ಹಸಿರು ಸೇವಕರ ಹತ್ಯೆ- ದಿನಗೂಲಿಯ ದುಃಖಗಳು

6

ಹಸಿರು ಸೇವಕರ ಹತ್ಯೆ- ದಿನಗೂಲಿಯ ದುಃಖಗಳು

Published:
Updated:

ಉತ್ತರ ಕನ್ನಡದ ಯಲ್ಲಾಪುರದಲ್ಲಿ ಅರಣ್ಯ ರಕ್ಷಕನಾಗಿದ್ದ ಮಹದೇವ ಬಾಬು ಸಿದ್ದಿ(38)ಯನ್ನು ಕಾಡುಗಳ್ಳರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದಿನಗೂಲಿ ನೌಕರನಾಗಿದ್ದ ವನವಾಸಿಯ ಬದುಕು ಮುಗಿದಿದೆ, ಕುಟುಂಬ ಕಣ್ಣೀರಲ್ಲಿ ಮುಳುಗಿದೆ. ಈಗ 10 ವರ್ಷದ ಹಿಂದೆ ಶಿರಸಿ ತಾಲೂಕಿನ ಬಕ್ಕಳದಲ್ಲಿ ಜಾನೂ ಕೃಷ್ಣ ಮರಾಠಿ (32) ಅರಣ್ಯ ನರ್ಸರಿಯಿಂದ ವಾಹನದಲ್ಲಿ ಸಸಿ ಸಾಗಿಸುವಾಗ ಮರದ ಟೊಂಗೆ ತಲೆಗೆ ತಾಗಿ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಇವರು ದಿನಗೂಲಿ ಅರಣ್ಯ ರಕ್ಷಕರಾಗಿದ್ದರು. ನಂತರದಲ್ಲಿ  ಕುಟುಂಬಕ್ಕೆ ಒಂದು ರೂಪಾಯಿ ನೆರವೂ ದೊರೆಯಲಿಲ್ಲ. ಅರಣ್ಯ ಇಲಾಖೆಯ ವಾಚಮನ್, ಗಾರ್ಡ್, ಫಾರೆಸ್ಟರ್‌ಗಳು ಜೀವತೆತ್ತ ಇಂಥ ಹಲವು ಪ್ರಕರಣಗಳಿವೆ. ಸಾವನ್ನಪ್ಪಿದ ತಕ್ಷಣ ಕುಟುಂಬಕ್ಕೆ ನೆರವು ನೀಡುವ ಹೇಳಿಕೆಗಳು, ಸಾಂತ್ವನದ ನುಡಿಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತವೆ.

ನಂತರ ಎಲ್ಲವೂ ಮರೆತು ಹೋಗುತ್ತದೆ. ದುಃಖತಪ್ತ ಕುಟುಂಬದವರು ಅರ್ಜಿ ಹಿಡಿದು ಇಲಾಖೆಗೆ ಎಷ್ಟು ಅಡ್ಡಾಡಿದರೂ ನೆರವಾಗುವವರು ಇರುವುದಿಲ್ಲ. ದಿನಗೂಲಿ ನೌಕರರಾದ್ದರಿಂದ ಕಾನೂನಿನ ಪ್ರಕಾರ ನೆರವು ನೀಡಲು ಸಾಧ್ಯವಿಲ್ಲವೆಂಬ ಸಬೂಬು ಹೇಳಲಾಗುತ್ತದೆ. ಸಂಕಟ ನುಂಗಿಕೊಂಡು ಕುಟುಂಬಗಳು ಬದುಕಬೇಕು. ಇಂಥ ಕುಟುಂಬಗಳಿಗೆ ಅಪಘಾತ ಸಂದರ್ಭದಲ್ಲಿ ನೆರವಾಗಲು ಸರ್ಕಾರ ಪ್ರತ್ಯೇಕ ಹಣ ಮೀಸಲಿಡುವ ಅಗತ್ಯವಿದೆ.ಇಂದು ಇಡೀ ರಾಜ್ಯದಲ್ಲಿ ಬೆಂಕಿ ರಕ್ಷಣೆ, ಅಕ್ರಮ ಕಡಿತ ತಡೆಯುವ ಕೆಲಸಗಳಲ್ಲಿ ಮುಂಚೂಣಿಯಲ್ಲಿ ದುಡಿಯುವವರು ಬಹುತೇಕ ದಿನಗೂಲಿಗಳು. ಇವರಿಗೆ ಕೆಲಸದ ಭದ್ರತೆಯಿಲ್ಲ, ಅಪಾಯಕಾರಿ ಪ್ರಸಂಗಗಳಲ್ಲಿ ರಕ್ಷಣೆಯೂ ಇಲ್ಲ. ಕಾನೂನು ಜಾರಿಯ ಕೊನೆಯ ಮಹತ್ವದ ಕೊಂಡಿಯಂತಿರುವ ಶ್ರಮಿಕ ವರ್ಗದ ಬದುಕು ಕಷ್ಟದಲ್ಲಿದೆ. ಕೆಲಸ ನಿರ್ವಹಿಸುವಾಗ ಹಲವರ ವಿರೋಧ ಕಟ್ಟಿಕೊಳ್ಳಬೇಕು.

ಕಳ್ಳನಾಟಾ, ಅತಿಕ್ರಮಣವನ್ನು ಪರಿಣಾಮಕಾರಿಯಾಗಿ  ತಡೆಯಲು ಮೇಲಧಿಕಾರಿಗಳಿಂದ ಸೂಕ್ತ ಪ್ರೋತ್ಸಾಹ ಸಹಕಾರ ದೊರೆಯುವುದಿಲ್ಲ. ರಾಜಕೀಯ ಹಸ್ತಕ್ಷೇಪದಿಂದಾಗಿ ಯಾರೊಬ್ಬರಿಗೂ ಧೈರ್ಯದಿಂದ ಕಾನೂನು ಬಾಹಿರ ಕೃತ್ಯ ತಡೆಯುವ ಧೈರ್ಯವಿಲ್ಲ. ದುಷ್ಟ ವರ್ತುಲ ಬೆಳೆಯುತ್ತಿದೆ. ಸೇಡಿನ ಗುರಿಗೆ ಬಡನೌಕರರು ಬಲಿಯಾಗುವಂತಾಗಿದೆ.

ಕರ್ನಾಟಕ ಅರಣ್ಯ ಸಚಿವರು ಬೆಂಗಳೂರಿನ ಮಲ್ಲೆೀಶ್ವರಂದಲ್ಲಿನ ಅರಣ್ಯ ಭವನಕ್ಕೆ ಒಮ್ಮೆ ಹೋಗಬೇಕು. ಅಲ್ಲಿರುವ 40-45 ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗಾಗಿ ಸರ್ಕಾರ ಎಷ್ಟು ಹಣ ಖರ್ಚು ಮಾಡುತ್ತಿದೆ? ಅರಣ್ಯ ರಕ್ಷಣೆಯ ಯಾವ ಕೆಲಸ ಇವರಿಂದ ನಡೆಯುತ್ತಿದೆಯೆಂದು ಸರಿಯಾಗಿ ಪರಿಶೀಲಿಸಬೇಕು. ಅಲ್ಲಿ ಒಬ್ಬೊಬ್ಬ ಅಧಿಕಾರಿಗೆ ಖರ್ಚಾಗುವ ಹಣದಲ್ಲಿ ನೂರಾರು ದಿನಗೂಲಿ ಅರಣ್ಯ ರಕ್ಷಕರನ್ನು ಸೇವಾ ಹಿರಿತನದಲ್ಲಿ  ಕಾಯಂಗೊಳಿಸಲು ಸಾಕಿತ್ತು.

ಆದರೆ ಕೆಳ ನೌಕರರ ನೇಮಕದ ಬಗೆಗೆ ನಿರ್ಧಾರ ಕೈಗೊಳ್ಳಲು ಇಲಾಖೆಗೆ ಸಾಧ್ಯವಾಗುವುದಿಲ್ಲ. ಸಾವಿರಾರು ಜನ ದಿನಗೂಲಿಯಾಗಿ ದುಡಿಯುತ್ತ ಇಲಾಖೆಯಲ್ಲಿ ಮುಪ್ಪಾಗಿದ್ದಾರೆ. ಕೆಲಸವೇ ಇಲ್ಲದ ಹುದ್ದೆಗೆ ಪ್ರಮೋಷನ್ ನೀಡುತ್ತ ಮುಖ್ಯ ಅಧಿಕಾರಿಗಳ ಪಡೆಯನ್ನು ಬೆಳೆಸುವುದರಿಂದ ಅರಣ್ಯ ರಕ್ಷಣೆಗೆ ಯಾವ ಅನುಕೂಲವೂ ಆಗುವುದಿಲ್ಲ. ನಮಗೆ ಈಗ ಅರಣ್ಯದಲ್ಲಿ ಕೆಲಸ ಮಾಡುವವರ ಅಗತ್ಯವಿದೆ. ಉದಾಹರಣೆಗೆ ಇಲಾಖೆಯಲ್ಲಿ ಸಾಮಾಜಿಕ ಅರಣ್ಯ, ಅರಣ್ಯ ಸಂಶೋಧನಾ ವಿಭಾಗಗಳಿವೆ.

ಅವರ  ಅರಣ್ಯ ಕೆಲಸಗಳಿಗಿಂತ ಅಧಿಕಾರಿಗಳ ವೇತನ, ಭತ್ಯೆಯ ಹಣವೇ ಹೆಚ್ಚಾಗಬಹುದು! ರಾಜ್ಯದ ವಿವಿಧ ಅರಣ್ಯ ವಿಭಾಗಗಳಲ್ಲಿ ಸಾವಿರಾರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿದ್ದಾರೆ. ಆಡಳಿತ ಸುಧಾರಣಾ ಆಯೋಗದ ವರದಿಗಳನ್ನು ಓದಬೇಕು, ಇವರಿಂದ ಯಾವ ಕೆಲಸಗಳನ್ನು ಸರ್ಕಾರ ಪಡೆಯುತ್ತಿದೆ ಎಂಬುದನ್ನು ಪರಿಶೀಲಿಸಬೇಕು.  ಒಂದು ಖುರ್ಚಿಯೂ ಖಾಲಿಯಾಗದೆ ಭರ್ತಿಯಾಗುತ್ತದೆ. ನಮ್ಮ ರಾಜಕಾರಣಿಗಳಿಗೆ ಹಿರಿಯ ಅಧಿಕಾರಿಗಳ ವರ್ಗಾವಣೆಯಲ್ಲಿ ಇರುವ ವ್ಯಾವಹಾರಿಕ ಆಸಕ್ತಿ ಸಣ್ಣ ನೌಕರರ ನೇಮಕ ವಿಚಾರದಲ್ಲಿ ಇಲ್ಲ. ಇಂದು ರಾಜ್ಯ ಅರಣ್ಯ ಇಲಾಖೆ ತನ್ನ ಬೇರು ಮೂಲದ ಈ ಸಿಬ್ಬಂದಿಗಳ ನೇಮಕ, ಸುರಕ್ಷತೆ ಬಗೆಗೆ ವಿಶೇಷ ಗಮನಹರಿಸಬೇಕು. ಯಲ್ಲಾಪುರದ ಮಹದೇವ ಸಿದ್ದಿಯ ದೇಹ ಅರಣ್ಯಗಳ್ಳರ ಅಟ್ಟಹಾಸಕ್ಕೆ ಬಲಿಯಾದ ಘಳಿಗೆಯಲ್ಲಿ ಇಲಾಖೆ ಬಡ ನೌಕರರ ಭವಿಷ್ಯದ ಬಗೆಗೆ ವಿಶೇಷವಾಗಿ ಚಿಂತಿಸಬೇಕು. ಅರಣ್ಯಾಭಿವೃದ್ಧಿ ಬಗೆಗೆ ನಾವು ಎಷ್ಟೇ ಭಾಷಣ ಮಾಡಬಹುದು. ಆದರೆ ಈ ಸಿಬ್ಬಂದಿಗಳು ಸಸಿ ನೆಡುವಷ್ಟು ಯಾರೂ ನೆಡುವುದಿಲ್ಲ. ಕಾಡಿನ ಮರಗಳಿಂದ ಅತ್ಯುತ್ತಮ ಬೀಜಗಳನ್ನು ಸಂಗ್ರಹಿಸಿ ಸೂಕ್ತ ಬೀಜೋಪಚಾರದಿಂದ ಒಳ್ಳೆಯ ಸಸ್ಯೋತ್ಪಾದನೆ ಮಾಡುವ ತಜ್ಞತೆಯಿದೆ.ಪ್ರತಿ ವರ್ಷ ಲಕ್ಷಾಂತರ ಸಸಿಗಳನ್ನು ಬೆಳೆಸಿ ಸೂಕ್ತ ಸಮಯಕ್ಕೆ ಸುರಕ್ಷಿತವಾಗಿ ನಾಟಿ ಮಾಡುವವರು ಈ ಅರಣ್ಯ ರಕ್ಷಕರು. ಕಳೆದ ಸುಮಾರು ಎರಡು ದಶಕಗಳಿಂದ ಕಾಡಿನ ಒಡನಾಡಿಯಾದ ನಾನು ಪರಿಸರ ವಿಜ್ಞಾನಿಗಳಿಗಿಂತ ಅರಣ್ಯ ರಕ್ಷಕರಿಂದ ಹಲವು ಸಂಗತಿ ಕಲಿತಿದ್ದೇನೆ. ಹಿರಿಯ ಅಧಿಕಾರಿಗಳಿಗೆ ತಿಳಿಯದ ಅರಣ್ಯದ ಎಷ್ಟೋ ಸಸ್ಯಗಳು ಇವರಿಗೆ ಗೊತ್ತು. ಇಲಾಖೆ ಇವರ ಜ್ಞಾನ, ಪರಿಶ್ರಮ ಬಳಸಿಕೊಂಡು ಅರಣ್ಯೀಕರಣದಲ್ಲಿ ಒಂದಿಷ್ಟು ಯಶಸ್ಸು ಪಡೆಯುತ್ತಿದೆ. ಜೀವನ ಪರ್ಯಂತ ಹಿರಿಯ ಅಧಿಕಾರಿಗಳಿಗೆ ತಲೆಬಾಗಿ ಬದುಕುವ ಬಡವರು ಎಲೆಮರೆಯ ಸೇವಕರಾಗಿ ಇಲಾಖೆಯ ಗೌರವ ಉಳಿಸಿದ್ದಾರೆ. ಇಂದು ಇವರ ಜೀವ ಉಳಿಸಲು ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry