ಹಾಕಿ: ಆತಿಥೇಯರಿಗೆ ಮಣಿದ ಕೆನಡಾ

7

ಹಾಕಿ: ಆತಿಥೇಯರಿಗೆ ಮಣಿದ ಕೆನಡಾ

Published:
Updated:

ನವದೆಹಲಿ: ಬುಧವಾರ ರಾತ್ರಿಯ ಹೊನಲು ಬೆಳಕಿನಲ್ಲಿ ಪ್ರಜ್ವಲಿಸಿದ ಸಂದೀಪ್ ಸಿಂಗ್ ಮತ್ತೊಮ್ಮೆ ಭಾರತದ ಪಾಲಿಗೆ ಆಪದ್ಬಾಂಧವನಾದರು.

ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯ ಪುರುಷರ ವಿಭಾಗದ ರೋಚಕ ಪಂದ್ಯದಲ್ಲಿ ಸಂದೀಪ್ ಗಳಿಸಿದ ಭಾರತ ತಂಡವು 3-2ರಿಂದ ಕೆನಡಾ ತಂಡದ ಸವಾಲನ್ನು ಮೆಟ್ಟಿ ಗೆದ್ದಿತು. ಈ ಮೂಲಕ ಲೀಗ್‌ನ ನಾಲ್ಕು ಪಂದ್ಯಗಳನ್ನು ಗೆದ್ದು 12 ಅಂಕಗಳನ್ನು ಗಳಿಸಿರುವ ಭಾರತ, ಫೆಬ್ರುವರಿ 26ರಂದು ನಡೆಯಲಿರುವ ಫೈನಲ್‌ನಲ್ಲಿ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ.

ಸಂದೀಪ್ ತಂದಿತ್ತ ಗೆಲುವು: ತೀವ್ರ ಪ್ರತಿರೋಧ ಒಡ್ಡಿದ ಕೆನಡಾ ತಂಡದಿಂದ ಗೆಲುವನ್ನು ಕಿತ್ತುಕೊಳ್ಳಲು ಭಾರತ ತಂಡವು ಸಾಕಷ್ಟು ಬೆವರು ಹರಿಸಿತು. ಡ್ರ್ಯಾಗ್‌ಫ್ಲಿಕ್ ಪರಿಣಿತ ಸಂದೀಪ್ ಸಿಂಗ್ ಮತ್ತೊಮ್ಮೆ ತಮ್ಮ ಕೈಚಳಕ ಮೆರೆದು ಪೆನಾಲ್ಟಿ ಕಾರ್ನರ್‌ಗಳಲ್ಲಿ ಎರಡು ಗೋಲು ಗಳಿಸಿದ್ದು ತಂಡದ ಗೆಲುವಿಗೆ ಕಾರಣವಾಯಿತು. ಕಳೆದ ಎರಡು ಪಂದ್ಯಗಳಲ್ಲಿಯೂ ಅವರು ತಂಡದ ಗೆಲುವಿನ ರೂವಾರಿಯಾಗಿದ್ದರು.

ಮೊದಲ ಮೂರು ಪಂದ್ಯಗಳಲ್ಲಿ ಭಾರತ ತಂಡವು ತೋರಿದ್ದ ವೇಗ ಮತ್ತು ದಾಳಿಯ ತೀವ್ರತೆ ಈ ಪಂದ್ಯದಲ್ಲಿ ಇರಲಿಲ್ಲ. ಕೆನಡಾದವರೂ ಉತ್ತಮ ದಾಳಿ ಸಂಘಟಿಸಿದ್ದರು. ಮೊದಲ 25 ನಿಮಿಷಗಳವರೆಗೆ ಎರಡೂ ತಂಡಗಳು ಗೋಲು ಗಳಿಸಲಿಲ್ಲ. ಈ ಅವಧಿಯಲ್ಲಿ ಸಿಕ್ಕ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಿನಲ್ಲಿ ಪರಿವರ್ತಿಸಲು ಸಂದೀಪ್‌ಸಿಂಗ್ ತಪ್ಪಿದ್ದರು.

ಮೊದಲಾರ್ಧಕ್ಕೆ ಹತ್ತು ನಿಮಿಷ ಬಾಕಿಯಿದ್ದಾಗ ಶಿವೇಂದ್ರಸಿಂಗ್ ಕೈಚಳಕ ತೋರಿದರು. ಕೆನಡಾ ಗೋಲು ವಲಯಕ್ಕೆ ನುಗ್ಗಿದ ತುಷಾರ್ ಖಾಂಡ್ಕರ್ ಎದುರಾಳಿ ಡಿಫೆಂಡರ್ ಕಾಲುಗಳ ನಡುವಿನಿಂದ ನೀಡಿದ ಪಾಸ್ ಅನ್ನು ಬಲಬದಿಯಲ್ಲಿದ್ದ ಶಿವೇಂದ್ರಸಿಂಗ್ ಮೆಲ್ಲಗೆ ಗೋಲುಪೆಟ್ಟಿಗೆಗೆ ತಳ್ಳಿದ್ದೇ ತಡ, ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾರತದ ತ್ರಿವರ್ಣಧ್ವಜ ನಲಿಯಿತು. ಏಳುನೂರು ಪ್ರೇಕ್ಷಕರು ಸಂಭ್ರಮಿಸಿದರು.

ತಿರುಗಿ ಬಿದ್ದ ಕೆನಡಾ: ದ್ವಿತಿಯಾರ್ಧ ಆರಂಭವಾಗಿ ಐದನೇ  ನಿಮಿಷದಲ್ಲಿಯೇ ಸಂದೀಪ್‌ಸಿಂಗ್ ಪೆನಾಲ್ಟಿ ಕಾರ್ನರ್‌ಗೆ ಗೋಲಿನ ರೂಪ ಕೊಟ್ಟು ಆತಿಥೇಯರಿಗೆ 2-0 ಮುನ್ನಡೆ ಒದಗಿಸಿದರು. ಆದರೆ ಈ ಖುಷಿ ಹತ್ತು ನಿಮಿಷಗಳ ನಂತರ ಇರಲಿಲ್ಲ. ಬಿರುಸಿನ ಆಟಕ್ಕೆ ಇಳಿದ ಕೆನಡಾ 50ನೇ ನಿಮಿಷದಲ್ಲಿ ಮಾರ್ಕ್ ಪಿಯರ್ಸನ್ ಗೋಲ್‌ಕೀಪರ್ ಶ್ರಿಜೇಶ್ ಅವರನ್ನು (ಭರತ್ ಚೆಟ್ರಿ ವಿಶ್ರಾಂತಿ ಪಡೆದಿದ್ದರು. ಬದಲಿಗೆ ಸರದಾರ ಸಿಂಗ್ ತಂಡದ ನಾಯಕತ್ವ ವಹಿಸಿದ್ದರು) ವಂಚಿಸಿ ಆಕರ್ಷಕ ಗೋಲು ಗಳಿಸಿದರು.

ಇದರಿಂದ ಹುರುಪುಗೊಂಡ ಕೆನಡಾದವರು ಮತ್ತಷ್ಟು ದಾಳಿಗಿಳಿದರು. ಈ ಸಂದರ್ಭ ಪೆನಾಲ್ಟಿ ಕಾರ್ನರ್ ಅವಕಾಶ ಅವರಿಗೆ ಸಿಕ್ಕಿತು. 53ನೇ ನಿಮಿಷದಲ್ಲಿ ಸಿಕ್ಕ ಕಾರ್ನರ್‌ನಲ್ಲಿ ಟಪ್ಪರ್ ಸ್ಕಾಟ್ ಮಾಡಿ ಹಿಟ್ ಮೂವರು ಡಿಫೆಂಡರ್ ಮತ್ತು ಗೋಲ್ ಕೀಪರ್ ಅವರನ್ನು ದಾಟಿ ಗೋಲು ಪೆಟ್ಟಿಗೆ ಸೇರಿತು.

ಈ ಸಂದರ್ಭದಲ್ಲಿ ಆಟಗಾರರ ನಡುವೆ ಮಾತಿನ ಚಕಮಕಿ, ತಳ್ಳಾಟಗಳೂ ನಡೆದವು ಇದರಿಂದ ಕೆನಡಾದ ಮಾರ್ಕ್ ಪಿಯರ್ಸನ್ (57ನಿ) ಮತ್ತು ಮಿಡ್‌ಫೀಲ್ಡರ್ ರಿಚರ್ಡ್ ಹಿಲ್ಡರೆತ್ (60ನಿ) ಹಸಿರು ಕಾರ್ಡ್ ದರ್ಶನ ಪಡೆದರು.

61ನೇ ನಿಮಿಷದಲ್ಲಿಯೇ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಕೂಡ ವರದಾನವಾಗಿ ಸಿಕ್ಕಿತು. ಸಂದೀಪ್‌ಸಿಂಗ್ ಕೆಳಹಂತದ ಎತ್ತರಕ್ಕೆ ಮಾಡಿದ ಡ್ರ್ಯಾಗ್ ಫ್ಲಿಕ್ ಗೋಲುಪೆಟ್ಟಿಗೆ ಸೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry