ಬುಧವಾರ, ಏಪ್ರಿಲ್ 14, 2021
26 °C

ಹಳ್ಳಿ ಹೈದನ ದರ್ಶನ

ಸಾಕ್ಷಿ Updated:

ಅಕ್ಷರ ಗಾತ್ರ : | |

ಯಾವುದೇ ಬ್ಲಾಗ್ ತೆರೆದುನೋಡಿ: ಅಲ್ಲಿ ನಗರಕೇಂದ್ರಿತ ಬದುಕಿನ ಅಕ್ಷರಪಟಗಳೇ ಹಾರಾಡುತ್ತಿರುತ್ತವೆ. ಬಾಲ್ಯದ ನೆನಪಿನ ಚಿತ್ರಗಳಲ್ಲಿ ಪ್ರಾಸಂಗಿಕವಾಗಿ ಹಳ್ಳಿಯ ಚಿತ್ರಗಳು ಬರುತ್ತವೆ ಎನ್ನುವುದು ನಿಜ. ಆದರೆ, ಬ್ಲಾಗು ಬರೆಯುವ ಬಹುತೇಕ ಕಂಪ್ಯೂಟರ್ ಸಾಕ್ಷರಿಗರು ಪ್ರಸ್ತುತ ಬದುಕುತ್ತಿರುವುದು ನಗರಗಳ್ಲ್ಲಲಿ.

 

ಆ ಕಾರಣದಿಂದಲೇ, ಪೇಟೆಯ ಸುಖದುಃಖಗಳು ಅಲ್ಲಿನ ಬರಹಗಳಲ್ಲಿ ಸಹಜವಾಗಿಯೇ ಎದ್ದುಕಾಣಿಸುತ್ತವೆ. ಈ ಮಾತಿಗೆ ಅಪವಾದ `ಹಳ್ಳಿಹೈದ~ನ `ನನ್ನ ಕ್ಯಾಮರ ಕಣ್ಣಿಂದ...~ ಬ್ಲಾಗು.ಹಳ್ಳಿಹೈದನ ಈ ಬ್ಲಾಗು (hallihyda.blogspot.in) ಗ್ರಾಮೀಣ ಬದುಕಿನ ಚಿತ್ರಪಟವೇ ಆಗಿದೆ. ಹಳ್ಳಿಹೈದ ಎಂದು ತಮ್ಮನ್ನು ಕರೆದುಕೊಳ್ಳುವ ಡಿ.ಎ. ರಾಘವೇಂದ್ರ ರಾವ್ ಅವರ ಬ್ಲಾಗಿದು. ಗೌರಿಬಿದನೂರು ಪರಿಸರದ ಈ ಬ್ಲಾಗಿಗರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೀಮೆಯ ಪರಿಸರವನ್ನು ತಮ್ಮ ಬ್ಲಾಗ್ ಬರಹಗಳಲ್ಲಿ ಕಾಣಿಸಲು ಪ್ರಯತ್ನಿಸಿದ್ದಾರೆ. ಊರು ಸುತ್ತುವ, ಕಣ್ಣಿಗೆ ಕುತೂಹಲ ಅನ್ನಿಸಿದ್ದನ್ನು ಕ್ಲಿಕ್ಕಿಸುವ ಅಭ್ಯಾಸ ಅವರದು.ರಾಘವೇಂದ್ರರಿಗೆ ಬೆಟ್ಟದ ಬಗೆಗೆ ತೀರದ ಬೆರಗಿರಬೇಕು. ಗುಡಿಬಂಡೆ ಬೆಟ್ಟ, ಬಿಸಲಹಳ್ಳಿಯ ಚಿಕ್ಕಬೆಟ್ಟ, ಮಾಕಳಿ ಬೆಟ್ಟ, ಆವುಲಾ ಕೊಂಡ- ಹೀಗೆ ಬೆಟ್ಟಸಾಲೇ ಇಲ್ಲಿದೆ. ಬೆಟ್ಟಗಳ ಜೊತೆಗೆ ಕೆರೆ, ನದಿ, ಜಾತ್ರೆ, ಜಾನಪದ ಕಲಾವಿದರ ಬಗೆಗೂ ಸಚಿತ್ರ ಪುಟಗಳಿವೆ. ವಿದುರಾಶ್ವತ್ಥ, ಸಹಸ್ರಪದಿ, ಆಲೆಮನೆ, ಮರಳೂರು ಕೆರೆ, ವೀರಪುರ ಕೆರೆ, ಶ್ರೀನಿವಾಸ ಸಾಗರ- ಹೀಗೆ ಹಳ್ಳಿಯ ಚಿತ್ರಗಳ ಮೆರವಣಿಗೆಯೇ ಹಳ್ಳಿ ಹೈದನಿಂದ ನಡೆದಿದೆ.ಆಲೆಮನೆಯ ಬಗೆಗಿನ ರಾಘವೇಂದ್ರರ ಬರಹ ಸಿಹಿಯಾಗಿದೆ. ಅವರಿಗೆ, ಆಲೆಮನೆ ಬೆಲ್ಲ- `ಸವಿದರೆ ಬಿಸಿ ಬಿಸಿ  ಬೆಲ್ಲ / ನಲ್ಲೆಯ ಗಲ್ಲದಷ್ಟೇ ಸಿಹಿ ಎಲ್ಲಾ!~ ಎನ್ನುವಷ್ಟು ವಿಶಿಷ್ಟ ರುಚಿ. ಈ ಸಿಹಿ ಚಪ್ಪರಿಸುತ್ತಲೇ ಅವರು ಆಲೆಮನೆಯ ಚಿತ್ರಣ ನೀಡುತ್ತಾರೆ:“ಮೂವತ್ತು ವರ್ಷಗಳ ಹಿಂದೆ ಹಿಂತಿರುಗಿ ನೋಡಿದಾಗ... ಗೌರಿಬಿದನೂರಿನ ಆಲೆಮನೆಯ ವೈಭವ ಭಾರತದಲ್ಲೇ ಪ್ರಸಿದ್ಧಿ. ಇಲ್ಲಿನ ನೇಗಿಲ ಯೋಗಿಗಳು ಕಬ್ಬಿನ ಬೆಳೆಯನ್ನು ಭಾರತದಲ್ಲೇ ಅತಿ ಹೆಚ್ಚಾಗಿ ಬೆಳೆಯುತ್ತಿದ್ದರು ಮತ್ತು ಒಂದು ಎಕರೆಗೆ ಸಾವಯವ ಗೊಬ್ಬರ ಬಳಸಿ ಹೆಚ್ಚು ಇಳುವರಿ ತೆಗೆಯುತ್ತಿದ್ದರು. ಅನೇಕ ಕೃಷಿ ಪ್ರಶಸ್ತಿ ಹುಡುಕಿಕೊಂಡು ಬರುತ್ತಿತ್ತು.ಈ  ತಾಲೂಕಿನ `ನಾಮಗೊಂಡ್ಲು~ ಕಬ್ಬಿನ ಜಲ್ಲೆಯಂತೂ  ಅಮೃತದಷ್ಟು ರುಚಿ. ಈ ಮಣ್ಣಿನ ಗುಣ ವಿಶೇಷವಾದುದು. ಈ ಹಳ್ಳಿಯ ಸುತ್ತಾ ಹತ್ತು ಕಿಮೀ ವ್ಯಾಪ್ತಿಯಲ್ಲಿ ತಯಾರಿಸಿದ ಬೆಲ್ಲಕ್ಕೆ ಇತರೆ ಯಾವ ಬೆಲ್ಲವೂ ಸರಿಸಾಟಿ ಎನಿಸುವುದಿಲ್ಲ. ಅದಕ್ಕೇ ಈಗಲೂ ನಾಮಗೊಂಡ್ಲು ಬೆಲ್ಲ ಅಂದ್ರೆ ಜನ ಮುಗಿಬಿದ್ದು ಕೊಳ್ಳುತ್ತಾರೆ. ಆಗ ತಾಲ್ಲೂಕಿನಲ್ಲಿ ಸಾವಿರಾರು ಆಲೆಮನೆಗಳು.ಈಗ ದುರ್ಬಿನು ಹಾಕಿ ಹುಡುಕಿದರೂ ಕಾಣುವುದು ಕಷ್ಟ. ಅಂದಹಾಗೆ, ರಾಘವೇಂದ್ರ ರಾವ್ ಅವರು ಹುಟ್ಟಿ ಬೆಳೆದದ್ದು ಉತ್ತರ ಪಿನಾಕಿನಿ ದಡದಲ್ಲಿ. ಆ ಕಾರಣದಿಂದಲೇ ಅವರು ತಮ್ಮ ಬ್ಲಾಗ್ ಅನ್ನು `ಹಳ್ಳಿಹೈದ~ ಎಂದು ಹೆಸರಿಸಿದ್ದಾರೆ. “ನದಿ ಹರಿಯುತ್ತಿರುವ ಅಕ್ಕಪಕ್ಕದ ಹಳ್ಳಿಗಳು ಸುಮಾರು ಪರಿಚಯ. ಈ ಜನರ ಮತ್ತು ಈ ಹಳ್ಳಿಗಳ ನಡುವೆ ನಾನೊಬ್ಬ ಹಳ್ಳಿಹೈದನಾಗಿ ಬೆರತು ಹೋಗಿದ್ದೀನಿ” ಎನ್ನುವ ಅವರು, ಪ್ರತಿ ಹಳ್ಳಿಯೂ ಒಂದೊಂದು ಸ್ವರ್ಗ ಎಂದು ಬಣ್ಣಿಸುತ್ತಾರೆ.ರಾಘವೇಂದ್ರ ರಾವ್ ಅವರ ಬ್ಲಾಗ್ ಜಿಲ್ಲಾ ದರ್ಶನದ ಪುಟ್ಟ ನೋಟದಂತಿದೆ. ಉತ್ತರ ಪಿನಾಕಿನಿ ಸೀಮೆಯ ಸಾಮಾಜಿಕ-ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡುವ ಒಂದು ಸಣ್ಣ ಪ್ರಯತ್ನದಂತೆ ಈ ಬ್ಲಾಗನ್ನು ನೋಡಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.