಕರವರೆಗೆ ಸುಮಾರು ದೂರ ನಡೆದೇ ಸಾಗುತ್ತಾರೆ. ಇಲ್ಲಿನ ಜನರು ಆಹಾರ ಸಾಮಗ್ರಿ ಹಾಗೂ ಇತರೆ ವಸ್ತುಗಳನ್ನು ಸಾಗಿಸಲು ಕತ್ತೆಗಳನ್ನು ಉಪಯೋಗಿಸುತ್ತಾರೆ.ಇಂತಹ ಕಾಡಿನ ಮಧ್ಯೆ ನಡೆದು ಸಾಗುವ ನಗರದಲ್ಲಿ ವಾಸಿಸುವ ಜನರಿಗೆ  ಸ್ವರ್ಗವೇ ಕಂಡಷ್ಟು ಆನಂದವಾಗುತ್ತದೆ. ದಿನವೂ ವಾಹನಗಳ ಶಬ್ದ ಕೇಳಿ ಬೇಸರಗೊಂಡವರಿಗೆ ಇಲ್ಲಿ ದೊರಕುವ ನೆಮ್ಮದಿ ಅಷ್ಟಿಷ್ಟಲ್ಲ. ಬೆಟ್ಟ ಹತ್ತುವಾಗ ಅಲ್ಲಿನ ಹಳ್ಳಿಯ ಜನರು ಪ್ರವಾಸಿಗರ ಹೊಟ್ಟೆ ತುಂಬಲು ಕಲ್ಲಂಗಡಿ, ಮಜ್ಜಿಗೆ, ಹಲಸು ಮುಂತಾದ ಹಲವಾರು ಹಣ್ಣು-ಹಂಪಲುಗಳ ಮಾರಾಟದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಹೀಗೆ ಸುಮಾರು ಐದು ಕಿ.ಮೀ. ನಡೆದು ಬೆಟ್ಟದ ಕೊನೆ ಸೇರಿದರೆ ಅಲ್ಲಿ ಲಿಂಗದಾಕಾರದ ಬಂಡೆಯ ಒಳಗೆ ದೇವರ ದರ್ಶನವಾಗುತ್ತದೆ. ಅಲ್ಲಿ ಪ್ರವಾಸಿಗರು ತಮಗೆ ಬೇಕಾದ ಕೋರಿಕೆಗಳನ್ನು ದೇವರ ಮುಂದಿಡಬಹುದು. ಬೆಟ್ಟದ ಇನ್ನೊಂದು ತುದಿಯಿಂದ ನೋಡಿದರೆ ಕಾವೇರಿ ನದಿಯ ಅರಿವಿನ ವಿಹಂಗಮ ನೋಟ ಕಾಣುತ್ತದೆ.ಚಾರಣದ ಹವ್ಯಾಸವಿರುವವರು, ಬೆಟ್ಟ ಹತ್ತುವ ದೈಹಿಕ ಸಾಮರ್ಥ್ಯ ಇರುವವರು ಈ  ನಡುಮಲೆಯ ನಿಸರ್ಗ ಸೌಂದರ್ಯವನ್ನು ಸವಿಯಬಹುದು. ನಡುಮಲೆಯಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳಲು ಕೊಠಡಿಗಳ ವ್ಯವಸ್ಥೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry