ಹಸ್ತಪ್ರತಿಗೂ, ವಿಜ್ಞಾನಕ್ಕೂ ಅನ್ಯೋನ್ಯ ಸಂಬಂಧ

7

ಹಸ್ತಪ್ರತಿಗೂ, ವಿಜ್ಞಾನಕ್ಕೂ ಅನ್ಯೋನ್ಯ ಸಂಬಂಧ

Published:
Updated:
ಹಸ್ತಪ್ರತಿಗೂ, ವಿಜ್ಞಾನಕ್ಕೂ ಅನ್ಯೋನ್ಯ ಸಂಬಂಧ

ಬಳ್ಳಾರಿ: ಹಸ್ತಪ್ರತಿಗೂ, ವಿಜ್ಞಾನಕ್ಕೂ ಅನ್ಯೋನ್ಯ ಸಂಬಂಧವಿದೆ. ಹಸ್ತಪ್ರತಿ ಗಳಿಂದ ದೊರೆಯುವ ಅನೇಕ ಮಾಹಿತಿ ಗಳು ಸಂಶೋಧಕರಿಗೆ ಸಾಕಷ್ಟು ನೆರವು ನೀಡಿವೆ ಎಂದು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಅಶೋಕ ಆಲೂರ ಅಭಿಪ್ರಾಯಪಟ್ಟರು.ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಸ್ತಪ್ರತಿ ಸಂಪನ್ಮೂಲ ಮತ್ತು ಸಂರಕ್ಷಣಾ ಕೇಂದ್ರ ಹಾಗೂ ದಕ್ಷಿಣ ಪ್ರಾದೇಶಿಕ ಭಾಷಾ ಕೇಂದ್ರಗಳ ಸಹಯೋಗದಲ್ಲಿ ಆರಂಭವಾದ `ಕನ್ನಡ ಹಸ್ತಪ್ರತಿಗಳ ಭಾಷೆ ಹಾಗೂ ಸಂಸ್ಕೃತಿ~ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ಕೃಷಿ ಕುರಿತು ಘನಮಠದ ಸ್ವಾಮೀಜಿ ಯವರು ಹಸ್ತಪ್ರತಿಗಳಲ್ಲಿ ಬರೆದಿಟ್ಟಿದ್ದ ಅನೇಕ ವಿವರಗಳು ಕೃಷಿ ವಿಜ್ಞಾನಿಗಳಿಗೆ ಭಾರಿ ಸಹಕಾರಿಯಾಗಿವೆ. ಅಂತಹವರು  ಕೃಷಿ ಕುರಿತ ವಿವರಗಳನ್ನು ಹಸ್ತಪ್ರತಿ ಗಳಲ್ಲಿ ಸಂಗ್ರಹಿಸದಿದ್ದರೆ ಸಾವಿರಾರು ಜನ ವಿಜ್ಞಾನಿಗಳು ನೂರಾರು ರ್ವಗಳ ಕಾಲ ಸಂಶೋಧನೆ ನಡೆಸಬೇಕಿತ್ತು ಎಂದು ಅವರು ಹೇಳಿದರು.ದ್ವಿದಳ ಧಾನ್ಯವನ್ನು ಬೆಳೆದ ನಂತರ ಏಕದಳ ಧಾನ್ಯ ಬೆಳೆಯಬೇಕು ಎಂಬುದು ಪಾರಂಪರಿಕ ಜ್ಞಾನ. ಏಕೆ ಬೆಳೆಯಬೇಕು ಎಂಬುದಕ್ಕೆ ಗ್ರಾಮೀಣರು ವಿವರ ನೀಡುವುದಿಲ್ಲವಾದರೂ, ವೈಜ್ಞಾನಿಕ ಹಿನ್ನೆಲೆಗೆ ಪೂರಕವಾಗಿಯೇ ಅವರ ಜ್ಞಾನ  ಬಳುವಳಿಯಾಗಿ ದೊರೆತಿದೆ ಎಂಬುದು ಸ್ಪಷ್ಟ. ದೇಶದ ಅನೇಕ ಭಾಗಗಳ ರೈತರು ಹೊಂದಿರುವ ಇಂತಹ ಪಾರಂಪರಿಕ ಜ್ಞಾನವನ್ನು ದಾಖಲಿಸುವ ಅಗತ್ಯವೂ ಇದೆ ಎಂದು ಅವರು ಪ್ರತಿಪಾದಿಸಿದರು.ದಿಢೀರ್ ಹವಾಮಾನ ಬದಲಾವಣೆ ಪ್ರಕ್ರಿಯೆ ಇಂದು ನಿನ್ನೆಯದಲ್ಲ. ಹವಾಮಾನ ಬದಲಾವಣೆಯಿಂದ ಎದುರಾಗುವ ವೈಪರೀತ್ಯಗಳ ಬಗ್ಗೆ ಮೊದಲಿನಿಂದಲೂ ಜನರಿಗೆ ತಿಳಿವಳಿಕೆ ಇದೆ. 15 ದಿನ ತಡವಾಗಿ ಮಳೆ ಸುರಿದರೆ ಯಾವ ಬೆಳೆ ಬೆಳೆಯಬೇಕು ಎಂಬ ಸಾಮಾನ್ಯ ತಿಳಿವಳಿಕೆ ರೈತರಲ್ಲಿದೆ. ಅಂತೆಯೇ ಅವರು ಹೊಂದಿರುವ ಇದೇ ರೀತಿಯ ಅನೇಕ ಮಾಹಿತಿಗಳನ್ನು ಅನುಸರಿಸಿ ಕೃಷಿ ಮಾಡಬೇಕಿದೆ. ಅವರ ಜ್ಞಾನವನ್ನು ಯುವಪೀಳಿಗೆಗೂ ತಿಳಿಸ ಬೇಕಿದೆ ಎಂದು ಅವರು ಸಲಹೆ ನೀಡಿದರು.ಭಾರತೀಯ ಸಂಸ್ಕೃತಿ, ಸಂಪ್ರದಾಯ, ಸ್ಥಳೀಯ ಜ್ಞಾನ ನಿಜಕ್ಕೂ ಅಭೂತ ಪೂರ್ವ. ಈಗಿನ ಪೀಳಿಗೆಗೆ ಅವೆಲ್ಲವನ್ನೂ ತಿಳಿಸುವ ನಿಟ್ಟಿನಲ್ಲಿ ದಾಖಲೆಯ ಕೆಲಸ ನಡೆಯಬೇಕು ಎಂದು ಅವರು ಹೇಳಿದರು.ಕುಲಪತಿ ಡಾ.ಎ.ಮುರಿಗೆಪ್ಪ ಮಾತನಾಡಿ, ವೈವಿಧ್ಯತೆ, ಸಾಧ್ಯತೆ, ಪ್ರಾದೇಶಿಕತೆ ಹಾಗೂ ಭಿನ್ನತೆ ಕುರಿತು ಅರಿವು ಮೂಡಿಸುವ ಶಾಸ್ತ್ರವೇ ಹಸ್ತಪ್ರತಿ ಶಾಸ್ತ್ರವಾಗಿದೆ. ಹಸ್ತಪ್ರತಿ ಶಾಸ್ತ್ರವು ಅನೇಕ ಕ್ಷೇತ್ರಗಳಿಗೂ ನೆರವಾಗುತ್ತಿದ್ದು, ಈ ಕುರಿತು ಮತ್ತಷ್ಟು ಸಂಶೋಧನೆ ನಡೆಸುವ ನಿಟ್ಟಿನಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯದ ಜತೆ ಕೈಜೋಡಿಸ ಲಾಗುವುದು ಎಂದರು.ಹಸ್ತಪ್ರತಿ ಶಾಸ್ತ್ರದಿಂದ ಪ್ರಾಚೀನತೆ ಮತ್ತು ಪರಂಪರೆಗೆ ಒತ್ತು ನೀಡುವ ಕೆಲಸವೂ ಆಗುತ್ತದೆ. ಈ ವಿಚಾರ ಸಂಕಿರಣವು ಕೇವಲ ಚರ್ಚೆಗೆ ಸೀಮಿತವಾಗದೆ, ಅನೇಕ ಮಹತ್ವದ ವಿಷಯಗಳ ಕುರಿತು ಶಿಫಾರಸು ಮಾಡುವ ವೇದಿಕೆಯಾಗಬೇಕು ಎಂದು ಅವರು ಕೋರಿದರು.ಹಸ್ತಪ್ರತಿ ಸಂರಕ್ಷಣಾ ಕೇಂದ್ರವನ್ನು ಹೊಂದಿರುವ ವಿಶ್ವವಿದ್ಯಾಲಯವು ರಾಜ್ಯದಲ್ಲೇ ಮೊದಲ ಬಾರಿಗೆ ಹಸ್ತಪ್ರತಿಗಳ ಗಣಕೀಕರಣ ಕಾರ್ಯ ಕೈಗೆತ್ತಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿರುವುದು ವಿಶೇಷ ಎಂದು ಯೋಜನಾ ಸಂಯೋಜಕರಾದ ಡಾ,ವೀರೇಶ ಬಡಿಗೇರ ತಿಳಿಸಿದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಚ್. ಕೃಷ್ಣಯ್ಯ ವಿಚಾರಸಂಕಿರಣ ಉದ್ಘಾಟಿಸಿದರು. ಕುಲಸಚಿವ ಡಾ.ಮಂಜುನಾಥ ಬೇವಿನಕಟ್ಟಿ ಉಪಸ್ಥಿತರಿದ್ದರು.ದಕ್ಷಿಣ ಪ್ರಾದೇಶಿಕ ಭಾಷಾ ಕೇಂದ್ರದ ಸಂಯೋಜಕ ಡಾ.ಸಣ್ಣಪಾಪಯ್ಯ ಸ್ವಾಗತಿಸಿದರು. ಡಾ.ಕೃಷ್ಣ ಕಟ್ಟಿ ಕಾರ್ಯಕ್ರಮ ನಿರೂಪಿಸಿದರು.ನಂತರ ಡಾ.ವೈ.ಸಿ. ಭಾನುಮತಿ, ಡಾ.ಸಂಗಮೇಶ ಕಲ್ಯಾಣಿ, ಡಾ.ತಮಿಳ್ ಸೆಲ್ವಿ ಅವರು, ಕನ್ನಡ ಹಸ್ತಪ್ರತಿಗಳ ಸ್ವರೂಪ ಮತ್ತು ಮಹತ್ವ, ಮೋಡಿ ಲಿಪಿ, ಮಾತು- ಬರಹ ಹಾಗೂ ಸಂಪಾದನೆ ಕುರಿತು ಪ್ರಬಂಧ ಮಂಡಿಸಿದರು. ಡಾ.ಎಫ್.ಟಿ. ಹಳ್ಳಿಕೇರಿ ಅಧ್ಯಕ್ಷತೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry