`ಹಸನ್ಮುಖ ಜೀವನ' ಯೋಜನೆಗೆ ಅಸ್ತು

7

`ಹಸನ್ಮುಖ ಜೀವನ' ಯೋಜನೆಗೆ ಅಸ್ತು

Published:
Updated:

ಬೆಂಗಳೂರು: ರಾಜ್ಯ ಸರ್ಕಾರವು ಕೇಂದ್ರ ಸಿಬ್ಬಂದಿ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆಗೆ ಸಲ್ಲಿಸಿದ್ದ ಚಿಂದಿ ಆಯುವವರ ಜೀವನವನ್ನು ಬಲಪಡಿಸುವ `ಹಸನ್ಮುಖ ಜೀವನ' ಯೋಜನೆಯ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.ಯೋಜನೆ ಕಾರ್ಯ ವೈಖರಿಯ ಬಗ್ಗೆ ಚರ್ಚಿಸಲು ವಿಕಾಸಸೌಧದಲ್ಲಿ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು.ಸಭೆಯಲ್ಲಿ ಮಾತನಾಡಿದ ಶಾಲಿನಿ ರಜನೀಶ್, `ತ್ಯಾಜ್ಯ ವಿಲೇವಾರಿಯಲ್ಲಿ ಪ್ರಮುಖ ಪಾತ್ರವಹಿಸುವ ಚಿಂದಿ ಆಯುವವರ ಕಾರ್ಯಶೈಲಿಯನ್ನು ಬದಲಾಯಿಸುವುದು, ಅವರಿಗೆ ಹಾಗೂ ಅವರ ಕುಟುಂಬದವರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡುವುದು ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿ ತ್ಯಾಜ್ಯ ವಿಲೇವಾರಿ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ' ಎಂದರು.`ಚಿಂದಿ ಆಯುವವರು ಸ್ವಯಂ ಉದ್ಯೋಗಿಗಳಾಗಿದ್ದು, ತಮ್ಮ ಜೀವನೋಪಾಯಕ್ಕೆ ನಗರದ ಒಣ ತ್ಯಾಜ್ಯವನ್ನು ಸಂಗ್ರಹಿಸಿ ಮಾರಾಟ ಮಾಡುತ್ತಾರೆ. ಬೆಲೆಯಿಲ್ಲದ ತ್ಯಾಜ್ಯ ವಸ್ತುಗಳನ್ನು ಆಯ್ದು, ಬೆಲೆಯುಳ್ಳ ವಸ್ತುಗಳನ್ನಾಗಿ ಪರಿವರ್ತಿಸುವ ಇವರ ಕೆಲಸ ನಗರಕ್ಕೆ ವರವಾಗಿದೆ' ಎಂದು ಹೇಳಿದರು.`ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚಿಂದಿ ಆಯುವ 15 ಸಾವಿರ ಜನರಿದ್ದಾರೆ. ಇವರ ಪೈಕಿ ಪಾಲಿಕೆ ಈಗಾಗಲೇ ಆರು ಸಾವಿರ ಜನರನ್ನು ಗುರುತಿಸಿ, ಗುರುತಿನ ಚೀಟಿಗಳನ್ನು ವಿತರಿಸಿದೆ. ಚಿಂದಿ ಆಯುವವರ ಕೆಲಸದಿಂದ ನಗರದ ಸುಮಾರು 600 ರಿಂದ 800ಟನ್ ತ್ಯಾಜ್ಯವು ಅನವಶ್ಯವಾಗಿ ಕೊಳೆಯುವುದು ತಪ್ಪಿದೆ. ಇವರ ಕೆಲಸದಿಂದ ಪಾಲಿಕೆಗೆ ಪ್ರತಿದಿನ ಸುಮಾರು 13 ಲಕ್ಷ ರೂಪಾಯಿ ತ್ಯಾಜ್ಯ ವಿಲೇವಾರಿ ವೆಚ್ಚ ಉಳಿತಾಯವಾಗುತ್ತಿದೆ' ಎಂದು ಅವರು ತಿಳಿಸಿದರು.`ಒಂದು ವರ್ಷದ ಅವಧಿಯ ಯೋಜನೆಯಡಿ ಸುಮಾರು 400 ಜನ ಚಿಂದಿ ಆಯುವವರನ್ನು ಗುರುತಿಸಿ ತರಬೇತಿ ನೀಡಲಾಗುವುದು. ನಗರದಲ್ಲಿ 20 ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ಒಂದು ಸಾವಿರ ಕೆಲಸಗಾರರನ್ನು ಒಗ್ಗೂಡಿಸಿ ಅವರನ್ನು ಸಾಮಾಜಿಕ ಭದ್ರತಾ ಯೋಜನೆಯಡಿ ತರಲಾಗುವುದು. ಘಟಕ ಸ್ಥಾಪನೆಗಾಗಿ ಬಿಬಿಎಂಪಿ ಸ್ಥಳ ಗುರುತಿಸಬೇಕು. ಯೋಜನೆಗೆ ಸ್ವಯಂಸೇವಾ ಸಂಸ್ಥೆಗಳು ಸಹಕಾರ ನೀಡಬೇಕು' ಎಂದರು.`ಯೋಜನೆಗಾಗಿ ಯೋಜನಾ ನಿರ್ದೇಶಕರು ಸೇರಿದಂತೆ ಸಮನ್ವಯಾಧಿಕಾರಿಗಳು, ಮೇಲ್ವಿಚಾರಕರು, ಲೆಕ್ಕಾಧಿಕಾರಿ ಮತ್ತಿತರ ಅಗತ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು. ಈ ಬಗ್ಗೆ ಜಾಹೀರಾತು ನೀಡುವಂತೆ ಬಿಬಿಎಂಪಿಯ ಹೆಚ್ಚುವರಿ ಆಯುಕ್ತರಿಗೆ ಸೂಚಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆಯು ಈ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ ನೋಡಿಕೊಳ್ಳಲು ಒಂದು ಸಮನ್ವಯ ಸಮಿತಿಯನ್ನು ರಚಿಸಲಿದೆ' ಎಂದರು.ಸಭೆಯಲ್ಲಿ `ಹಸಿರು ದಳ' ಸ್ವಯಂ ಸೇವಾ ಸಂಸ್ಥೆಯ ನಳಿನಿ ಶೇಖರ್, ಶಾಂತಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾತ್ಯಾಯಿನಿ ಚಾಮರಾಜ್, ಕಲ್ಯಾಣನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜಶೇಖರ್, ಪರಿವರ್ತನ್, ನಮನಾ, ರೇಡಿಯೊ ಆಕ್ಟೀವ್, ಸಾಹಸ್ ಮತ್ತಿತರ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry