ಬುಧವಾರ, ಜೂಲೈ 8, 2020
29 °C

ಹಸಿರು ನಿಶಾನೆಗೆ ಕಾದಿದೆ ಪುಟಾಣಿ ರೈಲು!

ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಹಸಿರು ನಿಶಾನೆಗೆ ಕಾದಿದೆ ಪುಟಾಣಿ ರೈಲು!

ಹುಬ್ಬಳ್ಳಿ: ಅವಳಿನಗರದ ಪುಟಾಣಿಗಳನ್ನು ರಂಜಿಸಲು ಮೈಸೂರಿನಿಂದ ಓಡಿ ಬಂದಿರುವ ಪುಟಾಣಿ ರೈಲು ಶುಕ್ರವಾರ ಇಂದಿರಾ ಗಾಜಿನಮನೆಯ ಟ್ರ್ಯಾಕ್ ಮೇಲೆ ಪವಡಿಸಿತು. ಇನ್ನೇನು ಗಾಜಿನಮನೆಯ ಉದ್ಯಾನವನ ಉದ್ಘಾಟನೆಗೊಳ್ಳಲಿದ್ದು ತಾನೂ ಓಡಾಡಲು ಹಸಿರು ನಿಶಾನೆಗಾಗಿ ಅದೀಗ ಕಾಯುತ್ತಿದೆ.ಪುಟಾಣಿ ರೈಲಾದರೂ ಹಳಿ ಮೇಲೆ ಕೂಡಲು ಸಾಕಷ್ಟು ಸತಾಯಿಸಿತು. ಕಾರ್ಮಿಕರು ಪಟ್ಟು ಬಿಡದೆ ಕ್ರೇನ್ ಸಹಾಯ ಪಡೆದು ಕೊನೆಗೂ ಅದನ್ನು ಹಳಿಯ ಮೇಲೆ ಹತ್ತಿಸಿಯೇಬಿಟ್ಟರು. ಹಳಿ ಮೇಲೇರಿದ ಖುಷಿಯಲ್ಲಿ ಬೋಗಿಗಳಿಲ್ಲದೆ ಮುಂದಕ್ಕೆ ಹೊರಟಿದ್ದ ಎಂಜಿನ್ನನ್ನು ಕಾರ್ಮಿಕರೇ ತಡೆದು ನಿಲ್ಲಿಸಿದರು. ಬೆನ್ನಹಿಂದೆಯೇ ಬೋಗಿಗಳೂ ಬಂದವು. ಎಂಜಿನ್ನಿನ ಬೆನ್ನನ್ನು ಅವುಗಳು ಬಲವಾಗಿ ಅದುಮಿ ಹಿಡಿದವು.`ನಾವೀಗ ಸಂಪೂರ್ಣ ರೆಡಿ. ಗ್ರೀನ್ ಸಿಗ್ನಲ್ ಯಾವಾಗ ತೋರುತ್ತೀರಿ; ನಮ್ಮ ಪುಟಾಣಿ ಪ್ರಯಾಣಿಕರು ಯಾವಾಗ ಬರುತ್ತಾರೆ~ ಎಂಬ ಪ್ರಶ್ನೆ ಹಾಕುವಂತಿತ್ತು ಹಳಿಯ ಮೇಲೆ ನಿಂತ ಪುಟಾಣಿ ರೈಲಿನ ಗತ್ತು. ಇಡೀ ಗಾಜಿನಮನೆ ಉದ್ಯಾನವನ್ನು ಸುತ್ತು ಹಾಕಲು ಉತ್ಸಾಹದ ಬುಗ್ಗೆಯಾಗಿ ಅದು ನಿಂತಂತಿತ್ತು. ಬೋಗಿಯ ಮೇಲೆ ಬರೆಯಲಾದ ಟಾಮ್ ಮತ್ತು ಜೆರ‌್ರಿ ಚಿತ್ರಗಳು ಜೀವ ತಳೆದು ಓಡಾಡುತ್ತಿರುವಂತೆ ಭಾಸವಾಗುತ್ತಿತ್ತು.ಮೈಸೂರಿನ ರೈಲ್ವೆ ವರ್ಕ್‌ಶಾಪ್‌ನಲ್ಲಿ ಈ ಪುಟಾಣಿ ರೈಲು ಸಿದ್ಧಗೊಂಡಿದೆ. ಅಲ್ಲಿಂದ ಲಾರಿಗಳಲ್ಲಿ ಹುಬ್ಬಳ್ಳಿಗೆ ಓಡೋಡಿ ಬಂದಿದೆ. ಎರಡು ದಿನಗಳ ಹಿಂದೆಯೇ ಹಳಿ ಹಾಕುವ ಕಾಮಗಾರಿ ಪೂರ್ಣಗೊಂಡಿತ್ತು.ಒಟ್ಟಾರೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪುಟಾಣಿ ರೈಲು ಹಳಿಯ ಮೇಲೆ ಓಡಾಡಲು ಸನ್ನದ್ಧವಾಗಿದೆ. ಇನ್ನೆರಡು ದಿನಗಳಲ್ಲಿ ಪ್ರಾಯೋಗಿಕವಾಗಿ ರೈಲನ್ನು  ಓಡಿಸಲಾಗುತ್ತದೆ ಕೂಡ.ರೈಲ್ವೆ ಇಲಾಖೆಯ ಸಹಯೋಗದಲ್ಲಿ ಈ ರೈಲನ್ನು ಸಿದ್ಧಗೊಳಿಸಲಾಗಿದೆ. ಎಂಜಿನ್ ಜೊತೆಗೆ ನಾಲ್ಕು ಬೋಗಿಗಳನ್ನು ಒಳಗೊಂಡ ರೈಲು ಆಕರ್ಷಕವಾಗಿದೆ. ಎಂಜಿನ್ ಮೇಲೆ ಕಾರ್ಟೂನ್ ಬಿಡಿಸಲಾಗಿದೆ. ಜೊತೆಗೆ ರೈಲಿನ ಸುತ್ತ ಮಕ್ಕಳಿಗೆ ಇಷ್ಟವಾಗುವ ಟಾಮ್ ಆ್ಯಂಡ್ ಜೆರ‌್ರಿ ಚಿತ್ರಗಳಿವೆ. ಈ ರೈಲು ಒಂದೂವರೆ ಕಿ.ಮೀ. ಸುತ್ತಲಿದೆ. ಒಂದು ಬಾರಿಗೆ 30-40 ಮಕ್ಕಳ ಜೊತೆಗೆ ದೊಡ್ಡವರೂ ಕೂಡಬಹುದು.ಗಾಜಿನಮನೆಯಲ್ಲಿಯೇ ಒಂದು ಕಡೆ ಪ್ಲ್ಯಾಟ್‌ಫಾರ್ಮ್ ಸಿದ್ಧಗೊಳಿಸಲಾಗುತ್ತದೆ. ಇಲ್ಲಿಂದ ಹೊರಟು ಇಡೀ ಗಾಜಿನಮನೆ ಸುತ್ತಿ ಕೊನೆಗೆ ಪ್ಲ್ಯಾಟ್‌ಫಾರ್ಮ್‌ಗೆ ರೈಲು ಬಂದು ಸೇರುತ್ತದೆ. ರೈಲು ಹತ್ತಿದ ಮೇಲೆ ಗಾಜಿನಮನೆಯ ಸಂಪೂರ್ಣ ನೋಟ ಸಿಗಲಿದೆ. ಬಯಲು ರಂಗಮಂದಿರ, ಸಂಗೀತ ಕಾರಂಜಿ, ಹಸಿರು ಪರಿಸರ, ವಿವಿಧ ಬಗೆಯ ಹೂವುಗಳು, ಕಾಂಪೌಂಡ್ ಗೋಡೆಯ ಮೇಲೆ ಬಿಡಿಸಲಾದ ಚಿತ್ರಗಳನ್ನು, ಅಲ್ಲಲ್ಲಿ ನಿಲ್ಲಿಸಲಾಗಿರುವ ಶಿಲ್ಪಗಳನ್ನು ವೀಕ್ಷಿಸಬಹುದು.`ಈ ಬೇಸಿಗೆಯಲ್ಲಿಯೇ ಸಾರ್ವಜನಿಕರ ಪ್ರವೇಶಕ್ಕೆ ಗಾಜಿನಮನೆಯನ್ನು ತೆರೆಯಬಹುದಾಗಿತ್ತು. ಆದರೆ ಪುಟಾಣಿ ರೈಲು ಹಾಗೂ ಸಂಗೀತ ಕಾರಂಜಿ ಸಿದ್ಧಗೊಂಡಿರಲಿಲ್ಲ. ಇವೆರಡೂ ಅತ್ಯಂತ ಆಕರ್ಷಣೀಯವಾದವು. ಇವುಗಳ ಕಾಮಗಾರಿ ಬಾಕಿ ಉಳಿಸಿಕೊಂಡು ಉದ್ಘಾಟನೆಗೊಳ್ಳುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಉದ್ಘಾಟನೆಯನ್ನು ಈವರೆಗೆ ಮುಂದೂಡಲಾಗಿತ್ತು. ಇನ್ನೇನು ಉದ್ಘಾಟನಾ ಸಮಾರಂಭ ನೆರವೇರಲಿದೆ~ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ `ಪ್ರಜಾವಾಣಿ~ಗೆ ತಿಳಿಸಿದರು. `ಮೊದಲ ಬಾರಿಗೆ ಹುಬ್ಬಳ್ಳಿಗೆ ಮಕ್ಕಳ ರೈಲು ಬರುತ್ತಿದೆ. ಡೀಸೆಲ್‌ನ ಈ ರೈಲು ಗಂಟೆಗೆ 15 ಕಿ.ಮೀ. ಓಡುತ್ತದೆ. ಈ ರೈಲಿನ ಒಂದೊಂದು ಬೋಗಿಯಲ್ಲಿ 25 ಮಕ್ಕಳು ಕೂಡಬಹುದು. ಒಟ್ಟು ನಾಲ್ಕು ಬೋಗಿಗಳಲ್ಲಿ 100 ಜನರು ಕೂಡಬಹುದು~ ಎನ್ನುತ್ತಾರೆ ಗಾಜಿನಮನೆ ಕಾಮಗಾರಿ ಉಸ್ತುವಾರಿ ವಹಿಸಿದ್ದ ಧಾರವಾಡ ನಿರ್ಮಿತಿ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ.ಧಾರವಾಡದ ಸಾಧನಕೇರಿ ಕೆರೆ ಉದ್ಯಾನದಲ್ಲೂ ಪುಟಾಣಿ ರೈಲಿದೆ. ಆದರೆ, ಅದು ಹಳಿಯ ಮೇಲೆ ಓಡುವುದಿಲ್ಲ. ಟೈರ್‌ಗಳನ್ನು ಹೊಂದಿದ ಆ ರೈಲು ರಸ್ತೆ ಮೇಲೆ ಓಡುತ್ತದೆ. ಗಾಜಿನಮನೆ ರೈಲು ಮಾತ್ರ ಹಳಿಯ ಮೇಲೇ ಓಡುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.