ಶನಿವಾರ, ಮೇ 21, 2022
25 °C

ಹಸೆಮಣೆ ಏರಿದ ವರುಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ವಾರಾಣಸಿ (ಪಿಟಿಐ): ನೆಹರು ಕುಟುಂಬದ ಯುವ ಕುಡಿ  ಹಾಗೂ ಮೇನಕಾ ಗಾಂಧಿ ಅವರ ಪುತ್ರ ವರುಣ್ ಗಾಂಧಿ ಅವರು ಭಾನುವಾರ ಬೆಳಿಗ್ಗೆ ಇಲ್ಲಿನ ಕಾಮಕೋಟೇಶ್ವರ ದೇವಸ್ಥಾನದಲ್ಲಿ ಬಂಗಾಳದ ಯಾಮಿನಿ ರಾಯ್ ಚೌಧುರಿ ಅವರನ್ನು ಸನಾತನ ಹಿಂದೂ ಸಂಪ್ರದಾಯದಂತೆ ವಿವಾಹವಾದರು.

 

ರೇಷ್ಮೆ ಕುರ್ತಾ, ಧೋತಿ ತೊಟ್ಟು, ಹಳದಿ ಅಂಗವಸ್ತ್ರ ಹೊದ್ದುಕೊಂಡಿದ್ದ ವರುಣ್ (30) ಅವರು ತಿಳಿಗೆಂಪು ಬಣ್ಣದ ಸೀರೆ ಉಟ್ಟಿದ್ದ ಯಾಮಿನಿ (28) ಅವರನ್ನು ವರಿಸಿದರು. ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರು ವಧೂವರರಿಗೆ ಆಶೀರ್ವದಿಸಿದರು.ಬೆಳಿಗ್ಗೆ 7.30ರಿಂದ 9 ಗಂಟೆ ನಡುವೆ ಸೀಮಿತ ಸಂಖ್ಯೆಯ ಅತಿಥಿಗಳ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆಯಿತು. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಕುಟುಂಬ ಸದಸ್ಯರು ಹಾಜರಿರದೆ ಇದ್ದುದು ಎದ್ದು ಕಾಣಿಸುವಂತಿತ್ತು. ಶಾಂತಿನಿಕೇತನ್‌ನಲ್ಲಿ ಜನಿಸಿದ ಯಾಮಿನಿ ಅವರು ದೆಹಲಿಯ ಸೆಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಗ್ರಾಫಿಕ್ ಡಿಸೈನಿಂಗ್ ವ್ಯಾಸಂಗ ಮಾಡಿದವರು. ಅವರು ಉಟ್ಟಿದ್ದ ಸೀರೆಯನ್ನು 40 ವರ್ಷಗಳ ಹಿಂದೆ ಇಂದಿರಾ ಗಾಂಧಿ ಅವರು ಮೇನಕಾ ಗಾಂಧಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು.ಮಂಗಳವಾರ (ಮಾರ್ಚ್ 8) ದೆಹಲಿಯಲ್ಲಿ ಅತಿಥಿ ಸತ್ಕಾರ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ಆದರೆ ಫೆ.28ರಂದು ದೆಹಲಿಯಲ್ಲಿ ಮೇನಕಾ ಅವರ ತಾಯಿ ಅಮತೇಶ್ವರ ಆನಂದ್ ಅವರು ನಿಧನರಾದುದರಿಂದ ಈ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಶನಿವಾರ ಸಂಜೆ ಇದೇ ದೇವಸ್ಥಾನದ ಆವರಣದಲ್ಲಿ ವರುಣ್ ಅವರ ‘ಮೆಹಂದಿ’ ಕಾರ್ಯಕ್ರಮ ನಡೆದಿತ್ತು.ಹನುಮಾನ್ ಘಾಟ್‌ನಲ್ಲಿರುವ ಅತ್ಯಂತ ಪವಿತ್ರ ತಾಣಗಳಲ್ಲಿ ಕಾಮಕೋಟಿ ದೇವಸ್ಥಾನವೂ ಒಂದು. ವರುಣ್ ವಿವಾಹ ನಿಮಿತ್ತ ದೇವಸ್ಥಾನ ಹೂಗಳಿಂದ ಅಲಂಕೃತಗೊಂಡಿತ್ತು. ಭಾರಿ ಭದ್ರತೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.