ಗುರುವಾರ , ಮೇ 13, 2021
16 °C

ಹಸಿವಿನಿಂದ ಯಾರೂ ಸಾಯಬಾರದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದಲ್ಲಿ ಹಸಿವು ಇಲ್ಲವೇ ಅಪೌಷ್ಠಿಕತೆಯಿಂದ ಯಾರೊಬ್ಬರೂ ಸಾಯಬಾರದು. ಬಡವರಿಗೆ ಆಹಾರ ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸುಪ್ರಿಂ ಕೋರ್ಟ್ ಸೂಚನೆ ನೀಡಿದೆ.ಪಡಿತರ ವ್ಯವಸ್ಥೆ ಮೂಲಕ ಅರ್ಹ ವ್ಯಕ್ತಿಗಳಿಗೆ ಸೂಕ್ತ ರೀತಿಯಲ್ಲಿ ಅಹಾರಧಾನ್ಯಗಳನ್ನು ವಿತರಣೆ ಮಾಡಬೇಕು. ಜತೆಗೆ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಕಳ್ಳತನ ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ದಲ್ವೀರ್ ಭಂಡಾರಿ ಮತ್ತು ದೀಪಕ್ ವರ್ಮಾ ಅವರನ್ನು ಒಳಗೊಂಡ ಪೀಠ ತಾಕೀತು ಮಾಡಿದೆ.ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವ ಪೀಠ, ಎರಡು ವಾರಗಳಲ್ಲಿ ತಮ್ಮ ತಮ್ಮ ರಾಜ್ಯಗಳಿಗೆ ಅಗತ್ಯ ಇರುವ ಪಡಿತರ ಧಾನ್ಯಗಳ ಕುರಿತು ವರದಿ ಸಲ್ಲಿಸುವಂತೆಯೂ ಹೇಳಿದೆ.

ಒಂದೊಮ್ಮೆ ಎರಡು ವಾರದಲ್ಲಿ ರಾಜ್ಯ ಸರ್ಕಾರಗಳು ಹೆಚ್ಚುವರಿ ಪಡಿತರ ಧಾನ್ಯಗಳಿಗೆ ಬೇಡಿಕೆ ಸಲ್ಲಿಸದೇ ಇದ್ದರೆ, ಅವರಲ್ಲಿ ಸಾಕಷ್ಟು ದಾಸ್ತಾನು ಇದೆ ಎಂದು ಭಾವಿಸಬೇಕಾಗುತ್ತದೆ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸಾಕಷ್ಟು ಕಳ್ಳತನ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ.

ಇದನ್ನು ನಿಯಂತ್ರಿಸಲು ಎಲ್ಲಾ ಪಡಿತರ ಅಂಗಡಿಗಳನ್ನೂ ಕಂಪ್ಯೂಟರೀಕರಣಗೊಳಿಸುವ ಅಗತ್ಯ ಇದೆ ಎಂದೂ ನ್ಯಾಯಪೀಠ ಹೇಳಿತು.ಪಡಿತರ ವ್ಯವಸ್ಥೆಯಲ್ಲಿ ಸಾಕಷ್ಟು ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಸರ್ಕಾರಗಳಿಗೆ ಸೂಚಿಸುವಂತೆ ಕೋರಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (ಪಿಯುಸಿಎಲ್) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ಕೋರ್ಟ್ ಈ ಆದೇಶ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.