ಸೋಮವಾರ, ಜನವರಿ 27, 2020
17 °C

ಹಳ್ಳಿ ಹುಡುಗಿಯರ ಯಶೋಗಾಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊನ್ನೆ ದಸರಾ ರಜೆಯಲ್ಲಿ ಊರಿಗೆ ತವರು ಮನೆಗೆ ಹೋಗಿದ್ದಾಗ ಮನೆಯವರೊಂದಿಗೆ ಹೀಗೆ  ಮಾತನಾಡುವಾಗ ಊರವರ, ಅವರಿವರ ಸುದ್ದಿ ಮಾತಿನ ಮಧ್ಯೆ ಹರಿಯಿತು.

ಹೊಟೇಲ್ ವಿಠಲನ ಮಗಳಿಗೆ ಅಮೆರಿಕಕ್ಕೆ ಹೋಗಲು ಬುಲಾವ್ ಬಂದಿದೆಯಂತೆ. ಕೆಲಸದ ಮೇಲೆ ಕಂಪೆನಿಯವರು ಅಮೆರಿಕಕ್ಕೆ ಮೂರು ತಿಂಗಳಿಗಂತ ಕಳುಹಿಸುತ್ತಿದ್ದಾರಂತೆ~~ ಎಂದು ಅಮ್ಮ ಹೇಳಿದರು. ಸುದ್ದಿ ಕೇಳಿದ ನನಗೆ ಆಶ್ಚರ್ಯವೂ, ಖುಷಿಯೂ ಆಯಿತು. ನಾನು ಕಾಲೇಜಿಗೆ ಹೋಗುತ್ತಿದ್ದಾಗ ಅವಳಿನ್ನೂ ಚಿಕ್ಕವಳು... ನಮ್ಮೂರಿನ ಕುಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಳು. ಮನೆಯಲ್ಲಿ ಬಡತನ. ಹೆತ್ತವರು ಅಷ್ಟೇನೂ ವಿದ್ಯಾವಂತರಲ್ಲ. ಅಂತಹ ಪರಿಸರದಲ್ಲಿ ಓದಿದ ಆಕೆ ಇಂದು ಕಡಲಾಚೆಯ ಅಮೆರಿಕಕ್ಕೆ ಹೋಗಲು ಅಣಿಯಾಗಿದ್ದಾಳೆ ಎಂದು ಕಲ್ಪಿಸಿಕೊಂಡಾಗ ಅವಳ ಬಗ್ಗೆ ಹೆಮ್ಮೆಯೆನಿಸಿತು.

ಇನ್ನು ಅಂಗಡಿ ಶೀನಪ್ಪನ ಮಗಳು ಸುಜಾತ ಬಿ.ಎಡ್., ಮಾಡಿಕೊಂಡು ಹೈಸ್ಕೂಲಿಗೆ ಟೀಚರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ನನ್ನ ಕ್ಲಾಸ್‌ಮೇಟ್ ಆಗಿದ್ದ, ಜಿಂಕೆಮರಿಯಂತೆ ಓಡುತ್ತಿದ್ದ, ಕ್ರೀಡೆಯಲ್ಲಿ ಮುಂಚೂಣಿಯಲ್ಲಿದ್ದ ಸುರೇಖಾಳಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕಿದೆಯಂತೆ. ಇದೀಗ ನಾಗ್ಪುರದಲ್ಲಿ ಇದ್ದಾಳಂತೆ.

ಇನ್ನು ಓದಿನಲ್ಲಿ ಸದಾ ಮುಂದಿದ್ದ ಭಾಗ್ಯಶ್ರಿ ಎಂಜಿನಿಯರಿಂಗ್ ಮಾಡಿಕೊಂಡು ದೂರದ ಕಲ್ಕತ್ತಾದಲ್ಲಿ ಕಂಪೆನಿಯೊಂದರಲ್ಲಿ  ಕೆಲಸ ಗಿಟ್ಟಿಸಿಕೊಂಡಳು. ನಂತರ ಅವಳ ಮದುವೆಗೆ ಅಪ್ಪ-ಅಮ್ಮನಿಗೆ  ಒಂದು ಚೂರೂ ಹೊರೆಯಾಗಲಿಲ್ಲ. ತಾನು ಒಂದು ವರ್ಷ ದುಡಿದು ಕೂಡಿಟ್ಟ ಸಂಪಾದನೆಯಲ್ಲಿಯೇ ಒಡವೆ, ಮದುವೆ ಖರ್ಚಿನ ವ್ಯವಸ್ಥೆ ಮಾಡಿಕೊಂಡಳು. ಇನ್ನು ಹಾಡು, ನೃತ್ಯದಲ್ಲಿ ಮುಂದಿದ್ದ ಶಿಲ್ಪ ಬಾಂಬೆಯವರೆಗೆ ಹೋಗಿ ಕಾರ‌್ಯಕ್ರಮ ನೀಡಿ ಬಂದಿದ್ದಾಳಂತೆ. ಮಂಗಳೂರಿನಲ್ಲಿ ಸ್ವಂತ ತರಗತಿ ತೆರೆದಿದ್ದಾಳಂತೆ ಎಂದು ಹಲವರ ಸುದ್ದಿ ನಮ್ಮ ಮಾತಿನ ಮಧ್ಯೆ ಬಂದು ಹೋದವು.

ಹಳ್ಳಿಯಿಂದ ದಿಲ್ಲಿಗೆ

ಇವರೆಲ್ಲರೂ ಕುಗ್ರಾಮದಲ್ಲಿ ಹುಟ್ಟಿ, ಬೆಳೆದು, ಸರ್ಕಾರಿ ಶಾಲೆಗಳಲ್ಲಿ  ಓದಿದ ಹುಡುಗಿಯರು. ಇವರ ಹೆತ್ತವರೇನು ಆಗರ್ಭ ಶ್ರಿಮಂತರಲ್ಲ, ಹೆಚ್ಚು ವಿದ್ಯಾವಂತರು ಕೂಡ ಅಲ್ಲ. ಆದರೆ ಓದುವ ಹುಮ್ಮಸ್ಸು.

ಹಳ್ಳಿ ಹುಡುಗಿಯರ ಯಶೋಗಾಥೆ..

ಜೀವನದಲ್ಲಿ ಯಶಸ್ಸು ಗಳಿಸಬೇಕೆಂಬ ಆಕಾಂಕ್ಷೆ ಅವರನ್ನು ಹಳ್ಳಿಯಿಂದ ದಿಲ್ಲಿಗೆ ತಂದು ನಿಲ್ಲಿಸಿದೆ. ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ, ಹಳ್ಳಿ ಹುಡುಗಿಯರಿಗಿಂತ ಸಿಟಿ ಹುಡುಗಿಯರು ಮೇಲು, ತಂದೆ-ತಾಯಿಗಳು ವಿದ್ಯಾವಂತರಾಗಿದ್ದು ಉತ್ತಮ ಉದ್ಯೋಗದಲ್ಲಿದ್ದರೆ ಮಕ್ಕಳಿಗೆ ಅನುಕೂಲ ಎಂಬ ಕೆಲವರ ಭ್ರಮೆಯನ್ನು ಹಳ್ಳಿಯ ಹೆಣ್ಣು ಮಕ್ಕಳು ದಶಕದಿಂದೀಚೆಗೆ ಹುಸಿಗೊಳಿಸುತ್ತಿದ್ದಾರೆ.

ನನಗಿನ್ನೂ ನೆನಪಿದೆ. ಹದಿನೈದು ವರ್ಷಗಳ ಹಿಂದೆ  ನಮ್ಮೂರಿನಲ್ಲಿ  ಕಾಲೇಜು ಮೆಟ್ಟಿಲೇರುತ್ತಿದ್ದ ಹುಡುಗಿಯರು ಅಪರೂಪ. ಎಲ್ಲೋ ಅಲ್ಲೊಬ್ಬರು, ಇಲ್ಲೊಬ್ಬರು ಬೆರಳೆಣಿಕೆಯಲ್ಲಿರುತ್ತಿದ್ದರು. ಮಿಕ್ಕವರೆಲ್ಲಾ, ಹತ್ತನೇ ಕ್ಲಾಸು, ಪಿ.ಯು.ಸಿಗೆ ಓದು ರದ್ದು. ಸ್ವಲ್ಪ ಸಮಯ ಮನೆಯಲ್ಲಿ ಕುಳಿತು ನಂತರ ಗಂಡನ ಮನೆ ಹಾದಿ ಹಿಡಿಯುತ್ತಿದ್ದರು. ಆಗಿನ ಪರಿಸ್ಥಿತಿಯಲ್ಲಿ ಗ್ರಾಮದಲ್ಲಿ ಎಲ್ಲೋ ಅಲ್ಲೊಬ್ಬರು-ಇಲ್ಲೊಬ್ಬರು ಹುಡುಗಿಯರು ಕಾಲೇಜು ಮೆಟ್ಟಿಲೇರಿದರೆ ಅದು ದೊಡ್ಡ ವಿಷಯ. ಡಿಗ್ರಿ ಮಾಡಿಕೊಂಡರಂತೂ ಅದು ಸಾಧನೆ. ಆರ್ಥಿಕ ಅನುಕೂಲಸ್ಥರು, ವಿದ್ಯಾವಂತ ಹೆತ್ತವರು ಮಾತ್ರ ತಮ್ಮ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಿದ್ದರು. ಇನ್ನು ಮನೆ ಬಿಟ್ಟು ದೂರದ ಸಿಟಿಗಳಲ್ಲಿ ಓದುವುದಂತೂ ದೂರದ ಮಾತು. ಆಗ ಕಾಲೇಜುಗಳ, ವಿವಿಧ ಕೋರ್ಸ್‌ಗಳ ಸಂಖ್ಯೆಯೂ ಕಡಿಮೆಯಾಗಿದ್ದವು. ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸ್‌ಗಳ ಯೋಚನೆಯೇ ಇಲ್ಲ ಬಿಡಿ. ಆಗಿನ್ನೂ ಶಿಕ್ಷಣ ಎಲ್ಲರ ಸ್ವತ್ತಾಗಿರಲಿಲ್ಲ, ಕೇವಲ ಉಳ್ಳವರ, ವಿದ್ಯಾವಂತರ ಆಸ್ತಿಯಾಗಿದ್ದಿತು.

ಬದಲಾಗುತ್ತಿದ್ದಾರೆ ಹೆಣ್ಣುಮಕ್ಕಳು

ಆದರೆ ಇಂದು ಕಾಲ ಬದಲಾಗಿದೆ. ಬದಲಾವಣೆಯ ಗಾಳಿ ಹಳ್ಳಿಯವರೆಗೂ ಬೀಸಿದೆ. ಶಿಕ್ಷಣದ ಪ್ರಾಮುಖ್ಯ ಪೋಷಕರ ಮನಮುಟ್ಟಿದೆ. ಹಳ್ಳಿಯ ಹೆಣ್ಣು ಮಕ್ಕಳೂ ಬದಲಾಗುತ್ತಿದ್ದಾರೆ. ಶಿಕ್ಷಣ ಅವರನ್ನು ಎಚ್ಚರಿಸಿದೆ. ಸಿಗುವ ಸೌಲಭ್ಯ, ಸೌಕರ್ಯ ಬಳಸಿಕೊಂಡು ಓದಿ ಮುಂದೆ ಬರುತ್ತಾರೆ. ಶಿಕ್ಷಣದಲ್ಲಿ  ಯಾವ ರೀತಿಯ ಬದಲಾವಣೆಗಳಾಗುತ್ತಿವೆ, ಇಂದಿನ ಜೀವನಕ್ಕೆ ಎಂತಹ ಶಿಕ್ಷಣ ಬೇಕು, ಯಾವ ಕೋರ್ಸ್ ಓದಬೇಕು ಎಂಬ ಸ್ಪಷ್ಟ ತಿಳುವಳಿಕೆ ಇರುತ್ತದೆ. ಆದುದರಿಂದ ಇಂದು ಹಳ್ಳಿ ಕಡೆಗಳಲ್ಲಿ ಹೋಗಿ ನೋಡಿದರೆ ಕಾಲೇಜಿಗೆ ಹೋಗದೆ ಮನೆಯಲ್ಲಿರುವವರು, ಅರ್ಧಕ್ಕೆ ಓದು ನಿಲ್ಲಿಸಿದವರು ಕಾಣಸಿಗುವುದೇ ಅಪರೂಪ.

ಹಳ್ಳಿಯಲ್ಲಿ ಓದುವ ಅನೇಕ ಹುಡುಗಿಯರು ಅಪ್ಪಟ ಗ್ರಾಮೀಣ ಪ್ರತಿಭೆಗಳಾಗಿರುತ್ತಾರೆ. ಶಿಕ್ಷಣ ಗಳಿಸಿ ಉದ್ಯೋಗ ಪಡೆಯಲು ಇಂಗ್ಲಿಷ್ ಕಾನ್ವೆಂಟ್‌ಗಳಲ್ಲಿ ಓದಬೇಕು, ಸಿಟಿಯಲ್ಲಿರುವ ಹೆಸರು ಗಳಿಸಿದ ಕಾಲೇಜಿನಲ್ಲಿ ಅಧ್ಯಯನ ಮಾಡಬೇಕೆಂಬ ನಂಬಿಕೆಯನ್ನು ಇವರು ಹುಸಿಗೊಳಿಸುತ್ತಾರೆ. “ಗ್ರಾಮೀಣ ಭಾಗದಿಂದ ಬಡತನದಿಂದ ಬಂದ ಹುಡುಗಿಯರಿಗೆ ಜವಾಬ್ದಾರಿ ಇರುತ್ತದೆ. ತಾವು ಓದಿ ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ಛಲವಿರುತ್ತದೆ” ಎನ್ನುತ್ತಾರೆ ಉಪನ್ಯಾಸಕರೊಬ್ಬರು.

ನಗರ ಪ್ರದೇಶದ ಹುಡುಗಿಯರಿಗಿಂತ ಓದಿನಲ್ಲಿ, ಜೀವನದಲ್ಲಿ ಯಶಸ್ಸು ಗಳಿಸುವುದು ಗ್ರಾಮೀಣ ಪ್ರದೇಶದ ಹುಡುಗಿಯರು ಎಂಬುದನ್ನು ಎಷ್ಟೋ ಮಂದಿ ಹೆಣ್ಣು ಮಕ್ಕಳು ತೋರಿಸಿಕೊಟ್ಟಿದ್ದಾರೆ. ಈ ಹಳ್ಳಿ ಹುಡುಗಿಯರ ಯಶೋಗಾಥೆ ಕೇಳಲು ನಿಜಕ್ಕೂ ಸಂತೋಷವಾಗುತ್ತದೆ. ಆದರೆ ಈ ಹುಡುಗಿಯರೆಲ್ಲ ಉದ್ಯೋಗವೆಂದು ನಗರ ಸೇರಿಕೊಳ್ಳುತ್ತಿರುವುದು ಮಾತ್ರ ನೋವಿನ ಸಂಗತಿ. ಹೆಣ್ಣು ಮಕ್ಕಳಿಗೆ ತವರು ಮನೆ ಎಷ್ಟು ಮುಖ್ಯವೋ ತಾವು ಹುಟ್ಟಿ ಬೆಳೆದ ಊರು ಓದಿದ ಶಾಲೆಯೂ ಅಷ್ಟೇ ಮುಖ್ಯ.

ಅಕ್ಷರ ಕಲಿಸಿದ ಗುರುಗಳನ್ನು ಊರನ್ನು ಎಂದಿಗೂ ಮರೆಯಬಾರದು. ಓದು ಮುಗಿಸಿ ಉದ್ಯೋಗ ಗಳಿಸಿದರೆ ಜೀವನದಲ್ಲಿ ಎಲ್ಲವನ್ನು ಸಾಧಿಸಿದಂತೆ ಎಂಬ ಭ್ರಮೆಯಿಂದ ಹೊರಬರಬೇಕು. ವಿದ್ಯಾವಂತ ಹೆಣ್ಣು ಮಕ್ಕಳು ತಮ್ಮ ಊರಿನ ಅಭಿವೃದ್ಧಿಗೆ ಯಾವುದಾದರೂ ರೂಪದಲ್ಲಿ ಸಹಾಯ ಮಾಡಬೇಕು. ಊರಿನ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರಾಭ್ಯಾಸ ಹೇಳಿಕೊಡುವುದು, ಮಹಿಳೆಯರಲ್ಲಿ ಅರಿವು ಮೂಡಿಸುವುದು, ಸಂಘ-ಸಂಸ್ಥೆಗಳಿಗೆ ನೆರವು ನೀಡುವಿಕೆ, ಆರೋಗ್ಯ ಆಂದೋಲನ, ಶಿಕ್ಷಣ, ಪ್ರಪಂಚದ ಆಗುಹೋಗುಗಳ ಮಾಹಿತಿ, ವೈದ್ಯಕೀಯ ಓದಿದ ಹೆಣ್ಣು ಮಕ್ಕಳು ಹಳ್ಳಿಯಲ್ಲಿ ಉಳಿದು ವೈದ್ಯಕೀಯ ಸೇವೆ ನೀಡುವಿಕೆ ಹೀಗೆ ತಮ್ಮ ಕೈಲಾದ ಸಹಾಯ ಮಾಡಿದರೆ ಹಳ್ಳಿ ಸಹ ಉದ್ಧಾರವಾಗಬಹುದಲ್ಲವೇ? ಜನ್ಮ ಕೊಟ್ಟ ನೆಲ, ಅನ್ನ ಕೊಟ್ಟ ತಾಯ್ನೊಡಿಗೆ ನಾವು ಋಣವನ್ನು ತೀರಿಸಿದಂತಾಗುವುದಿಲ್ಲವೇ?

ಪ್ರತಿಕ್ರಿಯಿಸಿ (+)