ಹವಾಮಾನ ಆಧಾರಿತ ಬೆಳೆವಿಮೆಗೆ ಸಲಹೆ

ಬುಧವಾರ, ಜೂಲೈ 17, 2019
28 °C

ಹವಾಮಾನ ಆಧಾರಿತ ಬೆಳೆವಿಮೆಗೆ ಸಲಹೆ

Published:
Updated:

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಸುಮಾರು 21 ಹೋಬಳಿಗಳಲ್ಲಿ ರೈತರು ಹವಾಮಾನ ಆಧಾರಿತ ಬೆಳೆವಿಮೆ ಮಾಡಿಸಲು ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಕೃಷಿ ವಿಮಾ ಸಂಸ್ಥೆ ಅವಕಾಶ ಕಲ್ಪಿಸಿದೆ.ಯೋಜನೆಯ ಮಾರ್ಗಸೂಚಿ ಬಿಡುಗಡೆ ಮಾಡಿರುವ ವಿಮಾ ಸಂಸ್ಥೆ, ಈಗಾಗಲೇ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಕೇಂದ್ರ ಕಚೇರಿಗೆ ಮಾಹಿತಿ ರವಾನಿಸಿದೆ. ಅಲ್ಲದೇ, ಲೀಡ್‌ಬ್ಯಾಂಕಿಗೂ ಕೂಡಾ ಮಾಹಿತಿ ಒದಗಿಸಿದೆ. ಈ ಯೋಜನೆ ಅನ್ವಯ ಜಿಲ್ಲೆಯ 21 ಹೋಬಳಿಗಳ ರೈತರು ಪ್ರಯೋಜನ ಪಡೆಯಬಹುದು.ದಾವಣಗೆರೆ ತಾಲ್ಲೂಕಿನ ಆನಗೋಡು, ದಾವಣಗೆರೆ, ಮಾಯಕೊಂಡ, ಚನ್ನಗಿರಿ ತಾಲ್ಲೂಕಿನ ಚನ್ನಗಿರಿ, ಸಂತೆಬೆನ್ನೂರು-2, ಉಂಬ್ರಾಣಿ, ಹರಿಹರ ತಾಲ್ಲೂಕಿನ ಹರಿಹರ, ಮಲೇಬೆನ್ನೂರು, ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ, ಚಿಗಟೇರಿ, ಹರಪನಹಳ್ಳಿ, ತೆಲಗಿ, ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿ, ಗೋವಿನಕೋವಿ, ಹೊನ್ನಾಳಿ, ಸಾಸ್ವಿಹಳ್ಳಿ, ಜಗಳೂರು ತಾಲ್ಲೂಕಿನ ಬಿಳಿಚೋಡು, ಜಗಳೂರು ಹಾಗೂ ಸೊಕ್ಕೆ ಹೋಬಳಿಗಳು ಈ ಯೋಜನೆ ವ್ಯಾಪ್ತಿಗೆ ಬರುತ್ತವೆ.ಈ ಹೋಬಳಿಗಳಲ್ಲಿ ಬ್ಯಾಂಕುಗಳಿಂದ ಬೆಳೆಸಾಲ ಪಡೆಯುವ ರೈತರು ವಿಮೆಗಾಗಿ ವಿಮಾ ಸಂಸ್ಥೆಯು ನಿರ್ಧರಿಸಿದ ಬೆಳೆಗಳಿಗೆ ಹವಾಮಾನ ಆಧಾರಿತ ಯೋಜನೆಯಲ್ಲಿಯೇ ಕಡ್ಡಾಯವಾಗಿ ವಿಮೆ ಮಾಡಿಸುವ ಆವಶ್ಯಕತೆ ಇದೆ.ಬ್ಯಾಂಕ್ ಸಾಲ ಪಡೆದ ರೈತರಿಗೆ ಆಯಾ ಬ್ಯಾಂಕಿನವರೇ ವಿಮೆಗೆ ಕ್ರಮ ವಹಿಸುವರು. ಆದರೆ, ಸಾಲ ಪಡೆದಿಲ್ಲದ ರೈತರೂ ಕೂಡಾ ವಿಮೆ ಮಾಡಿಸಬಹುದಾಗಿದ್ದು, ಹವಾಮಾನ ಆಧಾರಿತ ಅಥವಾ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಯಾವುದಾದರೂ ಒಂದು ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

 

ವಿಮೆಗೆ ಒಳಪಡುವ ಬೆಳೆಗಳು ಹೋಬಳಿಯಿಂದ ಹೋಬಳಿಗೆ ಬೇರೆಬೇರೆಯಾಗಿದ್ದು, ಸಾಮಾನ್ಯವಾಗಿ ರಾಗಿ, ಮೆಕ್ಕೆಜೋಳ, ಜೋಳ, ಹೆಸರು, ತೊಗರಿ, ಸೂರ್ಯಕಾಂತಿ, ಶೇಂಗಾ, ಹತ್ತಿ ಹಾಗೂ ಈರುಳ್ಳಿ ಬೆಳೆಗಳು ಎಲ್ಲ ಕಡೆಗೂ ಲಭ್ಯವಿದೆ. ಬ್ಯಾಂಕ್ ಸಾಲ ಪಡೆದಿಲ್ಲದ ರೈತರು ಕೃಷಿ ಇಲಾಖೆಯ ಸಹಕಾರದಿಂದ ತಮ್ಮ ಹತ್ತಿರದ ಬ್ಯಾಂಕುಗಳಲ್ಲಿ ವಿಮಾ ಪ್ರೀಮಿಯಂ ಅನ್ನು ಪಾವತಿಸಿ ಬೆಳೆಗಳಿಗೆ ವಿಮೆ ಮಾಡಿಸಬಹುದು.ಹವಾಮಾನ ಆಧಾರಿತ ವಿಮಾ ಯೋಜನೆಯಲ್ಲಿ ವಿಮೆ ಮಾಡಿಸಲು ಜೂನ್ 30 ಕೊನೇದಿನ. ಆದುದರಿಂದ ಸಂಬಂಧಿಸಿದ ಹೋಬಳಿಗಳ ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ದಾವಣಗೆರೆಯ ಕೆನರಾ ಬ್ಯಾಂಕ್ ಲೀಡ್ ಬ್ಯಾಂಕ್ ವಿನಂತಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry