ಗುರುವಾರ , ನವೆಂಬರ್ 14, 2019
19 °C

ಹಸ್ತಕ್ಷೇಪ ಸಾಕು

Published:
Updated:

ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮತ್ತು ಅವರಿಗಿಂತ ಮೇಲ್ದರ್ಜೆಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಪೊಲೀಸ್ ಸಿಬ್ಬಂದಿ ಮಂಡಳಿಯ (ಪಿಇಬಿ) ಶಿಫಾರಸುಗಳನ್ನು ಪಾಲಿಸುವುದು `ಕಡ್ಡಾಯ' ಎಂದು ಹೇಳುವ ಮೂಲಕ ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠ ಸರ್ಕಾರಕ್ಕೆ ಚೆನ್ನಾಗಿಯೇ ಕಿವಿಹಿಂಡಿದೆ. ಮಂಡಳಿಯ ಶಿಫಾರಸು `ಸಲಹಾ ಸ್ವರೂಪದ್ದು', ಆದ್ದರಿಂದ ಅದನ್ನು ಪಾಲಿಸುವುದು ಅಥವಾ ಬಿಡುವುದು ಸರ್ಕಾರದ ನಿರ್ಧಾರಕ್ಕೆ ಬಿಟ್ಟದ್ದು ಎಂಬ ವಾದವನ್ನು ಪೀಠ ತಳ್ಳಿ ಹಾಕಿದೆ. ವಿಶಿಷ್ಟ ಸನ್ನಿವೇಶದಲ್ಲಿ ಮಾತ್ರ ಮಂಡಳಿ ಶಿಫಾರಸು ಮೀರಿ ಯಾವುದೇ ಅಧಿಕಾರಿಯ ವರ್ಗಾವಣೆಯನ್ನು ಸರ್ಕಾರ ಮಾರ್ಪಡಿಸಬಹುದು; ಆದರೆ ಅದಕ್ಕೆ ಸಮರ್ಥನೀಯ ಸಮಜಾಯಿಷಿ ನೀಡಲೇಬೇಕು ಎಂದು ಸ್ಪಷ್ಟ ಶಬ್ದಗಳಲ್ಲಿ ತಿಳಿಸಿದೆ. ಖಾದಿ, ಖಾಕಿ ಹಾಗೂ ರೌಡಿಗಳ ಮಧ್ಯದ ಅಪವಿತ್ರ ಮೈತ್ರಿ ಕಿತ್ತುಹಾಕಿ ಪೊಲೀಸ್ ವ್ಯವಸ್ಥೆಗೆ ವೃತ್ತಿಪರತೆ ತರಬೇಕು ಎಂಬುದು ನಾಗರಿಕರ ಬಹುಕಾಲದ ಬೇಡಿಕೆ. ಅದಕ್ಕೆ ಕೋರ್ಟ್‌ನ ಈ ಆದೇಶ ಬಲ ತುಂಬಿದೆ.ಅಧಿಕಾರದ ಲಗಾಮು ಹಿಡಿದ ಜನಪ್ರತಿನಿಧಿಗಳು ಮತ್ತು ಅವರ ಅಡಿಯಾಳಿನಂತೆ ವರ್ತಿಸುವ ಕೆಲ ಮಹತ್ವಾಕಾಂಕ್ಷಿ ಪೊಲೀಸ್ ಅಧಿಕಾರಿಗಳು ಸ್ವಾರ್ಥ ಸಾಧನೆಗಾಗಿ ಇಡೀ ಪೊಲೀಸ್ ವ್ಯವಸ್ಥೆಯನ್ನೇ ತಮಗೆ ಬೇಕಾದಂತೆ ಕುಣಿಸುವುದು, ಅದಕ್ಕಾಗಿ ವರ್ಗಾವಣೆ ಎಂಬ ಎರಡಲಗಿನ ಕತ್ತಿಯನ್ನು ಅಸ್ತ್ರದಂತೆ ಬಳಸುವುದು ಬಹಳ ಕಾಲದಿಂದ ನಡೆದುಕೊಂಡು ಬಂದಿದೆ. ಅದಕ್ಕೆಲ್ಲ ಕಡಿವಾಣ ಹಾಕಿ ಪೊಲೀಸ್ ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸುಪ್ರೀಂ ಕೋರ್ಟ್ 22 ಸೆಪ್ಟೆಂಬರ್ 2006ರಂದು `ಪ್ರಕಾಶ್‌ಸಿಂಗ್ ವಿರುದ್ಧ ಭಾರತ ಸರ್ಕಾರ' ಪ್ರಕರಣದಲ್ಲಿ 7 ಅಂಶಗಳನ್ನು ಒಳಗೊಂಡ ಮಹತ್ವದ ತೀರ್ಪು ನೀಡಿತ್ತು. ಅದಕ್ಕೆ ಅನುಗುಣವಾಗಿ ಕರ್ನಾಟಕ ಸರ್ಕಾರ 2009ರಲ್ಲಿ ಪೊಲೀಸ್ ಸಿಬ್ಬಂದಿ ಮಂಡಳಿ ರಚಿಸಿದೆ. ಡಿಎಸ್‌ಪಿ ಮತ್ತು ಅವರಿಗಿಂತ ಕೆಳ ಹಂತದ ಸಿಬ್ಬಂದಿಗಳ ವರ್ಗಾವಣೆ, ಬಡ್ತಿ ಸೇರಿದಂತೆ ವಿವಿಧ ಸೇವಾ ವಿಷಯಗಳನ್ನು ನಿರ್ಧರಿಸುವುದು ಹಾಗೂ ಎಸ್‌ಪಿಗಿಂತ ಮೇಲ್ದರ್ಜೆಯ ಅಧಿಕಾರಿಗಳ ವರ್ಗಾವಣೆ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡುವುದು ಮಂಡಳಿಯ ಅಧಿಕಾರ ವ್ಯಾಪ್ತಿಗೆ ಸೇರಿದೆ. ಡಿಜಿಪಿ ಅಧ್ಯಕ್ಷತೆಯ ಈ ಮಂಡಳಿಗೆ ನಾಲ್ವರು ಉನ್ನತ ಪೊಲೀಸ್ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಡಿಜಿಪಿ, ವಲಯಗಳ ಐಜಿಪಿಗಳು, ಡಿಐಜಿಗಳು, ಜ್ಲ್ಲಿಲಾ ಪೊಲೀಸ್ ಮುಖ್ಯಸ್ಥರು ಮತ್ತು ಠಾಣಾಧಿಕಾರಿಗಳು ಆಯಾ ಸ್ಥಳದಲ್ಲಿ ಕನಿಷ್ಠ ಎರಡು ವರ್ಷ ಇರುವಂತೆ ನೋಡಿಕೊಳ್ಳಬೇಕು ಎಂಬುದು ಸುಪ್ರೀಂ ಕೋರ್ಟ್‌ನ ಮಹತ್ವದ ಸೂಚನೆ. ಅದನ್ನು ಪಾಲಿಸುವುದು ಸರ್ಕಾರದ ಹೊಣೆ. ಮಂಡಳಿಯ ಶಿಫಾರಸಿಗೆ ಗೌರವ ಕೊಟ್ಟರೆ ಕೋರ್ಟ್ ಆದೇಶದ ಉಲ್ಲಂಘನೆಯ ಪ್ರಸಂಗವೇ ಬರುವುದಿಲ್ಲ. ದುರದೃಷ್ಟವಶಾತ್, ಆಡಳಿತದ ಸೂತ್ರ ಹಿಡಿದವರಿಗೆ ಇವೆಲ್ಲ ರುಚಿಸುವುದಿಲ್ಲ. ಅದಕ್ಕಾಗೇ ಇಂಥ ವೃತ್ತಿಪರ ಮಂಡಳಿಗೂ ಬೆಲೆ ಕೊಡದೇ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಸರ್ಕಾರ ಮನಬಂದಂತೆ ನಡೆದುಕೊಳ್ಳುತ್ತಿದೆ. ಇದು ಒಳ್ಳೆಯ ಲಕ್ಷಣವಂತೂ ಅಲ್ಲ. ಇನ್ನಾದರೂ ನ್ಯಾಯಾಂಗದಿಂದ ಪದೇಪದೇ ಛೀಮಾರಿ ಹಾಕಿಸಿಕೊಳ್ಳದೇ, ನಿಯಮ ಪಾಲಿಸುವ ಪರಿಪಾಠವನ್ನು ಸರ್ಕಾರ ರೂಢಿಸಿಕೊಳ್ಳಬೇಕು.

ಪ್ರತಿಕ್ರಿಯಿಸಿ (+)