ಹಸಿರೆಲೆ ಗೊಬ್ಬರ: ಬೆಳೆ ಭರಪೂರ

7

ಹಸಿರೆಲೆ ಗೊಬ್ಬರ: ಬೆಳೆ ಭರಪೂರ

Published:
Updated:

ನಮ್ಮ ದೇಶದ ಕೃಷಿ ವ್ಯೆವಿಧ್ಯಮಯ. ಅಲ್ಲದೆ ಹೆಚ್ಚುತ್ತಿರುವ ಜನಸಂಖ್ಯೆಯ ಹೊಟ್ಟೆ ತುಂಬಿಸಲು ಆಹಾರ ಧಾನ್ಯಗಳ ಅಧಿಕ ಉತ್ಪಾದನೆ ಅತ್ಯವಶ್ಯ. ಆದರೆ ಇಳುವರಿ ಹೆಚ್ಚಿಸುವ ಭರದಲ್ಲಿ ಹೊಸ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿ, ಅವುಗಳಿಗೆ ಹೆಚ್ಚಿನ ಪೋಷಕಾಂಶಗಳನ್ನು ರಾಸಾಯನಿಕ ಗೊಬ್ಬರಗಳ ರೂಪದಲ್ಲಿ ಒದಗಿಸುತ್ತಿದ್ದೇವೆ.ಹೀಗೆ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಫಲವತ್ತತೆ ಕುಂದಿ ಭೂಮಿಯ ಬಂಜೆತನಕ್ಕೆ ಅಡಿಗಲ್ಲು ಹಾಕಿದಂತಾಗುತ್ತಿದೆ. ಲಘು ಪೋಷಕಾಂಶಗಳ ಕೊರತೆ ಉಂಟಾಗಿ ಇಳುವರಿ ಕಡಿಮೆಯಾಗುತ್ತಿದೆ.ಅಲ್ಲದೇ ಕೃಷಿ ಉತ್ಪನ್ನಗಳ ಗುಣಮಟ್ಟ ಕಡಿಮೆಯಾಗಿ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕದೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆದ್ದರಿಂದ ಮಣ್ಣಿನ ಆರೋಗ್ಯ ಕಾಪಾಡುವುದು ಬಹಳ ಮುಖ್ಯ.ಬೆಳೆಗಳು ತಮ್ಮ ಜೀವನ ಚಕ್ರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ನಿರೀಕ್ಷಿತ ಇಳುವರಿ ಕೊಡಲು ಮಣ್ಣಿನಲ್ಲಿ ಹದಿನಾರು (16) ಅವಶ್ಯಕ ಪೋಷಕಾಂಶಗಳು ಬೇಕಾಗುತ್ತವೆ. ಸಸ್ಯಗಳು ಈ ಪೋಷಕಾಂಶಗಳನ್ನು ಗಾಳಿ, ನೀರು, ಮಣ್ಣು ಹಾಗೂ ಬಾಹ್ಯ ಮೂಲಗಳಿಂದ ಪಡೆಯುತ್ತವೆ.ಬೆಳೆಗೆ ಬೇಕಾದ ಪೋಷಕಾಂಶಗಳಲ್ಲಿ ಶೇ 75 ರಷ್ಟನ್ನು ಬಾಹ್ಯ ಮೂಲಗಳು ಒದಗಿಸುತ್ತವೆ. ಇವುಗಳಲ್ಲಿ ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ,ಕಾಂಪೋಸ್ಟ್, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ, ಕೃಷಿ ಅವಲಂಬಿತ ಕೈಗಾರಿಕೆಗಳ ಮತ್ತು ನಗರ ಪ್ರದೇಶದ ತ್ಯಾಜ್ಯವಸ್ತುಗಳ ಗೊಬ್ಬರ, ಎಣ್ಣೆ ಕಾಳುಗಳ ಹಿಂಡಿಗಳು ಮಣ್ಣಿನ ಫಲವತ್ತತೆ ಕಾಪಾಡಿ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣವನ್ನು ಸಂರಕ್ಷಿಸುತ್ತವೆ. ಪ್ರಸಕ್ತ ಕೃಷಿ ಸನ್ನಿವೇಶಕ್ಕೆ ಹಸಿರೆಲೆ ಗೊಬ್ಬರಗಳು ವರದಾನವೆ ಸರಿ.ಸಸ್ಯಗಳ ಎಲೆ, ಕಾಂಡ ಮತ್ತು ಬೇರು ಇವುಗಳ ಮೂಲದಿಂದ ತಯಾರಾಗುವಗೊಬ್ಬರವೇ ಹಸಿರೆಲೆ ಗೊಬ್ಬರ. ಇದರಲ್ಲಿ ಎರಡು ವಿಧ.

* ಬೆಳೆ ಬೆಳೆಯುವ ಮೊದಲು ಜಮೀನಿನಲ್ಲಿ ಹಸಿರೆಲೆ ಗಿಡಗಳನ್ನು ಬೆಳೆದು ಹೂ ಬಿಡುವ ಹಂತದಲ್ಲಿ ಅಲ್ಲಿಯೇ ಅದನ್ನು ಉಳುಮೆಯ ಮೂಲಕ ಮಣ್ಣಿಗೆ ಸೇರಿಸುವುದು. ಉದಾ: ಆಪ್ ಸೆಣುಬು, ಅಲಸಂದೆ, ಹುರುಳಿ ಇತ್ಯಾದಿ.* ಕೃಷಿಗೆ ಯೋಗ್ಯವಲ್ಲದ ಜಮೀನಿನಲ್ಲಿ (ಗೋಮಾಳ, ಅರಣ್ಯ ಪ್ರದೇಶ, ಬದುಗಳ ಮೇಲೆ, ರಸ್ತೆ ಬದಿ) ಬೆಳೆದ ಹಸಿರೆಲೆ ಗಿಡಗಳನ್ನು ಮೃದುವಾದ ಕಾಂಡದ ಸಹಿತ ಮಣ್ಣಿನಲ್ಲಿ ಸೇರಿಸುವುದು.ಉದಾ: ಹೊಂಗೆ, ಗ್ಲಿರಿಸೀಡಿಯಾ, ಎಕ್ಕ, ಸುಬಾಬುಲ್, ಬೇವು, ಇತ್ಯಾದಿ.

ದ್ವಿದಳ ಸಸ್ಯಗಳು ಮತ್ತು ಅದೇ ಪ್ರಕಾರದ ಸಸ್ಯಗಳನ್ನು ಹಸಿರು ಗೊಬ್ಬರವಾಗಿ ಉಪಯೋಗಿಸಬಹುದು.ಆದರೂ ಮಣ್ಣಿನ ವಿಧ, ಅದರ ಗುಣಧರ್ಮ, ನೀರಾವರಿ ಸೌಲಭ್ಯ ಹಾಗೂ ಹಸಿರು ಗೊಬ್ಬರದ ಬೆಳೆ ಬೆಳೆಯಲು ದೊರೆಯುವ ಸಮಯಾವಕಾಶ ಅವಲಂಬಿಸಿ ಯಾವುದೇ ಪ್ರಕಾರದ ಬೆಳೆಯನ್ನು ಗೊಬ್ಬರಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದು.ಹಸಿರು ಗೊಬ್ಬರಕ್ಕೆ ಸಸ್ಟೇನಿಯಾ, ಸೀಮೆ ತಂಗಡಿ, ಕೊಳಂಚಿ, ಕುದುರೆ ಮೆಂತೆ, ಸೆಣಬು, ಹೆಸರು, ಉದ್ದು, ಅಲಸಂದೆ, ಮಡಿಕೆ ಹುರುಳಿ ಮತ್ತು ಹುಲಗಲ ಗಿಡ ಅಥವಾ ಯಾವುದಾದರೂ ಹೆಚ್ಚು ಎಲೆಗಳನ್ನು ಬಿಡುವ ಸ್ಥಳೀಯ ಗಿಡಗಳನ್ನು ಒಡ್ಡು ಅಥವಾ ಬದುಗಳ ಮೇಲೆ ಬೆಳೆಯಬಹುದು.ಖುಷ್ಕಿ ಬೇಸಾಯದಲ್ಲಿ ಆಳವಾದ ಕಪ್ಪು ಜಮೀನಿನಲ್ಲಿ ಸಾವಯವ ಗೊಬ್ಬರ ಒದಗಿಸುವುದು ಕಷ್ಟ. ಆದ್ದರಿಂದ ಆ ಪ್ರದೇಶಕ್ಕೆ ಹೊಂದಿಕೊಳ್ಳುವ ಹಸಿರು ಗೊಬ್ಬರದ ಬೆಳೆಗಳನ್ನು ಬೆಳೆದು, ಹೂ ಬಿಡುವಾಗ ಅಥವಾ ಹೂ ಬಿಡುವ ಮೊದಲೇ ಎಲೆ ಹಾಗೂ ಮೃದು ಕಾಂಡಗಳನ್ನು ಕತ್ತರಿಸಿ ಮಣ್ಣಿನಲ್ಲಿ ಬೆರೆಸುವುದು ಸೂಕ್ತ.ಹಸಿರು ಲಾಭ

* ಹಸಿರೆಲೆ ಗೊಬ್ಬರ ಇನ್ನುಳಿದ ಸಾವಯವ ಗೊಬ್ಬರಗಳಿಗಿಂತ ಅಗ್ಗ.* ಹೊಲದಲ್ಲೇ ಉತ್ಪಾದಿಸುವುದರಿಂದ ಬೇರೆಡೆಯಿಂದ ಹೊಲಕ್ಕೆ ತರುವಲ್ಲಿ ಆಗಬಹುದಾದ ಸಾಗಾಣಿಕೆ ಖರ್ಚು ಇರುವುದಿಲ್ಲ.* ಹಸಿರೆಲೆ ಗೊಬ್ಬರ ಬೆಳೆಯನ್ನು ನೀರಾವರಿಯಲ್ಲಿ ಅಥವಾ 625-750 ಮಿಲಿ ಮಿಟರ್ ಮಳೆ ಬೀಳುವ ಯಾವುದೇ ಪ್ರದೇಶದಲ್ಲಿ ಯಶಸ್ವಿಯಾಗಿ ಬೆಳೆಯಬಹುದು.* ಮುಖ್ಯ ಬೆಳೆ ಬೆಳೆಯುವ ಮೊದಲು ಇಲ್ಲವೇ ಮುಖ್ಯ ಬೆಳೆಯಲ್ಲಿ ಅಂತರ ಬೆಳೆಯಾಗಿ ಬೆಳೆದಾಗ (ಹಸಿರು ಗೊಬ್ಬರದ ಬೆಳೆಯನ್ನು ದಟ್ಟವಾಗಿ ಬಿತ್ತಿರುವುದರಿಂದ) ಕಳೆಗಳು ಈ ಬೆಳೆಗಳೊಂದಿಗೆ ಸ್ಪರ್ಧಿಸಲಾರದೆ ನಾಶ ಹೊಂದುತ್ತವೆ. ಇದರಿಂದ ಕಳೆಗಳ ಬಾಧೆ ತೀರಾ ಕಡಿಮೆಯಾಗುತ್ತದೆ.* ಪ್ರತಿ ಹೆಕ್ಟೇರ್‌ಗೆ ನೀರಾವರಿಯಲ್ಲಿ ಸುಮಾರು 4 ರಿಂದ 5 ಟನ್ ಹಸಿರು ಗೊಬ್ಬರ ದೊರೆಯುತ್ತದೆ. ಇದನ್ನು ಭೂಮಿಗೆ ಸೇರಿಸಿದಾಗ ಹೆಕ್ಟೇರ್‌ಗೆ 60 ರಿಂದ 100 ಕಿಲೊ ಸಾರಜನಕ ಕೊಟ್ಟಂತಾಗುತ್ತದೆ. ಖುಷ್ಕಿಯಲ್ಲಿ ಸಿಗುವ 1 ರಿಂದ 1.5 ಟನ್ ಹಸಿರು ಗೊಬ್ಬರ ಭೂಮಿಗೆ ಸೇರಿಸಿದರೆ 15 ರಿಂದ 25 ಕಿಲೊ ಸಾರಜನಕಕ್ಕೆ ಸಮ. ಹೀಗಾಗಿ ಹಸಿರೆಲೆ ಗೊಬ್ಬರವನ್ನು ಬೆಳೆ ಪದ್ಧತಿಯಲ್ಲಿ ಅಳವಡಿಸಿಕೊಂಡಾಗ ಮುಂದಿನ ಬೆಳೆಗೆ ಇಲ್ಲವೇ ಸಂಗಾತಿ ಬೆಳೆಗೆ ಶಿಫಾರಸ್ಸು ಮಾಡಿದ ಸಾರಜನಕದ ಶೇ 50 (ನೀರಾವರಿಯಲ್ಲಿ ) ಹಾಗೂ ಶೇ 25 ರಷ್ಟನ್ನು (ಖುಷ್ಕಿಯಲ್ಲಿ) ಕಡಿಮೆ ಕೊಡಬಹುದು.* ಹಸಿರು ಗೊಬ್ಬರಗಳನ್ನು ಭೂಮಿಗೆ ಸೇರಿಸಿದಾಗ ಸೂಕ್ಷ್ಮಾಣು ಜೀವಿಗಳಿಗೆ ಆಹಾರ ದೊರೆತು ಅವುಗಳ ಸಂಖ್ಯೆ ಮತ್ತು ಚಟುವಟಿಕೆ ವೃದ್ಧಿಗೊಳ್ಳುತ್ತದೆ. ಈ ಸಂದರ್ಭದಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೆಚ್ಚು ಬಿಡುಗಡೆಯಾಗಿ ಮಣ್ಣಿನಲ್ಲಿ ಲಭ್ಯವಿರುವ ತೇವಾಂಶದೊಂದಿಗೆ ಸೇರಿ ರಾಸಾಯನಿಕ ಕ್ರಿಯೆಯಿಂದ ಕೆಲವು ಆಮ್ಲಗಳು ಉತ್ಪತ್ತಿಯಾಗುತ್ತವೆ.

 

ಇವು ಭೂಮಿಯಲ್ಲಿ ಅಲಭ್ಯ ಸ್ಥಿತಿಯಲ್ಲಿರುವ ರಂಜಕಾಂಶಗಳನ್ನು ರೂಪಾಂತರಿಸಿ ನೇರವಾಗಿ ಬೆಳೆಗೆ ಸಿಗುವಂತೆ ಮಾಡುತ್ತವೆ. ಅದೇ ರೀತಿ ಸುಣ್ಣದ ಇನ್ನಿತರ ಪೋಷಕಾಂಶಗಳು ಸುಲಭವಾಗಿ ಸಸ್ಯಗಳಿಗೆ ದೊರೆಯುತ್ತವೆ.* ಮರಳು ಮಿಶ್ರಿತ ಜಮೀನಿನಲ್ಲಿ ಹಸಿರು ಗೊಬ್ಬರ ಸಂಪೂರ್ಣವಾಗಿ ಕಳಿತ ಬಳಿಕ ಹ್ಯೂಮಸ್ ಎನ್ನುವ ಪದಾರ್ಥವಾಗಿ ರೂಪುಗೊಂಡು ಮಣ್ಣಿನ ಕಣಗಳನ್ನು ಒಂದಕ್ಕೊಂದು ಬೆಸೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದರಿಂದ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಇಂತಹ ಮಣ್ಣಿನಲ್ಲಿ ಹೆಚ್ಚಾಗುತ್ತದೆ.* ಜೇಡಿ ಮಣ್ಣಿನಲ್ಲಿ (ಕಪ್ಪು ಭೂಮಿ) ಈ ಬೆಳೆಗಳನ್ನು ಬೆಳೆದಾಗ ಮಣ್ಣಿನ ಭೌತಿಕ ಗುಣಮಟ್ಟ ಸುಧಾರಿಸಿ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಮತ್ತು ಬಸಿಯುವಿಕೆ ಪ್ರಮಾಣ ಹೆಚ್ಚಾಗುತ್ತದೆ.ಕ್ಷಾರ ಜಮೀನಿನಲ್ಲಿಯ ಬೆಳೆಗಳ ಬೆಳವಣಿಗೆಗೆ ಧಕ್ಕೆ ತರುವ ಲವಣಗಳು ಆಳಕ್ಕೆ ಬಸಿದು ಹೋಗುವುದರಿಂದ ಮಣ್ಣಿನ ಗುಣಧರ್ಮ ಸುಧಾರಿಸುತ್ತದೆ.* ಹಸಿರು ಗೊಬ್ಬರದ ಬೆಳೆಗಳು ಭೂಮಿಯ ಕೆಳ ಪದರಿನಿಂದ ಪೋಷಕಾಂಶಗಳನ್ನು ಹೀರಿಕೊಂಡು ಮೇಲ್ಪದರಗಳಲ್ಲಿ ಸಂಗ್ರಹಿಸುತ್ತವೆ. ಇದರಿಂದ ಈ ಪೋಷಕಾಂಶಗಳು ಮುಂದಿನ ಬೆಳೆಗೆ ಸುಲಭವಾಗಿ ಸಿಗುತ್ತವೆ. ಮಾಹಿತಿಗೆ: 98805 45995.

ಡಾ. ಎಸ್. ಬಿ. ಯೋಗಾನಂದ ಮತ್ತು ಡಾ. ತಿಮ್ಮೇಗೌಡ. ಎಂ. ಎನ್

(ವಲಯ ಕೃಷಿ ಸಂಶೋಧನಾ ಕೇಂದ್ರ, ವಿ. ಸಿ. ಫಾರಂ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry