ಹಸಿ ಕಸ ಸಂಸ್ಕರಣೆ: ರೈತರಿಗೆ ಅವಕಾಶ

7

ಹಸಿ ಕಸ ಸಂಸ್ಕರಣೆ: ರೈತರಿಗೆ ಅವಕಾಶ

Published:
Updated:

ಬೆಂಗಳೂರು: ಜಮೀನಿನಲ್ಲಿ ಹಸಿ ಕಸ ಸಂಸ್ಕರಣೆ ಮಾಡುವ ರೈತರಿಗೆ ಪ್ರತಿ ಟನ್‌ಗೆ 66 ರೂಪಾಯಿ ಸಂಸ್ಕರಣ ವೆಚ್ಚ ನೀಡಲು ಪಾಲಿಕೆ ನಿರ್ಧರಿಸಿದೆ.ಪಾಲಿಕೆಯ ಎಲ್ಲಾ ವಾರ್ಡ್‌ಗಳಲ್ಲಿ ಕಸ ವಿಂಗಡಣೆಯನ್ನು ಕಡ್ಡಾಯಗೊಳಿಸಲಾಗಿದ್ದು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಈ ರೀತಿ ಸಂಗ್ರಹಿಸಲಾದ ಒಣ ಕಸವನ್ನು ಆಯಾ ವಾರ್ಡಿನ ಕಸ ವಿಂಗಡಣೆ ಘಟಕದಲ್ಲಿ ಪ್ರತ್ಯೇಕಿಸಲಾಗುತ್ತಿದೆ. ಹಸಿ ಕಸವನ್ನು ರೈತರಿಗೆ ನೀಡಿ, ತಮ್ಮ ಜಮೀನಿನಲ್ಲಿ ಸಂಸ್ಕರಣೆ ಮಾಡಲು ಸಂಸ್ಕರಣ ವೆಚ್ಚ ನೀಡಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಡಾ. ರಜನೀಶ್ ಗೋಯಲ್ ತಿಳಿಸಿದ್ದಾರೆ.ಬೆಂಗಳೂರು ನಗರ ಜಿಲ್ಲೆಯ 100 ಕಿ.ಮೀ. ವ್ಯಾಪ್ತಿಯ ರೈತರಿಗೆ ಈ ಯೋಜನೆ ಅನ್ವಯವಾಗಲಿದೆ. ಇಚ್ಛೆಯುಳ್ಳ ರೈತರು ಪ್ರತಿ ಎಕರೆಗೆ 20 ಟನ್‌ಗಳಷ್ಟು ಹಸಿ ಕಸವನ್ನು ಸ್ವೀಕರಿಸಿ, ಅದನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತನೆ ಮಾಡಬಹುದು. ಪಾಲಿಕೆಯ ವಾಹನಗಳಲ್ಲಿ ಹಸಿ ಕಸವನ್ನು ರೈತರ ಜಮೀನಿಗೆ ಸಾಗಿಸುವ ಜವಾಬ್ದಾರಿ ಸಹ ಪಾಲಿಕೆಯದ್ದೇ ಆಗಿರುತ್ತದೆ ಎಂದು ಅವರು ವಿವರಿಸಿದ್ದಾರೆ.ಆಸಕ್ತಿಯುಳ್ಳ ರೈತರು, ದೂರವಾಣಿ ಸಂಖ್ಯೆ, ತಮ್ಮ ಜಮೀನಿನ ಆರ್.ಟಿ.ಸಿ. ಪತ್ರದ ನಕಲು ಪ್ರತಿ, ಬೆಂಗಳೂರು ನಗರದಿಂದ ಜಮೀನಿಗೆ ಇರುವ ಅಂದಾಜು ದೂರ (ಕಿ.ಮೀ.ಗಳಲ್ಲಿ), ಸ್ವೀಕರಿಸಲಾಗುವ ಹಸಿ ತ್ಯಾಜ್ಯದ ಪ್ರಮಾಣ (ಟನ್‌ಗಳಲ್ಲಿ) ಮೊದಲಾದ ವಿವರಗಳೊಂದಿಗೆ ಅರ್ಜಿಯನ್ನು ಮುಖ್ಯ ಎಂಜಿನಿಯರ್ (ಘನತ್ಯಾಜ್ಯ ನಿರ್ವಹಣೆ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಆವರಣ, ಎನ್.ಆರ್. ಚೌಕ, ಬೆಂಗಳೂರು-02 ಈ ವಿಳಾಸಕ್ಕೆ ಕಳುಹಿಸಬಹುದು. ವಿವರಗಳಿಗೆ 080-22221188 ಈ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry