ಹಸಿಕಡಲೆಗೆ ಕಾಯಿಕೊರಕ ಹುಳುಬಾಧೆ

7
25 ಸಾವಿರ ಎಕರೆಯಲ್ಲಿ ಬಿತ್ತನೆ: ಕಂಗಾಲಾದ ಅನ್ನದಾತರು

ಹಸಿಕಡಲೆಗೆ ಕಾಯಿಕೊರಕ ಹುಳುಬಾಧೆ

Published:
Updated:
ಹಸಿಕಡಲೆಗೆ ಕಾಯಿಕೊರಕ ಹುಳುಬಾಧೆ

ಚಾಮರಾಜನಗರ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಡಿ ಬಿತ್ತನೆ ಮಾಡಿದ್ದ ಹಸಿಕಡಲೆಗೆ ಕಾಯಿಕೊರಕ (ಹೆಲಿಕೊವರ್ಪಾ ಆರ್ಮಿಜಿರಾ) ಹುಳುಬಾಧೆ ಕಾಣಿಸಿಕೊಂಡಿದ್ದು, ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಆತಂಕ ತಂದಿದೆ.ಸಕಾಲದಲ್ಲಿ ಮಳೆ ಬೀಳದ ಪರಿಣಾಮ ಜಿಲ್ಲೆ ಬರಪೀಡಿತವೆಂದು ಘೋಷಣೆ ಯಾಗಿದೆ. ಆದರೆ, ಹಿಂಗಾರು ಹಂಗಾಮಿ ನಲ್ಲಿ ಅಲ್ಪಸ್ವಲ್ಪ ಮಳೆ ಸುರಿದ ಹಿನ್ನೆಲೆ ಯಲ್ಲಿ ರೈತರು ಹಸಿಕಡಲೆ ಬಿತ್ತಿದ್ದರು. ಜಿಲ್ಲೆಯಲ್ಲಿ ಸುಮಾರು 25 ಸಾವಿರ ಎಕರೆಯಲ್ಲಿ ಹಸಿಕಡಲೆ ಬಿತ್ತನೆಯಾಗಿದೆ. ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಹಸಿಕಡಲೆ ಕಟಾವಿಗೆ ಬಂದಿದೆ. ಆದರೆ, ಹುಳುಬಾಧೆ ಕಾಣಿಸಿಕೊಂಡಿರುವ ಪರಿಣಾಮ ಅನ್ನದಾತರು ಕಂಗಾಲಾಗಿದ್ದಾರೆ.ಹಸಿಕಡಲೆಯ ಉತ್ಪಾದನೆ ಕಡಿಮೆ ಮಾಡುವಲ್ಲಿ ಕಾಯಿಕೊರಕ ಹುಳು ಮುಖ್ಯ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ ಬಿತ್ತನೆ ಮಾಡಿದ 15ದಿನದ ನಂತರ ಹುಳುಬಾಧೆ ಕಾಣಿಸಿಕೊಳ್ಳುತ್ತದೆ. ಕೊಯ್ಲು ಮುಗಿ ಯುವವರೆಗೂ ಇದರ ಹಾವಳಿ ತಪ್ಪುವುದಿಲ್ಲ.ರೈತರು ಕೀಟನಾಶಕಗಳ ಮೇಲಿನ ಸಂಪೂರ್ಣ ಅವಲಂಬನೆ ಕೈಬಿಡಬೇಕು. ನೈಸರ್ಗಿಕವಾದ ದೀರ್ಘಾವಧಿ ಹಾಗೂ ನಿರಂತರವಾಗಿ ಪರಿಣಾಮಕಾರಿಯಾಗಬಲ್ಲ ವಿಧಾನ ಅನುಸರಿಸಬೇಕು. ಸಮಗ್ರ ಪೀಡೆ ನಿರ್ವಹಣೆ ಪದ್ಧತಿ ಅಳವಡಿಸಿಕೊಂಡರೆ ಹುಳುಬಾಧೆ ತಡೆಗಟ್ಟಬಹುದು ಎನ್ನುತ್ತಾರೆ ಕೃಷಿ ತಜ್ಞರು.ದೂರದಿಂದ ಹೊಲದಲ್ಲಿರುವ ಬೆಳೆ ನೋಡಿದಾಗ ಎಲೆಯ ಮೇಲೆ ಬಿಳಿಮಚ್ಚೆ ಯಂತಹ ಕಲೆಗಳು ಕಂಡುಬರುತ್ತವೆ. ಹುಳುಬಾಧೆ ಹೆಚ್ಚಾದರೆ ಗಿಡಗಳು ಸಂಪೂರ್ಣವಾಗಿ ಒಣಗಿ ಹೋಗುತ್ತವೆ. ಕಾಯಿಕಟ್ಟುವ ಹಂತದಲ್ಲಿ ಒಂದು ಹುಳು ಸುಮಾರು 20ರಿಂದ 30 ಹಸಿಕಡಲೆ ಕಾಯಿ ನಾಶ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಹುಳು ಸಾಧಾರಣ ಗಾತ್ರವಾಗಿದ್ದು, ತಿಳಿಕಂದು ಬಣ್ಣವಿರುತ್ತದೆ. ಮುಂದಿನ ರೆಕ್ಕೆಯ ಮೇಲೆ ಕಪ್ಪುಚುಕ್ಕೆ ಇರುತ್ತದೆ. ಹಿಂದಿನ ರೆಕ್ಕೆಗಳು ತಿಳಿಬಿಳಿ ಮತ್ತು ಹಿಂಭಾಗದ ಅಂಚು ಕಪ್ಪುಛಾಯೆಯಿಂದ ಕೂಡಿರುತ್ತದೆ. ಹಸಿಕಡಲೆ ಬೆಳೆಯ ಮೇಲೆ 21ರಿಂದ 28 ದಿನದವರೆಗೆ ಹುಳುಬಾಧೆ ವ್ಯಾಪಿಸುತ್ತದೆ.`ರೈತರು ಅಂಗಡಿ ಮಾರಾಟಗಾರರು ನೀಡುವ ಔಷಧಿ ತಂದು ಸಿಂಪಡಣೆ ಮಾಡುತ್ತಾರೆ. ತಜ್ಞರ ಸಲಹೆ ಪಡೆಯುವುದಿಲ್ಲ. ಹೀಗಾಗಿ, ಹುಳುಬಾಧೆ ನಿಯಂತ್ರಣಕ್ಕೆ ಬರುವುದಿಲ್ಲ. ಕೆಲವು ರೈತರ ಜಮೀನಿನಲ್ಲಿ ಈಗಾಗಲೇ ಸಮಗ್ರ ಪೀಡೆ ನಿರ್ವಹಣಾ ಕ್ರಮಕೈಗೊಳ್ಳಲಾಗಿದೆ. ಹುಳುಬಾಧೆ ಹತೋಟಿಗೆ ಬಂದಿದೆ. ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡುವ ಎಲ್ಲ ರೈತರಿಗೂ ಸೂಕ್ತ ಮಾರ್ಗದರ್ಶನ ನೀಡಲಾಗುವುದು' ಎಂದು ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಕೀಟತಜ್ಞ ಡಾ.ಶಿವರಾಯ್ ನಾವಿ `ಪ್ರಜಾವಾಣಿ'ಗೆ ತಿಳಿಸಿದರು.ಸಮಗ್ರ ಪೀಡೆ ನಿರ್ವಹಣೆ ಹೇಗೆ?

ರೈತರು ಬೀಜ ಬಿತ್ತನೆಯಿಂದ ಆರಂಭಿಸಿ ಗಿಡಗಳ ವಿವಿಧ ಬೆಳವಣಿಗೆ ಹಂತ ಹಾಗೂ ಕೋಯ್ಲು ಮುಗಿಯುವವರೆಗೂ ಸಮಗ್ರ ಪೀಡೆ ನಿರ್ವಹಣೆ ಮಾಡಿದರೆ ಹುಳುಬಾಧೆ ನಿಯಂತ್ರಿಸಬಹುದು ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ತಜ್ಞರು.

* ಮಾಗಿ ಉಳುಮೆ ಮಾಡಬೇಕು. ಇದರಿಂದ ಭೂಮಿಯಲ್ಲಿರುವ ಕೀಟದ ಕೋಶಗಳು ಮೇಲ್ಭಾಗಕ್ಕೆ ಬರುತ್ತವೆ. ಬಿಸಿಲಿನ ತಾಪ, ಪಕ್ಷಿಗಳು ಹಾಗೂ ಶತ್ರುಗಳಿಗೆ ಆಹಾರವಾಗಿ ನಾಶವಾಗುತ್ತವೆ.* ಹಸಿಕಡಲೆ ಬಿತ್ತುವಾಗ ಪ್ರತಿ 6 ಸಾಲಿನ ನಂತರ 7ನೇ ಸಾಲಿನಲ್ಲಿ ಸೂರ್ಯಕಾಂತಿ ಅಥವಾ ಜೋಳವನ್ನು ಪ್ರತಿ ಮೀಟರ್‌ಗೆ ಒಂದು ಬೀಜ ಬೀಳುವಂತೆ ಬಿತ್ತನೆ ಮಾಡಬೇಕು. ಹಸಿಕಡಲೆಯ ಒಂದು ಎಕರೆ ಬಿತ್ತನೆಬೀಜದೊಂದಿಗೆ ಸುಮಾರು 25 ಗ್ರಾಂ. ಜೋಳ ಮತ್ತು 25 ಗ್ರಾಂ. ಸೂರ್ಯಕಾಂತಿ ಬಿತ್ತನೆ ಮಾಡಬೇಕು.* ಸ್ವಾಭಾವಿಕ ಶತ್ರುಗಳಾದ ಹಕ್ಕಿಗಳನ್ನು ಹುಳುಗಳ ಹತೋಟಿಗೆ ಬಳಸಿಕೊಳ್ಳಬಹುದು. ಇದಕ್ಕಾಗಿ ಪ್ರತಿ ಎಕರೆಗೆ 10ರಂತೆ ಕವಲೊಡೆದ ಟೊಂಗೆಗಳನ್ನು ಬೆಳೆಯಿಂದ ಎರಡು ಅಡಿ ಮೇಲಿರುವಂತೆ ನೆಡಬೇಕು.* ಪಕ್ಷಿ ಆಕರ್ಷಿಸಲು ಬೆಳೆಯ ಸಾಲಿನ ಮಧ್ಯೆ ಚುರುಮುರಿ ಅಥವಾ ಅನ್ನದ ಜತೆಗೆ ಅರಿಸಿನ ಸೇರಿಸಿ ಹೊಲದಲ್ಲಿ ತೆಳುವಾಗಿ ಎರಚಬೇಕು.* ಪ್ರತಿ ಎಕರೆಗೆ ಎರಡರಂತೆ ಮೋಹಕ ಬಲೆ ಬಳಸಿ ಕೀಟ ಸಮೀಕ್ಷೆ ನಡೆಸಬೇಕು. ಪ್ರತಿ ಬಲೆಗೆ 5ಕ್ಕಿಂತ ಹೆಚ್ಚು ಪತಂಗ ಸುಮಾರು 4ರಿಂದ 5 ದಿನ ಬಿದ್ದಾಗ ಅಥವಾ ಸಮೀಕ್ಷೆ ಆಧಾರದ ಮೇಲೆ ಪ್ರತಿ ಗಿಡಕ್ಕೆ 2 ಮರಿಹುಳು ಅಥವಾ 10 ಗಿಡಕ್ಕೆ ಒಂದು ದೊಡ್ಡ ಹುಳು ಕಂಡುಬಂದಾಗ ಕೀಟ ನಿರ್ವಹಣಾ ಕ್ರಮ ಆರಂಭಿಸಬೇಕು.ಸಿಂಪಡಣಾ ಕ್ರಮ

* ಮೊದಲನೇ ಸಿಂಪಡಣೆ: ತತ್ತಿನಾಶಕ ಕೀಟನಾಶಕಗಳಾದ 0.6 ಗ್ರಾಂ. ಮಿಥೋಮಿಲ್ 40 ಎಸ್‌ಪಿ ಅಥವಾ 1.0 ಗ್ರಾಂ. ಥೈಯೋಡಿಕಾರ್ಬ 75 ಡಬ್ಲ್ಯೂಪಿ ಅಥವಾ 3 ಮಿ.ಲೀ. ಪ್ರೊಪೆನೊಫಾಸ್ 50 ಇಸಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.* ಎರಡನೇ ಸಿಂಪಡಣೆ: ಶೇ. 5ರಷ್ಟು ಬೇವಿನ ಬೀಜದ ಕಾಷಾಯ ಅಥವಾ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಕಷಾಯ ಸಿಂಪಡಿಸಬಹುದು.* ಮೂರನೇ ಸಿಂಪಡಣೆ: ಹೆಲಿಯೋಥಿಸ್ ಎನ್‌ಪಿವಿ ನಂಜಾಣುವನ್ನು ಪ್ರತಿ ಎಕರೆಗೆ 100 ಎಲ್‌ಇನಂತೆ ಪ್ರತಿ ಬ್ಯಾರಲ್(200 ಲೀ.) ನೀರಿಗೆ ಬೆರೆಸಿ, ಅದಕ್ಕೆ 100 ಗ್ರಾಂ. ಬೋರಿಕ್‌ಆಮ್ಲ ಅಥವಾ ನೀಲಿ ಪುಡಿ 1 ಕಿ.ಗ್ರಾಂ. ಅನ್ನು ಬೆಲ್ಲ ಅಥವಾ ಸಕ್ಕರೆ ಬೆರೆಸಿ ತಂಪು ಸಮಯದಲ್ಲಿ ಸಿಂಪಡಿಸಬೇಕು.* ನಾಲ್ಕನೇ ಸಿಂಪಡಣೆ: 0.15 ಮಿ.ಲೀ. ರೈನಾಕ್ಷಿಪಿಯರ್ 20 ಎಸ್‌ಪಿ ಅಥವಾ 0.3 ಮಿ.ಲೀ. ಇಂಡಾಕ್ಸಿಕಾರ್ಬ 14.5 ಎಸ್‌ಸಿ ಅಥವಾ 0.1 ಮಿ.ಲೀ. ಸ್ಪೈನೋಸ್ಯಾಡ್ 45 ಎಸ್‌ಸಿ ಅಥವಾ 4 ಗ್ರಾಂ. ಕಾರ್ಬಾರಿಲ್ 50 ಡಬ್ಲ್ಯೂಪಿ ಅಥವಾ 1 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ 50 ಇಸಿ ಅಥವಾ 2.5 ಮಿ.ಲೀ ಕ್ಲೋರೋಫೈರಿಫಾಸ್ 20 ಇಸಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.* ನೀರಿನ ಅನನುಕೂಲ ಇರುವೆಡೆ ಸಿಂಪಡಣೆಗೆ ಬದಲಾಗಿ ಶೇ. 1.5ರಷ್ಟು ಕ್ವಿನಾಲ್‌ಫಾಸ್ ಅಥವಾ ಶೇ. 5ರಷ್ಟು ಕಾರ್ಬಾರಿಲ್ ಅಥವಾ ಶೇ. 5ರಷ್ಟು ಮೆಲಾಥಿಯನ್ ಅಥವಾ ಶೇ. 2ರಷ್ಟು ಮಿಥೈಲ್ ಪ್ಯಾರಾಥಿಯಾನ್ ಪುಡಿಯನ್ನು ಎಕರೆಗೆ 10 ಕೆಜಿಯಷ್ಟು ದೂಳಿಕರಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry