ಹಸ್ತಾಂತರಕ್ಕೆ ವಿರೋಧ

7

ಹಸ್ತಾಂತರಕ್ಕೆ ವಿರೋಧ

Published:
Updated:

ಹುಬ್ಬಳ್ಳಿ: ತಾಲ್ಲೂಕಿನ ತಾರಿಹಾಳದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಹಕಾರಿ ಶಿಕ್ಷಣ ಸಂಘದ ತಾರಿಹಾಳ ಪಾಲಿಟೆಕ್ನಿಕ್ ಕಾಲೇಜನ್ನು ಸರ್ಕಾರಕ್ಕೆ ತರಾತುರಿಯಲ್ಲಿ ಹಸ್ತಾಂತರ ಮಾಡುವ ಹುನ್ನಾರ ನಡೆಯುತ್ತಿದ್ದು ಇದಕ್ಕೆ ಅವಕಾಶ ನೀಡಬಾರದು ಎಂದು ರಾಜ್ಯ ಸರ್ಕಾರಿ ನೌಕರರ ಸಹಕಾರಿ ಶಿಕ್ಷಣ ಸಂಘ, ಸಂಬಂಧಪಟ್ಟವರನ್ನು ಆಗ್ರಹಿಸಿದೆ.



‘ಕಾಲೇಜಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು ಹಣಕಾಸಿನ ವಿಚಾರದಲ್ಲೂ ಅವ್ಯವಹಾರ ನಡೆದಿದೆ. ಹೀಗಾಗಿ ಲೆಕ್ಕ ಪತ್ರವನ್ನು ಮಂಡಿಸಿದ ನಂತರವಷ್ಟೇ ಹಸ್ತಾಂತರ ಮಾಡಲು ಅವಕಾಶ ನೀಡಬೇಕು’ ಎಂದು ಸಂಘದ ಕಾರ್ಯದರ್ಶಿ ಬಿ.ಎ. ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.



‘ಸಂಘವು 1984ರಲ್ಲಿ ಕಾಲೇಜನ್ನು ಸ್ಥಾಪಿಸಿತ್ತು. ಆರ್ಥಿಕ ತೊಂದರೆ ಕಾಣಿಸಿಕೊಂಡಾಗ ಸರ್ಕಾರದ ಅನುದಾನ ಪಡೆಯುವ ಸಲುವಾಗಿ ಸಹಕಾರಿ ಶಿಕ್ಷಣ ಸಂಘದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಘಟಕವನ್ನು ಸ್ಥಾಪಿಸಲಾಯಿತು. ಈ ಘಟಕವನ್ನು ಮೂಲ ಶಿಕ್ಷಣ ಸಂಘದೊಂದಿಗೆ ಆಡಳಿತ ನೊಡಿಕೊಳ್ಳುವುದಕ್ಕಾಗಿ ಒಡಂಬಡಿಕೆ ಮಾಡಿಕೊಳ್ಳ ಲಾಯಿತು. ಆದರೆ ಸಹಕಾರ ಇಲಾಖೆಯು ಒಡಂಬಡಿಕೆ ಕಾನೂನು ಬಾಹಿರ ಎಂದು ಘೊಷಿಸಿ ಆಡಳಿತವನ್ನು ಮೂಲ ಸಂಘವೇ ನೋಡಿಕೊಳ್ಳಬೇಕು ಎಂದು ಹೇಳಿತು. ವಿಷಯ ಹೈಕೋರ್ಟ್ ಮೆಟ್ಟಿಲೇರಿದಾಗ ಸಹಕಾರ ಇಲಾಖೆಯೇ ಇದನ್ನು ಪರಿಹರಿಸಿಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ. ಆದರೆ ಇಲ್ಲಿಯ ವರೆಗೆ ಇಲಾಖೆ ಇದನ್ನು ಪರಿಹರಿಸಿಲ್ಲ. ಮಾತ್ರವಲ್ಲದೆ ಎಸ್‌ಸಿ,ಎಸ್‌ಟಿ ಶಿಕ್ಷಣ ಸಂಘದವರಿಗೆ ಸಹಕಾರ ನೀಡಿದ್ದಾರೆ’ ಎಂದು ಅವರು ಆರೋಪಿಸಿದರು.



‘ಎಸ್‌ಸಿ,ಎಸ್‌ಟಿ ಸಂಘದವರು ಕಾಲೇಜಿನಲ್ಲಿ ಅಕ್ರಮಗಳನ್ನು ಎಸಗಿ ಈಗ ಸರ್ಕಾರಕ್ಕೆ ಸುಲಭವಾಗಿ ಹಸ್ತಾಂತರಿಸುವುದಾಗಿ ಹೇಳಿದ್ದಾರೆ. ಇಲ್ಲಿನ ಎಲ್ಲ ಆಸ್ತಿಯ ಬೆಲೆ ಸುಮಾರು ಹತ್ತು ಕೋಟಿಗಳಾಗುತ್ತವೆ. ಆದರೆ ಸರ್ಕಾರಕ್ಕೆ ಕೇವಲ ಎರಡು ಕೋಟಿ 96 ಲಕ್ಷ ರೂಪಾಯಿಗಳಿಗೆ ನೀಡಿದರೆ ಮೂಲ ಸ್ಥಾಪಕ ಸದಸ್ಯರ ಹಿತಕ್ಕೆ ಧಕ್ಕೆಯಾಗುತ್ತದೆ’ ಎಂದು ಅವರು ಹೇಳಿದರು.

ಸಂಘದ ಗೌರವಾಧ್ಯಕ್ಷ ಎಂ.ಡಿ. ಬನ್ನಿಗೋಳ, ಉಪಾಧ್ಯಕ್ಷ ಎಸ್.ಎಚ್. ಕೋಲಾರಿ, ಜಂಟಿ ಕಾರ್ಯದರ್ಶಿ ಎ.ಆರ್. ಇನಾಮದಾರ ಹಾಗೂ ಎಸ್.ಎಲ್. ಉಳ್ಳಾಗಡ್ಡಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry