ಹಾಂಕಾಂಗ್ ಮಾನವ ನಿರ್ಮಿತ ಮಾಯಾನಗರಿ

7

ಹಾಂಕಾಂಗ್ ಮಾನವ ನಿರ್ಮಿತ ಮಾಯಾನಗರಿ

Published:
Updated:
ಹಾಂಕಾಂಗ್ ಮಾನವ ನಿರ್ಮಿತ ಮಾಯಾನಗರಿ

ಅದು ಸಮುದ್ರವನ್ನೇ ಪಕ್ಕಕ್ಕೆ ಸರಿಸಿ ನಿರ್ಮಿಸಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ; ಅತ್ಯಧಿಕ ಪ್ರಯಾಣಿಕ ದಟ್ಟಣೆ ಹೊಂದಿರುವ ಜಗತ್ತಿನ ಮೂರನೇ ಅತಿ ದೊಡ್ಡ ನಿಲ್ದಾಣ; ಕಳೆದ ವರ್ಷ ಈ ನಿಲ್ದಾಣಕ್ಕೆ ಬಂದು ಹೋದವರ ಸಂಖ್ಯೆ 59 ಲಕ್ಷ; ನಿಲ್ದಾಣದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ಬರಲಿಕ್ಕಾಗಿಯೇ ಮೀಸಲಾದ ಮೆಟ್ರೊ ರೈಲಿನ ವ್ಯವಸ್ಥೆ ಇದೆ ಎಂದರೆ ಅದರ ವಿಶಾಲ ವ್ಯಾಪ್ತಿಯನ್ನು ಅಂದಾಜು ಮಾಡಬಹುದು.ಇಂತಹ ಬೃಹತ್ ವಿಮಾನ ನಿಲ್ದಾಣವನ್ನು ಹೊಂದಿರುವ ಮಹಾನಗರ ಹಾಂಕಾಂಗ್. ಪೂರ್ವ-ಪಶ್ಚಿಮಗಳು ಸಂಧಿಸುವ ನಗರವೆಂದೇ ಅದು ಹೆಸರುವಾಸಿ. ಚೀನಾ ದೇಶದ ಭಾಗವಾಗಿದ್ದರೂ ಸ್ವಾಯತ್ತ ಆಡಳಿತದ ಮುಕ್ತ ಪರಿಸರದಲ್ಲಿ ಜಗತ್ತಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಬೆಳೆದಿರುವ ಹಾಂಕಾಂಗ್, `ಮಾನವ ನಿರ್ಮಿತ ಮಾಯಾನಗರಿ~ ಎಂದರೆ ಅದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ.ವಿಮಾನದಿಂದ ಇಳಿದ ಕ್ಷಣದಿಂದಲೇ `ವಾಹ್! ಎಷ್ಟು ಅದ್ಭುತವಾಗಿ ನಿರ್ಮಿಸಿದ್ದಾರೆ~ ಎಂದು ತಂತಾನೇ ಬರುವ ಉದ್ಗಾರ, ಆ ಮಹಾನಗರದಲ್ಲಿ ಸುತ್ತಾಡಿದಂತೆಲ್ಲ ಪುನರಾವರ್ತನೆ ಆಗುತ್ತಲೇ ಇರುತ್ತದೆ.ಅಲ್ಲಿನ ಜನರ ತಾಂತ್ರಿಕ ಕೌಶಲ, ಪರಿಶ್ರಮ, ಸೃಜನಶೀಲ ಮನಸ್ಸುಗಳು ಹಾಂಕಾಂಗ್ ಅನ್ನು ನೋಡಿದವರೆಲ್ಲರೂ ಮೆಚ್ಚುವ ಹಾಗೆ ರೂಪಿಸಿವೆ. ಆ ಜನರ ದೈತ್ಯ ಪ್ರತಿಭೆಗೆ ಅಲ್ಲಿನ ಸಮುದ್ರ, ಬೆಟ್ಟಗುಡ್ಡಗಳು ತಲೆಬಾಗಿವೆ.ವಿಮಾನ ನಿಲ್ದಾಣದಿಂದ ನಗರ ಪ್ರವೇಶಕ್ಕೆ ಮಾಡಿರುವ ವ್ಯವಸ್ಥೆಯೂ ಸೊಗಸಾಗಿದೆ. ಗಂಟೆಗೆ 145 ಕಿ.ಮೀ. ವೇಗದಲ್ಲಿ ಓಡುವ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ರೈಲು ಕೇವಲ 25 ನಿಮಿಷದಲ್ಲಿ ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗಕ್ಕೆ ಕರೆದೊಯ್ಯುತ್ತದೆ.ರೈಲು ಬೇಡವೆಂದಾದರೆ ಹತ್ತಾರು ಫ್ಲೈ ಓವರ್‌ಗಳು, ಬೃಹತ್ತಾದ ತೂಗು ಸೇತುವೆಗಳಿಂದ ಕೂಡಿರುವ ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಟ್ಯಾಕ್ಸಿ ಅಥವಾ ಬಸ್‌ಗಳ ಮೂಲಕವೂ ನಗರವನ್ನು ಪ್ರವೇಶಿಸಬಹುದು.ಆರು ಮುಖ್ಯ ಮತ್ತು ಇನ್ನೂರಕ್ಕೂ ಹೆಚ್ಚು ಪುಟ್ಟ ದ್ವೀಪಗಳನ್ನು ಒಳಗೊಂಡಿರುವ ಹಾಂಕಾಂಗ್‌ನಲ್ಲಿ ಭೂಮಿಗೂ ಆಕಾಶಕ್ಕೂ ಏಣಿ ಹಾಕಿದಂತೆ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿವೆ. ಇಪ್ಪತ್ತಕ್ಕಿಂತ ಹೆಚ್ಚು ಅಂತಸ್ತುಗಳಿರುವ ಅಪಾರ್ಟ್‌ಮೆಂಟ್‌ಗಳೇ ಹೆಚ್ಚು.ಒಂದು ನಿವೇಶನದಲ್ಲಿ ಒಂದೇ ಮನೆ ಇರುವುದನ್ನು ಇಲ್ಲಿ ದುರ್ಬೀನು ಹಾಕಿ ಹುಡುಕಿದರೂ ಸಿಗುವುದು ಕಷ್ಟ. ಮಹಾನಗರದ ಭೂಪ್ರದೇಶ ಚಿಕ್ಕದಾಗಿದೆ. ಜನಸಾಂದ್ರತೆ ಹೆಚ್ಚಿದೆ. ಆದರೂ ಗಣನೀಯ ಪ್ರಮಾಣದಲ್ಲಿ ಅರಣ್ಯ ಭಾಗವನ್ನು ಸಂರಕ್ಷಿಸಿರುವುದು ಗಮನಾರ್ಹ.360 ಡಿಗ್ರಿ ಸುತ್ತಲೂ ವೀಕ್ಷಣೆ ಎಂಬುದು ಇಲ್ಲಿನ ವಿಶೇಷವೇ ಸರಿ. ಪ್ರಮುಖ ಪ್ರವಾಸಿ ತಾಣಗಳಾದ `ದ ಪೀಕ್~ ಮತ್ತು `ಸ್ಕೈ 100~ ಕಟ್ಟಡಗಳ ತುದಿಯಲ್ಲಿ ಹಾಗೂ ಗಾಂಗ್ ಪಿಂಗ್ ಮತ್ತು ಓಷನ್ ಪಾರ್ಕ್‌ನ ಕೇಬಲ್ ಕಾರ್‌ಗಳಲ್ಲಿ ಸಮುದ್ರ, ಬೆಟ್ಟ ಗುಡ್ಡ ಹಾಗೂ ಗಗನಚುಂಬಿ ಕಟ್ಟಡಗಳ ವಿಹಂಗಮ ನೋಟವನ್ನು ಕಣ್ತುಂಬಿಸಿಕೊಳ್ಳಬಹುದು.ಬಹುತೇಕ ಕಟ್ಟಡಗಳು ವಿದ್ಯುದ್ದೀಪಗಳಿಂದ ಸಿಂಗಾರಗೊಂಡು, ರಾತ್ರಿ ವೇಳೆ ಝಗಮಗಿಸುವ ದೀಪಗಳೊಂದಿಗೆ ಇಡೀ ಮಹಾನಗರವೇ ನರ್ತಿಸಿದಂತೆ ಭಾಸವಾಗುತ್ತದೆ.`ದೊಡ್ಡದಾಗಿ ಯೋಚಿಸು, ದೊಡ್ಡದನ್ನೇ ಸಾಧಿಸು~ ಎಂಬುದು ಹಾಂಕಾಂಗ್ ಜನರ ಧ್ಯೇಯ ವಾಕ್ಯ ಇದ್ದಂತೆ ಕಾಣುತ್ತದೆ.ಇದಕ್ಕೆ ಅಲ್ಲಿನ ಬೃಹತ್ ನಿರ್ಮಾಣಗಳೇ ಸಾಕ್ಷಿ. ಸಮುದ್ರ ಮಟ್ಟದಿಂದ 400 ಮೀಟರ್ ಎತ್ತರದಲ್ಲಿ ನಿಂತು ಹಾಂಕಾಂಗ್ ನಗರವನ್ನು ಪರಿಪೂರ್ಣವಾಗಿ ನೋಡಲಿಕ್ಕಾಗಿಯೇ ವಿನ್ಯಾಸಗೊಳಿಸಿರುವ ತಾಣ `ಸ್ಕೈ 100~. ಇದು ಜಗತ್ತಿನ ನಾಲ್ಕನೇ ಅತ್ಯಂತ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಂತರರಾಷ್ಟ್ರೀಯ ವಾಣಿಜ್ಯ ಕೇಂದ್ರದ (ಐಸಿಸಿ) ಭಾಗವಾಗಿದೆ.ಇದು ಹಾಂಕಾಂಗ್‌ನ ಅತ್ಯಂತ ಎತ್ತರದ ಕಟ್ಟಡವೂ ಹೌದು. ಈ ಕಟ್ಟಡದ ಒಟ್ಟು ಎತ್ತರ 490 ಮೀಟರ್. ಇದರಲ್ಲಿ 118 ಮಹಡಿಗಳಿವೆ. 2ನೇ ಅಂತಸ್ತಿನಿಂದ 100ನೇ ಮಹಡಿಗೆ ಕೇವಲ 90 ಸೆಕೆಂಡ್‌ಗಳಲ್ಲಿ ಕರೆದೊಯ್ಯುವ ಸೂಪರ್ ಸಾನಿಕ್ ವೇಗದ ಲಿಫ್ಟ್ ವ್ಯವಸ್ಥೆ ಇದೆ. 100ನೇ ಮಹಡಿಯಲ್ಲಿ ಮಹಾನಗರದ ವೀಕ್ಷಣೆಗಾಗಿಯೇ ಗಾಜಿನ ಗೋಡೆಗಳನ್ನು ವಿಶೇಷವಾಗಿ ವ್ಯವಸ್ಥೆ ಮಾಡಲಾಗಿದೆ.1, 2 ಹಾಗೂ 100ನೇ ಮಹಡಿಗಳಲ್ಲಿ ಇಂಟರ‌್ಯಾಕ್ಟಿವ್ ಮಲ್ಟಿ ಮೀಡಿಯಾದ ಮೂಲಕ ಕಟ್ಟಡ ನಿರ್ಮಿಸಿದ ಬಗೆ, ಹಾಂಕಾಂಗ್‌ನ ಇತಿಹಾಸ, ಸಂಸ್ಕೃತಿ ಮತ್ತು ಬೆಳವಣಿಗೆಯನ್ನು ಪ್ರದರ್ಶಿಸಲಾಗಿದೆ. ಕಟ್ಟಡದ ತಳಭಾಗದಲ್ಲಿ ಮೆಟ್ರೊ, ಏರ್‌ಪೋರ್ಟ್ ಎಕ್ಸ್‌ಪ್ರೆಸ್, ಬಸ್ ಮತ್ತು ಟ್ಯಾಕ್ಸಿ ನಿಲ್ದಾಣಗಳಿವೆ. ಹತ್ತಿರದಲ್ಲೇ ಸಮುದ್ರಯಾನಕ್ಕೆ ಅವಕಾಶ ಮಾಡಿಕೊಡುವ ಚೀನಾ ಫೆರ‌್ರಿ ಮತ್ತು ಓಷನ್ ಟರ್ಮಿನಲ್‌ಗಳೂ ಇವೆ.`ದ ಪೀಕ್~ ಹಾಂಕಾಂಗ್‌ನ ಜನಪ್ರಿಯ ಪ್ರವಾಸಿ ತಾಣ. ಇಲ್ಲಿ ಜಗತ್ತಿನ ಹಳೆಯದಾದ `ಟ್ರಾಮ್‌ವೇ~ ರೈಲು ಓಡಾಡುತ್ತಿದೆ. ಈ ಟ್ರಾಮ್‌ವೇ ಹಾಂಕಾಂಗ್‌ನ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಿಂದ ಪೀಕ್ ಹೆಸರಿನ ಬೆಟ್ಟದ ಶಿಖರ ಭಾಗಕ್ಕೆ ಸಂಪರ್ಕ ಕಲ್ಪಿಸುವ 1.4 ಕಿ.ಮೀ. ಉದ್ದದ ಟ್ರ್ಯಾಕ್ ಮೇಲೆ ಸಂಚರಿಸುತ್ತದೆ.ಈ ಟ್ರ್ಯಾಕ್ 4 ರಿಂದ 27 ಡಿಗ್ರಿಯಷ್ಟು ಏರುಮುಖವಾಗಿದೆ. ಇದು ಸಮುದ್ರ ಮಟ್ಟದಿಂದ 28 ಮೀಟರ್ ಎತ್ತರದಿಂದ 396 ಮೀಟರ್ ಎತ್ತರಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತದೆ; ಅಂತೆಯೇ ಅದೇ ಟ್ರ್ಯಾಕ್‌ನಲ್ಲಿ ಕೆಳಭಾಗಕ್ಕೂ ತಂದುಬಿಡುತ್ತದೆ.1888ರ ಮೇ 30ರಂದು ಆರಂಭವಾದ ಈ ಟ್ರಾಮ್‌ವೇನಲ್ಲಿ ಮೊದಲ ದಿನ 600 ಪ್ರಯಾಣಿಕರು ಸಂಚರಿಸಿದ್ದರಂತೆ. ಪ್ರಾರಂಭದ ಒಂದೇ ವರ್ಷದಲ್ಲಿ ಈ ಟ್ರಾಮ್‌ವೇನಲ್ಲಿ ಪ್ರಯಾಣಿಸಿದವರ ಸಂಖ್ಯೆ ಒಂದೂವರೆ ಲಕ್ಷ.ಆಗಿನ ಹಾಂಕಾಂಗ್‌ನ ಒಟ್ಟು ಜನಸಂಖ್ಯೆ 2 ಲಕ್ಷಕ್ಕಿಂತ ಕಡಿಮೆ ಇತ್ತು ಎಂಬುದು ಇಲ್ಲಿ ಗಮನಾರ್ಹ. ಪೀಕ್‌ನಲ್ಲಿ ಟ್ರಾಮ್‌ವೇ ಇತಿಹಾಸದ ಗ್ಯಾಲರಿಯನ್ನು ತೆರೆಯಲಾಗಿದೆ. ಇದು 120 ವರ್ಷಗಳ ಹಾಂಕಾಂಗ್‌ನ ಇತಿಹಾಸವನ್ನು ನೋಡುಗರಿಗೆ ಪ್ರಸ್ತುತಪಡಿಸುತ್ತದೆ.ಟ್ರಾಮವೇ ಇತಿಹಾಸದಲ್ಲಿ ಒಂದು ಪ್ರೇಮ ಕಥೆಯೂ ಇದೆ. ಟ್ರ್ಯಾಕ್ ನಿರ್ಮಾಣ ಕಾರ್ಯಕ್ಕೆ ಇಂಗ್ಲೆಂಡ್‌ನಿಂದ ಬಂದಿದ್ದ ಎಂಜಿನಿಯರ್ ಜೇಮ್ಸ ರೆಬೆಕ್‌ಗೆ ಸ್ಥಳೀಯ ಯುವತಿ ಲಿಲಿ ಜತೆ ಪ್ರೇಮಾಂಕುರವಾಯಿತು. ಟ್ರಾಮ್‌ವೇ ಉದ್ಘಾಟನೆಗೆ ಮೊದಲು ಅವರ ಮದುವೆಯೂ ಆಯಿತು.ಅವರ ಪ್ರೇಮಪತ್ರಗಳ ಸಂಗ್ರಹ ಗ್ಯಾಲರಿಯಲ್ಲಿದೆ. ಈ ಕಾರಣಕ್ಕೇ ಏನೋ `ದ ಪೀಕ್~ ಪ್ರೀತಿಯ ಸಂಕೇತವಾಗಿಯೂ ಪ್ರೇಮಿಗಳನ್ನು ಸೆಳೆಯುತ್ತಿದೆ.ಬೆಟ್ಟದ ತುದಿಯಲ್ಲಿ `ದ ಪೀಕ್ ಟವರ್~ ಎಂಬ ವಿಶಿಷ್ಟ ವಾಸ್ತುಶಿಲ್ಪದ ವಾಣಿಜ್ಯ ಸಂಕೀರ್ಣವಿದೆ. ಆ ಟವರ್‌ನ ಮೇಲಿರುವುದೇ `ಸ್ಕೈ ಟೆರ‌್ರೆಸ್~. ಇಲ್ಲಿಂದ ಹಾಂಕಾಂಗ್‌ನ ವಿಹಂಗಮ ನೋಟ ಸುಂದರವಾಗಿ ಅನಾವರಣಗೊಳ್ಳುತ್ತದೆ.ಈ ಸಂಕೀರ್ಣದಲ್ಲಿ ಉಡುಗೊರೆಗಳು, ಗಡಿಯಾರಗಳು, ಆಭರಣಗಳು, ಫ್ಯಾಷನ್ ಮತ್ತಿತರ ಸಾಮಗ್ರಿಗಳ ಅಂಗಡಿಗಳು, ಚೈನೀಸ್, ಜಪಾನೀಸ್ ರೆಸ್ಟೋರೆಂಟ್‌ಗಳು ಇವೆ.ಈ ಸಂಕೀರ್ಣದಲ್ಲಿರುವ `ಮೇಡಮ್ ಟುಸ್ಸಾಡ್ಸ್~ ಸಂಗ್ರಹಾಲಯದಲ್ಲಿ ಸಿನಿಮಾ, ರಾಜಕೀಯ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿನ ಜಗತ್ಪ್ರಸಿದ್ಧರ ಮೇಣದ ಬೊಂಬೆಗಳಿವೆ. ಗಾಂಧೀಜಿಯಿಂದ ಬರಾಕ್ ಒಬಾಮವರೆಗೆ, ಜಾಕಿಚಾನ್‌ನಿಂದ ಮೈಕೇಲ್ ಜಾಕ್ಸನ್‌ವರೆಗೆ ತಮ್ಮ ಪ್ರೀತಿಪಾತ್ರ ಸೆಲೆಬ್ರಿಟಿಗಳ ಬೊಂಬೆಗಳೊಂದಿಗೆ ಅಭಿಮಾನಿಗಳು ಛಾಯಾಚಿತ್ರ ತೆಗೆಸಿಕೊಂಡು ಸಂಭ್ರಮಿಸುತ್ತಾರೆ.ಮನರಂಜನೆ ಜತೆ ಸಾಹಸ ಬಯಸುವವರ ನೆಚ್ಚಿನ ತಾಣ ಓಷನ್ ಪಾರ್ಕ್. ಅಕ್ವಾ ಸಿಟಿ, ಮಳೆಕಾಡು, ಥ್ರಿಲ್ ಮೌಂಟೇನ್ ಮೊದಲಾದ ಆಕರ್ಷಣೆಗಳೊಂದಿಗೆ ಎಲ್ಲ ವಯೋಮಾನದವರನ್ನು ಸೆಳೆಯುತ್ತಿರುವ ಈ ಪಾರ್ಕ್‌ಗೆ 2012ರ ಅಂತ್ಯಕ್ಕೆ ವಿಶ್ವದ ನಂಬರ್ ಒನ್ ಮರೀನ್ ಥೀಮ್ ಪಾರ್ಕ್ ಎನಿಸಿಕೊಳ್ಳುವ ಮಹಾ ಗುರಿ ಇದೆ. ಆ ದಿಸೆಯಲ್ಲಿ ಪಾರ್ಕ್ ಸಜ್ಜಾಗುತ್ತಿದೆ. ಆಳ ಕಡಲಿನ ತುಣಕನ್ನು ಕತ್ತರಿಸಿ ತಂದಿಟ್ಟಂತಿರುವ `ಗ್ರಾಂಡ್ ಅಕ್ವೇರಿಯಂ~ ಜಗತ್ತಿನ ಅತಿ ದೊಡ್ಡ ಮತ್ಸ್ಯಾಲಯ.ಓಷನ್ ಪಾರ್ಕ್‌ನಷ್ಟೇ ದೊಡ್ಡ ಪ್ರಮಾಣದಲ್ಲಿ ಹಾಂಕಾಂಗ್ ಡಿಸ್ನಿಲ್ಯಾಂಡ್ ನಿರ್ಮಾಣಗೊಂಡಿದೆ. 70ಕ್ಕೂ ಹೆಚ್ಚು ಆಕರ್ಷಣೆಗಳಿರುವ ಡಿಸ್ನಿಲ್ಯಾಂಡ್, ಚಿಣ್ಣರಿಗೆ ಮಾತ್ರವಲ್ಲದೇ ಎಲ್ಲರಿಗೂ ಮುದ ನೀಡುವ ಕಿನ್ನರಲೋಕದಂತಿದೆ.

`ಟ್ರಿಪ್ ಅಡ್ವೈಸರ್~ ಎಂಬ ಅಂತರರಾಷ್ಟ್ರೀಯ ಸಂಸ್ಥೆಯ ಸಮೀಕ್ಷೆ ಪ್ರಕಾರ ವಿಶ್ವದ ಹತ್ತು ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಹಾಂಕಾಂಗ್ ಕೂಡ ಒಂದು. ಕಳೆದ ಹತ್ತು ತಿಂಗಳಲ್ಲಿ ಮಹಾನಗರಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 35 ಲಕ್ಷಕ್ಕೂ ಹೆಚ್ಚು. ಇದು ಹಾಂಕಾಂಗ್ ಒಟ್ಟು ಜನಸಂಖ್ಯೆಯ ಅರ್ಧದಷ್ಟು.ಪ್ರವಾಸೋದ್ಯಮದ ಜತೆಗೆ ಬ್ಯಾಂಕಿಂಗ್ ಮತ್ತು ಅಂತರರಾಷ್ಟ್ರೀಯ ಹಣಕಾಸು ವ್ಯವಹಾರಗಳಿಂದ ಹಾಂಕಾಂಗ್ ಶ್ರೀಮಂತವಾಗಿದೆ. ಶಿಕ್ಷಣ ಪಡೆಯುವಾಗಲೇ ವಿದ್ಯಾರ್ಥಿಗಳು ಅರೆಕಾಲಿಕವಾಗಿ ದುಡಿಯುವ ಅವಕಾಶಗಳಿವೆ. ನಿರುದ್ಯೋಗಿಗಳೇ ಇಲ್ಲವೆಂಬಷ್ಟರ ಮಟ್ಟಿಗೆ ವಯಸ್ಸಾದವರು ಸಹ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.ಇಡೀ ಮಹಾನಗರವೇ ನೋಡಿ ಆನಂದಪಡಬಹುದಾದ ರೀತಿಯಲ್ಲಿ ಇದೆ. ಎಲ್ಲೆಲ್ಲೂ ಒಪ್ಪ ಓರಣ. ಎಲ್ಲೆಂದರಲ್ಲಿ ಕಸ ಹಾಕುವ, ಉಗಿದು ಗಲೀಜು ಮಾಡುವ ಚಾಳಿ ಇರುವವರು ಸಹ ಅಲ್ಲಿನ ಪರಿಸರ ನೋಡಿ ತಮ್ಮಷ್ಟಕ್ಕೆ ತಾವೇ ಸ್ವಚ್ಛತೆಯ ಪಾಠ ಕಲಿತುಬಿಡುತ್ತಾರೆ.ವಾಹನ ಸವಾರರನ್ನು ಹಿಡಿದು ದಂಡ ಹಾಕಲು ಕಾದು ಕುಳಿತ ಸಂಚಾರಿ ಪೊಲೀಸರು ಅಲ್ಲೆಲ್ಲೂ ಕಾಣಲಿಲ್ಲ. ಪೊಲೀಸರಂತೂ ಕಾಣಲೇ ಇಲ್ಲ. ಆದರೂ ಅಲ್ಲಿನ ಸಂಚಾರ ವ್ಯವಸ್ಥೆ ಅಥವಾ ಜನ ಜೀವನದಲ್ಲಿ ಅಶಿಸ್ತು, ಗೊಂದಲ ಇರಲಿಲ್ಲ. ಮಧ್ಯರಾತ್ರಿ ನಂತರವೂ ಪ್ರಮುಖ ಬೀದಿಗಳಲ್ಲಿ ವ್ಯಾಪಾರ ವಹಿವಾಟು, ಜನರ ಓಡಾಟ ನಡೆದೇ ಇರುತ್ತದೆ. ತಡ ರಾತ್ರಿಯಲ್ಲಿ ಯುವತಿಯರು ಒಬ್ಬೊಬ್ಬರೇ ನಿರಾತಂಕವಾಗಿ ಓಡಾಡುವುದು ಸಾಮಾನ್ಯ.ಚೀನೀಯರು ಮರ ಮತ್ತು ಲೋಹದ ಪದಾರ್ಥಗಳನ್ನು ಬಿಟ್ಟು ಉಳಿದೆಲ್ಲವನ್ನೂ ತಿನ್ನುತ್ತಾರೆ ಎಂಬ ಮಾತಿದೆ. ಹಾಂಕಾಂಗ್ ಜನರೂ ಅಷ್ಟೆ. ಏನೆಲ್ಲ ತಿಂದರೂ ಅಲ್ಲಿನ ಜನರು ಸ್ಲಿಮ್ ಮತ್ತು ಫಿಟ್. ಅದಕ್ಕೆ ಮಸಾಲೆ ಮತ್ತು ಜಿಡ್ಡು ರಹಿತ ತಿಂಡಿ ತಿನಿಸುಗಳೇ ಕಾರಣ. ಹೆಚ್ಚು ಹೆಚ್ಚು ನಡೆಯುವ ಅಭ್ಯಾಸವೂ ಅಲ್ಲಿನವರನ್ನು ಆರೋಗ್ಯವಂತರನ್ನಾಗಿ ಇರಿಸಿರಬಹುದು.ಚಿತ್ರಮಂದಿರಗಳ ಮುಂದೆ ಸರದಿ ಸಾಲು ಕಾಣಲಿಲ್ಲ. ಆದರೆ ದುಬಾರಿ ಸೂಟ್ ಮಾರಾಟ ಮಾಡುವ ಮಳಿಗೆಯೊಂದರ ಮುಂದೆ ಸರದಿ ಸಾಲಿನಲ್ಲಿ ಜನರು ನಿಂತಿದ್ದುದು ವಿಶೇಷವಾಗಿತ್ತು. ಅಷ್ಟರ ಮಟ್ಟಿಗೆ ಅಲ್ಲಿನ ಜನರು ಫ್ಯಾಷನ್ ಪ್ರಿಯರು.ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡುವುದು ಅಲ್ಲಿನ ಜನರ ಸ್ವಭಾವವೇ ಆಗಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಮಾಧ್ಯಮ ತಂಡದ ಮಾರ್ಗದರ್ಶಕಿ ರೊಸೆನ್ನಾ ಶಮ್ ಹೇಳಿದ್ದು- `ಹೇಳಿದ ಸಮಯಕ್ಕೆ ಬಾರದವನು ಏನನ್ನೂ ಸಾಧಿಸಲಾರ ಎಂಬುದು ಚೀನಿಯರ ನಂಬಿಕೆ~. ಪ್ರಜೆಗಳೆಲ್ಲರ ಶಿಸ್ತುಬದ್ಧ ಜೀವನವೇ ಹಾಂಕಾಂಗ್ ಅನ್ನು ಸದಾ ಪ್ರಗತಿ ಪಥದಲ್ಲಿ ಕೊಂಡೊಯುತ್ತಿರುವ ಪ್ರೇರಕ ಶಕ್ತಿ ಎಂದೆನಿಸುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry