ಹಸ್ತಪ್ರತಿಗಳು ನಾಡಿನ ಅಮೂಲ್ಯ ಸಂಪತ್ತು

7

ಹಸ್ತಪ್ರತಿಗಳು ನಾಡಿನ ಅಮೂಲ್ಯ ಸಂಪತ್ತು

Published:
Updated:

ಚನ್ನರಾಯಪಟ್ಟಣ: ‘ಭಾರತೀಯ ಪ್ರಾಚೀನ ಸಂಸ್ಕೃತಿ ಪ್ರತಿಬಿಂಬಿಸುವ ಹಸ್ತ ಪ್ರತಿಗಳಲ್ಲಿ ನೀತಿ, ತತ್ವದ ಬೋಧನೆಗಳು ಅಡಗಿವೆ’ ಎಂದು ರಾಜ್ಯ ಲೋಕಾಯುಕ್ತದ ನಿವೃತ್ತ ರಿಜಿಸ್ಟ್ರಾರ್ ಎಂ.ಜೆ. ಇಂದ್ರಕುಮಾರ್ ನುಡಿದರು.ಶ್ರವಣಬೆಳಗೊಳ ಬಳಿ ಇರುವ ಧವಳತೀರ್ಥಂನಲ್ಲಿ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ, ನವದೆಹಲಿಯ ಶಿಲ್ಪಕಲೆ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಹಸ್ತಪ್ರತಿಗಳ ಕುರಿತು ಶನಿವಾರ ಏರ್ಪಡಿಸಿದ್ದ ‘ತತ್ವ ಬೊಧ ಉಪನ್ಯಾಸ ಮಾಲಿಕೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಹಸ್ತಪ್ರತಿಗಳು ನಾಡಿನ ಅಮೂಲ್ಯ ಸಂಪತ್ತಿನಲ್ಲಿ ಒಂದು. ಭಾರತೀಯ ಪ್ರಾಚೀನ ಪರಂಪರೆ, ಸಾಹಿತ್ಯ ಜ್ಞಾನ ಸಂಪಾದಿಸಲು ಓಲೆಗರಿ ಗ್ರಂಥಗಳು ಪ್ರಮುಖ ಪಾತ್ರವಹಿಸಿವೆ. ಇಂತಹ ಗ್ರಂಥಗಳ ಅಧ್ಯಯನ, ಸಂರಕ್ಷಣೆ, ಪ್ರಕಟಣೆಯನ್ನು ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಮಾಡಲಾಗುತ್ತಿದೆ. ಇದುವರೆಗೆ 18 ಸಾವಿರ ಹಸ್ತ ಪ್ರತಿಗಳನ್ನು ಆಗಮ ಗ್ರಂಥ ಭಂಡಾರದಲ್ಲಿ ಸಂರಕ್ಷಿಸಿಡಲಾಗಿದೆ’ ಎಂದು ಹೇಳಿದರು.ಯುವ ಪೀಳಿಗೆ ಇಂತಹ ಗ್ರಂಥಗಳ ಅಧ್ಯಯನದಲ್ಲಿ ತೊಡಗಬೇಕು. ಶ್ರದ್ಧೆಯಿಂದ ಅಧ್ಯಯನ ಮಾಡಿ ಜ್ಞಾನ ವೃದ್ಧಿಸಿಕೊಳ್ಳಬೇಕು. ಜ್ಞಾನ ಸಂಪಾದನೆಗೆ ಅಂತ್ಯ ಎಂಬುದಿಲ್ಲ. ಅದು ನಿರಂತರ’ ಎಂದರು.ಮೋಡಿ ಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ, ‘ಭಾಷೆ ಮೇಲೆ ಸಂಶೋಧನೆ ಮಾಡಿದಾಗ ಹೊಸತನ ಸೃಷ್ಟಿಯಾಗುತ್ತದೆ. ಸಂಕೇತದ ಆಧಾರದ ಮೇಲೆ ಲಿಪಿ ರಚನೆಯಾಗಿದೆ’ ಎಂದು ತಿಳಿಸಿದರು.ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಎಸ್. ಸಣ್ಣಯ್ಯ, ಕೇಂದ್ರಿಯ ಭಾಷಾ ಸಂಸ್ಥಾನದ ಮುಖ್ಯಸ್ಥ ಡಾ. ಸುಬ್ಬು ಕೃಷ್ಣನ್, ಎಲ್.ಎಸ್. ಜೀವೇಂದ್ರಕುಮಾರ್ ಉಪಸ್ಥಿತರಿದ್ದರು. ಎಂ. ಉದಯರಾಜ್ ಸ್ವಾಗತಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry