ಹವಾಮಾನ ವೈಪರೀತ್ಯ ತಡೆ ಅಗತ್ಯ

7

ಹವಾಮಾನ ವೈಪರೀತ್ಯ ತಡೆ ಅಗತ್ಯ

Published:
Updated:
ಹವಾಮಾನ ವೈಪರೀತ್ಯ ತಡೆ ಅಗತ್ಯ

ಬೆಂಗಳೂರು: ‘ಹವಾಮಾನ ವೈಪರೀತ್ಯದಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಜಗತ್ತಿನ ಪ್ರತಿಯೊಬ್ಬರೂ ಶ್ರಮಿಸುವ ಅಗತ್ಯವಿದೆ. ಕೇವಲ ಆರ್ಥಿಕ ದೃಷ್ಟಿಕೋನದಿಂದ ಅಭಿವೃದ್ಧಿಯನ್ನು ಅಳೆಯದೇ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಬೇಕಿದೆ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ತಿಳಿಸಿದರು.ಸೆಂಟರ್ ಫಾರ್ ಸಸ್ಟೇನಬಲ್ ಡೆವಲಪ್‌ಮೆಂಟ್ (ಸಿಎಸ್‌ಡಿ) ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಕರ್ನಾಟಕಕ್ಕೆ ಹವಾಮಾನ ಬದಲಾವಣೆ ಕ್ರಿಯಾ ಯೋಜನೆ’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಹವಾಮಾನ ವೈಪರೀತ್ಯ ಎಂಬುದು ಕೇವಲ ಬೆಂಗಳೂರು ಅಥವಾ ರಾಜ್ಯ ಎದುರಿಸುತ್ತಿರುವ ಸಮಸ್ಯೆ ಅಲ್ಲ. ಇಡೀ ವಿಶ್ವವೇ ಇದರ ಪ್ರತಿಕೂಲ ಪರಿಣಾಮಗಳಿಗೆ ಬಲಿಯಾಗುತ್ತಿದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಗತ್ತಿನ ಪ್ರತಿಯೊಬ್ಬರೂ ಶ್ರಮಿಸಬೇಕಿದೆ’ ಎಂದು ಹೇಳಿದರು.‘ಹವಾಮಾನ ವೈಪರೀತ್ಯಗಳಿಗೆ ಕಾರಣ ಯಾರು ಎಂಬ ಬಗ್ಗೆ ಅಭಿವೃದ್ಧಿ ಹೊಂದಿದ ದೇಶಗಳು ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ಚರ್ಚೆ ನಡೆಯುತ್ತಿದೆ. ಪ್ರತಿಯೊಂದು ದೇಶವೂ ರಾಷ್ಟ್ರಮಟ್ಟದಲ್ಲಿ ಕ್ರಿಯಾಯೋಜನೆಗಳನ್ನು ರೂಪಿಸಿದರೆ ಹವಾಮಾನ ವೈಪರೀತ್ಯವನ್ನು ಪರಿಣಾಮಕಾರಿಯಾಗಿ ತಡೆಯಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

‘ಕೇವಲ ಆರ್ಥಿಕ ಪ್ರಗತಿಯನ್ನೇ ಮಾನದಂಡವಾಗಿಟ್ಟುಕೊಂಡು ಅಭಿವೃದ್ಧಿಯನ್ನು ಗಮನಿಸಬಾರದು. ಪರಿಸರ ಸೇರಿದಂತೆ ಇನ್ನಿತರ ಕ್ಷೇತ್ರಗಳ ಉಳಿವು ಹಾಗೂ ಬೆಳವಣಿಗೆಯ ಬಗ್ಗೆ ಕೂಡ ಚಿಂತಿಸಬೇಕಿದೆ’ ಎಂದು ಅವರು ಸಲಹೆ ನೀಡಿದರು.‘ರಾಜ್ಯದಲ್ಲಿ ಸೌರಶಕ್ತಿಯ ವ್ಯಾಪಕ ಬಳಕೆಯಾಗಬೇಕಿದೆ. ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ. ಒಬ್ಬರಿಗೆ ಐದು ಎಕರೆ ಜಮೀನಿದ್ದರೆ ಅದರಲ್ಲಿ ಕನಿಷ್ಠ ಅರ್ಧ ಎಕರೆಯಲ್ಲಿಯಾದರೂ ಮರಗಿಡಗಳು ಇರಬೇಕು ಎಂಬ ಕಾಳಜಿ ಹೊಂದಬೇಕಿದೆ’ ಎಂದು ಅವರು ಹೇಳಿದರು.‘ಪರಿಸರದ ಮೇಲೆ ಮಾರಕ ಪರಿಣಾಮ ಉಂಟಾದರೆ ಅದು ಕೃಷಿಯ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತದೆ. ದೇಶದಲ್ಲಿ ಶೇ 65 ಮಂದಿ ಕೃಷಿ ಅವಲಂಬಿತರಿದ್ದು ಅವರ ಬದುಕಿನ ಮೇಲೆಯೂ ಕೆಟ್ಟ ಪರಿಣಾಮ ಉಂಟಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.‘ಪರಿಸರ ಸಂರಕ್ಷಣೆಗೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು ಇದಕ್ಕೆ ಜನರ ಸಹಕಾರ ಕೂಡ ಅಗತ್ಯವಿದೆ. ಕೆಲವು ದಶಕಗಳ ಕಾಲ ಪರಿಸರ ಸಂರಕ್ಷಣೆಗೆ ತೊಡಗಿದರೆ ಮಾತ್ರ ಹವಾಮಾನ ವೈಪರೀತ್ಯ ನಿಯಂತ್ರಣಕ್ಕೆ ಬರಲಿದೆ’ ಎಂದು ಅವರು ಹೇಳಿದರು.ಮುಖ್ಯಮಂತ್ರಿಗಳ ಸಲಹೆಗಾರ (ನಗರಾಭಿವೃದ್ಧಿ) ಡಾ. ಎ.ರವೀಂದ್ರ ಮಾತನಾಡಿ ‘ಪರಿಸರ ಸಂರಕ್ಷಣೆ ಕುರಿತು ಕೇವಲ ಕನಸು ಕಾಳಜಿಗಳನ್ನು ವ್ಯಕ್ತಪಡಿಸಿದರೆ ಸಾಲುವುದಿಲ್ಲ. ಬದಲಿಗೆ ಪರಿಸರ ನಾಶ ತಡೆಯುವ ಬಗ್ಗೆ ಆಳ ಸಂಶೋಧನೆ ನಡೆಯುವ ಅಗತ್ಯವಿದೆ’ ಎಂದರು.‘ಪರಿಸರ ನಾಶದ ಬಗ್ಗೆ ಅಪಾರ ಪ್ರಮಾಣದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಪರಿಸರ ನಾಶದ ಬಗ್ಗೆ ಜ್ಞಾನವೃದ್ಧಿಯಿಂದ ಮಾತ್ರ ಪರಿಹಾರ ದೊರೆಯಲಿದೆ’ ಎಂದು ತಿಳಿಸಿದರು.ಪರಿಸರ ಇಲಾಖೆ ಕಾರ್ಯದರ್ಶಿ ಕನ್ವರ್‌ಪಾಲ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿಸಿಂಗ್, ಸಿಎಸ್‌ಡಿ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀನಿವಾಸ್, ಅಭಿವೃದ್ಧಿ ಆಯುಕ್ತೆ ಮೀರಾ ಸಕ್ಸೇನಾ ಸೇರಿದಂತೆ ಆಡಳಿತ ಸೇವೆಗೆ ಸೇರಿದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry