ಹಾಕಿ: ಅರ್ಜುನ್ ಹಾಲಪ್ಪ ನಾಯಕ

7

ಹಾಕಿ: ಅರ್ಜುನ್ ಹಾಲಪ್ಪ ನಾಯಕ

Published:
Updated:
ಹಾಕಿ: ಅರ್ಜುನ್ ಹಾಲಪ್ಪ ನಾಯಕ

ನವದೆಹಲಿ (ಪಿಟಿಐ): ಕರ್ನಾಟಕದ ಅರ್ಜುನ್ ಹಾಲಪ್ಪ  ಅವರನ್ನು ಮಲೇಷ್ಯಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ ಭಾಗವಹಿಸುವ ಭಾರತ ತಂಡದ ನಾಯಕರಾಗಿ ಆಯ್ಕೆ ಮಾಡಲಾಗಿದೆ.

ಭಾರತ ಹಾಕಿ ತಂಡದ ನಾಯಕರಾಗಿದ್ದ ರಾಜ್ಪಾಲ್ ಸಿಂಗ್ ಬದಲಿಗೆ ಹಿರಿಯ ಆಟಗಾರ ಅರ್ಜುನ್ ಹಾಲಪ್ಪ ಅವರನ್ನು ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾತ್ರಾ ಬುಧವಾರ ಪ್ರಕಟಿಸಿದರು.

ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಚೀನಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ರಾಜ್ಪಾಲ್ ಸಿಂಗ್ ಭಾರತ ತಂಡವನ್ನು ಮುನ್ನಡೆಸಿದ್ದರು.

ಟೂರ್ನಿಗೆ ಸಿದ್ಧಗೊಳ್ಳಲು ಏಪ್ರಿಲ್ 4 ಮತ್ತು 5ರಂದು ನವದೆಹಲಿಯ ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಟಗಾರರಿಗೆ ಅಭ್ಯಾಸ ಶಿಬಿರ ನಡೆಯಲಿದೆ ಎಂದು ಬಾತ್ರಾ ತಿಳಿಸಿದರು.

ಈ ಟೂರ್ನಿಗೆ ಆಯ್ಕೆ ಮಾಡಲಾಗಿರುವ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸಂದೀಪ್ ಸಿಂಗ್ ಹಾಗೂ ಸರ್ದಾರ್ ಸಿಂಗ್ ಸ್ಥಾನ ಪಡೆದಿಲ್ಲ. ‘ಟೂರ್ನಿಗೆ ಸಂಭಾವ್ಯ ಆಟಗಾರರನ್ನು ಆಯ್ಕೆ ಮಾಡಲು ಮಾರ್ಚ್ 15ರಂದು ನಡೆದ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ  ಸಂದೀಪ್ ಸಿಂಗ್ ಹಾಗೂ ಸರ್ದಾರ್ ಸಿಂಗ್ ಭಾಗವಹಿಸಿರಲಿಲ್ಲ. ಅವರು ಬೆಲ್ಜಿಯಂನಲ್ಲಿ ನಡೆಯುತ್ತಿದ್ದ ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ದೂರವಾಣಿ ಮೂಲಕ ಮಾತ್ರ ಬೆಲ್ಜಿಯಂನಲ್ಲಿ ಇರುವುದಾಗಿ ಸಂದೀಪ್ ಹಾಗೂ ಸರ್ದಾರ್ ಸಿಂಗ್ ತಿಳಿಸಿದ್ದರು. ಆದರೆ, ಈ ಕುರಿತು ಬರವಣಿಗೆ ರೂಪದಲ್ಲಿ ಯಾವುದೇ ದಾಖಲೆ ನೀಡಲಿಲ್ಲ. ಆದ್ದರಿಂದ ಅವರನ್ನು ತಂಡಕ್ಕೆ ಆಯ್ಕೆ ಮಾಡುವಾಗ ಪರಿಗಣಿಸಲಿಲ್ಲ’ ಎಂದು ಬಾತ್ರಾ ವಿವರಣೆ ನೀಡಿದ್ದಾರೆ.

ಶಿಬಿರಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಇದನ್ನು ಅಶಿಸ್ತು ಎಂದು ಪರಿಗಣಿಸಿ ಸಂದೀಪ್, ಸರ್ದಾರ್ ಮೇಲೆ ಕ್ರಮ ಕೈಗೊಳ್ಳುವ ಕುರಿತು ಶಿಸ್ತು ಸಮಿತಿ ಚಿಂತನೆ ನಡೆಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry