ಗುರುವಾರ , ಅಕ್ಟೋಬರ್ 17, 2019
26 °C

ಹಳ್ಳಿ ಶಾಲೆಯ ದಿಲ್ಲಿ ಸಾಧನೆ

Published:
Updated:ಚೆನ್ನಾಗಿ ಓದಿ, ಉನ್ನತ ಹುದ್ದೆ ಪಡೆದು, ಕೈತುಂಬಾ ಸಂಬಳ ಪಡೆದು ಐಷಾರಾಮಿ ಜೀವನ ನಡೆಸುವುದೇ ಇಂದಿನ ಬಹುತೇಕ ವಿದ್ಯಾರ್ಥಿಗಳ ಕನಸು. ಉಳ್ಳವರ ಮಕ್ಕಳು ಪ್ರತಿಷ್ಠಿತ ಶಾಲೆಗಳಲ್ಲಿ ಓದಿ, ಬಹುಬೇಗ ಮುಖ್ಯವಾಹಿನಿಯಲ್ಲಿ ಸೇರ್ಪಡೆಯಾಗುತ್ತಾರೆ. ಆದರೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಮೂಲಸೌಕರ್ಯದ್ದೇ ಕೊರತೆ ಇರುವಾಗ ಗುಣಮಟ್ಟದ ಶಿಕ್ಷಣವೂ ಗಗನಕುಸುಮವೇ.

 

ಉತ್ತಮ ಶಿಕ್ಷಣ ದೊರೆತರೂ ಬಹುತೇಕರ ಬದುಕಿನ ಮುಖ್ಯ ಉದ್ದೇಶ ಪಟ್ಟಣದಲ್ಲಿ ಜೀವನ ಸಾಗಿಸುವುದೇ ಆಗಿರುತ್ತದೆ. ಇನ್ನು ತಾನು ಬೆಳೆದು ಬಂದ ಹಳ್ಳಿಯ ಅಭಿವೃದ್ಧಿ ಕುರಿತು ಕಾಳಜಿ ಅಷ್ಟಕ್ಕಷ್ಟೇ. ಆದರೆ, ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಎಂಬ ಪುಟ್ಟ ಗ್ರಾಮದ ಜವಾಹರ ನವೋದಯ ವಿದ್ಯಾಲಯದ ಮಕ್ಕಳು ಇದಕ್ಕೆ ಅಪವಾದ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಗ್ರಾಮೀಣರಲ್ಲಿ ಅಭಿವೃದ್ಧಿಯ ಕುರಿತು ಹೇಗೆ ಸುಲಭವಾಗಿ ಅರಿವು ಮೂಡಿಸಬಹುದು ಎಂಬುದನ್ನು `ಸಮುದಾಯ ಅಭಿವೃದ್ಧಿ ಯೋಜನೆ~ ಮೂಲಕ ಸಾಬೀತುಪಡಿಸಿದ್ದಾರೆ.  ಈ ಯೋಜನೆಗೆ ದೇವರಹಳ್ಳಿ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ (ಎಐಸಿಟಿಇ) ನೀಡುವ ರಾಷ್ಟ್ರಮಟ್ಟದ `ಇ-ಇಂಡಿಯಾ 2011~ ಪ್ರಶಸ್ತಿ ದೊರೆತಿದೆ. ಈ ಮೂಲಕ ದೇಶದ ಶಿಕ್ಷಣ ತಜ್ಞರ ಚಿತ್ತ ದೇವರಹಳ್ಳಿಯತ್ತ ಮುಖ ಮಾಡುವಂತೆ ಜವಾಹರ್ ನವೋದಯ ವಿದ್ಯಾಲಯ ಸಾಧನೆ ಮಾಡಿದೆ.ಏನಿದು `ಸಮುದಾಯ ಅಭಿವೃದ್ಧಿ~ ಯೋಜನೆ?

ಆಧುನಿಕ ಸಂವಹನ ಮಾಧ್ಯಮಗಳನ್ನು ಬಳಸಿಕೊಂಡು ಗ್ರಾಮೀಣರಲ್ಲಿ ಅಭಿವೃದ್ಧಿಯ ಕುರಿತು ವಿದ್ಯಾರ್ಥಿಗಳ ಮೂಲಕ ಅರಿವು ಮೂಡಿಸುವುದೇ `ಸಮುದಾಯ ಅಭಿವೃದ್ಧಿ ಯೋಜನೆ~. ಜವಾಹರ ನವೋದಯ ವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಯೋಜನೆಯ ರೂವಾರಿಗಳು. ಕಂಪ್ಯೂಟರ್, ಎಲ್‌ಸಿಡಿ, ಟೇಪ್‌ರೆಕಾರ್ಡರ್, ಮುದ್ರಣ ಮಾಧ್ಯಮ, ಕ್ಯಾಮೆರಾ, ಸ್ಕ್ಯಾನರ್, ಇಂಟರ್‌ನೆಟ್, ಮಲ್ಟಿಮೀಡಿಯಾದ ಮೂಲಕ ದೇವರಹಳ್ಳಿ ಗ್ರಾಮಸ್ಥರಿಗೆ ಒಟ್ಟು 8 ವಿಷಯಗಳ ಕುರಿತು ಜಾಗೃತಿ ಉಂಟು ಮಾಡಿ, ಅವರಲ್ಲಿ ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಸ್ಥೆ, ಕೃಷಿಸಾಲ, ಸ್ವಾವಲಂಬನೆ, ಸಮುದಾಯದ ಆರೋಗ್ಯ ಕುರಿತು ಈ ಯೋಜನೆ ಮೂಲಕ ತಿಳಿವಳಿಕೆ ಮೂಡಿಸಲಾಗಿದೆ.ಯೋಜನೆಯ ಸ್ವರೂಪ

ದೇವರಹಳ್ಳಿಯ ಗ್ರಾಮಸ್ಥರಿಗೆ ಅಗತ್ಯವಿರುವ ಸೌಕರ್ಯಗಳ ಕುರಿತು ಪ್ರಶ್ನೋತ್ತರದ ಮೂಲಕ ವಿದ್ಯಾರ್ಥಿಗಳು ಅಧ್ಯಯನ ನಡೆಸಿದರು. ಆ ಸಂದರ್ಭದಲ್ಲಿ ಜನರಲ್ಲಿ ಮೂಲಭೂತ ಹಕ್ಕುಗಳ ಕುರಿತು ಇರುವ ಅಜ್ಞಾನ ಬೆಳಕಿಗೆ ಬಂದಿತು. ಕೃಷಿಕರೇ ಹೆಚ್ಚಾಗಿರುವ ಈ ಹಳ್ಳಿಯಲ್ಲಿ ಸರ್ಕಾರದ ಕೃಷಿ ನೀತಿಗಳು, ಗ್ರಾಹಕ ಸಂರಕ್ಷಣಾ ಕಾಯ್ದೆ, ಆರೋಗ್ಯ, ಶಿಕ್ಷಣ ಕುರಿತು ಜನರಲ್ಲಿ ಅರಿವಿನ ಕೊರತೆ ಕಂಡುಬಂತು. ಈ ಎಲ್ಲಾ ಅಂಶಗಳನ್ನು ಮನದಟ್ಟು ಮಾಡಿಕೊಂಡ ವಿದ್ಯಾರ್ಥಿಗಳ ತಂಡ ಒಟ್ಟು 8 ವಿಷಯಗಳ ಅಡಿ 8 ಗುಂಪುಗಳ ನೇತೃತ್ವದಲ್ಲಿ `ಸಮುದಾಯ ಅಭಿವೃದ್ಧಿ ಯೋಜನೆ~ಯ ರೂಪರೇಷೆ ರೂಪಿಸಿತು.

 ಬ್ಯಾಂಕಿನ ಕುರಿತು ಗ್ರಾಹಕರ ತಿಳಿವಳಿಕೆ ಮತ್ತು ಬೆಳೆಸಾಲ, ಅಂತರ್ಜಲಮಟ್ಟ ವೃದ್ಧಿ (ಮಳೆನೀರು ಕೊಯ್ಲು), ಗ್ರಾಮೀಣ ನೈರ್ಮಲ್ಯ, ಇಂಗ್ಲಿಷ್ ಕಲಿಕೆ, ಜನಸಂಖ್ಯಾ ನಿಯಂತ್ರಣ, ಸ್ವಚ್ಛತೆ ಮತ್ತು ಆರೋಗ್ಯ, ಧೂಮಪಾನ ಮತ್ತು ಮದ್ಯಪಾನದ ದುಷ್ಪರಿಣಾಮ, ಅಣಬೆ ಬೇಸಾಯ -ಹೀಗೆ ಗ್ರಾಮೀಣಾಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸುವ ಒಟ್ಟು 8 ವಿಷಯಗಳನ್ನು ಯೋಜನೆಯಲ್ಲಿ ಅಳವಡಿಸಿಕೊಂಡು, ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಗ್ರಾಮಸ್ಥರೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಅವರಲ್ಲಿ ಬದಲಾವಣೆ ಪ್ರಕ್ರಿಯೆಗೆ ನಾಂದಿ ಹಾಡಿದ್ದಾರೆ.ಸಂವಹನ ಹೇಗೆ?

ದಿನನಿತ್ಯ ಸಂವಹನಕ್ಕಾಗಿ ಉಪಯೋಗಿಸುವ ಮಾದರಿ ಜತೆಗೇ, ಆಧುನಿಕ ಸಂವಹನ ಮಾಧ್ಯಮಗಳನ್ನೂ ಬಳಸಿಕೊಂಡು ಗ್ರಾಮಸ್ಥರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿ, ಅವರಲ್ಲಿ ಸಮುದಾಯ ಅಭಿವೃದ್ಧಿ ಬಗ್ಗೆ ಜಾಗೃತಿ ಉಂಟು ಮಾಡಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳೇ ನೇರವಾಗಿ ದೇವರಹಳ್ಳಿಯ ಪ್ರತಿ ಮನೆಮನೆಗೂ ಹೋಗಿ ಗ್ರಾಮೀಣಮಟ್ಟದಲ್ಲಿರುವ ವ್ಯಕ್ತಿ ಹೇಗೆ ಬ್ಯಾಂಕಿನ ಸೌಲಭ್ಯ ಪಡೆಯಬಹುದು, ದುಷ್ಚಟಗಳ ದುಷ್ಪರಿಣಾಮ, ಆರೋಗ್ಯ ಮಾಹಿತಿ, ಅಣಬೆ ಬೇಸಾಯ, ಮಳೆನೀರು ಕೊಯ್ಲು ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಬಹುತೇಕ ಅನಕ್ಷರಸ್ಥರೇ ಇರುವ ಹಳ್ಳಿಯಲ್ಲಿ ಪವರ್ ಪಾಯಿಂಟ್ ಮೂಲಕ ಪ್ರಾತ್ಯಕ್ಷಿಕೆ ತೋರಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು.

 

ಅಲ್ಲದೇ, ಬೀದಿನಾಟಕ, ಜನ ಜಾಗೃತಿ ಜಾಥಾ, ವಿದ್ಯಾರ್ಥಿಗಳ ಶ್ರಮದಾನದ ಮೂಲಕ ಗ್ರಾಮೀಣರಲ್ಲಿ ಜಾಗೃತಿ ಮೂಡಿಸಲಾಯಿತು. ಇದಕ್ಕೆ ದೇವರಹಳ್ಳಿ ಗ್ರಾ.ಪಂ., ಜಿಲ್ಲಾಡಳಿತ ಕೂಡಾ ಕೈಜೋಡಿಸಿ ಯೋಜನೆ ಯಶಸ್ಸಿಗೆ ಸಹಕರಿಸಿತು.ಪ್ರತಿಕ್ರಿಯೆ: ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಗ್ರಾಮಸ್ಥರೇ ನೇರವಾಗಿ ಬ್ಯಾಂಕಿಗೆ ಹೋಗಿ ಖಾತೆ ಆರಂಭಿಸುವುದು, ಹಣ ತುಂಬುವುದು, ಸಾಲ ಪಡೆಯುವ ಕೆಲಸಗಳನ್ನು ಈಗ ಸ್ವತಂತ್ರವಾಗಿ ನಿರ್ವಹಿಸುತ್ತಿದ್ದಾರೆ. ಕೃಷಿ, ಬೆಳೆ ಮಾರಾಟದಲ್ಲಿ ಮಧ್ಯವರ್ತಿಗಳು ರೈತರಿಗೆ ಹೇಗೆ ಮೋಸ ಮಾಡುತ್ತಿದ್ದರು ಎಂಬುದನ್ನು ಕೃಷಿಕರು ವಿದ್ಯಾರ್ಥಿಗಳ ಮೂಲಕ ಅರಿತಿದ್ದಾರೆ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗೆ ಕೊರತೆ ಇದ್ದು, ನೀರಿನಲ್ಲಿ ಫ್ಲೋರೈಡ್ ಅಂಶವೂ ಹೆಚ್ಚಾಗಿದೆ. ಇದರಿಂದ ಇಲ್ಲಿನ ಜನರು ವಸಡು ಮತ್ತು ಮೂಳೆಸವೆತ ರೋಗಕ್ಕೆ ಬೇಗ ಬಲಿಯಾಗುತ್ತಾರೆ. ಈ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸಿ, ಮಳೆನೀರು ಕೊಯ್ಲು ವಿಧಾನದ ಮಹತ್ವ ಮನಗಾಣಿಸಲಾಯಿತು. ಶಾಲೆಯಲ್ಲಿ ಅಳವಡಿಸಿದ್ದ ಮಳೆನೀರು ಕೊಯ್ಲು ಘಟಕದ ಕಾರ್ಯ ವಿಧಾನದಿಂದ ಪ್ರೇರಣೆಗೊಂಡ ಹಲವರು ಈಗ ಮಳೆನೀರು ಕೊಯ್ಲು ಯೋಜನೆ ಅಳವಡಿಕೆಗೆ ಒಲವು ತೋರಿದ್ದಾರೆ ಎಂದು ತಮ್ಮ ಯೋಜನೆಯ ಬಗ್ಗೆ ವಿವರಿಸುತ್ತಾರೆ ವಿಜ್ಞಾನ ಶಿಕ್ಷಕ ಎ. ರವಿ.

ದೇಶದ ಅನೇಕ ಶಾಲೆಗಳು ಸಮುದಾಯ ಅಭಿವೃದ್ಧಿಗೆ ಸಂಬಂಧಪಟ್ಟ ಯೋಜನೆ ಮಾಡಿದ್ದವು. ಆದರೆ, ಮಾಹಿತಿ ಮತ್ತು ಸಂವಹನದ ತಂತ್ರಜ್ಞಾನದ (ಐಸಿಟಿ) ಸಫಲ ಬಳಕೆಯ ಮೂಲಕ ಗ್ರಾಮೀಣಾಭಿವೃದ್ಧಿ ಕುರಿತು ಅರಿವು ಮಾಡಿದ ನಮ್ಮ ಶಾಲೆಯನ್ನು `ಎಐಸಿಟಿಇ~ ಗುರುತಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ. ಇದರಿಂದ ಸಮುದಾಯದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳು ತೊಡಗಲು ಮತ್ತಷ್ಟು ಸ್ಫೂರ್ತಿ ದೊರೆತಿದೆ~ ಎನ್ನುತ್ತಾರೆ ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಸಿ. ಅಮ್ಮಾಳ್.

ಸಮುದಾಯದ ಅಭಿವೃದ್ಧಿ ಕುರಿತು ಕಾಳಜಿ ಮೆರೆದ ದೇವರಹಳ್ಳಿಯ ಜವಾಹರ ನವೋದಯ ವಿದ್ಯಾಲಯ ಈಗ ದೇಶದ ಇತರ ಶಾಲೆಗಳಿಗೂ ಮಾದರಿಯಾಗಿದೆ. 

              

 

ಇಂಗ್ಲಿಷ್ ಬಳಕೆಯ ತರಬೇತಿ

 

ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಭಾಷೆ ಕುರಿತು ಕೀಳರಿಮೆ ಸಹಜ. ಇದನ್ನು ಅರಿತ ವಿದ್ಯಾರ್ಥಿಗಳ ತಂಡ ತಮ್ಮ ಸುತ್ತಮುತ್ತಲಿನ ಸರ್ಕಾರಿ ಶಾಲೆಯ 9 ಮತ್ತು 10ನೇ ತರಗತಿಯ ಆಯ್ದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆ ಬಳಕೆ, ಕಲಿಕೆ ಕುರಿತು ತರಬೇತಿ ನೀಡಿದರು. ತಮ್ಮ ವಯೋಮಾನದ ವಿದ್ಯಾರ್ಥಿಗಳೇ ಮಕ್ಕಳಿಗೆ ತರಬೇತಿ ನೀಡಿದ್ದರಿಂದ ಸರಳ ವಿಧಾನದಲ್ಲಿ ಇಂಗ್ಲಿಷ್ ಬಳಸುವಷ್ಟು ಗ್ರಾಮೀಣ ಮಕ್ಕಳು ಆತ್ಮವಿಶ್ವಾಸ ಪಡೆದಿದ್ದಾರೆ ಎನ್ನುತ್ತಾರೆ ಇಂಗ್ಲಿಷ್ ಕಲಿಕಾ ಯೋಜನೆಯ ಮಾರ್ಗದರ್ಶಿ ಶಿಕ್ಷಕ ಗಜಾನನ ಒಡೆಯರ್.

ನವೋದಯ ಶಾಲೆಯ ವಿದ್ಯಾರ್ಥಿಗಳು ಪಠ್ಯಪುಸ್ತಕದ ಓದಿಗಷ್ಟೇ ಸೀಮಿತವಾಗದೇ, ಹಳ್ಳಿಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದು ಗ್ರಾಮಸ್ಥರ ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.ಪಟ್ಟಣದ ವಿದ್ಯಾರ್ಥಿಗಳೂ ನಾಚುವಷ್ಟು ಶುದ್ಧ ಇಂಗ್ಲಿಷ್ ಮಾತನಾಡುವ ಈ ವಿದ್ಯಾರ್ಥಿಗಳಲ್ಲಿ ಬಹುತೇಕರು ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಓದಿನ ಜತೆಗೇ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದಿರುವ ಈ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ.

 

ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದಲ್ಲಿ ಕೋಲಾಟ, ಲಂಬಾಣಿ ನೃತ್ಯದ ಕುರಿತು ತರಬೇತಿಯನ್ನೂ ಪಡೆದಿದ್ದಾರೆ. ಪ್ರಮುಖ ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿರುವ ನವೋದಯ ವಿದ್ಯಾರ್ಥಿಗಳು `ಪ್ರಜಾವಾಣಿ~ಯ `ಕರುಣಾಳು ಬಾ ಬೆಳಕೇ~, `ಕರ್ನಾಟಕ ದರ್ಶನ~, `ಸಂಗತ~, `ವಾಚಕರ ವಾಣಿ~ ಕುರಿತು ಪ್ರಾಜೆಕ್ಟ್ ವರ್ಕ್ ರೂಪಿಸಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ವಿದ್ಯಾಲಯದ ಕನ್ನಡ ಶಿಕ್ಷಕರಾದ ಡಿ.ಬಿ. ಚಿಟ್ಟಾ ಮತ್ತು ಪ್ರಕಾಶ್.
Post Comments (+)