ಹವಾಮಾನ ವೈಪರಿತ್ಯದ ಪರಿಣಾಮ.:ಬತ್ತದ ಸಸಿ ಮಡಿಗಳಿಗೆ ಬೇರು ಕೊಳೆ ರೋಗ

ಬುಧವಾರ, ಜೂಲೈ 24, 2019
28 °C

ಹವಾಮಾನ ವೈಪರಿತ್ಯದ ಪರಿಣಾಮ.:ಬತ್ತದ ಸಸಿ ಮಡಿಗಳಿಗೆ ಬೇರು ಕೊಳೆ ರೋಗ

Published:
Updated:

ಶಿರಸಿ: ಹವಾಮಾನ ವೈಪರಿತ್ಯದಿಂದ ಬತ್ತ ಬೆಳೆಗೆ ನಾಟಿ ಮಾಡುವ ಮುನ್ನವೇ ರೋಗ ತಗುಲಿದೆ. ಬತ್ತದ ಸಸಿ ಮಡಿಗಳಿಗೆ ಬೇರು ಕೊಳೆ ರೋಗ ವ್ಯಾಪಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಮುಂಡಗೋಡ ಮತ್ತು ಹೊನ್ನಾವರ ತಾಲ್ಲೂಕುಗಳಲ್ಲಿ ಈ ರೋಗದಿಂದ ನಾಟಿ ಮಾಡಲು ಸಿದ್ಧಪಡಿಸಿದ ಸಸಿಗಳು ಸಾಯುತ್ತಿವೆ.ಬತ್ತ ಜಿಲ್ಲೆಯ ಪ್ರಮುಖ ಆಹಾರ ಧಾನ್ಯ ಬೆಳೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಸುಮಾರು 74ಸಾವಿರ  ಹೆಕ್ಟೇರ್ ಕ್ಷೇತ್ರದಲ್ಲಿ ಬತ್ತ ಬೆಳೆಯಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ವಾತಾವಾರಣದ ವ್ಯತ್ಯಾಸದಿಂದ ಬತ್ತದ ಸಸಿಗಳಿಗೆ ಬೇರುಕೊಳೆ ರೋಗ ಬಂದಿದ್ದು, ಮಣ್ಣಿನಲ್ಲಿರುವ ಸ್ಕ್ಲೀರೋಶಿಯಂ ಎಂಬ ಶಿಲೀಂಧ್ರದಿಂದ ಈ ರೋಗ ಹರಡುತ್ತಿದೆ.ಪ್ರಾರಂಭದಲ್ಲಿ ಬತ್ತದ ಸಸಿಗಳು ಕೆಂಪಾಗಿ ಕ್ರಮೇಣ ಒಣಗಿ ಸತ್ತು ಹೋಗುತ್ತವೆ. ಸಸಿಗಳ ಬುಡದಲ್ಲಿ ಬಿಳಿ ಬಣ್ಣದ ಬೂಸ್ಟ್ ತರಹದ ಬಿಳಿ ಕಣಗಳು ಕಾಣಿಸಿಕೊಳ್ಳುತ್ತವೆ. ಈ ಶಿಲೀಂಧ್ರದ ಕಣಗಳು ಬಿಳಿ ಸಾಸಿವೆ ಕಾಳಿನಂತಿದ್ದು, ನಂತರ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ ಮಳೆ ಪ್ರಮಾಣ ಮತ್ತು ಮಣ್ಣಿನ ತೇವಾಂಶ ಕಡಿಮೆಯಾದರೆ ಈ ರೋಗವು ಉಲ್ಬಣಗೊಳ್ಳುತ್ತದೆ. ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಕೊಳ್ಳಲು ರೈತರಿಗೆ ಸಲಹೆ ನೀಡಿದೆ.

 

ರೋಗ ಹತೋಟಿ ಕ್ರಮ: ಡಾಪೋಗ್ ಸಸಿಮಡಿ (ಚಾಪೆ ಮಡಿ) ತಯಾರಿಸುವಾಗ ಮುನ್ನೆಚ್ಚರಿಗೆ ಕ್ರಮವಾಗಿ ಸುಡು ಮಣ್ಣನ್ನು ಬಳಸಬೇಕು. ಭತ್ತದ ಬೀಜಗಳನ್ನು 1ಗ್ರಾಂ ಕಾರ್ಬೆಂಡೈಜಿಮ್ 50 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿದ ದ್ರಾವಣದಲ್ಲಿ 12 ಗಂಟೆಗಳ ಕಾಲ ನೆನೆಸಿ ತೋಯಿಸಿದ ಗೋಣಿ ಚೀಲದಲ್ಲಿ ತುಂಬಿಡಬೇಕು. ನಂತರ ಮೊಳಕೆಯೊಡೆದ ಬೀಜಗಳನ್ನು ಬಿತ್ತನೆಗೆ ಬಳಸಬಹುದು.ಬಾಧೆಗೊಳಗಾದ ಸಸಿಮಡಿಗಳಲ್ಲಿ ಕಾರ್ಬಾಕ್ಸಿನ್ ಶೇ 37.5 ಎಐ ಮತ್ತು  ಥೈರಾಮ್ ಶೇ 37.5 ಎಐ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ, ಈ ದ್ರಾವಣದಿಂದ ಸಸಿ ಮಡಿಗಳನ್ನು ಚೆನ್ನಾಗಿ ತೋಯಿಸಬೇಕು.

ತೀವ್ರ ರೋಗಕ್ಕೆ ತುತ್ತಾದ ಸಸಿಗಳನ್ನು ನಾಟಿಗೆ ಬಳಸದಂತೆ ಎಚ್ಚರ ವಹಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ರವಿಕುಮಾರ ಎಂ.ಆರ್. (ಮೊಬೈಲ್ ದೂರವಾಣಿ:9448497345) ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry