ಸೋಮವಾರ, ಮೇ 23, 2022
21 °C

ಹಳ್ಳಿ ಲೈಫು ಇಷ್ಟೇನೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ವೆಳ್ಳೋಡಿ ಬೀರ ನಾಯ್ಕರು ಪುರದಾಳು ಎನ್ನುವ ಊರಿನ ಹಿರಿಯ ತಲೆ. ಅವರು ಹೇಳತೊಡಗಿದರು:‘ನಾವು ಶರಾವತಿ ಹಿನ್ನೀರಿನಿಂದ ಮುಳುಗಡೆಯಾಗಿ ಬಂದೋರು. ಇವರು ನಮ್ಮ ಆ ಹಳೇ ಊರಿಗೆ ಹೋಗಿ ಅಲ್ಲಿ ಮುಳುಗಡೆಯಾದ ನಮ್ಮ ಮನೆ, ಆಸ್ತಿ, ತೋಟ ಎಲ್ಲವನ್ನೂ ಸಿನಿಮಾ ಥರ ಮಾಡಿ ತಂದು ನಮಗೆ ತೋರಿಸಿದರು. ಅದು ನಮಗೆ ಭಾಳಾ ಇಷ್ಟವಾಯಿತು ಸಾಹೇಬರೆ. ಹಳೇ ಜನ ಅದನ್ನ ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡ್ವಿ. ಎಷ್ಟೇ ಆಗಲಿ ಕಳಕ್ಕೊಂಡಿದ್ದು ನೋಡಿ, ಹೊಟ್ಟೆ ಉರೀತದೆ. ನಮ್ಮ ಇವತ್ತಿನ ಮಕ್ಕಳಿಗೆ ನಮ್ಮ ತ್ಯಾಗ ಬಲಿದಾನ ಏನೂಂತ ಗೊತ್ತಿರಲಿಲ್ಲ. ಅದನ್ನ ಇವರು ತೋರಿಸಿದರು. ಬಾಯಿಮಾತಲ್ಲಿ ಹೇಳಿ ನಮ್ಮ ಮಕ್ಕಳಿಗೆ ನಾವೇನು ತಿಳಿಸಕ್ಕೆ ಆಗ್ತಿರಲಿಲ್ಲವೋ ಅದನ್ನಿವರು ಸಿನಿಮಾ ಮಾಡಿ ತಿಳಿಸಿದರು. ದೇಶಕ್ಕಾಗಿ ತ್ಯಾಗ ಮಾಡಿದ ಜನ ಇವರು ಅಂತ ನಮ್ಮನ್ನೆಲ್ಲಾ  ಆ ಕಾರ್ಯಕ್ರಮದಲ್ಲಿ ಹೊಗಳಿದಾಗ ನಾವೆಲ್ಲ ಭಾವುಕರಾದ್ವಿ’.ಊರಿನ ನೆನಪು ಬಿಚ್ಚುತ್ತಿದ್ದಂತೆ ಬೀರ ನಾಯ್ಕರ ಕಣ್ಣುಗಳು ಒದ್ದೆಯಾಗಿದ್ದವು. ಮಲೆನಾಡಿನ ಈ ಪುರದಾಳು ಎನ್ನುವ ಊರಿಗೆ ಹೋಗಿ, ಊರವರನ್ನು ಮಾತನಾಡಿಸಲಿಕ್ಕೊಂದು ಕಾರಣವಿತ್ತು. ನನ್ನ ಗೆಳೆಯ ಕಿಟ್ಟಣ್ಣ ಮಾತಿನ ನಡುವೆ ಹೇಳಿದ್ದ-‘ಅದ್ಯಾವುದೋ ಸೀರಿಯಲ್ ತೆಗಿಯೋರು ನಮ್ಮ ಹಳ್ಳಿಗೆ ಬಂದಾರೆ ಕಣೋ. ಅವುರು ಬಂದಾಗಿಂದ ನಮ್ಮ ಹಳ್ಳಿ ಹುಡುಗರು ಸರಿಯಾಗಿ  ಮನೇನೆ ಸೇರ್ತಾಯಿಲ್ಲ ಮಾರಾಯ. ಜಮೀನು ಕಡೆ ಮುಖ ಸೈತಾ ಹಾಕ್ತ ಇಲ್ವಂತೆ. ಯಜಮಾನ ತಲೆಗಳೆಲ್ಲಾ ಇಷ್ಟು ವಯಸ್ಸಾದ್ರೂ ನಾವೇ ಇನ್ನೂ ಗೆಯ್ಯಬೇಕಲ್ಲ ಮಾರಾಯ ಅಂತ ಹೋಯ್‌ಕೋತಾ ಕುಂತಿದ್ದಾವೆ. ಆ ಸೀರಿಯಲ್ ಹುಡ್ಗೀರು ಇಷ್ಟಿಷ್ಟೇ ಚಡ್ಡಿ ಹಾಕ್ಕೊಂಡ್ ಶೂಟಿಂಗ್‌ನಲ್ಲಿ ಆಪಾಟಿ ಕುಣೀತಿದ್ರೆ ಹುಡುಗ್ರು ಕಥೆಯೇನು? ಇನ್ಮುಂದೆ ಅವೆಲ್ಲ ಕೈಗೆ ಸಿಕ್ತಾವೋ, ಹಂಗೇ ಕಣ್ಣಿ ಹರ್ಕೊಂಡು ಹೋಗ್ತಾವೋ?  ಒಂದೂ ತಿಳಿಯಂಗಿಲ್ಲ!’. ಕಿಟ್ಟಣ್ಣ ಹೇಳಿದ್ದು ತನ್ನೂರಿನಲ್ಲಿ ನಡೆಯುತ್ತಿದ್ದ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ಬಗ್ಗೆ. ‘ಪ್ಯಾಟೆ ಹುಡ್ಗೀರ ಹಳ್ಳೀ ಲೈಫು’ ಎನ್ನುವ ಕಾರ್ಯಕ್ರಮವದು. ಈ ಕಾರ್ಯಕ್ರಮದಲ್ಲಿನ ಚಮಕ್ ಚಮಕ್ ಹುಡುಗಿಯರ ಸಂಗದಲ್ಲಿ ಹಳ್ಳಿಹೈಕಳು ಎಲ್ಲಿ ದಿಕ್ಕು ತಪ್ಪುತ್ತಾರೋ ಎನ್ನುವ ಆತಂಕ, ಪ್ಯಾಟೆಯ ಜನರ ತೀಟೆಗೆ ಹಳ್ಳಿ ಹಾಳಾಗಬಾರದು ಎನ್ನುವ ಕಾಳಜಿ ಅವನದು.

ಊರಿಗೆ ನಲವತ್ತು!

ಪುರದಾಳು ಗ್ರಾಮ ಶಿವಮೊಗ್ಗದ ಶೆಟ್ಟಿಹಳ್ಳಿ ಅಭಯಾರಣ್ಯದ ಸೆರಗಿಗೆ ಅಂಟಿಕೊಂಡಿದೆ. ಅದೊಂದು ಸುಂದರ ಪುಟ್ಟ ಹಳ್ಳಿ. ಈ ಹಳ್ಳಿ ಜನ್ಮ ತಾಳಿ ಕೇವಲ ನಲವತ್ತು ವರ್ಷವಾಗಿದೆ! ಊರಷ್ಟೇ ಹೊಸತು, ಸೌಲಭ್ಯಗಳ ವಿಷಯದಲ್ಲಿ ಶತಮಾನಗಳಷ್ಟು ಹಿಂದುಳಿದ ಇತರ ಸಾವಿರಾರು ಗ್ರಾಮಗಳಂತೆಯೇ ಇದೂ ಇದೆ.ಈ ಊರವರು ಶರಾವತಿ ಅಣೆಕಟ್ಟೆಗೆ ತಮ್ಮ ಮೂಲ ಊರು, ಮನೆ, ತೋಟ- ಗದ್ದೆಗಳೆಲ್ಲವನ್ನೂ ಸಮರ್ಪಿಸಿ ಬಂದವರು. ಇವರಲ್ಲಿ ಹಿಂದುಳಿದ ಜನಾಂಗದವರೇ ಹೆಚ್ಚು. ಈಗಲೂ ಕಣ್ಣೀರಿನ ನೆನಪುಗಳಲ್ಲೇ ದಿನವೂ ಕೈತೊಳೆಯುತ್ತಿರುವ ಇವರ ತ್ಯಾಗದ ಬೆಳಕನ್ನು ವಿದ್ಯುತ್ತಿನ ರೂಪದಲ್ಲಿ ಇಡೀ ಕರ್ನಾಟಕವೇ ಇವತ್ತು ಅನುಭವಿಸುತ್ತಿದೆ.ನೆನಪುಗಳ ಬುನಾದಿಯಲ್ಲಿ ಎದ್ದುನಿಂತ ಇಂಥ ಗ್ರಾಮ ರಿಯಾಲಿಟಿ ಶೋ ಒಂದಕ್ಕೆ ಆತಿಥ್ಯ ವಹಿಸುವ ವಿಷಯವೇ ನನ್ನಲ್ಲಿ ಕುತೂಹಲ ಮೂಡಿಸಿತು.ಊರ ಹುಡುಗರು ಹಾಳಾಗುತ್ತಿದ್ದಾರೆ ಎನ್ನುವ ಕಿಟ್ಟಣ್ಣನ ಆತಂಕ ನನಗೆ ಅಷ್ಟೊಂದು ಗಂಭೀರವೆನ್ನಿಸಲಿಲ್ಲ. ಹಾಗಾಗಿಯೇ ಶೂಟಿಂಗ್ ಮುಗಿಯುವವರೆಗೂ ಅಲ್ಲಿಗೆ ನಾ ಕಾಲಿಡಲಿಲ್ಲ. ಶೂಟಿಂಗ್ ಜನ ಪುರದಾಳುವಿನಿಂದ ತೆರಳಿದ ನಂತರ ಹಳ್ಳಿಗೆ ಮೂರ್ನಾಲ್ಕು ಸಲವಾದರೂ ಹೋಗಿದ್ದೇನೆ. ಅಲ್ಲಿನ ಜನರನ್ನು ಮಾತನಾಡಿಸಿದ್ದೇನೆ. ಪ್ರಭಾವಿ ಕಿರುತೆರೆ ಮಾಧ್ಯಮದ ಒಂದು ಕಾರ್ಯಕ್ರಮ ಈ ಹಳ್ಳಿಗರ ಮೇಲೆ ಯಾವ ಪರಿಣಾಮ ಉಂಟುಮಾಡಿರಬಹುದು ಎನ್ನುವ ಕುತೂಹಲ ನನ್ನದು. ಆ ಕುತೂಹಲದಲ್ಲೇ ಊರವರನ್ನು ಪ್ರಶ್ನಿಸಿದಾಗ ಬೀರ ನಾಯ್ಕರು ‘ಮುಳುಗಡೆಯ ನೆನಪು’ಗಳನ್ನು ಬಿಚ್ಚಿಟ್ಟಿದ್ದು.

ಹೆಜ್ಜೆಗೊಂದು ಕಥೆ

ಊಟಿಗೆ ಹೋದಾಗ ಅಲ್ಲಿನ ಗೈಡ್‌ಗಳು ಪ್ರತಿಯೊಂದು ಸ್ಥಳ ತೋರಿಸುವಾಗಲೂ- ಇಲ್ಲಿಯೇ ನೋಡಿ ಆ ಸಿನಿಮಾದ ಶೂಟಿಂಗ್ ನಡೆದದ್ದು,  ಅಲ್ಲಿ ಆ ಸೀನ್ ತೆಗೆದಿದ್ದರು, ಇದೇ ಜಾಗದಲ್ಲಿ ಹೀರೋಯಿನ್ ಜಾರಿ ಬೀಳೋದು, ಅಲ್ಲೇ ನೋಡಿ ಆ ಹಾಡಿನ ಶೂಟಿಂಗ್ ಆಗಿರೋದು ಎಂದು ಪರಿಚಯಿಸುತ್ತಾರೆ. ಪುರದಾಳುವಿನಲ್ಲೂ ಹಾಗೇ ಆಯಿತು. ಹಳ್ಳಿಗರು ತಮ್ಮ ಕಲರ್‌ಫುಲ್ ನೆನಪುಗಳನ್ನು ಮೆಲುಕುಹಾಕತೊಡಗಿದರು:ನೋಡಿ ಸ್ವಾಮಿ, ಇದೇ ಬಾವಿಯಲ್ಲಿ ನೀರು ಸೇದುವ ಸ್ಪರ್ಧೆ ಮಾಡಿದ್ದು. ಇಲ್ಲಿಯೇ ಸಗಣಿ ಎತ್ತಿಸಿದ್ದು. ಅದೋ ಅಲ್ಲಿ ಲಗೋರಿ ಆಟ ಆಡಿಸಿದ್ದು. ಇವರ ಮನೆ ಹಿತ್ತಲಲ್ಲಿ ಕೋಳಿ ಓಡಿಸಿದರು. ಓ, ಅಗೊಳ್ಳಿ ಆ ಹೊಲದಲ್ಲೇ ಭತ್ತದ ಕೊಯ್ಲು ಆದದ್ದು. ಇಲ್ಲೇ ಕೇರೆ ಹಾವು ಆಡಿಸಿದ್ದು- ಹೀಗೆ ಸ್ಥಳ ಮಹಿಮೆಗಳು ಬಿಚ್ಚಿಕೊಳ್ಳತೊಡಗಿದವು.‘ಅವರು ಹೀಗೆ ಬಂದು ಹೋಗಿದ್ದು ಒಳ್ಳೇದಾತು ಬಿಡಿ. ನಮ್ಮೂರಿಗೆ ಒಳ್ಳೆ ಹೆಸರು ಸಿಕ್ತು’ ಎಂದರು ಕೆಲವರು. ‘ನಮ್ಮಳ್ಳಿಗೆ ಬಂದವರೆ ಅಂತ ಭಾಳ ಮರ್ಯಾದೆ ಮಾಡಿದೆವು. ಕೇಳಿದ ಎಲ್ಲ ಅನುಕೂಲ ಮಾಡಿಕೊಟ್ಟೆವು. ಅವರು ಮಾತ್ರ ನಮಗೆ ಬಿಡಿಗಾಸು ಸಹಾಯಾನೂ ಮಾಡಲಿಲ್ಲ’  ಎಂದು ಯಜಮಾನರೊಬ್ಬರು ಹೇಳಿದರು. ಅಷ್ಟರಲ್ಲೇ ಜಮೀನು ಕಡೆಯಿಂದ ಕೆಸರಿನ ಗುದ್ದಲಿ ಕೈಲಿ ಹಿಡಿದು ಬಂದ ಅಜ್ಜಪ್ಪರೊಬ್ಬರು ‘ಅವುರು ಎಷ್ಟೇ ತಿಪ್ಪರಲಾಗ ಹಾಕಿ ಜುಲುಮೆ ಮಾಡಿದ್ರು ನಾನು ಅವುರು ತಂದ ಅರ್ಧ ಟೀ ಸೈತ ಕುಡೀಲಿಲ್ಲ ಬುಡಿ’ ಎಂದು ತಾರಕ ಧ್ವನಿಯಲ್ಲಿ ಹೇಳಿದರು.

ಹೈಕಳ ರೋಮಾಂಚನ

ಪ್ಯಾಟೆ ಹುಡುಗಿಯರಿಂದ ಹೆಚ್ಚು ಖುಷಿಯಾಗಿದ್ದುದು ಯುವಕರು. ಕಿರುತೆರೆ ಗ್ಲಾಮರ್ ಅವರನ್ನು ಪುಳಕಗೊಳಿಸಿತ್ತು. ಹಗಲು ರಾತ್ರಿಗಳನ್ನು ಒಂದು ಮಾಡಿ ಹುಡುಗಿಯರಿಗೆ ಹೇಗೆಲ್ಲ ರಕ್ಷಣೆ-ಸಹಾಯ ನೀಡಿದೆವು ಎನ್ನುವುದನ್ನು ರಂಜನೀಯವಾಗಿ ವಿವರಿಸಿದರು. ಅವರ ಮಾತಿನಲ್ಲಿ ಹರಯದ ಕಾವಿತ್ತು, ಗೆಳೆತನದ ಕಂಪಿತ್ತು, ಪ್ರೀತಿ-ವಿಶ್ವಾಸದ ಉತ್ಸಾಹವಿತ್ತು.‘ಇಂಥದ್ದೊಂದು ಕುಗ್ರಾಮಕ್ಕೆ ಅವುರು ಬಂದಿದ್ದರಿಂದ ಎಷ್ಟೋ ಜನಕ್ಕೆ ಒಳ್ಳೆ ಕೂಲಿ ಸಿಕ್ತು. ನಮ್ಮೂರಿನ ಶಾಲೆ-ದೇವಸ್ಥಾನ ಒಂದಿಷ್ಟು  ಅಭಿವೃದ್ಧಿ ಆಯ್ತು. ನಮ್ಮೂರಿನ ಹೆಸ್ರು ಕರ್ನಾಟಕದಲ್ಲೇ ಮನೆ ಮಾತಾತು. ಪೇಟೆಗೆ ಹೋದ್ರೆ ಜನ ನಮ್ಮ ಹಳ್ಳೀನ ಗುರುತಿಸಿ ಮಾತಾಡೋ ಹಂಗಾಗಿದೆ. ಇದೆಲ್ಲಾ ಫಾಯಿದೆ ಅಲ್ವ’ ಎಂದರು ಒಬ್ಬರು.ಶೂಟಿಂಗ್ ಮಂದಿ ಕೊಟ್ಟಿರುವ ಸ್ಮರಣ ಫಲಕವೊಂದನ್ನು ಪ್ರಕಾಶ್ ಎತ್ತಿಹಿಡಿದರು. ‘ಅವರು ಬಂದಿದ್ದರಿಂದ ನಮ್ಮ  ಕೂಲಿ ಮಾಡೋ ಹಳ್ಳಿ ಹುಡುಗರಿಗೆ ನಲವತ್ತು ದಿನ ಒಳ್ಳೇ ಕೂಲಿ ಸಿಕ್ತು ಸಾರ್. ನಯನಾ ಅನ್ನೋ ಹೆಣ್ಣುಮಗಳೊಬ್ಬರು ತುಂಬಾ ಒಳ್ಳೆಯವರು. ನಮ್ಮಳ್ಳಿ ದೇವಸ್ಥಾನಕ್ಕೆ ಐವತ್ತು ಸಾವ್ರ ಕೊಟ್ರು. ಹಳ್ಳಿ ಜನರಿಗೆ ವರ್ಷದಲ್ಲಿ ಎರಡು ಸಲ ಮೆಡಿಕಲ್ ಕ್ಯಾಂಪ್ ಮಾಡಿಸುತ್ತೀವಿ ಅಂತ ಮಾತು ಕೊಟ್ಟಿದ್ದಾರೆ. ಸ್ಕೂಲಿಗೂ ಹೆಲ್ಪು ಮಾಡಿದ್ದಾರೆ. ಊರಿನ ಜನರಿಗೆ ಅವರಿದ್ದಷ್ಟೂ ದಿನ ಒಳ್ಳೇ ಮನರಂಜನೆ ಸಿಕ್ಕಿದೆ’ ಎಂದೂ ಹೇಳಿದರು.

ಹೃದಯಸಂಪನ್ನರ ಪ್ರತಿರೋಧ

ಹಳ್ಳಿ ಮಂದಿಯಲ್ಲಿ ಪೇಟೆ ಕಾರ್ಯಕ್ರಮದ ಬಗ್ಗೆ ತಕರಾರುಗಳೂ ಇದ್ದವು. ಸೀರಿಯಲ್ ಜನರಿಗೆ ವಸತಿ ಸೌಲಭ್ಯ ಕಲಿಸಿಕೊಟ್ಟ ರಾಮಚಂದ್ರ-  ‘ಅವರು ಶೂಟಿಂಗ್‌ಗೆ ಹರೆಯದ ಹೆಣ್ಣುಮಕ್ಕಳನ್ನೇ ಕರ್ಕೊಂಡು ಬಂದಿದ್ರು. ಅವರನ್ನ ಚೆನ್ನಾಗಿ ನೋಡಿಕೊಳ್ಳೋದು ನಮ್ಮ ಧರ್ಮ ನೋಡಿ.ಹಾಗಾಗಿ ನಾವು ಅವರಿಗೆ ತುಂಬಾನೆ ಸಹಾಯ ಮಾಡಿದೆವು. ಆದರೆ ಅವರು ತೆಗೆದ ಕೆಲವೊಂದು ಕಾರ್ಯಕ್ರಮ ನಮ್ಮ ಹಳ್ಳಿ ಜನಕ್ಕೆ ಇಷ್ಟವಾಗಲಿಲ್ಲ ಬಿಡಿ. ಬಿದಿರಿನ ಮುಳ್ಳಲ್ಲಿ ಕಟ್ಟಿಗೆ ತರೋಕ್ಕಂತ ನುಗ್ಗಿಸೋದು ಸರಿಯಾ? ಸೋತ ಸ್ಫರ್ಧಿ ಮಾನವಿ ಅನ್ನೋ ಹುಡಿಗೀಯ ತಲೆ  ಮೇಲೆ ಮೊಟ್ಟೆ ಹೊಡೆಸಿದ್ದೂ ಸರಿಕಾಣಲಿಲ್ಲ. ತಣ್ಣೀರು ಸುರಿಸೋದು, ಉರುಳು ಸೇವೆ ಮಾಡಿಸಿದ್ದು, ಎಮ್ಮೆ ಮೇಲೆ ಮೆರವಣಿಗೆ ಮಾಡಿಸಿದ್ದು ಇವೆಲ್ಲಾ ಸರಿ ಅನ್ನಿಸಲಿಲ್ಲ. ಈ ರಂಪಾಟ ನೋಡಿ ಇಬ್ಬರು ಹುಡ್ಗೀರು ಹೇಳದೆ ಕೇಳದೆ ಜಾಗ ಖಾಲಿ ಮಾಡಿದರು’ ಎಂದರು.ಆಟದ ಹೆಸರಲ್ಲಿ ಹೆಣ್ಣುಜೀವಗಳಿಗೆ ಹಿಂಸೆ ಮಾಡೋದು, ಮರ್ಯಾದೆ ತೆಗೆಯೋದು, ಗೋಳು ಹುಯ್ದುಕೊಳ್ಳೋದು, ವಿಚಿತ್ರ ಕಷ್ಟ ಕೊಡೋದೆಲ್ಲಾ ಹ್ಯಾಗೆ ಹಳ್ಳಿ ಲೈಫಾಗುತ್ತೆ? ಇದನ್ನೆಲ್ಲ ನಮ್ಮೂರಿನ ಹೆಂಗಸರು  ‘ಇದು ನಮ್ಮ ಹೃದಯಕ್ಕೆ ಒಪ್ಪದ ಮಾತು’ ಅಂತಂದು ವಿರೋಧಿಸಿದರು. ಈ ಪ್ರತಿಭಟನೆಯ ನಂತರವೇ ಕಾರ್ಯಕ್ರಮದ ನಿರ್ಮಾಪರು-ನಿರ್ದೇಶಕರು ಸ್ವಲ್ಪ ಮೃದುವಾದದ್ದು...ಸಮಸ್ಯೆಯೂ ಆಯಿತು...

ಮನೆ ದನಗಳ ಹೊಡೆದುಕೊಂಡು ಬರುತ್ತಿದ್ದ ಬಿ.ಕುಮಾರಸ್ವಾಮಿ ಎಂಬ ವಿದ್ಯಾವಂತ ರೈತರು ಪ್ಯಾಟೆ ಹುಡ್ಗೀರ ಕಾರ್ಯಕ್ರಮದ ಬಗ್ಗೆ ಅಸಮಾಧಾನ ಕಾರಿಕೊಂಡರು. ‘ಹಳ್ಳಿ ಲೈಫ್ ತೋರಿಸ್ತೀವಿ ಅಂತ ಬಂದ್ರು. ಅವರಿಗೆ ತಿಳಿದಿದ್ದೇ ಹಳ್ಳಿ ಲೈಫಾಯ್ತು. ಹಳ್ಳಿ ಜೀವನ ಅವರು ತೋರಿಸಿದಂಗೆ ಇರುತ್ತಾ ಸಾರ್? ನಮ್ಮ ಹೆಣ್ಮಕ್ಕಳು ಇರೋ ರೀತಿ, ಅವರ ಕಷ್ಟ-ಸುಖ ಬೇರೇನೆ ಅಲ್ವುರಾ?’.ನಮ್ಮೂರಿನ ಸೌಂದರ್ಯ, ಡ್ಯಾಮು ಇದನ್ನೆಲ್ಲಾ ವಿಜೃಂಭಣೆಯಿಂದ ತೋರಿಸಿದ್ದೇ ಯಡವಟ್ಟಾಗಿದೆ ನೋಡಿ. ಈಗ ಪಟ್ಟಣದ ಪಡ್ಡೆ ಹುಡುಗರೆಲ್ಲಾ ನಮ್ಮ ಹಳ್ಳಿಗೆ ಬಂರೋದು, ಕುಡಿದು, ತಿಂದು ಮಜಾ ಮಾಡೋದು ಶುರುವಾಗಿದೆ. ಅವರ ಕೇಕೆ, ಪುಂಡಾಟಿಕೆ ನಮಗೂ ಸಾಕಾಗಿದೆ. ಈ ಸಿನಿಮಾ-ಸೀರಿಯಲ್ ತೆಗೆಯೋರು ಬಂದು ಎಲ್ಲಾ ಚೆನ್ನಾಗಿ ತೋರಿಸಿಬಿಡ್ತಾರೆ. ಅದರ ಕೆಟ್ಟ ಪ್ರಭಾವ ನಮ್ಮ ಮಕ್ಕಳ ಮೇಲಾಗ್ತಿದೆ. ‘ಮುಂಗಾರು ಮಳೆ’ ಸಿನಿಮಾ ತೆಗೆದ ಮೇಲೆ ಜೋಗದ ನೆತ್ತಿ ಮೇಲೆ ಹೀರೋ-ಹೀರೋಯಿನ್ ಥರಾನೆ ಫೋಟೋ ತೆಗೆಸಿಕೊಳ್ಳಾಕೆ ಅಂತ ಹೋಗಿ ಅದೆಷ್ಟು ಜನ ಪ್ರಾಣ ಕಳ್ಕೊಂಡ್ರು ನೋಡಿದ್ರಲ್ಲ? ಅಂಥ ಎಡವಟ್ಟುಗಳೂ ಆಗ್ತಾವೆ’ ಅಂತದು ಹೊರಟು ನಿಂತರು.ಜೊತೆಗಿದ ಕಿಟ್ಟಣ್ಣ ಮಾತು ಮುಂದುವರಿಸಿದ: ‘ಎನ್.ಎಸ್.ಎಸ್. ಹುಡುಗ್ರು ಬಂದ್ರೆ ಹಳ್ಳಿನಾರ ಕ್ಲೀನ್ ಆಗುತ್ತೆ. ಒಂದಿಷ್ಟು ಮನರಂಜನೆ, ಹಳ್ಳಿಗೆ ಸಹಾಯ ಎಲ್ಲಾ ಆಗುತ್ತೆ. ಆದ್ರೆ ಈ ರಂಗಿನವರ ಹಂಗು ಒಳ್ಳೇದಲ್ಲಪ್ಪೋ. ಅದೇನೇನೋ ಸುಡುಗಾಡು ಕಾರ್ಯಕ್ರಮ ಮಾಡೋ ಬದಲಿಗೆ ನಮ್ಮ ಶ್ರಮ-ಸಂಸ್ಕೃತಿ ತೋರಿಸೋ ಚಾಪೆ ಹೆಣಿಯೋದು, ಭೂಮಿ ಚಿತ್ತಾರ, ಸೋಬಾನೆ ಹಾಡು, ಹಬ್ಬ ಹರಿದಿನಗಳ ಅಡಿಗೆ ಹಾಡು, ವಿಶೇಷ ಅಡಿಗೆಗಳು, ಅಂಥದ್ದನ್ನೆಲ್ಲಾ ತೋರಿಸಿದ್ರೆ ಹಳ್ಳಿ ಜೀವನ ತೋರಿಸಿದಂಗೆ ಆಗ್ತಿತ್ತು. ಅದು ಬಿಟ್ಟು ಪಟ್ಟಣದ ಜನ ತಾವು ಅಂದುಕೊಂಡ ತಪ್ಪು ಕಲ್ಪನೆಗಳೆಲ್ಲ ಹಳ್ಳಿ ಜೀವನ ಅಂತ ಕಲ್ಪಿಸಿಕೊಂಡು ಹಳ್ಳಿಗಳನ್ನ ತಪ್ಪಾಗಿ ಚಿತ್ರಿಸುತ್ತಿದ್ದಾರೆ’ ಅಂದ.ಅಷ್ಟರಲ್ಲೇ ಶೂಟಿಂಗ್‌ಗಾಗಿ ತಮ್ಮ ಇಡೀ ಜಮೀನನ್ನೇ ಕೊಟ್ಟಿದ್ದ ಮಂಜಮ್ಮ ಸಿಕ್ಕರು. ‘ಜ್ವಾಳ ಬೆಳೀತಿದ್ವಿ. ಅದು ಈ ಸಲ ತಪ್ಪೋತು. ಹೋಗ್ತಾ ಒಂದು ಲಕ್ಷ ಕೊಟ್ಟರು. ವಸಿ ಕಮ್ಮೀನೆ ಆತು ಅನ್ನಿ. ಇನ್ನೂರೈವತ್ತು ಜನ ಇದ್ರು. ಆ ಹುಡುಗರು-ಹುಡುಗಿರೆಲ್ಲಾ ಭಾಳಾ ಒಳ್ಳೇವು. ಹೊಂದ್ಕಂಡ್ ಇದ್ವು. ಅವಾಗವಾಗ ಫೋನ್ ಮಾಡ್ತಾವೆ. ನಾವು ಇದೆಲ್ಲಾ ಕಂಡಿರಲಿಲ್ಲ. ನೋಡ್ದಂಗಾತು ಬಿಡಿ’ ಎಂದರು. ಅವರ ಮಾತನ್ನು ಹಿಂಬಾಲಿಸುತ್ತ ಮಂಜಮ್ಮನವರ ಹೊಲ ತಲುಪಿದ್ದೆವು.ಸೀರಿಯಲ್ ಮಂದಿ ಉಳಿಸಿ ಹೋದ ಅವಶೇಷಗಳ ನಡುವೆಯೇ ಹೊಲದ ಎದೆಯಿಂದ ಮೆಕ್ಕೆಜೋಳದ ಸಣ್ಣ ಸಸಿಗಳು ಏಳುತ್ತಿದ್ದವು. ಚಿತ್ರೀಕರಣಕ್ಕಾಗಿ ನಿರ್ಮಿಸಿಕೊಡಿದ್ದ ದೀಪದ ಛತ್ರಿ ನೆಲ ಕಚ್ಚಿತ್ತು. ಸಣ್ಣಗೆ  ಶುರುವಾಗಿದ್ದ ಮಳೆಯಲ್ಲಿ ಹೊಲದ ದಾರಿ ಜಾರುತ್ತಿತ್ತು.‘ದನ ನುಗ್ತಾವೆ ಬೇಲಿ ಕದ ಹಾಕ್ಕೊಂಡ್ ಬನ್ನಿ’ ಎಂದು ಮಂಜಮ್ಮ ಮುಂದೆ ನಡೀತಿದ್ದರು. ಅಷ್ಟರಲ್ಲೇ ಪಟ್ಟಣದ ಹುಡುಗ-ಹುಡಿಗಿಯರ ದೊಡ್ಡ ಗುಂಪೊಂದು ಅರಚುತ್ತಾ ಆಟೋವೊಂದರಲ್ಲಿ ಡ್ಯಾಮಿನ ಕಡೆಯಿಂದ ಬಂದರು. ‘ಇದೇ ನೋಡಪ್ಪ ಸೀರಿಯಲ್ ಎಫೆಕ್ಟ್’ ಎಂದ ಗೆಳೆಯ. ನನಗೆ ‘ಹೂಂ’ ಎನ್ನಲೂ ಆಗಲಿಲ್ಲ. ‘ಉಹೂಂ’ ಎನ್ನಲೂ ಬಾಯಿಬರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.