ಹಸ್ತಾಂತರ ಪ್ರಶ್ನೆಯೇ ಇಲ್ಲ

ಗುರುವಾರ , ಜೂಲೈ 18, 2019
23 °C

ಹಸ್ತಾಂತರ ಪ್ರಶ್ನೆಯೇ ಇಲ್ಲ

Published:
Updated:

ಪುತ್ತೂರು: ಸವಣೂರಿನ ಯುವ ಸಭಾಭವನವು ಸವಣೂರು ಯುವಕ ಮಂಡಲಕ್ಕೆ ಸೇರಿದ್ದಾಗಿದ್ದು, ಅದರ ಕೀಲಿ ಕೈಯನ್ನು ಪಂಚಾಯಿತಿಗೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಪುತ್ತೂರು ತಾಲ್ಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಮೆದು ಹೇಳಿದರು.ಈ ವಿಚಾರದಲ್ಲಿ ಸೂಕ್ತ ನ್ಯಾಯ ಸಿಗದಿದ್ದಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ಅವರು ಎಚ್ಚರಿಸಿದರು. ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಟ್ಟಡ ಜಮೀನಿನ ದಾಖಲೆಯಲ್ಲಿ ಕಂದಾಯ ಇಲಾಖೆಯು ಅನಧಿಕೃತವಾಗಿ ಅದು ಅಂಬೇಡ್ಕರ್ ಭವನ ಎಂದು ಸೇರ್ಪಡೆಗೊಳಿಸಿರುವ ಕಾರಣ ಗೊಂದಲ ಸೃಷ್ಟಿಯಾಗಿದೆ. ಈ ನೆಪದಲ್ಲಿ ಅಧಿಕಾರಿಗಳು ಸವಾರಿ ಮಾಡುತ್ತಿದ್ದು, ಇದರ ವಿರುದ್ಧ ಹೋರಾಟ ನಡೆಸಲಾಗುವುದು. ಕಂದಾಯ ಇಲಾಖೆಯವರು ದಾಖಲೆ ತಿದ್ದಿದ ಕುರಿತೂ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.ಸುಳ್ಳು ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಯವರು ಯುವ ಸಭಾಭವನದ ಕೀಲಿಗೈ ಅನ್ನು ಪಂಚಾಯಿತಿಗೆ ಹಸ್ತಾಂತರಿಸುವಂತೆ ಆದೇಶ ನೀಡಿದ್ದು ಈ ಅಸಂಬದ್ಧ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಯುವ ಸಭಾಭವನವನ್ನು ಯುವಕ ಮಂಡಲದವರೇ ಸ್ಥಳೀಯರ ಸಹಕಾರದೊಂದಿಗೆ ರೂ.2.5ಲಕ್ಷ ವೆಚ್ಚ ಮಾಡಿ ನಿರ್ಮಿಸಿದ್ದು, ಕಟ್ಟಡ ನಿರ್ಮಿಸಿದ ಬಳಿಕ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿಧಿಯಿಂದ ಕೇವಲ ರೂ 7.5 ಸಾವಿರ ಮಾತ್ರ ಲಭಿಸಿದೆ. ಕಟ್ಟಡದ ದುರಸ್ತಿಯನ್ನು ಕೂಡ ಯುವಕ ಮಂಡಲದವರೇ ಮಾಡಿದ್ದಾರೆ.ಕಟ್ಟಡ ನಿರ್ಮಾಣದ ಮತ್ತು ದುರಸ್ತಿಯ ವೇಳೆ ಆಸಕ್ತಿ ತೋರದ ಮಂದಿ ಈಗ ಗೊಂದಲ ಸೃಷ್ಟಿಸಿ ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲದ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ತಾಲ್ಲೂಕು ಯುವಜನ ಒಕ್ಕೂಟದ ಉಪಾಧ್ಯಕ್ಷ ನೇಮಾಕ್ಷ ಸುವರ್ಣ, ಖಜಾಂಜಿ ಪೂವಪ್ಪ ದೇಂತಡ್ಕ, ನಿರ್ದೇಶಕರಾದ ರಾಕೇಶ್ ರೈ ಕೆಡೆಂಜಿ ಮತ್ತು ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry