ಸೋಮವಾರ, ಮಾರ್ಚ್ 1, 2021
30 °C

ಹಸಿವು, ಪುಡಿಗಾಸು ಸಂಬಳದ ನಡುವೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಸಿವು, ಪುಡಿಗಾಸು ಸಂಬಳದ ನಡುವೆ...

ಕಳೆದ ಕೆಲವು ವರ್ಷಗಳಿಂದೀಚೆಗೆ ವಿವಿಧ ಜಿಲ್ಲೆಗಳಲ್ಲಿ ಮಲಹೊರುವ ಪದ್ಧತಿಯ ಅಸ್ತಿತ್ವದಲ್ಲಿ ತಮ್ಮ ಇರುವಿಕೆಯನ್ನು ಸ್ಪಷ್ಟಪಡಿಸುತ್ತ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿರುವ ರಾಜ್ಯದ ದಲಿತರು ರಾಜಧಾನಿ ಬೆಂಗಳೂರಿನಲ್ಲೂ ಇರುವುದು ಚೋದ್ಯವೇನೂ ಅಲ್ಲ. ಜಿಲ್ಲೆಯಿಂದ ಜಿಲ್ಲೆಗೆ ಒಂದರ ಹಿಂದೊಂದರಂತೆ ಬಯಲಿಗೆ ಬಂದ ಈ ಬರ್ಬರ ಪದ್ಧತಿಯ ಅಸ್ತಿತ್ವದ ಕಾರಣಕ್ಕೆ ರಾಜ್ಯ ಸರ್ಕಾರವು ಹತ್ತಾರು ಬಾರಿ ನ್ಯಾಯಾಲಯಗಳಲ್ಲಿ ಛೀಮಾರಿ ಹಾಕಿಸಿಕೊಂಡಿದೆ.ಆದರೂ ತನ್ನ ಎಂದಿನ ಎಮ್ಮೆಚರ್ಮದ ಧೋರಣೆಯಿಂದಾಗಿ ಈ ಪದ್ಧತಿಯ ನಿರ್ಮೂಲನೆಗೆ ಕಟಿಬದ್ಧವಾಗದೆ ತೇಪೆ ಹಾಕುವ ಕೆಲಸವನ್ನಷ್ಟೇ ಮಾಡಿಕೊಂಡು ಬಂದಿದೆ. ಹೀಗಾಗಿ ಮಲ ಹೊರುವ ಪದ್ಧತಿ ಸರ್ಕಾರಿ ಇಲಾಖೆಯ ಮೂಗಿನಡಿಯಲ್ಲೇ ರಾಜಧಾನಿಯಲ್ಲಿ ನಡೆಯುತ್ತಲೇ ಇದೆ.ರಾಜ್ಯದ ಮೂಲೆ ಮುಡುಕುಗಳೆಲ್ಲೆಡೆಯೂ ಅಸ್ತಿತ್ವದಲ್ಲಿರುವ ಮಲ ಹೊರುವ, ಶೌಚಗುಂಡಿ ಸ್ವಚ್ಛಗೊಳಿಸುವ, ಕಕ್ಕಸ್ಸು ಗುಂಡಿಯೊಳಗಿಳಿದು ಬರಿಗೈನಿಂದ ಮಲವನ್ನು ಎತ್ತಿಹಾಕುವ ಮಲ ಹೊರುವ ಪದ್ಧತಿ ರಾಜಧಾನಿಯನ್ನು ಮಾತ್ರ ಬಿಟ್ಟೀತೇ? ನಗರದ ಪ್ರಮುಖ ಭಾಗಗಳಲ್ಲಿಯೇ ಮ್ಯೋನ್‌ಹೋಲ್‌ನೊಳಗೆ ಇಳಿದು ಗುಂಡಿ ಸ್ವಚ್ಛ ಮಾಡುವ, ಮಹಾನಗರದ ಅಂಚಿನ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲದ ಪ್ರದೇಶಗಳಲ್ಲಿ ಇವತ್ತಿಗೂ ರಾಚುತ್ತಿದೆ. ಎಲ್ಲರೂ ಹೇಳುವಂತೆ ಇದೇ ಕೆಲಸಕ್ಕೆ ಈ ಜನರು ಏಕೆ ಕಟ್ಟುಬಿದ್ದಿದ್ದಾರೆ, ಬೇರೆ ಇನ್ಯಾವ ಕೆಲಸಗಳೂ ಇವರಿಗೆ ಸಿಗುವುದಿಲ್ಲವೇ? ಗುಂಡಿಯೊಳಗಿಳಿದು ಮಲ ಬಳಿಯುವಂತಹ ಕೆಲಸ ಇವರಿಗೇಕೆ?

ಮಲ ಬಳಿಯುವುದನ್ನು ದಲಿತರೇ ಬಹಿಷ್ಕರಿಸಿ ಪ್ರಧಾನ ವಾಹಿನಿಯೊಳಗೆ ಬೆರೆಯಲು ಸಾಧ್ಯವಾಗುವುದಿಲ್ಲವೇ? ಈ ಮಲಹೊರುವ ಪದ್ಧತಿಯ ಅಸ್ತಿತ್ವಕ್ಕೂ ಮೇಲೆ ಉಲ್ಲೇಖಿಸಿದ ಎರಡು ವರ್ಗಕ್ಕೂ ನೇರಾನೇರ ಸಂಬಂಧಗಳಿವೆ.ಮಲದಗುಂಡಿ ಸ್ವಚ್ಛಗೊಳಿಸುವ ಕೆಲಸದಲ್ಲಿ ಅತ್ಯಂತ ಹೆಚ್ಚಿನ ಅಂದರೆ 98 ಪ್ರತಿಶತದಷ್ಟು ತೊಡಗಿಕೊಂಡಿರುವುದು ಮಾದಿಗ ಸಮುದಾಯ. ಇದೇ ಸಮುದಾಯವು ಬೆಂಗಳೂರಿನ ಜಲಮಂಡಲಿಯಲ್ಲಿ ಒಳಚರಂಡಿ ಗುತ್ತಿಗೆ ಕಾರ್ಮಿಕರಾಗಿಯೂ, ಬಿಬಿಎಂಪಿಯಲ್ಲಿ ಗುತ್ತಿಗೆ ಪೌರಕಾರ್ಮಿಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಮಂದಿಗೆ ಸರ್ಕಾರದಿಂದ ಅಧಿಕೃತ ದಿನಗೂಲಿ ವೇತನವೆಂದು ನಿಗದಿಪಡಿಸಿದ ವೇತನವೇ ಒಂದು. ಗುತ್ತಿಗೆದಾರರೆಂಬ ದಲ್ಲಾಳಿ ವ್ಯವಸ್ಥೆಯ ಮೂಲಕ ಇವರ ಕೈಗೆ ಸಿಗುತ್ತಿರುವ ವೇತನ ಮಾತ್ರ 1800 ರೂ.ಗಳಿಂದ 2300 ಅಷ್ಟೇ.ಎಷ್ಟು ಹೋರಾಟ, ಮನವಿ, ಬೇಡಿಕೆ ಸಲ್ಲಿಸಿದರೂ ಕೋಣದೆದುರು ಕಿನ್ನರಿವಾದನವಾದ ಪರಿಣಾಮ ತಮ್ಮ ಬದುಕು ಕಟ್ಟಿಕೊಳ್ಳಲು, ತುತ್ತಿನ ಜೋಳಿಗೆ ತುಂಬಿಸಿಕೊಳ್ಳಲು ಈ ಪೌರಕಾರ್ಮಿಕರು ಕಂಡುಕೊಂಡ ಹೊಸದಾರಿಯೇ ಕಕ್ಕಸುಗುಂಡಿ ಸ್ವಚ್ಛಗೊಳಿಸುವ ಕಾರ್ಯ. ಎಂದಾದರೊಂದು ದಿನ ನಮ್ಮ ಕೆಲಸ ಕಾಯಮ್ಮೋಗಬಹುದೆಂಬ ಬಿಸಿಲುಗುದುರೆಯ ಬೆನ್ನೇರಿದ ಈ ಗುತ್ತಿಗೆ ಕಾರ್ಮಿಕರು ಕಡಿಮೆ ಸಂಬಳದ ಈ ಕೆಲಸವನ್ನು ಬಿಡಲೊಲ್ಲರು.ಗೋರಿಪಾಳ್ಯ, ಲಾಲ್‌ಬಾಗ್ ಹಿಂದಿರುವ ಸಿದ್ದಾಪುರ, ಶ್ರಿರಾಮನಗರ, ಸುಧಾಮನಗರಗಳ ಆಸುಪಾಸಿನಲ್ಲಿ ಹೆಗಲಮೇಲೆ ಬಿದಿರುಕೋಲುಗಳನ್ನು ಹೇರಿಕೊಂಡ ಖಾಕಿ ದಿರಿಸು ಧರಿಸಿದ ಮಂದಿ ನಿಮ್ಮ ಕಣ್ಣಿಗೆ ಕಂಡರೆ ಅವರು ಹತ್ತಿರದಲ್ಲೆಲ್ಲೋ ಅಧಿಕೃತವಾಗಿಯೇ ಮ್ಯೋನ್‌ಹೋಲ್ ಒಳಗಿಳಿಯಲು ಮತ್ತು ಅನಧಿಕೃತವಾಗಿ ಕಕ್ಕಸ್ಸುಗುಂಡಿಯ ಸ್ವಚ್ಛತೆಗೆ ಹೊರಟಿದ್ದಾರೆಂಬುದು ಸ್ಪಷ್ಟ.`ಮೈಮೇಲೆ ಖಾಕಿ ದಿರಿಸು, ಅದರ ಮೇಲೆ ಜಲಮಂಡಲಿ ಮತ್ತು ಬಿಬಿಎಂಪಿ ಎಂಬ ಎರಡು ಹೆಸರಿದ್ದರೆ ಸಾಕು ಸಾರ್, ಮಲದಗುಂಡಿ ಕಟ್ಟಿಕೊಂಡವರು ತಾವೇ ಬಂದು ಗುಂಡಿ ಸ್ವಚ್ಛ ಮಾಡಿಕೊಡಿ ಎಂದು ಕೇಳುತ್ತಾರೆ. ನಾವು 3-4 ಮಂದಿ ಹೋಗಿ ರಾತ್ರಿವೇಳೆ ಸ್ವಚ್ಛ ಮಾಡಿಕೊಟ್ಟು ಬರುತ್ತೇವೆ. ಸರ್ಕಾರದ ಎರಡುಸಾವಿರ ಸಂಬಳದಲ್ಲಿ ಬದುಕೋಕಾದರೂ ಆಗುತ್ತ ಸಾರ್, ಹೇಸಿಗೆ ಆಗತ್ತೆ, ಮೈಗೆ ಹೊಲಸು ಮೆತ್ತಿಕೊಳ್ಳುತ್ತೆ ಅಂತ ಕೂತರೆ ಕರುಳಿಗೆ ಏನು ಕೊಡೋದು? ಬದುಕಬೇಕಲ್ಲ ಸಾರ್ ಇವೆಲ್ಲ ಮಾಡಲೇಬೇಕು, ಸಂಬಳ ಜಾಸ್ತಿ ಕೊಟ್ಟರೆ ನಾವ್ಯಾಕೆ ಸಾರ್ ಇಂಥ ಹೊಲಸು ಕೆಲಸ ಮಾಡ್ತೀವಿ?~ ಎನ್ನುತ್ತಾರೆ ಜಲಮಂಡಲಿಯ ಒಳಚರಂಡಿ ಕಾರ್ಮಿಕರೊಬ್ಬರು.ಈ ಎರಡೂ ಸಂಸ್ಥೆಗಳ ಗುತ್ತಿಗೆ ಪೌರಕಾರ್ಮಿಕರು ಬೆಂಗಳೂರು ಸುತ್ತಮುತ್ತಲಿನ ಹೊರವಲಯಗಳಿಗೆ ವಾರಕ್ಕೆ ಒಂದೆರಡು ಬಾರಿಯಾದರೂ ರಾತ್ರಿವೇಳೆ ಕಕ್ಕಸುಗುಂಡಿ ಸ್ವಚ್ಛಗೊಳಿಸುವ ಕೆಲಸ ಹಿಡಿದು ಜೀವವನ್ನು ಅಪಾಯದ ಬಾಯಿಗೊಡ್ಡಿ ಮಲದಗುಂಡಿಗಳೊಳಗೆ ಇಳಿಯುತ್ತಾರೆ. ಸಮಾಜಕಲ್ಯಾಣ ಸಚಿವರ ತವರೂರಾದ ಆನೇಕಲ್‌ನಲ್ಲಿಯೇ ಅಲ್ಲಿಯ ಪುರಸಭೆಯ ಗುತ್ತಿಗೆ ಪೌರಕಾರ್ಮಿಕರು ಸುತ್ತಮುತ್ತಲಿನ ಹಳ್ಳಿಗಳಾದ ದೊಡ್ಡಿಗಾಳು, ಭದ್ರಾಪುರ, ಪಾಳ್ಯ ಗ್ರಾಮಗಳಿಗೆ ತೆರಳಿ ಊರವರ ಕಕ್ಕಸುಗುಂಡಿಗಳನ್ನು ಕೈಯಿಂದ ಬಳಿದು ಬರುವ ಘೋರತೆಯೂ ರಾಜಧಾನಿಯ ಹೊಕ್ಕಳುಪ್ರದೇಶಗಳೊಳಗಿದೆ. ಎಲ್ಲಿಯವರೆಗೆ ನಗರದ ಹೊರವಲಯ ಪ್ರದೇಶಗಳಲ್ಲಿ ಒಳಚರಂಡಿ ಸೌಲಭ್ಯ ಲಭ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಕಕ್ಕಸುಗುಂಡಿ ತುಂಬಿಕೊಂಡ ಮನೆಯ ಜನ ಗುತ್ತಿಗೆ ಪೌರಕಾರ್ಮಿಕರನ್ನು ಕರೆದೊಯ್ಯುತ್ತಲೇ ಇರುತ್ತಾರೆ, ಎಲ್ಲಿಯವರೆಗೆ ಗುತ್ತಿಗೆ ಪೌರಕಾರ್ಮಿಕರ ಸಂಬಳ ಜಾಸ್ತಿಯಾಗುವುದಿಲ್ಲವೋ ಅಲ್ಲಿಯವರೆಗೆ ಈ ದಲಿತರು ಕಕ್ಕಸುಗುಂಡಿಗಳತ್ತ ಬರಿಗೈಗಳೊಡನೆ ನಡೆಯುತ್ತಲೇ ಇರುತ್ತಾರೆ!

ಲೇಖಕರಲ್ಲಿ ಒಬ್ಬರಾದ ಟಿ.ಕೆ.ದಯಾನಂದ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಸಾಮಾಜಿಕ ಪ್ರತ್ಯೇಕತೆಯ ಮತ್ತು ಒಳಗೊಳ್ಳುವಿಕೆಯ ಅಧ್ಯಯನ ಕೇಂದ್ರದ ಸಂಶೋಧಕರು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.