ಬುಧವಾರ, ಆಗಸ್ಟ್ 21, 2019
28 °C

ಹಸಿರಿಗೊಂದು `ಕಾವಲು'

Published:
Updated:

ಹುಲ್ಲುಗಾವಲು ಎಂದರೇನು?

ಹುಲ್ಲೇ ಮುಖ್ಯ ಬೆಳೆಯಾಗಿ ಉಳ್ಳ ಭೂಮಿಯನ್ನು ಹುಲ್ಲುಗಾವಲು ಎನ್ನುತ್ತಾರೆ.

ಅದು ಉಂಟಾಗುವುದು ಹೇಗೆ?

ಪ್ರತಿವರ್ಷ 25ರಿಂದ 75 ಸೆಂ.ಮೀ. ಮಳೆಯಾಗುವ ಪ್ರದೇಶಗಳಲ್ಲಿ ಹುಲ್ಲುಗಾವಲು ಮೂಡುತ್ತದೆ. ಅಷ್ಟು ಮಳೆಯಿಂದ ಕಾಡು ಮೂಡುವುದು ಸಾಧ್ಯವಿಲ್ಲ. ಹಾಗೆಂದು ಮರುಭೂಮಿ ಉಂಟಾಗುವ ಭೀತಿಯೂ ಅಂಥ ಪ್ರದೇಶಗಳಲ್ಲಿ ಇರುವುದಿಲ್ಲ. ಅಂಟಾರ್ಟಿಕಾ ಹೊರತುಪಡಿಸಿ ಮಿಕ್ಕೆಲ್ಲಾ ಖಂಡಗಳಲ್ಲಿ ಹುಲ್ಲುಗಾವಲುಗಳಿವೆ.

ಹುಲ್ಲುಗಾವಲುಗಳಲ್ಲೂ ಬಗೆಗಳು ಇವೆಯೇ?

ಋತುಮಾನಕ್ಕೆ ಅನುಗುಣವಾಗಿ ಬಗೆಗಳು ಇವೆ. ಸುಡುಬೇಸಿಗೆಯ ಹುಲ್ಲುಗಾವಲು, ಕೊರೆವ ಚಳಿಗಾಲದ ಹುಲ್ಲುಗಾವಲು ಹೀಗೆ. ಇವನ್ನು `ತಾಪಮಾನದ ಹುಲ್ಲುಗಾವಲುಗಳು' ಎನ್ನುತ್ತಾರೆ. ಮೂರು ವಿಧದ ಹುಲ್ಲು ಇಲ್ಲಿ ಬೆಳೆಯುತ್ತದೆ: ಗಿಡ್ಡ, ಮಧ್ಯಮ ಉದ್ದ, ಅತಿ ಉದ್ದ. ಉಷ್ಣಾಂಶ ಹೆಚ್ಚು ಇರುವ ಪ್ರದೇಶಗಳಲ್ಲಿ ಬೆಳೆಯುವ ಹುಲ್ಲುಗಾವಲುಗಳಿಗೆ `ಸವನ್ನಾಗಳು' ಎನ್ನುತ್ತಾರೆ. ಅಲ್ಲಲ್ಲಿ ಬೆಳೆದ ಮರಗಳ ನಡುವೆ ಹುಲ್ಲಿನ ಪೊದೆಗಳಿರುತ್ತವೆ.ವಿಶ್ವದಾದ್ಯಂತ ಹುಲ್ಲು ಬೆಳೆದ ಭೂಮಿಗೆ ಹುಲ್ಲುಗಾವಲು ಎಂದೇ ಕರೆಯುವರೇ?

ವಿಶ್ವದ ವಿವಿಧ ಭಾಗಗಳಲ್ಲಿ ಅದನ್ನು ಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಯುರೇಷಿಯಾದ ಹುಲ್ಲುಗಾವಲನ್ನು `ಸ್ಟೆಪ್ಪೆ' ಎಂದು ಕರೆದರೆ, ಉತ್ತರ ಅಮೆರಿಕದವರ ಬಾಯಲ್ಲಿ ಅದು `ಪ್ರೇರೀ'. ದಕ್ಷಿಣ ಅಮೆರಿಕದವರು ಹುಲ್ಲುಗಾವಲನ್ನು `ಪಾಂಪಾ' ಎಂದರೆ, ದಕ್ಷಿಣ ಆಫ್ರಿಕಾದವರು `ವೆಲ್ಡ್' ಎನ್ನುತ್ತಾರೆ. ಭಾರತದಲ್ಲಿ `ಬುಘಿಯಲ್', `ಚೌರ್', `ಮಾರ್ಗ್' ಎಂದು ಕರೆಯುತ್ತಾರೆ.

ಹುಲ್ಲುಗಾವಲನ್ನು ಯಾವುದಕ್ಕೆ ಬಳಸುತ್ತಾರೆ?

ಹುಲ್ಲುಗಾವಲಿನ ಭೂಮಿ ಫಲವತ್ತಾಗಿರುತ್ತದೆ. ಅದನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿರುವುದೇ ಹೆಚ್ಚು. ವಿಶ್ವದಲ್ಲಿ ಬೆಳೆಯುವ ಬೆಳೆಯಲ್ಲಿ ಶೇ 70ರಷ್ಟು ಪಾಲು ಒಂದು ಕಾಲದ ಹುಲ್ಲುಗಾವಲಿನ ಪ್ರದೇಶಗಳದ್ದು. ಯುರೇಷಿಯಾದ `ಸ್ಟೆಪ್ಪೆ', ಉತ್ತರ ಅಮೆರಿಕದ `ಪ್ರೇರೀ' ಹೆಚ್ಚು ಫಲವತ್ತಾದ ಕೃಷಿ ಭೂಮಿಯಾಗಿ ಪರಿವರ್ತಿತವಾಗಿವೆ.

Post Comments (+)