ಮಂಗಳವಾರ, ನವೆಂಬರ್ 19, 2019
28 °C

ಹಸ್ತಿದಂತ ಸಿಂಹಾಸನಾರೋಹಣ

Published:
Updated:

ಹೊಸನಗರ (ಶಿವಮೊಗ್ಗ ಜಿಲ್ಲೆ): ಸಮೀಪದ ರಾಮಚಂದ್ರಾಪುರ ಮಠದಲ್ಲಿ 36ನೇ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ 21ನೇ ಕಿರೀಟೋತ್ಸವ ಮತ್ತು ಜಗದ್ವಿಖ್ಯಾತ ಹಸ್ತಿದಂತ ಸಿಂಹಾಸನಾರೋಹಣ ಕಾರ್ಯಕ್ರಮ ಮಂಗಳವಾರ ರಾತ್ರಿ ಬಹು ವಿಜೃಂಭಣೆಯಿಂದ ನಡೆಯಿತು.ಚಂದ್ರಮೌಳೇಶ್ವರ ಸಹಿತ ಶ್ರೀಕರಾರ್ಚಿತ ದೇವತಾ ಪೂಜೆ ನೆರವೇರಿಸಿದ ನಂತರ ರಾಘವೇಶ್ವರ ಸ್ವಾಮೀಜಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪರಂಪರಾಗತ ರತ್ನಖಚಿತ ಕಿರೀಟಧಾರಣೆ ಮಾಡಿದರು.ಸರ್ವಾಲಂಕೃತ ಶ್ರೀಗಳನ್ನು ಜಯಘೋಷದೊಂದಿಗೆ ಪ್ರಧಾನ ಮಠದಿಂದ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಶಾರದಾಂಬಾ ದೇವಸ್ಥಾನ ಬೀದಿ ಮೂಲಕ ಮುಖ್ಯ ವೇದಿಕೆಗೆ ಕರೆ ತರಲಾಯಿತು.ವಿವಿಧ ಕಲಾಪ್ರಕಾರಗಳು, ರಾಮಾಯಣ ನೆನಪಿಗೆ ತರುವ ಛದ್ಮವೇಷಭೂಷಿತ ವಿದ್ಯಾರ್ಥಿಗಳು ಅಡ್ಡಪಲ್ಲಕ್ಕಿ ಉತ್ಸವಕ್ಕೆ ಮೆರುಗು ತಂದರು. ಸೀಮಾ ಪರಿಷತ್ತುಗಳ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಭಕ್ತರು ಸ್ವಾಮೀಜಿ ಅವರ ವಿಶ್ವವಿಖ್ಯಾತ ಹಸ್ತಿದಂತ ರತ್ನಖಚಿತ, ಬಂಗಾರಲೇಪಿತ ಸಿಂಹಾಸನಾರೋಹಣಕ್ಕೆ ಸಾಕ್ಷಿಯಾದರು.ಸಾರ್ವಜನಿಕರು, ಗ್ರಾಮಸ್ಥರು, ಮಠದ ಶಿಷ್ಯರು, ವಿವಿಧ ಸಂಘ-ಸಂಸ್ಥೆಗಳು ಮತ್ತು ಶಾಖಾಮಠಗಳ ವತಿಯಿಂದ ಸಂಸ್ಥಾನಕ್ಕೆ ಗೌರವ ಕಪ್ಪಕಾಣಿಕೆ ಸಲ್ಲಿಸಲಾಯಿತು.ಚತುರ್ವೇದ, ಸಂಗೀತ, ನೃತ್ಯ, ಶಂಖನಾದ, ಪುರಾಣ, ಶಾಸ್ತ್ರ ಸೇರಿದಂತೆ ಅಷ್ಟಾವಧಾನ ಸಹಿತ ರಾಜೋಪಚಾರ, ದೇವೋಪಚಾರ ಪೂಜೆ ನಡೆಯಿತು.

ಪ್ರತಿಕ್ರಿಯಿಸಿ (+)