ಶನಿವಾರ, ಜೂನ್ 19, 2021
23 °C
ಕೊನೆಗೂ ಯಶ ಕಂಡ ನರಿಂದರ್‌ ಬಾತ್ರಾ ಬಣ

ಹಾಕಿ ಇಂಡಿಯಾಕ್ಕೆ ಎನ್‌ಎಫ್‌ಎಸ್‌ ಮಾನ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಹಾಕಿ ಇಂಡಿಯಾಕ್ಕೆ ಕೇಂದ್ರ ಸರ್ಕಾರವು ಕೊನೆಗೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ನ (ಎನ್‌ಎಫ್‌ಎಸ್) ಮಾನ್ಯತೆ ನೀಡಿದೆ. ಈ ಮೂಲಕ ಹಾಕಿ ಇಂಡಿಯಾದ ಹೋರಾಟದ ಪ್ರಯತ್ನಕ್ಕೆ ಫಲ ಲಭಿಸಿದೆ.ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಪಾಲನೆ ಯಲ್ಲಿ ವೈಫಲ್ಯ, ಅವ್ಯವಹಾರ ಹಾಗೂ ಆಂತರಿಕ ಬಿಕ್ಕಟ್ಟಿನ ಕಾರಣ 2012ರಲ್ಲಿ ಕ್ರೀಡಾ ಸಚಿವಾಲ ಯವು ಹಾಕಿ ಇಂಡಿಯಾದ ಮಾನ್ಯತೆಯನ್ನು ರದ್ದುಗೊಳಿಸಿತ್ತು.‘ದೇಶದಲ್ಲಿ ಹಾಕಿ ಆಡಳಿತವನ್ನು ನಿಭಾಯಿಸುವ ಏಕೈಕ ಫೆಡರೇಷನ್‌ ಹಾಕಿ ಇಂಡಿಯಾ. ಇನ್ನು ಮುಂದೆ ದೇಶದಲ್ಲಿ ಹಾಕಿ ಕ್ರೀಡೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ, ನಿಯಂತ್ರಣ, ಅಭಿವೃದ್ಧಿ ಕುರಿತು ಹಾಕಿ ಇಂಡಿಯಾವೇ ಎಲ್ಲಾ ಜವಾಬ್ದಾರಿ ಹೊರಬೇಕು’ ಎಂದು ಫೆಬ್ರುವರಿ 28ರಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯ ದರ್ಶಿ ನರಿಂದರ್‌ ಬಾತ್ರಾ ಅವರಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿ ಎ.ಕೆ.ಪ್ಯಾಟ್ರೊ ತಿಳಿಸಿದ್ದಾರೆ.‘ಭಾರತದಲ್ಲಿ ಹಾಕಿ ಕ್ರೀಡೆಯ ಮಹತ್ವವನ್ನು ಕ್ರೀಡಾ ಸಚಿವಾಲಯವು ಅರಿತಿದೆ. ಹಾಕಿಯ ಜನಪ್ರಿಯತೆ ಹಾಗೂ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಜಯಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಾನ್ಯತೆ ನೀಡಲು ನಿರ್ಧರಿಸಲಾಗಿದೆ. ಇದಕ್ಕೂ ಮುನ್ನ ನಾವು ಹಲವು ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.ಈ ಮೂಲಕ ದೇಶದಲ್ಲಿ ಹಾಕಿ ಆಡಳಿತ ನಡೆಸುವ ತಿಕ್ಕಾಟದಲ್ಲಿ ನರಿಂದರ್‌ ಬಾತ್ರಾ ಬಣ ಯಶ ಕಂಡಿದೆ. ‘ದೇಶದ ಹಾಕಿ ಕುಟುಂಬಕ್ಕೆ ಇದೊಂದು ಹೆಮ್ಮೆಯ ಕ್ಷಣ’ ಎಂದು ಬಾತ್ರಾ ಪ್ರತಿಕ್ರಿಯಿಸಿದ್ದಾರೆ. ‘ಹಾಕಿಯನ್ನು ದೇಶದಲ್ಲಿ ಅಗ್ರಮಾನ್ಯ ಕ್ರೀಡೆಯನ್ನಾಗಿ ರೂಪಿಸುವ ನಮ್ಮ ಗುರಿಗೆ ಬಲ ದೊರೆತಿದೆ. ಉತ್ತಮ ತಂಡವನ್ನು ರೂಪಿಸಬೇಕು. ಇದು ನಮ್ಮ ಗುರಿ’ ಎಂದು ಅವರು ಹೇಳಿದ್ದಾರೆ.ಸರ್ಕಾರದ ಮಾನ್ಯತೆ ಗಿಟ್ಟಿಸಲು ಯಾವುದೇ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌, ಅಂತರರಾಷ್ಟ್ರೀಯ ಸಂಸ್ಥೆ ಹಾಗೂ ಭಾರತ ಒಲಿಂಪಿಕ್‌ ಸಂಸ್ಥೆಯಿಂದ (ಐಒಎ) ಮಾನ್ಯತೆ ಹೊಂದಿರಬೇಕು. ಹಾಕಿ ಇಂಡಿಯಾವು 2009ರಿಂದಲೇ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌, ಏಷ್ಯನ್‌ ಹಾಕಿ ಫೆಡರೇಷನ್‌ ಹಾಗೂ ಐಒಎ ಮಾನ್ಯತೆ ಹೊಂದಿತ್ತು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಈ ಮಾನ್ಯತೆ ನೀಡಲಾಗಿದೆ.ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ ಮಾರ್ಗ ದರ್ಶನದಲ್ಲಿ 2012ರಿಂದ ಹಾಕಿ ಇಂಡಿಯಾವು ಜಂಟಿಯಾಗಿ ಹಲವು ಪ್ರಮುಖ ಟೂರ್ನಿ ಆಯೋಜಿಸುತ್ತಾ ಬಂದಿದೆ. ಎಫ್‌ಐಎಚ್‌ ಒಲಿಂಪಿಕ್‌ ಕ್ವಾಲಿಫೈಯರ್‌, ಎಫ್‌ಐಎಚ್‌ ವಿಶ್ವ ಲೀಗ್‌ (ಎರಡನೇ ಸುತ್ತು), ಎಫ್ಐಎಚ್‌ ಪುರುಷರ ಜೂನಿಯರ್‌ ವಿಶ್ವಕಪ್‌ ಹಾಗೂ ಎಫ್‌ಐಎಚ್‌ ವಿಶ್ವ ಲೀಗ್‌ ಫೈನಲ್‌ ಟೂರ್ನಿಗಳನ್ನು ಭಾರತದಲ್ಲಿ ಆಯೋಜಿಸಲಾಗಿದೆ.ಈ ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜಿಸಿದ ಕಾರಣ 2014ರಿಂದ 2018ರ ಅವಧಿಯಲ್ಲಿ ಹಲವು ಟೂರ್ನಿಗಳನ್ನು ನಡೆಸಲು ಅವಕಾಶ ಲಭಿಸಿದೆ. ಈ ವರ್ಷ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ, 2015ರ ಎಫ್‌ಐಎಚ್‌ ಮಹಿಳಾ ವಿಶ್ವ ಲೀಗ್‌ (ಎರಡನೇ ಸುತ್ತು), ಎಫ್‌ಐಎಚ್‌ ಪುರುಷರ ವಿಶ್ವ ಲೀಗ್‌ ಫೈನಲ್‌, 2017ರ ಎಫ್‌ಐಎಚ್‌ ಪುರುಷರ ವಿಶ್ವ ಲೀಗ್‌ ಫೈನಲ್‌ ಹಾಗೂ 2018ರ ಎಫ್‌ಐಎಚ್‌ ಪುರುಷರ ವಿಶ್ವಕಪ್‌ನಂಥ ಮಹತ್ವದ ಟೂರ್ನಿಗಳನ್ನು ಆಯೋಜಿಸಲು ಭಾರತಕ್ಕೆ ಅವಕಾಶ ಸಿಕ್ಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.