ಹಸಿರು ಕೈಪಿಡಿ

7

ಹಸಿರು ಕೈಪಿಡಿ

Published:
Updated:
ಹಸಿರು ಕೈಪಿಡಿ

ಬೆಂಗಳೂರಿಗೆ ಉದ್ಯಾನ ನಗರಿ (ಗಾರ್ಡನ್ ಸಿಟಿ) ಎಂದೇ ಈಗಲೂ ಹೆಸರು. ಆದರೆ ಆಗಿನ ಹಸಿರು ಈಗಿಲ್ಲ.ಒಂದು ಕಾಲದಲ್ಲಿ ಇಲ್ಲಿ ಎಲ್ಲೆಡೆ ಹಸಿರು ಕಂಗೊಳಿಸುತ್ತಿತ್ತು. ಸಾಲು ಮರಗಳಿಗೆ ಯಾವತ್ತೂ ಕೊರತೆಯಾಗಿರಲಿಲ್ಲ. ಆದರೆ ಅತಿಯಾದ ಔದ್ಯೋಗೀಕರಣ, ರಸ್ತೆ ವಿಸ್ತರಣೆ, ಅಭಿವೃದ್ಧಿಯಿಂದ ಹಸಿರು ವನಗಳಿಗೆ ಕಡಿವಾಣ ಬಿತ್ತು. ಕಾಂಕ್ರೀಟ್ ಜಂಗಲ್ ಎಂಬ ಅಂಕಿತನಾಮ ಸಿಲಿಕಾನ್ ಸಿಟಿಯ ಕಿರೀಟ ಏರಿತು.ಈಗ ಮತ್ತೆ ನಗರದ ಪರಿಸರದಲ್ಲಿ ಬದಲಾವಣೆ ಕಾಣುತ್ತಿದೆ. ಹಸಿರಿನ ಮಹತ್ವ ಜನರಿಗೆ ಅರಿವಾಗಿದೆ. ಬೆಂಗಳೂರು ಉದ್ಯಾನ ನಗರಿಯ ಕೀರ್ತಿ ಮರಳಿ ಗಳಿಸುವ ಹಾದಿಯಲ್ಲಿ ಸಾಗುತ್ತಿದೆ.‘ಗುಡ್ ಅರ್ಥ್’ ನಡೆಸಿದ ಸಮೀಕ್ಷೆಯ ಪ್ರಕಾರ ಮನೆಯೆದುರಿನ ಉದ್ಯಾನ ಅಥವಾ ಕೈತೋಟಗಳ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹೊಸ ಬಡಾವಣೆಗಳಲ್ಲಿ ಹಸಿರಿಗೆ ಆದ್ಯತೆ ನೀಡುವುದು ಒಂದು ರೀತಿ ಕಡ್ಡಾಯ ಎಂಬಂತಾಗಿದೆ.ಈ ಹಿಂದೆ ಕಾರ್ಪೊರೇಟ್ ಸಂಸ್ಥೆಗಳು ಕಾಂಕ್ರೀಟ್ ಕಾಡಿನ ನಡುವೆಯೇ ಹಸಿರು ಉದ್ಯಾನ ನಿರ್ಮಿಸುವ ಸಾಹಸ ಮಾಡಿದವು. ಆ ಯತ್ನ ಅಷ್ಟೊಂದು ಫಲದಾಯಕವಾಗಲಿಲ್ಲ. ಅಲ್ಲಿ ಹಸಿರಿಗಿಂತ ಅಲಂಕಾರಿಕ ಗಿಡಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಇದಕ್ಕೆ ಕಾರಣ. ಹೀಗಾಗಿ ಕಾಂಕ್ರಿಟ್ ಜಂಗಲ್ ಎಂಬ ಪಟ್ಟವೇ ಸ್ಥಿರವಾಗುವ ಅಪಾಯ ಉಂಟಾಗಿತ್ತು.ಈ ಓರೆಕೋರೆಗಳ ಮಧ್ಯೆಯೂ ಬಾಲ್ಕನಿ ಗಾರ್ಡನ್‌ಗಳಿಗೆ ಇಲ್ಲಿ ಕೊರತೆಯಿಲ್ಲ. ಸಣ್ಣ ಜಾಗದಲ್ಲಿ ಹೆಚ್ಚಿನ ಶ್ರಮದೊಂದಿಗೆ ಹಸಿರು ಕಂಗೊಳಿಸಲು ಮಹಾನಗರಿಯ ಮಂದಿ ಶ್ರಮಿಸುತ್ತಿದ್ದಾರೆ. ಇಲ್ಲಿಯ ನೆಲ ಮತ್ತು ವಾತಾವರಣಕ್ಕೆ ಸರಿ ಹೊಂದುವ ಗಿಡಗಳನ್ನು ಬೆಳೆಸುವತ್ತ ಈಗ ಹೆಚ್ಚು ಆಸ್ಥೆ ತೋರುತ್ತಿದ್ದಾರೆ.‘ಅಲಂಕಾರಿಕ ಗಿಡಗಳು ಕಣ್ಣಿಗೆ ಮುದ ನೀಡುತ್ತವೆ. ಆದರೆ ಸಹಜವಾದ ಹಸಿರು ವಾತಾವರಣವನ್ನು ಸೃಷ್ಟಿಸುವುದಿಲ್ಲ. ಹೆಚ್ಚಿನ ಐಟಿ ಮತ್ತು ಕಾರ್ಪೊರೇಟ್ ಕಂಪನಿಗಳು ಗಿಡದ ಆಯ್ಕೆಯಲ್ಲೆೀ ಎಡವುತ್ತವೆ’ ಎನ್ನುತ್ತಾರೆ ಪರಿಸರ ತಜ್ಞ ಡಾ. ಎಂ.ಬಿ. ಕೃಷ್ಣ.‘ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿರುವಾಗ ಒಂದು ಗಿಡ ಕಣ್ಣಿಗೆ ಬೀಳುತ್ತದೆ. ಅದನ್ನು ತನ್ನಿ. ನಿಮ್ಮ ಗಾರ್ಡನ್‌ನಲ್ಲಿ ಇಡಿ. ಅದು ಇತರೆ ಅಲಂಕಾರಿಕ ಗಿಡಗಳಿಗಿಂತ ಹೇಗೆ ಭಿನ್ನವಾಗಿ ಕಾಣುತ್ತದೆ ಎಂಬುದನ್ನು ಗಮನಿಸಿ. ಇದು ಸ್ಥಳೀಯ ಸಸ್ಯವೊಂದು ಹುಟ್ಟುಹಾಕುವ ಹಸಿರಿನ ಭಾವನೆ.ಇಂಥ ಸಸ್ಯಗಳ ಪೋಷಣೆ, ನೆಡುವಿಕೆ ಹೆಚ್ಚಾಗಬೇಕು’ ಎನ್ನುತ್ತಾರೆ ಅವರು.‘ಸ್ಥಳೀಯ ಪ್ರಭೇದದ ಸಸ್ಯಗಳಿಗೆ ಆದ್ಯತೆ ನೀಡಿದರೆ ಇಡೀ ನಗರ, ಇರುವ ಜಾಗದಲ್ಲೆೀ ಹಸಿರಿನಿಂದ ಕಂಗೊಳಿಸುತ್ತದೆ. ಉದಾಹರಣೆಗೆ ವೆಂಗ ಮರ ಪುರಾತನ ಬೆಂಗಳೂರಿನ ಅವಿಭಾಜ್ಯ ಅಂಗವಾಗಿತ್ತು. ಈಗ ಆ ಜಾತಿಯ 2 ಅಥವಾ 3 ಮರಗಳು ನಗರದಲ್ಲಿರಬಹುದು. ವೆಂಗ ಮರದಿಂದಲೇ ಈ ನಗರದ ಹೆಸರು ಬೇಂಗಳೂರಾಗಿದ್ದು. ಅಂಥ ಮರಗಳನ್ನು ಉಳಿಸಿಕೊಳ್ಳಬೇಕಿತ್ತು’ ಎನ್ನುತ್ತಾರೆ ಜೀವ ವೈವಿಧ್ಯ ಮಂಡಳಿಯ ಡಾ. ಸತ್ಯನಾರಾಯಣ ಭಟ್.ಹಸಿರು ವನಗಳು ಹಲವು ಹಂತಗಳಲ್ಲಿ ಅಭಿವೃದ್ಧಿಗೊಳ್ಳಬೇಕು. ನಗರದ ಬೀದಿಗಳು, ಸಮೀಪದ ಉದ್ಯಾನಗಳು, ಆವರಣಗಳು ಮತ್ತು ಮನೆಯ ಕೈತೋಟಗಳು ಹಸಿರು ಹರಡಲು ಸಹಕಾರಿಯಾಗಿವೆ. ಸೌರ ಉಪಕರಣ ಬಳಕೆ ಕೂಡ ಮಾಲಿನ್ಯದ ದುಷ್ಪರಿಣಾಮ ತಪ್ಪಿಸುತ್ತದೆ. ಉದ್ಯಾನವನದ ಹಾದಿಗಳಲ್ಲಿ ಸೌರ ದೀಪ ಬಳಕೆ ಉತ್ತಮ. ನೀರು ಇಂಗಿಸುವಿಕೆ ಮೊದಲಾದ ಯತ್ನಗಳು ನಡೆಯಬೇಕು ಎನ್ನುವುದು ಅವರ ಸಲಹೆ. ಇದಕ್ಕೆ ಪೂರಕ ಎನ್ನುವಂತೆ ಇದೀಗ ಸಹಜ ಹಸಿರು ನಿರ್ಮಾಣದ ಯತ್ನಗಳು ಹೆಚ್ಚುತ್ತಿದೆ. ಹಸಿರಿಗಾಗಿ ಪ್ರಶಸ್ತಿ ಪಡೆದ ಅನೇಕ ಕಟ್ಟಡ ನಿರ್ಮಾಣ ಸಂಸ್ಥೆಗಳು, ಡೆವಲಪರ್‌ಗಳು ನಗರದಲ್ಲಿದ್ದಾರೆ. ನೈಸರ್ಗಿಕ ಉದ್ಯಾನದೊಂದಿಗೆ ಕಟ್ಟಡಗಳ ನಿರ್ಮಾಣ ಕಾರ್ಯ ಹೆಚ್ಚಾಗುತ್ತಿದೆ. ಎಂಜಿನಿಯರ್‌ಗಳು ಸಿದ್ಧಪಡಿಸಿಕೊಟ್ಟ ಕಾಂಕ್ರೀಟ್ ಗಾರ್ಡನ್‌ಗಳನ್ನು ಹಲವು ಸಂಸ್ಥೆಗಳು ತಿರಸ್ಕರಿಸುತ್ತಿವೆ.‘ಅಲಂಕಾರಿಕ ಗಿಡಗಳ ಬದಲು ಅಡುಗೆ ಮನೆಗೆ ಸಹಕಾರಿಯಾಗುವ ಸಸ್ಯಗಳನ್ನು ನಮ್ಮ ಉದ್ಯಾನದಲ್ಲಿ ನೆಡಲಾಗಿದೆ. ಔಷಧ ಗುಣ ಹೊಂದಿರುವ ಸ್ಥಳೀಯ ಸಸ್ಯಗಳಿಗೂ ಆದ್ಯತೆ ನೀಡಲಾಗಿದೆ’ ಎನ್ನುತ್ತಾರೆ ಕೆಂಗೇರಿ ಬಳಿಯ ಗುಡ್‌ಅರ್ಥ ಆರ್ಚಿಡ್‌ನ ನಿವಾಸಿ ಲೊವೆಲಿ ಜಾರ್ಜ್.ಲೋವೆಲಿ ಅವರ ಕೈತೋಟದಲ್ಲಿ ಚೀನಿಕಾಯಿ, ಶೇಂಗಾ, ಟೊಮೆಟೊ, ಹಸಿರು ಮತ್ತು ಕರಿಬೇವು ಎಲೆಗಳು, ಪಪ್ಪಾಯ, ಮೆಣಸು ಮೊದಲಾದವುಗಳನ್ನು ಕಾಣಬಹುದು. ತುಳಸಿ, ಅಲೋವೆರಾ, ದೊಡ್ಡಪತ್ರೆ, ಪಾರಿಜಾತ ಮೊದಲಾದ ಔಷಧೀಯ ಸಸ್ಯಗಳೂ ಇವೆ.ಅವರಂತೆ ಅನೇಕ ಮನೆಗಳು, ಕೈತೋಟಗಳು ಹಸಿರೇ ಉಸಿರು ತತ್ವ ಪಾಲಿಸತೊಡಗಿವೆ. ಇದರಿಂದ ಪರಿಸರ ರಕ್ಷಣೆಯೂ ಆಗುತ್ತಿದೆ, ಕಣ್ಣಿಗೂ ತಂಪು ಕೊಡುತ್ತಿದೆ, ಬಿಸಿಯೇರುವ ವಾತಾವರಣಕ್ಕೆ ಕೊಂಚ ತಂಪಿನ ಸಿಂಚನವಾಗುತ್ತಿದೆ. ಇದು ಆಂದೋಲನವಾಗಿ ಬೆಳೆದರೆ ಬೆಂಗಳೂರಿನ ಹಸಿರು ಉಳಿದೀತು, ಬೆಳೆದೀತು.ನೀವೇನು ಮಾಡಬಹುದು?

* ಹೂಗಳಿಗೆ ಮತ್ತು ಗಿಡಗಳಿಗೆ ಬೇಕಾದ ಜಾಗವನ್ನು ಪ್ರತ್ಯೇಕಿಸಿ

* ಸಾಧ್ಯವಿದ್ದ ಕಡೆಗಳಲ್ಲೆಲ್ಲ ಗಿಡ ಬೆಳೆಯಲು ವೇದಿಕೆ ಸೃಷ್ಟಿಸಿ

* ಉದ್ಯಾನದ ಅಲಂಕಾರಕ್ಕೆ ಹಳೆಯ ವಸ್ತುಗಳನ್ನು ಬಳಸಿ

* ಸ್ಥಳೀಯ ಜಾತಿಯ ಸಸ್ಯಗಳಿಗೆ ಆದ್ಯತೆ ನೀಡಿ

* ಅಲಂಕಾರಕ್ಕಿಂತ ಗೃಹ ಬಳಕೆಗೆ ಯೋಗ್ಯವಾಗಿರುವ ಗಿಡ ಬೆಳೆಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry