ಹಸಿ ಮೆಣಸಿನಕಾಯಿಗೆ ಉತ್ತಮ ಬೆಲೆ: ಮಂದಹಾಸ
ಚಿಂಚೋಳಿ: ಹಸಿಮೆಣಸಿನಕಾಯಿಗೆ ಉತ್ತಮ ಬೆಲೆ ದೊರೆಯುತ್ತಿರುವುದರಿಂದ ಬೆಳೆಗಾರರು ಖುಷಿಯಿಂದ ಬೀಗುವಂತಾಗಿದೆ.
ಸಗಟು ಮಾರಾಟದಲ್ಲಿ ಪ್ರತಿ ಕ್ವಿಂಟಾಲ್ಗೆ 4 ಸಾವಿರ ರೂ. ಹಾಗೂ ಚಿಲ್ಲರೆ ಮಾರಾಟದಲ್ಲಿ ರೂ.5 ಸಾವಿರದಿಂದ 6 ಸಾವಿರದ ವರೆಗೆ ಬೆಲೆ ದೊರೆಯುತ್ತಿರುವುದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ರೈತರು ಹಸಿಮೆಣಸಿನಕಾಯಿ ಗಿಡಗಳಿಂದ ಕೀಳಿ ಚೀಲಗಳಲ್ಲಿ ತುಂಬಿಕೊಂಡು ಮಾರುಕಟ್ಟೆ ಅಥವಾ ತರಕಾರಿ ಅಂಗಡಿಗೆ ಕೊಂಡೊಯ್ಯಬೇಕಾಗಿತ್ತು. ಆಗ ಅವರು ಕೊಟ್ಟಷ್ಟು ಬೆಲೆಗೆ ಮಾರಾಟ ಮಾಡಿ ಬರುವುದು ಸಾಮಾನ್ಯವಾಗಿತ್ತು.
ಆದರೆ ಈಗ ಹಸಿ ಮೆಣಸಿನಕಾಯಿಗೆ ಅಭಾವ ಎದುರಾಗಿದ್ದರಿಂದ ರೈತರ ಹೊಲಗಳಲ್ಲಿ ವಿರಳವಾಗಿ ಮೆಣಸಿನಕಾಯಿ ಕಂಡು ಬರುತ್ತಿದೆ.
ಹೀಗಾಗಿ ವ್ಯಾಪಾರಿಗಳೇ ರೈತರ ಹೊಲಗಳಿಗೆ ಹೋಗಿ ಖರೀದಿಸಿ ತರುತ್ತಿದ್ದಾರೆ. ವ್ಯಾಪಾರಿಗಳೇ ತೋಟಕ್ಕೆ ಆಗಮಿಸಿ 4 ಸಾವಿರ ರೂ.ಗೆ ಕ್ವಿಂಟಾಲ್ ದರದಲ್ಲಿ ಹಸಿ ಮೆಣಸಿನಕಾಯಿ ಖರೀದಿಸುವುದಾಗಿ ಕೇಳಿ ಹೋಗಿದ್ದಾರೆ ಎನ್ನುತ್ತಾರೆ, ಮೆಣಸಿನಕಾಯಿ ಬೆಳೆಗಾರ ಚಿಮ್ಮಾಈದಲಾಯಿ ಗ್ರಾಮದ ಶಿವರಾಜ ಚಟ್ನಳ್ಳಿ.
ಚಿಂಚೋಳಿ ಪಟ್ಟಣದ ತರಕಾರಿ ಅಂಗಡಿಗಳಲ್ಲಿ 50 ರೂ.ಗೆ ಕೆಜಿ ಬೆಲೆ ಇದ್ದರೆ, ವಾರದ ಸಂತೆಯ ದಿನವಾದ ಬುಧವಾರ 80 ರೂ.ಗೆ ಕೆ.ಜಿ. ಮೆಣಸಿನಕಾಯಿ ಮಾರಾಟವಾಗಿದೆ.
ತರಕಾರಿ ಬೆಲೆ ಹೆಚ್ಚಾದರೂ ಬೆಳೆಗಾರನಿಗಿಂತಲೂ ಮಾರಾಟಗಾರನಿಗೆ ಅಧಿಕ ಲಾಭ ದೊರೆಯುತ್ತದೆ. ಕಡಿಮೆ ಹಣಕ್ಕೆ ತರಕಾರಿ ಖರೀದಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವುದು ತರಕಾರಿ ವ್ಯಾಪಾರಿಗಳ ನೀತಿಯಾಗಿದೆ.
ಮೆಣಸಿನಕಾಯಿ ಬೇಸಾಯದಲ್ಲಿ ರೈತರಿಗೆ ಹೆಚ್ಚಿನ ಬೆಲೆ ದೊರೆಯುತ್ತಿರುವುದರಿಂದ ಇತರ ತರಕಾರಿಗಳಿಗಿಂತ ಮೆಣಸಿನಕಾಯಿ ಬೇಸಾಯ ಉತ್ತಮ ಎನ್ನುವಂತಾಗಿದೆ. ತರಕಾರಿಯಂತೆ ಮನೆ ಮನೆಗೆ ತೆರಳಿ ಚಿಲ್ಲರೆಯಾಗಿ ರೈತರೇ ಹಸಿ ಮೆಣಸಿನಕಾಯಿ ಮಾರಾಟ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಪಡೆಯಬಹುದಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.