ಹಳ್ಳಿ ರಾಜಕೀಯ ಜೋರು

7

ಹಳ್ಳಿ ರಾಜಕೀಯ ಜೋರು

Published:
Updated:

ಶಿರಾ: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಡಿ. 6, 7 ಮತ್ತು 10ರಂದು ಚುನಾವಣೆ ನಿಗದಿಯಾಗಿದೆ. ಅಧ್ಯಕ್ಷ- ಉಪಾಧ್ಯಕ್ಷ ಆಕಾಂಕ್ಷಿಗಳು ಅಂತಿಮ ಕಸರತ್ತಿನಲ್ಲಿ ತೊಡಗಿದ್ದಾರೆ.ಡಿ. 6, 7 ಮತ್ತು 10ರಂದು ಪ್ರತಿದಿನ 12 ಗ್ರಾಮ ಪಂಚಾಯಿತಿಗಳಂತೆ ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಹಶೀಲ್ದಾರ್ ಜಿ.ಎಚ್.ನಾಗಹನುಮಯ್ಯ `ಪ್ರಜಾವಾಣಿ'ಗೆ ತಿಳಿಸಿದರು.ಕಳೆದ ಒಂದೂವರೇ ತಿಂಗಳ ಹಿಂದೆಯೇ ಪ್ರತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲು ನಿಗದಿಯಾಗಿತ್ತು. ಅಂದಿನಿಂದಲೇ ಅಧ್ಯಕ್ಷ-ಉಪಾಧ್ಯಕ್ಷ ಆಕಾಂಕ್ಷಿಗಳು ಸದಸ್ಯರನ್ನು ಹಿಡಿದಟ್ಟುಕೊಳ್ಳುವ, ಓಲೈಸುವ ಕಸರತ್ತಿನಲ್ಲಿ ತೊಡಗಿದ್ದರು.

ಇದಕ್ಕೇ ಡಾಬಗಳೇ ವೇದಿಕೆಯಾಗಿದ್ದವು. ಈ ಹಿನ್ನೆಲೆಯಲ್ಲೇ ದೊಡ್ಡ ಅಗ್ರಹಾರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಆಯ್ಕೆಗೆ ಸಂಬಂಧಿಸಿದಂತೆ ವಕೀಲ ಲಿಂಗಯ್ಯ ಅವರ ಕೊಲೆ ಡಾಬದಲ್ಲೇ ನಡೆದು ತಾಲ್ಲೂಕಿನ ಗ್ರಾಮ ಪಂಚಾಯಿತಿಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ರಕ್ತದ ಕಳಂಕ ಅಂಟಿತು.ಲಿಂಗಯ್ಯನ ಕೊಲೆಯ ಅತಿರೇಕದಿಂದಲೇ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಏರ್ಪಡಲಿದ್ದ ಜಿದ್ದಾಜಿದ್ದಿ ಕೊಂಚ ಕಡಿಮೆಯಾಗಿದ್ದು, ಬಹಳಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಸೌಹಾರ್ದಯುತ ಆಯ್ಕೆ ನಡೆಯುವ ಸಾಧ್ಯತೆ ಇದೆ ಎಂದು ಹುಯಿಲ್‌ದೊರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಕಾಂಕ್ಷಿಯೊಬ್ಬರ ಪುತ್ರ ಅಜಯ್ ಹೇಳಿದರು.ಆದರೂ ನಗರದ ಬಸ್‌ನಿಲ್ದಾಣದ ಬಳಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಅಧ್ಯಕ್ಷ ಆಕಾಂಕ್ಷಿಯೊಬ್ಬರು ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಾಗಿದೆ. ಕೊರಳಿಗೆ ಹಾರ ಬೀಳುವವರೆಗೂ ಮುಂದಿಟ್ಟ ಕಾಲು ಹಿಂತೆಗೆಯುವ ಮಾತೇ ಇಲ್ಲ ಎಂದು ಅವರು ಹೇಳುತ್ತಿದ್ದ ರೀತಿ ಚುನಾವಣೆಯ ಜಿದ್ದನ್ನು ಸಾರಿ ಹೇಳುತ್ತಿತ್ತು.ಈಗಾಗಲೇ ಕೆಲ ಪಂಚಾಯಿತಿಗಳಲ್ಲಿ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಹೊನ್ನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ 9 ಸದಸ್ಯರನ್ನು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರ ಪತಿಯೊಬ್ಬರು ಪ್ರವಾಸಕ್ಕೆ ಕರೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ.ಮದಲೂರು ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ಯುವ ಬದಲು ಸ್ಥಳೀಯ ಲಾಡ್ಜ್‌ಗಳಲ್ಲೇ ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆದಿದ್ದು, ಈ ವೇಳೆ ಲಾಡ್ಜ್‌ನಲ್ಲಿ ತಂಗಿದ್ದ ಸದಸ್ಯನೊಬ್ಬ ಮಂಗಳವಾರ ರಾತ್ರಿ ಮೀನು ತಿನ್ನುವ ಆಸೆ ಎಂದು ಹೊರಗಡೆ ಹೋಗಿ ನಾಪತ್ತೆಯಾಗಿದ್ದ. ಆಗ ಆತನಿಗಾಗಿ ನಗರದಾದ್ಯಂತ ಬೈಕ್‌ನಲ್ಲಿ ಹುಡುಕಾಟ ನಡೆಸಿದ್ದು ಸ್ವಾರಸ್ಯಕರ ಘಟನೆಯಾಗಿತ್ತು. ಆತ ನೆಂಟರ ಮನೆಯಲ್ಲಿ ಪತ್ತೆಯಾದ ನಂತರ ಪುನಃ ಲಾಡ್ಜ್‌ಗೆ ಕರೆತಂದ ಸಂಗತಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.ಕಳೆದ ಕಳೆದ ಒಂದು-ಒಂದೂವರೇ ತಿಂಗಳಿನಿಂದ ತಮ್ಮ ಹಿಡಿತದಲ್ಲೇ ಇದ್ದಾರೆ ಎಂದುಕೊಂಡಿದ್ದ ಕೆಲ ಸದಸ್ಯರು ಅಂತಿಮ ಕ್ಷಣದಲ್ಲಿ ಆಸೆ ಆಮೀಷಗಳಿಗೆ ಬಲಿಯಾಗಿ ಕಪ್ಪೆ ಜಿಗಿತ ಪ್ರಾರಂಭಿಸಿದ್ದು, ಅಂಥವರನ್ನು ತಮ್ಮ ತೆಕ್ಕೆಯಲ್ಲೇ ಉಳಿಸಿಕೊಳ್ಳಲು ಅವರಿಂದ ಹೊರಜಗತ್ತಿನ ಸಂಪರ್ಕ ತಪ್ಪಿಸುವ ಸಲುವಾಗಿಯೇ ಅವರ ಮೊಬೈಲ್‌ಗಳನ್ನು ಕೂಡ ಕಿತ್ತುಕೊಳ್ಳಲಾಗಿದೆ ಎಂದು ಹೇಳಲಾಗಿದೆ.ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಶಾಸಕರು, ಮಾಜಿ ಸಚಿವರು ಹಾಗೂ ವಿಧಾನಸಭಾ ಆಕಾಂಕ್ಷಿಗಳಿಗೆ ತಮ್ಮ ಹಿಂಬಾಲಕರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದಲ್ಲಿ ಕೂರಿಸುವುದು ಸವಾಲಿನ ಕೆಲಸವಾಗಿದೆ. ಯಾರಿಗೂ ನಿಷ್ಠೂರವಾಗದಂತೆ ಅವರು ತೆರೆಮರೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲ ಜಿಲ್ಲಾ ಪಂಚಾಯಿತಿ ಸದಸ್ಯರು ನೇರ ಆಖಾಡಕ್ಕೆ ಇಳಿದು ಕೆಲ ಪಂಚಾಯಿತಿಗಳಲ್ಲಾದರೂ ತಮ್ಮ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry