ಹಸಿರು ಪ್ರೀತಿಯ ಕೈಚೀಲ

7

ಹಸಿರು ಪ್ರೀತಿಯ ಕೈಚೀಲ

Published:
Updated:

ಇದು ಫ್ಯಾಷನ್ ಜಗತ್ತು. ಕಾಲಕ್ಕೆ ತಕ್ಕಂತೆ, ಜನರ ಅಭಿರುಚಿಗೆ ತಕ್ಕಂತೆ ದಿನಕ್ಕೊಂದು ಟ್ರೆಂಡ್ ಸೃಷ್ಟಿಯಾಗುತ್ತಲೇ ಇರುತ್ತದೆ. ನೆನ್ನೆ ಹಳತೆನಿಸಿದ್ದು, ನಾಳೆಗೆ ಹೊಸತಾಗಬಹುದು.

 

ಇಂದು ಹೊಸತೆನಿಸಿದ್ದು, ನಾಳೆಗೆ ಹಳತಾಗಬಹುದು. ಆದರೆ ಫ್ಯಾಷನ್ ಪ್ರಕ್ರಿಯೆ ಮಾತ್ರ ಎಂದಿಗೂ ನಿರಂತರ.ಫ್ಯಾಷನ್ ಎಂಬುದು ಕೇವಲ ಉಡುಪುಗಳಿಗಷ್ಟೇ ಸೀಮಿತವಲ್ಲ. ಉಡುವ, ತೊಡುವ, ಬಳಸುವ ವಸ್ತುಗಳಲ್ಲೂ ದಿನೇದಿನೇ ಬದಲಾವಣೆ ಸಾಮಾನ್ಯ. ಅದೇ ಹೊಸ ಶೈಲಿಯಾಗಿ ಅನುಕರಣೆಯಾಗುತ್ತದೆ. ಇದೀಗ ಬದಲಾವಣೆಯ ಈ ಸಾಲಿನಲ್ಲಿರುವುದು ವಿವಿಧ ವಿನ್ಯಾಸದ ಬ್ಯಾಗ್‌ಗಳು.ಎಲ್ಲಾ ಮಹಿಳೆಯರ ತೋಳು- ಕೈಗಳಲ್ಲಿ ಜಾಗ ಪಡೆದುಕೊಂಡಿರುವ ಜಂಭದ ಚೀಲಕ್ಕೆ ಈಗ ಎಲ್ಲಿಲ್ಲದ ಬೇಡಿಕೆ.ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಕೈಚೀಲಗಳಿಗೆ ಕಲೆಯ ಸ್ಪರ್ಶ ನೀಡಿ ಇನ್ನಷ್ಟು ಚೆಂದಗೊಳಿಸುವ ಕೆಲಸದಲ್ಲಿ ನಿರತರಾಗಿರುವುದು ವೀಣಾ ಉದಯ್ ಕುಲಕರ್ಣಿ. ಚಿಕ್ಕ ವಯಸ್ಸಿನಿಂದಲೇ ಕಲೆಯಲ್ಲಿ ಅಗಾಧ ಆಸಕ್ತಿ ಹೊಂದಿದ್ದ ವೀಣಾ ಅವರಿಗೆ ಈ ಕ್ರಿಯಾತ್ಮಕ ಕಲೆ ಒಲಿದು ಬಂದಿದೆ.ಪ್ಲಾಸ್ಟಿಕ್ ಬ್ಯಾಗ್‌ಗಿಂತ ಪರಿಸರ ಸ್ನೇಹಿಯಾಗಿರುವ ಬಟ್ಟೆಯನ್ನು ಉಪಯೋಗಿಸಿ ವಿವಿಧ ನಮೂನೆಯ ಬ್ಯಾಗ್‌ಗಳನ್ನು ಮತ್ತು ಇನ್ನಿತರ ಕರಕುಶಲ ಸಾಮಗ್ರಿಗಳನ್ನು ತಯಾರಿಸುತ್ತಾ ಬಂದಿರುವುದು ಇವರ ವಿಶೇಷತೆ.

 

ಸಂಪೂರ್ಣವಾಗಿ ಕೈಗಳಿಂದಲೇ ತಯಾರಾಗುವ ಈ ಬ್ಯಾಗ್‌ಗಳಿಗೆ ಕುಸುರಿ ಕಲೆಯ ಚಿತ್ತಾರ ಬಿಡಿಸಿ ಅದರ ಅಂದವನ್ನು ಇನ್ನಷ್ಟು ಇಮ್ಮಡಿಗೊಳಿಸುವುದು ವೀಣಾ ಕಂಡುಕೊಂಡ ಹವ್ಯಾಸ. ಇದೇ ಈಗ ಉದ್ಯಮವಾಗಿ ಪರಿವರ್ತನೆಯಾಗಿದೆ.ಆರ್ಥಿಕ ಸಂಕಷ್ಟ ಎದುರಾದಾಗ ಈ ಕಸುಬನ್ನು ಸವಾಲಾಗಿ ಸ್ವೀಕರಿಸಿದ ವೀಣಾ ತಮ್ಮದೇ ಸಾಯಿ ಹ್ಯಾಂಡ್‌ಕ್ರಾಫ್ಟ್ ಎಂಬ ಮಳಿಗೆಯನ್ನು ನಿರ್ಮಿಸಿದ್ದಾರೆ.ಇದರಿಂದ ಇನ್ನಷ್ಟು ಮಹಿಳೆಯರಿಗೆ ಉದ್ಯೋಗ ಅವಕಾಶ ಸೃಷ್ಟಿಸಿರುವ ಅವರಿಗೆ ತಮ್ಮ ಆತ್ಮವಿಶ್ವಾಸದ ಮೇಲೆ ನಂಬಿಕೆ. ತಮ್ಮಿಂದ ಇನ್ನಷ್ಟು ಮಹಿಳೆಯರಿಗೆ ಸಹಾಯವಾಗಲಿ ಎಂಬ ಕಳಕಳಿ. ಇದೇ ಕಾರಣಕ್ಕೆ ಹಲವು ಗ್ರಾಮಗಳಲ್ಲಿ ಕಾರ್ಯಾಗಾರ ಹಮ್ಮಿಕೊಂಡು ಕೈಕಸುಬಿನ ಪ್ರಾಮುಖ್ಯ ಸಾರಿದ್ದಾರೆ.ಇಂದಿನ ಜಮಾನ ಹೊಸತನ ಬಯಸುತ್ತದೆ. ಇಂದು ಎಲ್ಲಾ ವರ್ಗದ ಮಂದಿಯೂ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಆದ್ದರಿಂದ ಅವಶ್ಯಕತೆ ಮತ್ತು ಅನಿವಾರ್ಯವಾಗಿರುವ ಬ್ಯಾಗ್ ಮತ್ತು ಇನ್ನಿತರ ವಸ್ತುಗಳನ್ನು ಅವರ ಅಭಿರುಚಿಗೆ ತಕ್ಕಂತೆ ತಯಾರಿಸುವುದರ್ಲ್ಲಲೇ ಸಾರ್ಥಕತೆ ಕಂಡುಕೊಂಡಿದ್ದೇನೆ.ಈ ರೀತಿ ವಿವಿಧ ನಮೂನೆಯ ಬ್ಯಾಗ್‌ಗಳನ್ನು ಕಳೆದ ಮೂರು ವರ್ಷದಿಂದ ತಯಾರಿಸುತ್ತಿದ್ದೇವೆ. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ ಎಂದು ಸಂತಸದಿಂದ ನುಡಿಯುತ್ತಾರೆ ವೀಣಾ.ಮೊಬೈಲ್ ಪೌಚ್‌ನಿಂದ ಆರಂಭಿಸಿ ದೊಡ್ಡ ಬ್ಯಾಗ್‌ಗಳವರೆಗೆ ಎಲ್ಲಾ ವಿನ್ಯಾಸವೂ ಇಲ್ಲಿ ಲಭ್ಯ. ಬೇರೆ ಬ್ಯಾಗ್‌ಗಳಿಗೆ ಹೋಲಿಸಿದರೆ ಕಡಿಮೆ ಬೆಲೆಗೆ ಸಿಗುವ ಈ ಬ್ಯಾಗ್‌ಗಳು ಆಕರ್ಷಣೆಯಲ್ಲೂ ಕಡಿಮೆಯೇನಿಲ್ಲ.ಸುಮಾರು 192 ನಮೂನೆಯ ಬ್ಯಾಗ್‌ಗಳು ಇಲ್ಲಿ ತಯಾರಾಗುತ್ತವೆ. ಗ್ರಾಹಕರ ಆಸಕ್ತಿ, ಅವಶ್ಯಕತೆಗೆ ತಕ್ಕಂತೆ ತರಹೇವಾರಿ ಬಣ್ಣ, ವಿವಿಧ ವಿನ್ಯಾಸಗಳಲ್ಲಿ ಬ್ಯಾಗ್‌ಗಳನ್ನು ತಯಾರಿಸಿಕೊಡುವುದು ವೀಣಾ ಅವರ ಕೈಚಳಕ.

 

ಕೇವಲ ಬ್ಯಾಗ್‌ಗಳಷ್ಟೇ ಅಲ್ಲ, ವಾಲ್ ಹ್ಯಾಂಗಿಂಗ್ಸ್, ಪರ್ಸ್, ಚಿತ್ತಾರದ ತಲೆದಿಂಬುಗಳು, ಒಡವೆ ಪೆಟ್ಟಿಗೆ, ಬಳೆಪೆಟ್ಟಿಗೆ ಎಲ್ಲದರಲ್ಲೂ ಸುಂದರವಾಗಿ ಕಲೆ ಅರಳಿರುತ್ತದೆ. 15 ರೂಪಾಯಿಯಿಂದ ಆರಂಭಗೊಂಡು 350 ರೂ.ವರೆಗಿನ ಬೆಲೆಯ ಬ್ಯಾಗ್‌ಗಳು ಇಲ್ಲಿವೆ.ಬದುಕುವುದಕ್ಕೆ ನೂರು ದಾರಿಗಳಿವೆ. ಆದರೆ ಜವಾಬ್ದಾರಿಯನ್ನು ಹೊರಲು ಸಿದ್ಧವಿಲ್ಲದ ಜನ ಬದುಕುವ ಹಲವು ಮಾರ್ಗಗಳನ್ನು ತಳ್ಳಿಹಾಕುತ್ತಾರೆ. ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಇರುತ್ತದೆ. ಆದರೆ ಅದನ್ನು ಸರಿಯಾದ ರೀತಿ ಅನಾವರಣಗೊಳಿಸುವುದು ಮುಖ್ಯ ಎಂಬುದು ವೀಣಾ ಅಭಿಮತ.

 

ವೀಣಾ ಅವರ ಮೊಬೈಲ್ ಸಂಖ್ಯೆ: 9036146778.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry