ಭಾನುವಾರ, ಜೂನ್ 20, 2021
20 °C
ನಮ್ಮೂರ ಊಟ

ಹಸಿದವರಿಗೆ ಹಲಸಿನ ಖಾದ್ಯ...

ಎಸ್‌. ಸರಸ್ವತಿ ಭಟ್‌ Updated:

ಅಕ್ಷರ ಗಾತ್ರ : | |

ಮದುವೆಯಾದ ಹೊಸದರಲ್ಲಿ ಗಂಡನ ಮನೆಗೆ ಹೋದಾಗ, ಅಲ್ಲಿನ ಹಲಸಿನ ಹಣ್ಣಿನ ರುಚಿಗೆ ಮಾರು ಹೋಗಿದ್ದೆ. ಮೈದುನಂದಿರು, ಅವರ ಪತ್ನಿಯರು, ಮಾವ, ಅತ್ತೆ, ನನ್ನ ಯಜಮಾನರು ಎಲ್ಲರೂ ಸೇರಿ ಹಲಸಿನ ಹಪ್ಪಳ ಮಾಡುವ ಸಂಭ್ರಮದ ನೆನಪು ಈಗಲೂ ಕಣ್ಣ ಮುಂದಿದೆ.ಮನೆಯ ಗಂಡಸರು ಹಲಸಿನ ಕಾಯಿಯನ್ನು ಮರದಿಂದ ಕೊಯ್ದು ತಂದು, ದೊಡ್ಡ ಅಂಗಳದ ದೊಡ್ಡ ತೆಂಗಿನ ಮಡಲು ಯಾ ಅಡಿಕೆ ಹಾಳೆ ಹಾಕಿ ಹಲಸಿನ ಕಾಯಿ ತುಂಡು ಮಾಡಿ ಹಲಸಿನ ತೊಳೆ ತೆಗೆಯಲು ನಮಗೆ ಸಹಾಯ ಮಾಡುತ್ತಿದ್ದರು. ನಾವು ಮನೆಯ ಹೆಂಗಸರು, ಮಕ್ಕಳೆಲ್ಲಾ ಸೇರಿ, ಹಲಸಿನ ತೊಳೆ ತೆಗೆದು ಉಗಿಯಲ್ಲಿ ಬೇಯಿಸಿ, ನಂತರ ದೊಡ್ಡ ಕಡೆಯುವ ಕಲ್ಲಿನಲ್ಲಿ ಹಾಕಿ ನುಣ್ಣಗೆ ಕಡೆದು, ಉಂಡೆ ಮಾಡಿ ಹಪ್ಪಳದ ಮಣೆಯಲ್ಲಿ ಒತ್ತಿ ಹಪ್ಪಳ ತಯಾರಿಸಿ ಬಿಸಿಲಿನಲ್ಲಿ ಚಾಪೆಯ ಮೇಲೆ ಹಾಕಿ ಒಣಗಿಸುತ್ತಿದ್ದೆವು. ಈ ಹಪ್ಪಳ ಮಾಡುವ ಕೆಲಸ ಎಲ್ಲರ ಸಹಕಾರದಿಂದ ಸುಲಭವಾಗುತ್ತಿತ್ತು.ಈಗ ಅವಿಭಕ್ತ ಕುಟುಂಬಗಳು ಕಡಿಮೆಯಾಗಿವೆ. ಇಂದು ಹೀಗೆ ಸಾವಧಾನದಿಂದ, ತಾಳ್ಮೆಯಿಂದ ಹಲಸಿನ ಹಪ್ಪಳ, ಮಾಂಬಳ ಮಾಡುವ ಆಸಕ್ತಿ, ಸಹನೆ ವ್ಯವಧಾನ ಯಾರಿಗೂ ಇಲ್ಲ. ಹೆಚ್ಚಿನವರು ಪೇಟೆಯಿಂದ ಅಂಗಡಿಯಿಂದಲೇ ಹಪ್ಪಳ ಖರೀದಿಸುತ್ತಾರೆ. ಅದೇನೇ ಇರಲಿ, ಹಲಸಿನ ಹಣ್ಣು ಹಾಗೂ ಬೀಜದ ವಿಶೇಷ ಅಡುಗೆಗಳ ಪರಿಚಯ ಇಲ್ಲಿದೆ, ಓದಿ, ನೀವೂ ಪ್ರಯತ್ನಿಸಿ.

ಹಲಸಿನ ಹಣ್ಣಿನ ಸಿಹಿ ಪಲಾವ್‌

ಸಾಮಗ್ರಿ:
ಒಂದು ಕಪ್‌ ಸೋನಾ ಮಸೂರಿ ಅಕ್ಕಿ, ಅರ್ಧ ಚಮಚ ತುಪ್ಪ, 8–10 ಒಣದ್ರಾಕ್ಷಿ, 10–12 ಗೋಡಂಬಿ, ಅರ್ಧ ಕಪ್‌ ಹಲಸಿನ ಹಣ್ಣಿನ ತೊಳೆ, ಅರ್ಧ ಕಪ್‌ ಸಕ್ಕರೆ ಪುಡಿ, ಒಂದು ಚಮಚ ಜೇನುತುಪ್ಪ, ಒಂದು ಚಮಚ ಹಾಲಿನ ಕೆನೆ, ಅರ್ಧ ಚಮಚ ಏಲಕ್ಕಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಒಲೆಯ ಮೇಲೆ ಬಾಣಲೆ ಇಟ್ಟು, ತುಪ್ಪ ಹಾಕಿ. ಬಿಗಿಯಾದಾಗ ಗೋಡಂಬಿ, ದ್ರಾಕ್ಷಿ ಹಾಕಿ. ಸ್ವಲ್ಪ ಕೆಂಪಗೆ ಹುರಿದು ಕೆಳಗಿಳಿಸಿ. ಅಕ್ಕಿಯನ್ನು ತೊಳೆದು 15 ನಿಮಿಷ ನೆನೆಸಿ ನಂತರ 2 ಕಪ್‌ ನೀರು ಹಾಕಿ ಕುಕ್ಕರಿನಲ್ಲಿಟ್ಟು 3 ವಿಸಿಲ್‌ ಕೂಗಿಸಿ. ತಯಾರಾದ ಅನ್ನವನ್ನು  ಬೇರೆ ಬಾಣಲೆಗೆ ಹಾಕಿ, ತುಂಡು ಮಾಡಿದ ಹಲಸಿನ ಹಣ್ಣಿನ ತೊಳೆ, ಸಕ್ಕರೆ ಪುಡಿ ಹಾಕಿ ಸರಿಯಾಗಿ ತೊಳಸಿ 5 ನಿಮಿಷ ಬೇಯಿಸಿ. ಜೇನುತುಪ್ಪ, ಹಾಲಿನ ಕೆನೆ, ಏಲಕ್ಕಿ ಪುಡಿ, ಹುರಿದ ಗೋಡಂಬಿ, ದ್ರಾಕ್ಷಿ ಹಾಕಿ ಸರಿಯಾಗಿ ತೊಳಸಿ ಒಲೆಯಿಂದ ಇಳಿಸಿ. ಈಗ ಹಲಸಿನ ಹಣ್ಣಿನ ರುಚಿಯಾದ ಪಲಾವ್‌ ಸವಿಯಲು ಸಿದ್ಧ.ಹಲಸಿನ ಹಣ್ಣಿನ ಸೇವಿಗೆ (ಶ್ಯಾವಿಗೆ)

ಸಾಮಗ್ರಿ:
ಒಂದು ಕಪ್‌ ಬೆಳ್ತಿಗೆ ಅಕ್ಕಿ, ಕಾಲು ಕಪ್‌ ಹಲಸಿನ ತೊಳೆ, ಎರಡು ಚಮಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.ವಿಧಾನ: ಬೆಳ್ತಿಗೆ ಅಕ್ಕಿಯನ್ನು 3–4 ಗಂಟೆ ನೀರಿಗೆ ಹಾಕಿ ನೆನೆಸಿ, ತೊಳೆದು, ನೀರು ಬಸಿದು, ಹಲಸಿನ ಹಣ್ಣಿನ ತೊಳೆ, ಉಪ್ಪು ಸ್ವಲ್ಪ ನೀರು ಸೇರಿಸಿ, ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಬಿಸಿಯಾದಾಗ ರುಬ್ಬಿಟ್ಟ ಹಿಟ್ಟು ಹಾಕಿ ಗಟ್ಟಿಯಾಗುವ ವರೆಗೆ ತೊಳಸಿ.ಸ್ವಲ್ಪ ತಣಿದ ನಂತರ ಉಂಡೆ ಮಾಡಿ ಇಡ್ಲಿ ಪಾತ್ರೆಯಲ್ಲಿಟ್ಟು 15–20 ನಿಮಿಷ ಉಗಿಯಲ್ಲಿ ಬೇಯಿಸಿ. ಬಿಸಿಯಾಗಿರುವಾಗಲೆ ಸೇಮಿಗೆ ಮುಟ್ಟಿನ ಅಂಡೆಗೆ ಎಣ್ಣೆ ಪಸೆ ಮಾಡಿ ಶಾವಿಗೆ ಒತ್ತಿ. ಈಗ  ಸಿಹಿಯಾದ ರುಚಿಯಾದ ಶ್ಯಾವಿಗೆ ತಯಾರಿ. ಇದಕ್ಕೆ ತೆಂಗಿನ ತುರಿ ಸೇರಿಸಿ ಒಗ್ಗರಣೆ ಮಾಡಿದರೆ ತಿನ್ನಲು ಇನ್ನೂ ರುಚಿಯಾಗಿರುತ್ತದೆ.

ಹಲಸಿನ ಹಣ್ಣಿನ ಗುಳಿಯಪ್ಪ

ಸಾಮಗ್ರಿ: ಒಂದು ಕಪ್‌ ಬೆಳ್ತಿಗೆ ಅಕ್ಕಿ, ಅರ್ಧ ಕಪ್‌ ಕಾಯಿತುರಿ, ಅರ್ಧ ಚಮಚ ಮೆಂತ್ಯ, ಎರಡು ಕಪ್‌ ಹಲಸಿನ ಹಣ್ಣಿನ ತೊಳೆ, ಅರ್ಧ ಕಪ್‌ ಬೆಲ್ಲದ ಪುಡಿ, ಕಾಲು ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು.ವಿಧಾನ: ಬೆಳ್ತಿಗೆ ಅಕ್ಕಿ ಮತ್ತು ಮೆಂತ್ಯ ಬೇರೆ ಬೇರೆಯಾಗಿ 2–3 ಗಂಟೆ ನೆನೆಸಿ ನಂತರ ಮೆಂತ್ಯೆ ಚೆನ್ನಾಗಿ ತೊಳೆದು ಕಾಯಿತುರಿಯ ಜೊತೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ, ಅಕ್ಕಿ ತೊಳೆದು, ಹಲಸಿನ ಹಣ್ಣಿನ ತೊಳೆ, ಬೆಲ್ಲದ ಪುಡಿ, ಉಪ್ಪು, ರುಬ್ಬಿದ ಮೆಂತ್ಯ ಕಾಯಿತುರಿಯ ಮಿಶ್ರಣ ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ  ಸ್ವಲ್ಪ ತರಿ ತರಿಯಾಗಿ ರುಬ್ಬಿ, ಅಪ್ಪದ ಕಾವಲಿ ಒಲೆಯ ಮೇಲಿಟ್ಟು, ಕಾವಲಿಯ ಗುಳಿಗಳಿಗೆ ತುಪ್ಪ ಹಾಕಿ ಹದವಾಗಿ ಬಿಸಿಯಾದಾಗ ರುಬ್ಬಿಟ್ಟ ಹಿಟ್ಟು ಗುಳಿಯ ಮುಕ್ಕಾಲು ಭಾಗದಷ್ಟು ಹಾಕಿ ಮುಚ್ಚಿ ಇಡಿ. ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ಮುಚ್ಚಳ ತೆಗೆದು ಒಂದು ಕಡ್ಡಿಯಿಂದ ಅಥವಾ ಚೂರಿಯ ತುದಿಯಿಂದ ಅಪ್ಪವನ್ನು ನಿಧಾನವಾಗಿ ತೆಗೆದು ಮಗುಚಿ ಹಾಕಿ. ಕಂದು ಬಣ್ಣ ಬಂದಾಗ ತೆಗೆಯಿರಿ. ಈಗ ರುಚಿಯಾದ ಗುಳಿಯಪ್ಪ ಸವಿದು ನೋಡಿ.ಹಲಸಿನ ಬೀಜದ – ಅಕ್ಕಿ ಪುಡಿಯ ಉಂಡೆ

ಸಾಮಗ್ರಿ:
ಒಂದು ಕಪ್‌ ಹಲಸಿನ ಬೀಜದ ಪುಡಿ, ಕಾಲು ಕಪ್‌ ಅಕ್ಕಿ ಪುಡಿ, ಕಾಲು ಚಮಚ ಕರಿಮೆಣಸು ಪುಡಿ, ಒಂದು ಕಪ್‌ ಸಕ್ಕರೆ, ಅರ್ಧ ಕಪ್‌ ನೀರು, ರುಚಿಗೆ ಉಪ್ಪು.ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಹಲಸಿನ ಬೀಜದ ಪುಡಿಯನ್ನು ಹಾಕಿ. ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿದು ಕೆಳಗಿಳಿಸಿ. ಮತ್ತೆ ಅಕ್ಕಿ ಪುಡಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ಕೆಳಗಿಳಿಸಿ. ಬಾಣಲೆಗೆ ಸಕ್ಕರೆ, ಅರ್ಧ ಕಪ್‌ ನೀರು ಹಾಕಿ ಮೇಲ್ಭಾಗದಲ್ಲಿ ನೊರೆ ಬರುವತನಕ ಕುದಿಸಿ ಒಲೆಯಿಂದ ಇಳಿಸಿ.ಕರಿಮೆಣಸು ಪುಡಿ, ಉಪ್ಪು ಸೇರಿಸಿ, ಸಕ್ಕರೆ ಪಾಕದ ಸ್ವಲ್ಪ ಭಾಗ ತೆಗೆದು ಪ್ರತ್ಯೇಕ ಇರಿಸಿ. ಎರಡು ಚಮಚ ಅಕ್ಕಿ ಹುಡಿ ತೆಗೆದು ಬೇರೆ ಇಡಿ. ಉಳಿದ ಅಕ್ಕಿ ಹುಡಿ ಮತ್ತು ಹಲಸಿನ ಬೀಜದ ಹುಡಿಯನ್ನು ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ಸಕ್ಕರೆ ಪಾಕಕ್ಕೆ ಸೇರಿಸಿ. ನಂತರ ಪ್ರತ್ಯೇಕವಾಗಿ ತೆಗೆದ ಪಾಕ ಸೇರಿಸಿ ಮಿಶ್ರಣವನ್ನು ಉಂಡೆ ಕಟ್ಟುವ ಹದಕ್ಕೆ ಮಾಡಿ, ಉಂಡೆ ಕಟ್ಟಿ. ಪ್ರತ್ಯೇಕವಾಗಿ ತೆಗೆದಿಟ್ಟ ಅಕ್ಕಿ ಹುಡಿಯಲ್ಲಿ ಮೆಲ್ಲನೆ ಹೊರಳಿಸಿ ಇಡಿ.ಹಲಸಿನ ಬೀಜದ ಹುಡಿ ತಯಾರಿಸುವ ವಿಧಾನ: ಬೀಜಗಳನ್ನು ತೊಳೆದು ಒಣಗಿಸಿ. ನಂತರ ಬಾಣಲೆಗೆ ಹಾಕಿ. ಸಣ್ಣ ಉರಿಯಲ್ಲಿ ಬೀಜ ಬಿಸಿಯಾಗಿ ಹೊರ ಕವಚ ತೆಗೆಯಲು ಆಗುವಷ್ಟು ಹೊತ್ತು ಒಲೆಯ ಮೇಲಿಡಿ. ತಣಿದ ನಂತರ ಬೀಜವನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ ನಂತರ ಸಣ್ಣ ಉರಿಯಲ್ಲಿ ಹುರಿದು ಚೆನ್ನಾಗಿ ಪ್ಯಾಕ್‌ ಮಾಡಿದರೆ ಬೇಕಾದಾಗ ಉಂಡೆ ತಯಾರಿಸಬಹುದು.

ಹಲಸಿನ ಬೀಜದ ಜಾಮೂನು

ಸಾಮಗ್ರಿ: ಒಂದು ಕಪ್‌ ಹಲಸಿನ ಬೀಜ, ಕಾಲು ಕಪ್‌ ಮೈದಾ ಹಿಟ್ಟು, ಒಂದೂವರೆ ಕಪ್‌ ಸಕ್ಕರೆ, ಕಾಲು ಚಮಚ ಏಲಕ್ಕಿ ಪುಡಿ, ಕರಿಯಲು ಎಣ್ಣೆ.ವಿಧಾನ: ಹಲಸಿನ ಬೀಜದ ಸಿಪ್ಪೆ ತೆಗೆದು, ಜಜ್ಜಿ ನೀರು ಹಾಕಿ ಪ್ರೆಷರ್‌ ಕುಕ್ಕರಿನಲ್ಲಿ ಬೇಯಿಸಿ. ನಂತರ ನೀರು ಬಸಿದು ನುಣ್ಣಗೆ ರುಬ್ಬಿ ಮೈದಾ ಹಿಟ್ಟು ಹಾಕಿ, ಬೆರೆಸಿ ಕೈಗೆ ಎಣ್ಣೆ ಪಸೆ ಮಾಡಿ, ನೆಲ್ಲಿಕಾಯಿ ಗಾತ್ರದ ಉಂಡೆ ಕಟ್ಟಿ. ಬಾಣಲೆಗೆ ಎಣ್ಣೆ ಹಾಕಿ, ಅದು ಬಿಸಿಯಾದಾಗ ಉಂಡೆಗಳನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗೆ ಕರಿಯಿರಿ. ಬೇರೆ ಬಾಣಲೆ ಒಲೆಯ ಮೇಲಿಟ್ಟು ಸಕ್ಕರೆ ಮತ್ತು ನೀರು ಹಾಕಿ ಕುದಿಸಿ. ನಂತರ ಪಾಕ ಹಾಕಿ. 15–20 ನಿಮಿಷ ಬಿಟ್ಟು ತಿನ್ನಲು ಕೊಡಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.