ಶನಿವಾರ, ಡಿಸೆಂಬರ್ 7, 2019
25 °C

ಹಾಕಿ ಆಟಗಾರನ ರಾಜಕೀಯ ಗೋಲು

ಪ್ರಜಾವಾಣಿ ವಾರ್ತೆ ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ಹಾಕಿ ಆಟಗಾರನ ರಾಜಕೀಯ ಗೋಲು

ಜಲಂಧರ್ (ಪಂಜಾಬ್): ಮೈದಾನದೊಳಗೆ `ಮಂತ್ರದಂಡ~ ಹಿಡಿದು ಚಿಗರೆಯಂತೆ ಓಡುತ್ತಾ, ಮುಂಗೈ ಚಮತ್ಕಾರದಿಂದ ಎದುರಾಳಿಗಳಿಂದ ಚೆಂಡು ಕಸಿದುಕೊಂಡು ಅದ್ಭುತ ಗೋಲುಗಳ ಮೂಲಕ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ ಮಹಾನ್ ಆಟಗಾರನಿಗೆ ಹೊಸ ಅಗ್ನಿಪರೀಕ್ಷೆ. ತಮ್ಮ ಪ್ರತಿಭಾವಂತ ಆಟದಿಂದ ಎದುರಾಳಿ ತಂಡದ ಹಲವಾರು ಗೋಲುಗಳನ್ನು ತಪ್ಪಿಸಿ, ಸೋಲಿನ ದವಡೆಯಿಂದ ದೇಶವನ್ನು ಪಾರು ಮಾಡಿದ ಅವರಿಗಿದು ಹೊಸ ಮೈದಾನ. `ಪೆನಾಲ್ಟಿ ಕಾರ್ನರ್ ಹೀರೋ~ಗಿದು ಹೊಸ ಪಂದ್ಯ!ಇಷ್ಟೆಲ್ಲ ವಿವರಣೆ ಬಳಿಕ ಈ ಆಟಗಾರ ಯಾರೆಂದು ಗುರುತು ಸಿಕ್ಕಿರಬೇಕಲ್ಲ. ಕನಿಷ್ಠ ಪಕ್ಷ ಹಾಕಿ ಪ್ರಿಯರಿಗಾದರೂ ಗೊತ್ತಿರಬಹುದು. ಇವರು ಯಾರೆಂಬ ಕುತೂಹಲವೇ? ಹಾಗಾದರೆ ಬನ್ನಿ `ಜಲಂಧರ್ ದಂಡು ಪ್ರದೇಶ~ಕ್ಕೆ. ತಲೆಗೆ `ಟರ್ಬನ್~ ಸುತ್ತಿದ 47ವರ್ಷದ ಸದೃಢ ಕಾಯದ ಮನುಷ್ಯ ಮನೆ ಮನೆಗೂ ತೆರಳಿ ಮತ ಕೇಳುತ್ತಿದ್ದಾರೆ. ಅವರೇ ಪರಗತ್ ಸಿಂಗ್! ಭಾರತ ಹಾಕಿ ತಂಡದ ಮಾಜಿ ಆಟಗಾರ ಮತ್ತು ಕ್ಯಾಪ್ಟನ್! ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ನಂತರ ರಾಜಕೀಯ ಕಣಕ್ಕಿಳಿದಿರುವ ಪಂಜಾಬ್‌ನ ಎರಡನೇ ಕ್ರೀಡಾಪಟು.ಎರಡು ದಶಕಗಳ ಹಿಂದೆ ಒಲಿಂಪಿಕ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತಕ್ಕೆ ಆಡಿ, ಹಲವು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ ಗೆಲುವು ತಂದುಕೊಟ್ಟ ಪರಗತ್ ಸಿಂಗ್ `ಹೊಸ ರಾಜಕೀಯ ಇನಿಂಗ್ಸ್~ಗೆ ಮುನ್ನುಡಿ ಬರೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಅಕಾಲಿದಳದ ಅಭ್ಯರ್ಥಿಯಾಗಿ ಜಲಂಧರ್ ದಂಡು ಪ್ರದೇಶದಲ್ಲಿ ಮೈದಾನಕ್ಕಿಳಿದಿದ್ದಾರೆ. ಮೈದಾನದೊಳಗೆ ಎದುರಾಳಿಗಳ ಕಣ್ಣು ತಪ್ಪಿಸಿ ಗೋಲುಗಳನ್ನು ಹೊಡೆಯುತ್ತಿದ್ದ ಪರಗತ್ ಈಗ ತಮಗೆ ಪರಿಚಯವಿಲ್ಲದ `ರಾಜಕೀಯ ಮೈದಾನ~ದಲ್ಲಿ ಎದುರಾಳಿಗಳನ್ನು ಮಣಿಸುವರೇ ಎಂಬ ಆಸಕ್ತಿ ಜಲಂಧರ್‌ನಲ್ಲಿ ಅಷ್ಟೇ ಅಲ್ಲ, ಪಂಜಾಬಿನಾದ್ಯಂತ ಕೆರಳಿದೆ.

 

ಪರಗತ್ ಸಿಂಗ್ಮಾಜಿ ಹಾಕಿ ಆಟಗಾರ ಮಣಿಸಲು ಹೊರಟಿರುವುದು ಕಾಂಗ್ರೆಸ್ ಅಭ್ಯರ್ಥಿ ಜಗಬೀರ್ ಸಿಂಗ್ ಬ್ರಾರ್ ಅವರನ್ನು. ಕಾಕತಾಳೀಯವೆಂದರೆ 2007ರ ವಿಧಾನಸಭೆ ಚುನಾವಣೆಯಲ್ಲಿ ಜಗಬೀರ್ ಈ ಕ್ಷೇತ್ರದಲ್ಲಿ ಅಕಾಲಿದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಪ್ರಕಾಶ್‌ಸಿಂಗ್ ಬಾದಲ್ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದ ಮನ್‌ಪ್ರೀತ್‌ಸಿಂಗ್ ಅವರಿಗೆ ತೀರಾ ನಿಕಟವಾಗಿದ್ದ ಜಗಬೀರ್ ಈಚೆಗಷ್ಟೇ ಕಾಂಗ್ರೆಸ್ ಸೇರಿದ್ದಾರೆ. ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಾ ನಿಷ್ಠೆ ಬದಲಿಸುತ್ತಿದ್ದಾರೆ.ರಾಜಕಾರಣದಿಂದ ದೂರವೇ ಉಳಿದಿದ್ದ ಪರಗತ್‌ಸಿಂಗ್ ಇದುವರೆಗೆ ರಾಜ್ಯದಲ್ಲಿ ಕ್ರೀಡೆಯನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ತಮ್ಮನ್ನು ಪೂರ್ಣ ತೊಡಗಿಸಿಕೊಂಡಿದ್ದರು. ಇದಕ್ಕೆ ಪೂರಕವಾಗಿ ಅವರಿಗೆ ಕ್ರೀಡಾ ಇಲಾಖೆ ನಿರ್ದೇಶಕರ ಹೊಣೆಯೂ ಸಿಕ್ಕಿತ್ತು. ಈಗ ರಾಜಕಾರಣ ಅವರನ್ನು ಹುಡುಕಿಕೊಂಡು ಬಂದಿದೆ. ಅಕಾಲಿದಳ ಟಿಕೆಟ್ ಕೊಟ್ಟಿರುವ ಹಲವು ಗಣ್ಯರಲ್ಲಿ ಇವರೂ ಒಬ್ಬರು.`ಮೊದಲಿಗೆ ರಾಜಕೀಯ ಬೇಡ ಎಂದು ದೂರವೇ ಉಳಿದಿದ್ದೆ.ಬಹಳಷ್ಟು ಆಲೋಚಿಸಿದ ಬಳಿಕ ಹೊಸ ಸವಾಲು ಸ್ವೀಕರಿಸಿದ್ದೇನೆ. ಇದು ನನ್ನ ಹೊಸ ಇನಿಂಗ್ಸ್. ಪಂಜಾಬಿನಲ್ಲಿ ಕ್ರೀಡೆ ಬೆಳೆಸಬೇಕಾಗಿದೆ. ಯುವಕರು ಹಾದಿ ಬಿಡುತ್ತಿದ್ದಾರೆ. ಮದ್ಯ, ಮಾದಕ ವಸ್ತುಗಳ ಚಟಗಳಿಗೆ ಬಲಿ ಆಗುತ್ತಿದ್ದಾರೆ. ಅವರನ್ನು ಸರಿದಾರಿಗೆ ತರಬೇಕಾದ ಮಹತ್ವದ ಹೊಣೆಗಾರಿಕೆ ಇದೆ~ ಎಂಬುದು ಪರಗತ್ ಹೇಳುತ್ತಾರೆ.`ಕಾಂಗ್ರೆಸ್ ಅಭ್ಯರ್ಥಿ ಅಪ್ರಾಮಾಣಿಕ ಮನುಷ್ಯ. ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಪಕ್ಷಾಂತರಿ. ಐದು ವರ್ಷಗಳಲ್ಲಿ ಮೂರು ಪಕ್ಷಗಳನ್ನು ಬದಲು ಮಾಡಿದ್ದಾರೆ. ದಂಡು ಪ್ರದೇಶದಲ್ಲಿ ಆಗಿರುವ ಎಲ್ಲ ಕೆಲಸವೂ ಅಕಾಲಿ ಸರ್ಕಾರದ ಸಾಧನೆ. ಅವರದ್ದೇನೂ ವೈಯಕ್ತಿಕ ಶ್ರಮವಿಲ್ಲ~ ಎಂದು ಎಡಬಿಡದೆ ಪ್ರಚಾರ  ಮಾಡುತ್ತಿದ್ದಾರೆ.`ಹಾಕಿಯಲ್ಲಿ ಮಾಡಿರುವ ಸಾಧನೆಯೇ ನನಗೆ ಬಂಡವಾಳ. ಪರಿಶುದ್ಧ ಮನಸಿನೊಂದಿಗೆ ರಾಜಕೀಯ ಪ್ರವೇಶ ಮಾಡಿದ್ದೇನೆ. ಇದು ವಿಭಿನ್ನ ಆಟ. ಈ ಆಟದಲ್ಲಿ ಜಯಿಸುವ ವಿಶ್ವಾಸವಿದೆ. ರಾಜಕಾರಣವನ್ನು ಉತ್ತಮ ಕೆಲಸಗಳಿಗೆ ಬಳಸಿಕೊಳ್ಳುತ್ತೇನೆ~ ಎಂದು ಮಾಜಿ ಹಾಕಿ ಆಟಗಾರ ಕ್ಷೇತ್ರದ ಜನರಿಗೆ ಭರವಸೆ ಕೊಡುತ್ತಿದ್ದಾರೆ.ದಂಡು ಪ್ರದೇಶದ ಮತದಾರರು ಪರಗತ್ ಅವರನ್ನು ಪ್ರೀತಿ- ಗೌರವಗಳಿಂದ ಕಾಣುತ್ತಿದ್ದಾರೆ. ಬೆಂಬಲ ಕೊಡುವ ಭರವಸೆ ಕೊಡುತ್ತಿದ್ದಾರೆ. ಮೈದಾನದಲ್ಲಿ ಸಹ ಆಟಗಾರರೊಂದಿಗೆ `ಸಮರ~ಕ್ಕಿಳಿಯುತ್ತಿದ್ದ ಪರಗತ್ ಈಗಲೂ ಅಭಿಮಾನಿಗಳು, ಹಾಕಿ ಪ್ರಿಯರು ಹಾಗೂ ಅಕಾಲಿದಳದ ಕಾರ್ಯಕರ್ತರ ದೊಡ್ಡ ಪಡೆಯೊಂದಿಗೆ ಮುನ್ನುಗ್ಗುತ್ತಿದ್ದಾರೆ.`ಪರಗತ್ ಪಂಜಾಬಿನಲ್ಲಿ ಕ್ರೀಡಾ ಸಂಸ್ಕೃತಿ ಬೆಳೆಸಲು ಬೇಕಾದಷ್ಟು ಮಾಡಿದ್ದಾರೆ. ರಾಜಕೀಯಕ್ಕೆ ಹೊಸ ಮುಖ. ಜನರಿಗೆ ಅದರಲ್ಲೂ ಯುವ ಪೀಳಿಗೆಗೆ ಮಾದರಿ. ಅವರನ್ನು ಬೆಂಬಲಿಸುವುದು ನಮ್ಮ ಧರ್ಮ. ವೃತ್ತಿಪರ ರಾಜಕಾರಣಿಗಳಿಗಿಂತ ಇಂಥವರೇ ಮೇಲು. ಇವರಿಗೆ ದೂರದೃಷ್ಟಿ ಇರುತ್ತದೆ~ ಎಂದು ಜಲಂಧರ್ ದಂಡು ಪ್ರದೇಶದ ವಿದ್ಯಾರ್ಥಿ ಸೋನುಸಿಂಗ್ ಅಭಿಪ್ರಾಯಪಡುತ್ತಾರೆ.ಸರ್ಕಾರಿ ಸೇವೆಗೆ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ `ಎಂಟ್ರಿ~ ಪಡೆದ ಪರಗತ್ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಅಕಾಲಿದಳದ ಕೆಲವು ಸ್ಥಳೀಯ ನಾಯಕರಿಗೆ ಅಸಮಾಧಾನವಿದೆ. ಅತೃಪ್ತರು ಒಳಗೊಳಗೇ ಹಾಕಿ ಆಟಗಾರನಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆಂಬ ಸಂಗತಿ  ಗುಟ್ಟಾಗಿ ಉಳಿದಿಲ್ಲ. ರಾಜಕೀಯದ ಗಂಧಗಾಳಿ ಗೊತ್ತಿಲ್ಲದ ಕ್ರೀಡಾಪಟುಗಳು ಇವರ ಬೆಂಬಲಕ್ಕೆ ನಿಂತಿದ್ದಾರೆ. ಹಗಲು-ರಾತ್ರಿ ಇವರ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಪಕ್ಷಾತೀತವಾಗಿ `ಪಂಜಾಬ್ ಕ್ರೀಡಾ ಐಕಾನ್~ ಅವರನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.ಮಾಜಿ ಶಾಸಕ ಬ್ರಾರ್ 2010ರ ನವೆಂಬರ್‌ನಲ್ಲಿ ಅಕಾಲಿದಳ ತೊರೆದಿದ್ದಾರೆ. ಮನಪ್ರೀತ್ ಅವರ ಪಿಪಿಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು ಈಚೆಗೆ ಕಾಂಗ್ರೆಸ್ ಸೇರಿ ಟಿಕೆಟ್ ಪಡೆದಿದ್ದಾರೆ. ಬ್ರಾರ್ ಶಾಸಕರಾಗಿ ಮಾಡಿರುವ ಕೆಲಸಗಳನ್ನು ಮತದಾರರ ಮುಂದಿಡುತ್ತಿದ್ದಾರೆ. ಮತ್ತೊಂದು ಅವಕಾಶ ಕೊಡುವಂತೆ ಕೇಳುತ್ತಿದ್ದಾರೆ.  ಕಾಂಗ್ರೆಸ್‌ನಿಂದ ಟಿಕೆಟ್‌ಗೆ ಪ್ರಯತ್ನಿಸಿ ವಿಫಲರಾದ ಗಜೇಂದರ್ ಸಿಂಗ್ ಜಾಹೋಲ್ ಪಂಜಾಬ್ ಪೀಪಲ್ ಪಕ್ಷದ ಅಭ್ಯರ್ಥಿ. ಜಲಂಧರ್ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇವರು ಟಿಕೆಟ್ ವಂಚಿತರಾದ ಬಳಿಕ ಮನ್‌ಪ್ರೀತ್ ಪಕ್ಷ ಸೇರಿದ್ದಾರೆ. ಎಲ್ಲ ಕ್ಷೇತ್ರಗಳಂತೆ ಇಲ್ಲೂ ಪರಗತ್ ಮತ್ತು ಬ್ರಾರ್ ನಡುವೆ ನೇರ ಹಣಾಹಣಿ ನಡೆಯುವುದು ನಿಶ್ಚಿತ. ಪಿಪಿಪಿ ಎರಡೂ ಪಕ್ಷಗಳ ಮತಗಳನ್ನು ಅಷ್ಷಷ್ಟು ಕಿತ್ತಿಕೊಳ್ಳಬಹುದು.

ಮೇಲ್ನೋಟಕ್ಕೆ ಹಾಕಿ ಆಟಗಾರ ಕಾಂಗ್ರೆಸ್ ಅಭ್ಯರ್ಥಿಗಿಂತ ಮುಂದಿರುವಂತೆ ಕಾಣುತ್ತಿದೆ. ಚುನಾವಣೆಗೆ ಇನ್ನೆರಡು ದಿನ ಉಳಿದಿದ್ದು ಅಷ್ಟರೊಳಗೆ ಮತದಾರರ ಮನಸು ಯಾರತ್ತ ವಾಲುವುದೋ ಬಲ್ಲವರಾರು.

ಪ್ರತಿಕ್ರಿಯಿಸಿ (+)