ಗುರುವಾರ , ಜುಲೈ 29, 2021
26 °C

ಹಳ್ಳಿ ರಸ್ತೆ ದುರಸ್ತಿ; ಅನುದಾನ ಇಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳ್ಳಿ ರಸ್ತೆ ದುರಸ್ತಿ; ಅನುದಾನ ಇಲ್ಲ!

ಮಂಗಳೂರು: ಗುಂಡಿಬಿದ್ದು, ಗಂಡಾಂತರಕಾರಿ ಕೂಪಗಳಾಗಿ ಪರಿವರ್ತನೆಯಾಗಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ಈ ಬಾರಿಯೂ ದುರಸ್ತಿ ಕಾಣುವ ಭಾಗ್ಯ ಇಲ್ಲ!ಕಾರಣ, ಈ 2011-12ರ ಜಿಲ್ಲಾವಾರು ಆಯವ್ಯಯದಲ್ಲೂ ‘ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ’ ಯೋಜನೆಯಡಿ ಈ ಜಿಲ್ಲೆಗಳ ರಸ್ತೆ, ಸೇತುವೆ ನಿರ್ವಹಣೆಗೆ ಅನುದಾನ ಮೀಸಲಿಟ್ಟಿಲ್ಲ.ಕಳೆದ ವರ್ಷ ಕೂಡಾ ಸರ್ಕಾರ ಈ ಜಿಲ್ಲೆಗಳ ಗ್ರಾಮೀಣ ರಸ್ತೆಗಳ ನಿರ್ವಹಣೆಗೆ ವಾರ್ಷಿಕ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಿರಲಿಲ್ಲ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ನಿರ್ವಹಣೆಗೆ ಇಂತಿಷ್ಟು ಹಣ ನೀಡುವಂತೆ ಪ್ರಸ್ತಾವನೆ ಮುಂದಿಟ್ಟರೂ, ಡಾ. ನಜುಂಡಪ್ಪ ವರದಿ ಅನುಷ್ಠಾನ ಹಿನ್ನೆಲೆಯಲ್ಲಿ ಸರ್ಕಾರ ಹಣ ಮೀಸಲಿಡುತ್ತಿಲ್ಲ ಎಂದು ದಕ್ಷಿಣ ಕನ್ನಡ  ಜಿ.ಪಂ ಮೂಲಗಳು ತಿಳಿಸಿವೆ.ಮೈಸೂರು ವಿಭಾಗೀಯ ವಲಯದಲ್ಲಿ ಎಂಟು ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆ ಮಾತ್ರ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಅನುದಾನದಿಂದ ವಂಚಿತವಾಗಿವೆ. ಕಳೆದ ಆರ್ಥಿಕ ವರ್ಷದಲ್ಲೂ(2010-11) ಈ ಮೂರು ಜಿಲ್ಲೆಗಳ ಗ್ರಾಮೀಣ ರಸ್ತೆಗಳಿಗೆ ಸರ್ಕಾರ ಅನುದಾನ ಮೀಸಲಿಟ್ಟಿರಲಿಲ್ಲ. ಸರ್ಕಾರ ಡಾ. ನಜುಂಡಪ್ಪ ವರದಿ ಅನುಷ್ಠಾನ ಹಿನ್ನೆಲೆಯಲ್ಲಿ ಈ ಬಾರಿಯೂ ಹಿಂದುಳಿದ ತಾಲ್ಲೂಕುಗಳಿರುವ ಜಿಲ್ಲೆಗಳಿಗೆ ಮಾತ್ರ ವಿಶೇಷ ಅಭಿವೃದ್ಧಿ ಯೋಜನೆಯಡಿ ಜಿಲ್ಲಾವಾರು ಅನುದಾನ ಮೀಸಲಿರಿಸಿದೆ. ಹೀಗಾಗಿ ಮೈಸೂರು ವಿಭಾಗದ ಈ ಮೂರೂ ಜಿಲ್ಲೆಗಳಿಗೆ ರಸ್ತೆ ಮತ್ತು ಸೇತುವೆ ಅಭಿವೃದ್ಧಿ ಯೋಜನೆ ಅನುದಾನ ಸಿಗುತ್ತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ತಾಕತ್‌ರಾವ್ ‘ಪ್ರಜಾವಾಣಿಗೆ ತಿಳಿಸಿದ್ದಾರೆ.ಆದರೆ ಸರ್ಕಾರ, ಕಳೆದ ಅಕ್ಟೋಬರ್‌ನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ 61 ತಾಲ್ಲೂಕುಗಳಿಗೆ(ಹಿಂದುಳಿದ ತಾಲ್ಲೂಕು ಹೊರತುಪಡಿಸಿ) ತಲಾ ರೂ. 50 ಲಕ್ಷದಂತೆ ಅನುದಾನ ಬಿಡುಗಡೆ ಮಾಡಿತ್ತು. ದಕ್ಷಿಣ ಕನ್ನಡದ 5 ತಾಲ್ಲೂಕುಗಳಿಗೆ 2.50 ಕೋಟಿ ಬಿಡುಗಡೆ ಮಾಡಿತ್ತು. ಆದರೆ ಯಾವ ಯಾವ ಕಾಮಗಾರಿ ಕೈಗೊಳ್ಳಬೇಕು ಎನ್ನುವ ಅಧಿಕಾರವನ್ನು ಆಯಾ ತಾಲ್ಲೂಕಿನ ಶಾಸಕರಿಗೆ ವಹಿಸಿತ್ತು. ಸರ್ಕಾರದ ಈ ಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.ಈ ಬಾರಿಯೂ ಮೈಸೂರು ವಿಭಾಗದಲ್ಲಿ 13ನೇ ಹಣಕಾಸು ಯೋಜನೆಯಲ್ಲಿ ರಾಜ್ಯಮಟ್ಟದ ಯೋಜನೇತರ ನಿಧಿಯಡಿ ರೂ 110 ಕೋಟಿ ಮೀಸಲಿಡಲಾಗಿದೆ. ಈ ನಿಧಿಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲಾ ಪಂಚಾಯಿತಿಗೆ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಗೆ ಸರ್ಕಾರ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಜತೆಗೇ ಯಾವ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ನಿರ್ಧರಿಸುವ ಅಧಿಕಾರವನ್ನೂ ಶಾಸಕರಿಗೇ ನೀಡುವ ಸಾಧ್ಯತೆ ಇದೆ. ಹಾಗಾದರೆ ರಸ್ತೆ ದುರಸ್ತಿ ಈ ಬಾರಿಯೂ ಜಿ.ಪಂ ಸದಸ್ಯರನ್ನು ಕೆರಳಿಸುವುದು ಖಚಿತ.ದಕ್ಷಿಣ ಕನ್ನಡ ಜಿಲ್ಲೆಯ 7,914.81 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳ ನಿರ್ವಹಣೆಗೆ ರೂ 13.95 ಕೋಟಿ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಬೇಡಿಕೆ ಮುಂದಿಟ್ಟಿತ್ತು. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನೂ ಸಿದ್ಧಪಡಿಸಲಾಗಿತ್ತು. 2009-10ರಲ್ಲಿ ದಕ್ಷಿಣ ಕನ್ನಡದ ಗ್ರಾಮೀಣ ರಸ್ತೆ ಮತ್ತು ಸೇತುವೆ ದುರಸ್ತಿಗೆ ಸರ್ಕಾರ ರೂ. 1.77 ಕೋಟಿ ಅನುದಾನ ನೀಡಿದೆ. ಸಾಮಾನ್ಯವಾಗಿ ಸರ್ಕಾರ ಅನುದಾನ ಮೀಸಲಿಡುವ ಸಂದರ್ಭದಲ್ಲಿ ಹಿಂದಿನ ವರ್ಷದ ಆಯವ್ಯಯ ಪಟ್ಟಿಯನ್ನು ಪರಿಗಣಿಸುವುದು ವಾಡಿಕೆ. ಅದರಂತೆ ಕಳೆದ ಬಾರಿ ಅನುದಾನ ನೀಡದಿರುವುದರಿಂದ ಈ ಬಾರಿಯೂ ಜಿಲ್ಲಾ ಪಂಚಾಯಿತಿಯ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ ಎಂದು ಜಿ.ಪಂ. ಮೂಲಗಳು ತಿಳಿಸಿವೆ.ಒಟ್ಟಿನಲ್ಲಿ ಈ ಬಾರಿಯ ಮಳೆಗಾಲಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆ ಮತ್ತು ಸೇತುವೆಗಳು ಮತ್ತಷ್ಟು ಹದಗೆಟ್ಟರೆ ದುರಸ್ತಿಗೆ ಮಾತ್ರ ಹಣ ಇಲ್ಲ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.