ಬುಧವಾರ, ಮೇ 12, 2021
20 °C

ಹಸಿರು ಕಿರೀಟಕ್ಕೆ ಮತ್ತೊಂದು ಗರಿ

ಎನ್.ಸಿದ್ದೇಗೌಡ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐತಿಹಾಸಿಕ ಹಿನ್ನೆಲೆಯುಳ್ಳ ಕಬ್ಬನ್ ಉದ್ಯಾನ, ಲಾಲ್‌ಬಾಗ್ ಉದ್ಯಾನಗಳ ನಂತರ ಅತಿ ದೊಡ್ಡ ಉದ್ಯಾನವೊಂದು ರಾಜಧಾನಿಯ ಉತ್ತರ ಭಾಗದಲ್ಲಿ ಸರ್ವಾಂಗ ಸುಂದರವಾಗಿ ರೂಪುಗೊಂಡಿದೆ.

ಜನತಾ ಆಂದೋಳನದ ರೂವಾರಿ ಜಯಪ್ರಕಾಶ್ ನಾರಾಯಣ್ (ಜೆ.ಪಿ.) ಹೆಸರಿನಲ್ಲಿರುವ ಈ ಉದ್ಯಾನವು ಯಶವಂತಪುರ ಸುತ್ತಮುತ್ತಲಿನ ನಾಗರಿಕರ ನೆಚ್ಚಿನ ತಾಣವಾಗಿ ಅಭಿವೃದ್ಧಿಗೊಂಡಿದೆ.ಕಬ್ಬನ್, ಲಾಲ್‌ಬಾಗ್‌ಗಳು ಸ್ವಾತಂತ್ರ್ಯ ಪೂರ್ವದಲ್ಲಿ ಮೈದಳೆದ ಉದ್ಯಾನಗಳಾಗಿದ್ದರೆ ಜೆ.ಪಿ. ಪಾರ್ಕ್, ಸ್ವಾತಂತ್ರ್ಯೋತ್ತರದಲ್ಲಿ ರೂಪುಗೊಂಡ ದೊಡ್ಡ ಉದ್ಯಾನ. ಈ ಪಾರ್ಕ್ ಹಲವು ವೈಶಿಷ್ಟ್ಯಗಳ ಸಂಗಮವಾಗಿದೆ.ಐದಾರು ಸಾವಿರ ಗಿಡ ಮರಗಳೊಂದಿಗೆ ನಳನಳಿಸುತ್ತಿರುವ ಈ ಉದ್ಯಾನದಲ್ಲಿ ಚಿಣ್ಣರಿಂದ ವೃದ್ಧರವರೆಗೆ ವಿಹರಿಸಲು ಬೇಕಾದ ಸೌಕರ್ಯಗಳಿವೆ. ಕ್ರೀಡಾ ಪ್ರೇಮಿಗಳಿಗೆ ಪ್ರತ್ಯೇಕ ಆಟದ ಮೈದಾನವಲ್ಲದೇ ಉದ್ಯಾನದೊಳಗೆ ಸುಮಾರು ಐದು ಕಿಲೋ ಮೀಟರ್ ಉದ್ದದಷ್ಟು ನಡಿಗೆ ಪಥವಿದೆ. 2.5 ಕಿ.ಮೀ., 1.5 ಕಿ.ಮೀ. ಮತ್ತು 1 ಕಿ.ಮೀ ಉದ್ದದ ಮೂರು ನಡಿಗೆ ಪಥಗಳಿದ್ದು ಅವುಗಳ ಒಟ್ಟು ಉದ್ದ 5 ಕಿ.ಮೀ.ಗಳಿಗೂ ಹೆಚ್ಚು.ಉದ್ಯಾನ ಎಂದ ಮೇಲೆ ಅಲ್ಲಿ ಮಕ್ಕಳಿಗಾಗಿ ಜಾರುಬಂಡಿ, ಉಯ್ಯಾಲೆ, `ಸೀ ಸಾ~ ಮತ್ತಿತರ ಆಟದ ಸಾಧನ ಸಲಕರಣೆಗಳ ವಿಭಾಗ ಇರುವುದು ಸಾಮಾನ್ಯ. ಆದರೆ ಈ ಉದ್ಯಾನದಲ್ಲಿ ಮಕ್ಕಳಿಗೆ ಮಾತ್ರವಲ್ಲದೇ ಐದು ವರ್ಷದೊಳಗಿನ ಪುಟಾಣಿಗಳು, 12 ವರ್ಷದೊಳಗಿನ ಮಕ್ಕಳು ಹಾಗೂ ವಯಸ್ಕರಿಗಾಗಿ ಮೂರು  ಪ್ರತ್ಯೇಕ ಆಟದ ವಿಭಾಗಗಳು ಇರುವುದು ವಿಶೇಷವೇ ಸರಿ.ಜ್ಯೋತಿಷ ಶಾಸ್ತ್ರದಲ್ಲಿ ಉಲ್ಲೇಖವಾಗಿರುವ ರಾಶಿ ಮತ್ತು ನಕ್ಷತ್ರಗಳಿಗಾಗಿ ಇಲ್ಲಿ ಪುಟ್ಟ ಉದ್ಯಾನವನ್ನು ರೂಪಿಸಲಾಗಿದೆ. ಒಂದೊಂದು ರಾಶಿ ಮತ್ತು ನಕ್ಷತ್ರಕ್ಕೆ ಶಾಸ್ತ್ರಗಳಲ್ಲಿ ಹೇಳಿದ ಪ್ರಕಾರ ಗಿಡಗಳನ್ನು ನೆಡಲಾಗಿದೆ. ಈ ಎರಡು ವನಗಳಲ್ಲಿ ಓಡಾಡಲು ಪಾದಕ್ಕೆ ಒತ್ತಿದ ಅನುಭವ (ಆಕ್ಯುಪ್ರೆಷರ್ ರೀತಿಯ) ನೀಡುವ ವಿಶಿಷ್ಟ ಕಲ್ಲುಗಳ ನಡಿಗೆ ಪಥವನ್ನು ನಿರ್ಮಿಸಲಾಗಿದೆ. ಈ ಪಥದ ಉದ್ದಕ್ಕೂ ವಿಶೇಷ ದೀಪ ಕಂಬಗಳನ್ನು ನೆಡಲಾಗಿದೆ. ಜತೆಗೆ ಉಲಿಯುವ ಸಂಗೀತ ವ್ಯವಸ್ಥೆ. ಇದಲ್ಲದೇ ಹೊಂಗೆ ಮರ, ವಿವಿಧ ತಾಳೆ ಗಿಡಗಳಿಗೆ ಪ್ರತ್ಯೇಕವಾದ ವನಗಳೂ ಇಲ್ಲಿವೆ.ನವರಂಗ್ ಚಿತ್ರಮಂದಿರದ ಬಳಿ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಅಂಡರ್‌ಪಾಸ್ ನಿರ್ಮಿಸುವಾಗ ತೆಗೆಯಲಾದ ಕಲ್ಲುಗಳನ್ನು ಬಳಸಿ ನಿರ್ಮಿಸಿರುವ ಶಿಲಾವನ ನೋಡುಗರ ಕಣ್ಮನ ಸೆಳೆಯುತ್ತದೆ. ಉದ್ಯಾನದ ಹಸಿರು ವಾತಾವರಣದಲ್ಲಿ ಗ್ರಾಮ ಜೀವನ ಪರಿಚಯಿಸುವ ರೀತಿಯಲ್ಲಿ ಪ್ರತಿಮೆಗಳನ್ನು ರೂಪಿಸಲಾಗಿದೆ. ಇವುಗಳು ಎಲ್ಲರ ಗಮನ ಸೆಳೆಯುವಂತಿವೆ.ಉದ್ಯಾನದ ಒಳಭಾಗದಲ್ಲಿ ನಾಲ್ಕು ಕೆರೆಗಳಿವೆ. ಅವುಗಳ ಒಟ್ಟು ವಿಸ್ತೀರ್ಣ 25 ಎಕರೆ. ಎರಡು ಕೆರೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಿದ್ದು, ಇನ್ನೆರಡು ಕೆರೆಗಳ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗಿದೆ. ಎಲ್ಲ ಕೆರೆಗಳ ನಡುವೆ ಕಿರು ತೊರೆಯೊಂದು ಹಾದು ಹೋಗಿದೆ. ಈ ಕಿರುತೊರೆ ಜತೆಗೆ ಈಜುಕೊಳದ ಬಳಿ ಇರುವ ಪುಟ್ಟ ಜಲಪಾತ, ಉದ್ಯಾನವನದ ಸೊಬಗನ್ನು ಹೆಚ್ಚಿಸಿದೆ.

 ಕಾಯುತಿವೆ ಕಾರಂಜಿ, ಈಜುಕೊಳ...
ಇಲ್ಲಿನ ಈಜುಕೊಳ ಒಲಿಂಪಿಕ್ ಕ್ರೀಡಾಕೂಟದ ದರ್ಜೆಗೆ ಅನುಗುಣವಾಗಿದ್ದು ಅಂತರರಾಷ್ಟ್ರೀಯ ಈಜು ಪಂದ್ಯಗಳನ್ನು ನಡೆಸಬಹುದಾದ ರೀತಿಯಲ್ಲಿ ಸಜ್ಜುಗೊಂಡಿದೆ. ನಗರದ ಇತರ ಈಜುಕೊಳಗಳಲ್ಲಿ 8 ಲೇನ್‌ಗಳಿದ್ದರೆ, ಈ ಕೊಳದಲ್ಲಿ 10 ಲೇನ್‌ಗಳಿವೆ.ವಿಶಾಲವಾದ ಪೆವಿಲಿಯನ್, ಸುತ್ತಲೂ ಭದ್ರವಾದ ಕಾಂಪೌಂಡ್ ನಿರ್ಮಿಸಲಾಗಿದೆ. ಈ ಕೊಳದ ಬದಿಯಲ್ಲಿಯೇ ಚಿಣ್ಣರಿಗಾಗಿ ಪ್ರತ್ಯೇಕ ಪುಟ್ಟ ಕೊಳವೊಂದನ್ನು ನಿರ್ಮಿಸಲಾಗಿದೆ.ಸಂಗೀತ ನೃತ್ಯ ಕಾರಂಜಿ: ದಕ್ಷಿಣ ಭಾರತದಲ್ಲೇ ದೊಡ್ಡದು ಎನ್ನಲಾದ ನೀರಿನ ಸಂಗೀತ ಮತ್ತು ನೃತ್ಯ ಕಾರಂಜಿಯು ಶೀಘ್ರದಲ್ಲೇ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ. ಸುಮಾರು 150 ಅಡಿ ಉದ್ದ, 50 ಅಡಿ ಅಗಲದ ಅಳತೆಯ ಈ ಕಾರಂಜಿಯು 40 ಅಡಿಗಳಷ್ಟು ಎತ್ತರ ನೀರು ಚಿಮ್ಮಿಸಿ ರಂಜಿಸಲಿದೆ. ಕಾರಂಜಿಯ ಮುಂಭಾಗಕ್ಕೆ ಸುಮಾರು 100 ಅಡಿ ಉದ್ದದ ಅರ್ಧ ವೃತ್ತಾಕಾರದ ವೇದಿಕೆಯೂ ಇದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರೂ 4 ಕೋಟಿ ರೂ. ಅನುದಾನ ನೀಡಿದೆ. ಒಟ್ಟು ರೂ 7 ಕೋಟಿ ವೆಚ್ಚದಲ್ಲಿ ಈ ಕಾರಂಜಿ ವ್ಯವಸ್ಥೆ ಮಾಡಿದೆ. ದೇಶಭಕ್ತಿ ಮತ್ತು ನಾಡಪ್ರೇಮ ಸಾರುವ ಗೀತೆಗಳ ಸಂಗೀತಕ್ಕೆ ನೀರು ನರ್ತಿಸಲಿದೆ.ಕನ್ನಡದ ಹಾಡುಗಳಿಗೆ ಅಗ್ರ ಪ್ರಾಶಸ್ತ್ಯ ನೀಡಲು ಉದ್ದೇಶಿಸಲಾಗಿದೆ. ಪ್ರವೇಶ ಶುಲ್ಕ ಇರುತ್ತದೆ. ಆದರೆ, ಇನ್ನೂ ನಿಗದಿ ಆಗಿಲ್ಲ.ಕಾರಂಜಿ ಆವರಣದ ಪೆವಿಲಿಯನ್‌ಗೆ ಗ್ರಾನೈಟ್ ಹಾಕಿಸಲಾಗಿದೆ. ಮಳೆ ಬಂದರೆ ಆಸರೆ ಪಡೆಯಲು ಪೆವಿಲಿಯನ್‌ನ ಅಕ್ಕಪಕ್ಕದಲ್ಲಿ ತಾತ್ಕಾಲಿಕ ತಂಗುದಾಣವನ್ನು ನಿರ್ಮಿಸಲಾಗಿದೆ.

 
ನಾಗರಿಕ ಸ್ನೇಹಿ ಸೌಕರ್ಯ
ಈಜುಕೊಳದ ಬಳಿ ಅತ್ಯಂತ ವ್ಯವಸ್ಥಿತವಾದ ವಾಹನ ನಿಲುಗಡೆ ತಾಣವನ್ನು ರೂಪಿಸಲಾಗಿದೆ. ಅಲ್ಲಿಯೇ ಫುಡ್ ಪಾರ್ಕ್ ವ್ಯವಸ್ಥೆ ಮಾಡಿದ್ದು, ಆರು ಮಳಿಗೆಗಳನ್ನು ನಿರ್ಮಿಸಲಾಗಿದೆ.ದೊಡ್ಡ ಉದ್ಯಾನದಲ್ಲಿ ಮಳೆ ಬಂದರೆ ಅಥವಾ ಬಿಸಿಲು ಹೆಚ್ಚಾದರೆ ತಾತ್ಕಾಲಿಕವಾಗಿ ನಾಗರಿಕರಿಗೆ ಆಸರೆ ನೀಡಲು ಹತ್ತು ತಂಗುದಾಣಗಳನ್ನು (ಗಜಿಬೊ) ನಿರ್ಮಿಸಲಾಗಿದೆ. ಈಗಾಗಲೇ ಮೂರು ಶೌಚಾಲಯಗಳಿವೆ. ಇನ್ನೂ ಒಂದೆರಡು ಶೌಚಾಲಯಗಳನ್ನು ನಿರ್ಮಿಸುವ ಉದ್ದೇಶವಿದೆ.ಮಳೆ ನೀರು ಶುದ್ಧೀಕರಣ

ಉದ್ಯಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಉದ್ಯಾನದ ಒಂದು ಮೂಲೆಯಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿದೆ. ಇದು ಪ್ರತಿದಿನ 3 ದಶಲಕ್ಷ ಲೀಟರ್ ನೀರು ಶುದ್ಧೀಕರಿಸಲಿದೆ. ಇದರಲ್ಲಿ ಪಕ್ಕದ ರೈಲು ನಿಲ್ದಾಣಕ್ಕೆ 1 ಲಕ್ಷ ಗ್ಯಾಲನ್ ನೀರು ಕೊಟ್ಟು, ಉಳಿದ ನೀರನ್ನು ಕೆರೆಗಳಿಗೆ ಹರಿಯಬಿಡಲಾಗುವುದು.ಸದ್ಯ ಯಶವಂತಪುರ ರೈಲು ನಿಲ್ದಾಣಕ್ಕೆ ತಿಂಗಳಿಗೆ 1.75 ಕೋಟಿ ಗ್ಯಾಲನ್ ನೀರನ್ನು ಕಾವೇರಿ ಯೋಜನೆಯಿಂದ ಪೂರೈಸಲಾಗು ತ್ತಿದೆ. ಶುದ್ಧೀಕರಿಸಿದ ನೀರು ಬಳಸುವು ದರಿಂದ ಕಾವೇರಿ ನದಿ ನೀರಿನ ಮೇಲೆ ಇರುವ ಒತ್ತಡ ತಂತಾನೇ ಕಡಿಮೆ ಆಗಲಿದೆ.ಭದ್ರತಾ ವ್ಯವಸ್ಥೆ

ಸಾಮಾನ್ಯವಾಗಿ ಬೆಳಿಗ್ಗೆ 5ರಿಂದ 9ರವರೆಗೆ, ಸಂಜೆ 5ರಿಂದ 8.30ರವರೆಗೆ ಉದ್ಯಾನ ತೆರೆದಿರುತ್ತದೆ. ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಂದು ಬೆಳಿಗ್ಗೆ 5ರಿಂದ ರಾತ್ರಿ 8.30ರವರೆಗೆ ಉದ್ಯಾನದಲ್ಲಿ ವಿಹರಿಸಲು ಸಾರ್ವಜನಿಕರಿಗೆ ಅವಕಾಶ ಇದೆ.ಉದ್ಯಾನದಲ್ಲಿ ಯಾವುದೇ ಅನುಚಿತ ಘಟನೆಗಳು ನಡೆಯದಂತೆ ನೋಡಿಕೊಳ್ಳಲು 40 ಭದ್ರತಾ ಸಿಬ್ಬಂದಿ ಪಾಳಿ ವ್ಯವಸ್ಥೆ ಮೇಲೆ ಕರ್ತವ್ಯ ನಿರ್ವಹಿಸುತ್ತಾರೆ.`ಹುಟ್ಟೂರಿಗೆ ಕೊಡುಗೆ~

`ಹುಟ್ಟೂರಿಗೆ ಏನಾದರೂ ದೊಡ್ಡ ಕೊಡುಗೆ ಕೊಡಬೇಕೆಂಬ ಕನಸಿತ್ತು. ಈ ಪಾರ್ಕ್ ಮೂಲಕ ನನ್ನ ಕನಸು ನನಸಾಗಿದೆ~ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ ಹೇಳಿದರು.`ಈ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಕೆಲ ಪ್ರಭಾವಿಗಳಿಂದ ಭಾರಿ ಯತ್ನವೇ ನಡೆಯಿತು. ಅವೆಲ್ಲವನ್ನು ತಪ್ಪಿಸಿ ಉದ್ಯಾನದ ಜಾಗವನ್ನು ಸಂರಕ್ಷಿಸಿಸಲಾಗಿದೆ. ಸರ್ವಾಂಗೀಣ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ~ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು.ಬೆಳವಣಿಗೆಯ ಹಾದಿ

ಉದ್ಯಾನದ ಅಭಿವೃದ್ಧಿಗೆ 1987ರಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿದ್ದು ಹತ್ತು ವರ್ಷಗಳ ನಂತರ. 1997ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಅನಂತನಾಗ್, ಈ ಉದ್ಯಾನದ ಅಭಿವೃದ್ಧಿ ಯೋಜನೆಯನ್ನು ಮೆಗಾಸಿಟಿ ಪ್ರಾಜೆಕ್ಟ್‌ನಲ್ಲಿ ಸೇರಿಸಿದರು.ಆಗಿನಿಂದ ಈ ಭಾಗವನ್ನು ಮಹಾನಗರ ಪಾಲಿಕೆಯಲ್ಲಿ ಪ್ರತಿನಿಧಿಸುತ್ತಿರುವ ನಂಜುಂಡಪ್ಪ ಅವರು ಪಟ್ಟು ಹಿಡಿದು ಉದ್ಯಾನದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.