ಹಾಕಿ: ಕರ್ನಾಟಕಕ್ಕೆ ಆಘಾತ

7

ಹಾಕಿ: ಕರ್ನಾಟಕಕ್ಕೆ ಆಘಾತ

Published:
Updated:
ಹಾಕಿ: ಕರ್ನಾಟಕಕ್ಕೆ ಆಘಾತ

ಬೆಂಗಳೂರು: ಕರ್ನಾಟಕ ತಂಡದ ಸೋಲಿಗೆ ಕಾರಣವಾಗಿದ್ದು ಕರ್ನಾಟಕದವರೇ ಆದ ಅರ್ಜುನ್ ಹಾಲಪ್ಪ ಹಾಗೂ ವಿ.ಎಸ್.ವಿನಯ್! ಏಕೆಂದರೆ ಏರ್ ಇಂಡಿಯಾ ತಂಡವನ್ನು ಪ್ರತಿನಿಧಿಸುತ್ತಿರುವ ಈ ಆಟಗಾರರು ಕರ್ನಾಟಕ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೂರು ಗೋಲು ಗಳಿಸಿದರು.ಪರಿಣಾಮ ಇಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಆಶ್ರಯದ ಎರಡನೇ ರಾಷ್ಟ್ರೀಯ ಸೀನಿಯರ್ ಪುರುಷರ ಹಾಕಿ ಚಾಂಪಿಯನ್‌ಷಿಪ್‌ನಿಂದ ಆತಿಥೇಯ ಕರ್ನಾಟಕ ಹೊರಬಿತ್ತು. ಅಕ್ಕಿತಿಮ್ಮನಹಳ್ಳಿಯಲ್ಲಿರುವ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಈ ಪಂದ್ಯದಲ್ಲಿ ಏರ್ ಇಂಡಿಯಾ 3-2 ಗೋಲುಗಳಿಂದ ಕರ್ನಾಟಕ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು.ಒಂದು ಹಂತದಲ್ಲಿ ಕರ್ನಾಟಕ 2-0 ಗೋಲುಗಳಿಂದ ಮುಂದಿತ್ತು. ಪಂದ್ಯದ 50ನೇ ನಿಮಿಷದವರೆಗೆ ಈ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಭಾರತ ತಂಡದ ಮಾಜಿ ನಾಯಕ ಹಾಲಪ್ಪ ಹಾಗೂ ವಿನಯ್ ಉತ್ತಮ ಆಟದ ಮೂಲಕ ಪಂದ್ಯದ ಫಲಿತಾಂಶವನ್ನು ಬದಲಾಯಿಸಿದರು.ಈ ಮೂಲಕ ಹಿಂದಿನ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ವಿರುದ್ಧ ಸೋಲು ಕಂಡಿದ್ದ ಸೇಡನ್ನು ಏರ್ ಇಂಡಿಯಾ ಆಟಗಾರರು ತೀರಿಸಿಕೊಂಡರು. ಏರ್ ಇಂಡಿಯಾ ತಂಡದವರು ಮಂಗಳವಾರ ನಡೆಯಲಿರುವ ಫೈನಲ್‌ನಲ್ಲಿ ಪಂಜಾಬ್ ಎದುರು ಪೈಪೋಟಿ ನಡೆಸಲಿದ್ದಾರೆ.ಈ ಪಂದ್ಯದ ಬಹುತೇಕ ಸಮಯ ಕರ್ನಾಟಕ ತಂಡವೇ ಮೇಲುಗೈ ಸಾಧಿಸಿತ್ತು. ಜೊತೆಗೆ ಅನುಚಿತ ಘಟನೆಗಳು ನಡೆದವು. ವಿಕ್ರಾಂತ್ ಕಾಂತ್ ಹಾಗೂ ಶಿವೇಂದ್ರ ಸಿಂಗ್ ಪರಸ್ಪರ ಡಿಕ್ಕಿಯಾದರು. ಇದರಲ್ಲಿ ಶಿವೇಂದ್ರ ಗಾಯಗೊಂಡರು.ನಾಯಕರ ನಡುವಿನ ಕಿತ್ತಾಟ
: ಕರ್ನಾಟಕ ತಂಡದ ನಾಯಕ ವಿ.ಆರ್.ರಘುನಾಥ್ ಹಾಗೂ ಏರ್ ಇಂಡಿಯಾ ತಂಡದ ನಾಯಕ ಹಾಲಪ್ಪ ನಡುವೆ ಮಾತಿನ ಚಕಮಕಿ ನಡೆಯಿತು. ಇದು ಪದೇ ಪದೇ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿತ್ತು. ಈ ಘಟನೆ 62ನೇ ನಿಮಿಷದಲ್ಲಿ ನಡೆಯಿತು. ಆದರೆ ರೆಫರಿಗಳ ಮಧ್ಯ ಪ್ರವೇಶ ಕಾರಣ ಪರಿಸ್ಥಿತಿ ಶಾಂತವಾಯಿತು. ಇವಬ್ಬರಿಗೂ ಹಳದಿ ಕಾರ್ಡ್ ನೀಡಲಾಯಿತು.ಕೆಲ ತೀರ್ಪುಗಳು ಕರ್ನಾಟಕ ತಂಡದ ಆಟಗಾರರ ಅಸಮಾಧಾನಕ್ಕೆ ಕಾರಣವಾದವು. ನಿಕಿನ್ ತಿಮ್ಮಯ್ಯ ಅವರಿಗೂ ಹಳದಿ ನೀಡಿ ಹೊರ ಕಳುಹಿಸಲಾಯಿತು. ಹಾಗಾಗಿ ಆತಿಥೇಯ ತಂಡ ಕೇವಲ 9 ಆಟಗಾರರೊಂದಿಗೆ ಆಡಬೇಕಾಯಿತು.ಕರ್ನಾಟಕ ತಂಡಕ್ಕೆ ಪುಂಡಲೀಕ್ ಬಳ್ಳಾರಿ 32ನೇ ನಿಮಿಷದಲ್ಲಿ ಗೋಲು ಗಳಿಸಿ 1-0 ಮುನ್ನಡೆ ತಂದುಕೊಟ್ಟರು. ಬಳಿಕ ನಿತಿನ್ ತಿಮ್ಮಯ್ಯ 44ನೇ ನಿಮಿಷದಲ್ಲಿ ತಂದಿತ್ತ ಗೋಲು ಮುನ್ನಡೆಯನ್ನು 2-0ಗೆ ಹೆಚ್ಚಿಸಿತು. ಆದರೆ 50ನೇ ಹಾಗೂ 61ನೇ ನಿಮಿಷದಲ್ಲಿ ಹಾಲಪ್ಪ ಗಳಿಸಿದ ಗೋಲು 2-2 ಸಮಬಲಕ್ಕೆ ಕಾರಣವಾಯಿತು. ಅವರು ಪೆನಾಲ್ಟಿ ಸ್ಟ್ರೋಕ್ ಅವಕಾಶದಲ್ಲಿ ಈ ಗೋಲು ಗಳಿಸಿದರು. ಇದು ಸಾಲದು ಎಂಬಂತೆ ಪಂದ್ಯ ಕೊನೆಗೊಳ್ಳಲು ಕೆಲವೇ ಸೆಕೆಂಡ್ ಇದ್ದಾಗ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ವಿನಯ್ (70ನೇ ನಿ.) ಗೋಲಾಗಿ ಪರಿವರ್ತಿಸಿ 3-2ರ ಗೆಲುವಿಗೆ ಕಾರಣರಾದರು.ಫೈನಲ್‌ಗೆ ಪಂಜಾಬ್: ಮತ್ತೊಂದು ಸೆಮಿಫೈನಲ್‌ನಲ್ಲಿ ಪಂಜಾಬ್ ತಂಡದವರು 4-1 ಗೋಲುಗಳಿಂದ ಹರಿಯಾಣ ಎದುರು ಗೆದ್ದರು. ವಿಜಯಿ ತಂಡದ ಗುರ್ಜಿಂದರ್ ಸಿಂಗ್ (15 ಹಾಗೂ 21ನೇ ನಿ.), ಸರ್ವಜಿತ್ ಸಿಂಗ್ (51) ಹಾಗೂ ಸತ್ಬೀರ್ ಸಿಂಗ್ (58) ಗೋಲು ಗಳಿಸಿದರು.

ಸೋಲು ಕಂಡ ಹರಿಯಾಣ ತಂಡದ ಏಕೈಕ ಗೋಲನ್ನು ನವೀನ್ ಅಂಟಿಲ್ (58ನೇ ನಿ.) ತಂದಿತ್ತರು.

ಫೈನಲ್ ಪಂದ್ಯ: ಏರ್ ಇಂಡಿಯಾ-ಪಂಜಾಬ್. ಪಂದ್ಯ ಆರಂಭ: ಮಧ್ಯಾಹ್ನ 3.30

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry