ಶುಕ್ರವಾರ, ನವೆಂಬರ್ 15, 2019
26 °C

ಹಸುಗೂಸು ಸಾವು: ದೂರು

Published:
Updated:

ಬೆಂಗಳೂರು: ಗಂಗಮ್ಮನಗುಡಿ ಬಳಿಯ ಕುವೆಂಪುನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದು ಮನೆಗೆ ಮರಳಿದ 55 ದಿನದ ಶಿಶು ಶುಕ್ರವಾರ ಸಾವನ್ನಪ್ಪಿದೆ. ಶಿಶುವಿನ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆ ಮಾಡಬೇಕು ಎಂದು ಒತ್ತಾಯಿಸಿ ಪೋಷಕರು ಗಂಗಮ್ಮನಗುಡಿ ಠಾಣೆಗೆ ಶನಿವಾರ ದೂರು ಕೊಟ್ಟಿದ್ದಾರೆ.`ಮಗುವಿಗೆ ಕುವೆಂಪುನಗರದಲ್ಲಿರುವ ಆರೋಗ್ಯ ಕೇಂದ್ರದಲ್ಲೇ ಲಸಿಕೆ ಹಾಕಿಸುತ್ತಿದ್ದೆವು. ಹೀಗಾಗಿ ಗುರುವಾರ ಮಧ್ಯಾಹ್ನ ಕೂಡ ಮಗುವನ್ನು ಅದೇ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದೆ. ಅಲ್ಲಿನ ಶುಶ್ರೂಷಕಿ ಮಗುವಿಗೆ ಲಸಿಕೆ ಹಾಕಿ ಕಳುಹಿಸಿದ್ದರು' ಎಂದು ಮಗುವಿನ ತಾಯಿ ರಮ್ಯ ಹೇಳಿದರು.`ಮನೆಗೆ ವಾಪಸ್ ಬಂದಾಗ ಮಗು ಲವಲವಿಕೆಯಿಂದಲೇ ಆಟವಾಡುತ್ತಿತ್ತು. ಆದರೆ, ಸಂಜೆ ವೇಳೆಗೆ ಎದೆಹಾಲು ಕುಡಿಯಲು ನಿರಾಕರಿಸಿತು. ಒತ್ತಾಯ ಮಾಡಿ ಕುಡಿಸಿದಾಗ ವಾಂತಿ ಮಾಡಲಾರಂಭಿಸಿತು. ನೋಡನೋಡುತ್ತಲೇ ಅಳು ನಿಲ್ಲಿಸುತ್ತಾ ಕಣ್ಣು ಮುಚ್ಚಿತು. ಅಲ್ಲದೇ, ಕೈಕಾಲುಗಳು ಕೂಡ ಶಕ್ತಿ ಕಳೆದುಕೊಂಡವು. ಕೂಡಲೇ ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದರು' ಎಂದು ರಮ್ಯ ಕಣ್ಣೀರಿಟ್ಟರು.`ಆರೋಗ್ಯ ಕೇಂದ್ರದ ಸಿಬ್ಬಂದಿಯಿಂದ ಮಗು ಸಾವನ್ನಪ್ಪಿದೆ ಎಂದು ನಾವು ಆರೋಪಿಸುತ್ತಿಲ್ಲ. ಮಗುವಿನ ಸಾವಿಗೆ ಕಾರಣ ಗೊತ್ತಾಗಬೇಕು. ಹೀಗಾಗಿ, ದೂರು ಕೊಟ್ಟಿದ್ದೇನೆ' ಎಂದು ಮಗುವಿನ ತಂದೆ ಶಿವಾಜಿರಾವ್ ಹೇಳಿದರು.`ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ನಂತರ ವಾಸ್ತವ ಗೊತ್ತಾಗಲಿದೆ' ಎಂದು ಇನ್‌ಸ್ಪೆಕ್ಟರ್ ಎಚ್.ನಾಗರಾಜ್ ತಿಳಿಸಿದರು. ಖಾಸಗಿ ಕಂಪೆನಿಯ ನೌಕರ ಶಿವಾಜಿರಾವ್, ಒಂದೂವರೆ ವರ್ಷದ ಹಿಂದೆ ರಮ್ಯ ಅವರನ್ನು ವಿವಾಹವಾಗಿದ್ದರು. ದಂಪತಿ ವಿದ್ಯಾರಣ್ಯಪುರದ ಸಿಂಗಪುರ ಲೇಔಟ್‌ನಲ್ಲಿ ವಾಸವಾಗಿದ್ದಾರೆ.

ಪ್ರತಿಕ್ರಿಯಿಸಿ (+)