ಭಾನುವಾರ, ಜನವರಿ 19, 2020
23 °C

ಹಳ್ಳಿ ಮಕ್ಕಳ ಬಾಳಿಗೆ ಬೆಳಕಾದ ದೀಪಾಲಯ

ಪ್ರಜಾವಾಣಿ ವಾರ್ತೆ/ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

ಹಳ್ಳಿ ಮಕ್ಕಳ ಬಾಳಿಗೆ ಬೆಳಕಾದ ದೀಪಾಲಯ

ಔರಾದ: ತಾಲ್ಲೂಕಿನ ಸಂತಪುರ ಹೋಬಳಿ ಕೇಂದ್ರದಲ್ಲಿ 25 ವರ್ಷಗಳ ಹಿಂದೆ ಆರಂಭವಾದ ಮರಿಯಾ ಕೃಪಾ ಸಂಸ್ಥೆ ಬಡ, ದಲಿತ ಮತ್ತು ಅಂಗವಿಕಲ ಮಕ್ಕಳ ಏಳಿಗೆಯಲ್ಲಿ ತೊಡಗಿದೆ.1988ರಲ್ಲಿ ಆರಂಭವಾದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಧರ್ಮಾಧ್ಯಕ್ಷ  ಬಾಜಿಲ್‌ ಸಲ್ವೋದರ್‌ ಡಿಸೋಜ ಮತ್ತು ಭಗಿನಿ ಅಕ್ವಿಲಿನಾರವರ ಸಾಮಾಜಿಕ ಕಳಕಳಿ ಫಲವಾಗಿ ಮರಿಯಾ ಸಂಸ್ಥೆ ಸ್ಥಾಪನೆಗೊಂಡಿದೆ.ಆರಂಭದಲ್ಲಿ ಆಸ್ಪತ್ರೆ ತೆರೆದು ತಾಲ್ಲೂಕಿ ನಾದ್ಯಂತ ಆರೋಗ್ಯ ಸುಧಾರಣಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಉತ್ತಮ ಆರೋಗ್ಯ ಕಾಪಾಡಲು ಬೇಕಾದ ನೈರ್ಮಲೀಕರಣ, ಪೌಷ್ಟಿಕ ಆಹಾರ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುವುದು. ಹಳ್ಳಿಗೆ ಹೋಗಿ ರೋಗಿಗಳಿಗೆ ಚಿಕಿತ್ಸೆ ನೀಡುವುದು, ನೇತ್ರ, ದಂತ ಮತ್ತು ಆರೋಗ್ಯ ತಪಾಸಣೆ ಶಿಬಿರವನ್ನು ನಿರಂತರ ವಾಗಿ ಆಯೋಜಿಸಿಕೊಂಡು ಬರಲಾಗಿದೆ ಎಂದು ಮರಿಯಾ ಕೃಪಾ ಆಸ್ಪತ್ರೆ ಮುಖ್ಯಸ್ಥೆ ಸಿಷ್ಟರ್ ಸೆಕುಂದಾ ಹೇಳುತ್ತಾರೆ.2003ರಲ್ಲಿ ಆಂಧ್ರ ಗಡಿ ಭಾಗಕ್ಕೆ ಹೊಂದಿ ಕೊಂಡ ಉಜನಿಯಲ್ಲಿ ಬಾಲಕಿಯರ ಪಾಠ ಶಾಲೆ ತೆರೆದರು. ಅಲ್ಲಿ ಈಗ 10ನೇ ತರಗತಿ ವರೆಗೆ ಶಾಲೆ ಇದ್ದು, 300 ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಇಲ್ಲಿ ಪಾಠದ ಜತೆಗೆ ಮಕ್ಕಳಿಗೆ ವೈವಿದ್ಯಮಯ ಕೌಶಲ ಕಲಿಸಲಾಗುತ್ತಿದೆ.ಶಾಲೆ ಬಿಟ್ಟ ಬಡ ಯುವತಿಯರು ಮತ್ತು ಅಂಗವಿಕಲರಿಗಾಗಿ 2006ರಲ್ಲಿ ಸಂತಪುರನಲ್ಲಿ ದೀಪಾಲಯ ಹೆಸರಿನಲ್ಲಿ ಶಾಲೆ ತೆರೆದರು. ಅಕ್ಷರ ಜ್ಞಾನದೊಂದಿಗೆ ಕಂಪ್ಯೂಟರ್‌, ಟೇಲರಿಂಗ್‌ ಸೇರಿದಂತೆ ವಿವಿಧ ಸ್ವಯಂ ಉದ್ಯೋಗದ ತರಬೇತಿ ನೀಡಲಾಗುತ್ತದೆ. ಸದ್ಯ ನಮ್ಮಲ್ಲಿ 50 ಯುವತಿಯರು ತರಬೇತಿ ಪಡೆ ಯುತ್ತಿದ್ದಾರೆ. 800 ಯುವತಿಯರು ಮತ್ತು 300 ಅಂಗವಿಕಲರು ತರಬೇತಿ ಪಡೆದು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡಿ ಬದುಕು ರೂಪಿಸಿಕೊಂಡಿದ್ದಾರೆ ಎನ್ನುತ್ತಾರೆ ಶಾಲಾ ಸಂಚಾಲಕಿ ಜೊಯಲ್‌.ಎಲ್ಲ ಸಮುದಾಯದ ಸಹಕಾರದಿಂದ ಮರಿಯಾ ಕೃಪಾ 25 ವರ್ಷ ಸಾರ್ಥಕ ಸೇವೆ ಸಲ್ಲಿಸಿದೆ. ಮುಂದೆ ತಮ್ಮ ಸಾಮಾಜಿಕ ಸೇವೆ ಹೀಗೆಯೇ ಮುಂದುವರಿಯಲಿದೆ. ಮಕ್ಕಳಲ್ಲಿ ದೈವಭಕ್ತಿ, ಶಿಸ್ತು, ವಿನಯತೆ, ಸಹಕಾರ ಮನೋಭಾವ ಕಲಿಸಿ ಸಮಾಜ ಮತ್ತು ದೇಶದ ಉತ್ತಮ ನಾಗರಿಕರಾಗಿ ಮಾಡುವುದು ಸಂಸ್ಥೆ ಉದ್ದೇಶವಾಗಿದೆ. ಗ್ರಾಮೀಣ ಮತ್ತು ಬಡ, ನಿರ್ಗತಿಕ ಮಕ್ಕಳಿಗೂ ಇಂಗ್ಲಿಷ್‌ ಶಿಕ್ಷಣ ಕೊಡು ವುದಕ್ಕಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ನರ್ಸರಿಯಿಂದಲೇ ಆಂಗ್ಲ ಮಾಧ್ಯಮ ಆರಂಭಿಸ ಲಾಗುತ್ತದೆ ಎಂದು ಸಂಸ್ಥೆ ಮೇಲ್ವಿಚಾರಕ ಭಗಿನಿ ಕವಿತಾ ಹೇಳುತ್ತಾರೆ.

‘ಸಮಾಜಮುಖಿ ಸೇವೆಗೆ ಎಲ್ಲರ ಮೆಚ್ಚುಗೆ’

ಮರಿಯಾ ಕೃಪಾ ಸಂಸ್ಥೆಯ ಸೇವಾ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ತಾಲ್ಲೂಕಿನ ಬಡ ಮಕ್ಕಳಲ್ಲಿ ಸ್ಪರ್ಧಾತ್ಮಕ ಜಗತ್ತು ಎದುರಿಸುವ ನಿಟ್ಟಿನಲ್ಲಿ ಸಜ್ಜುಗೊಳಿಸಬೇಕಿದೆ. ಇದಕ್ಕಾಗಿ ಎಲ್ಲ ರೀತಿಯ ತರಬೇತಿ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ.


–ಭಗಿನಿ ಕವಿತಾ, ಮರಿಯಾ ಕೃಪಾ ಶಾಲೆ ಮೇಲ್ವಿಚಾರಕಿ

ಪ್ರತಿಕ್ರಿಯಿಸಿ (+)