ಹಾಕಿ: ಗೋಲ್ ಕೀಪಿಂಗ್ ಕೋಚ್ ಆಗಿ ಸುಬ್ಬಯ್ಯ ನೇಮಕ

7

ಹಾಕಿ: ಗೋಲ್ ಕೀಪಿಂಗ್ ಕೋಚ್ ಆಗಿ ಸುಬ್ಬಯ್ಯ ನೇಮಕ

Published:
Updated:

ಬೆಂಗಳೂರು: ಮಾಜಿ ಒಲಿಂಪಿಯನ್ ಕರ್ನಾಟಕದ ಎ.ಬಿ. ಸುಬ್ಬಯ್ಯ ಅವರನ್ನು ಲಂಡನ್ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಟೂರ್ನಿಗೆ ನವದೆಹಲಿಯಲ್ಲಿ ಅಭ್ಯಾಸ ನಡೆಸುತ್ತಿರುವ ಭಾರತ ಹಾಕಿ ತಂಡದ ಗೋಲ್ ಕೀಪಿಂಗ್ ಕೋಚ್ ಆಗಿ ನೇಮಿಸಲಾಗಿದೆ.

ಈ ವಿಷಯವನ್ನು ಸುಬ್ಬಯ್ಯ ಅವರು ಶುಕ್ರವಾರ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ತಂಡದ ರಕ್ಷಣಾತ್ಮಕ ವಿಭಾಗ ಕೊಂಚ ದುರ್ಬಲವಾಗಿದೆ. ಈ ವಿಭಾಗಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಹಾಗಾಗಿ ನನ್ನನ್ನು  ಸಹಾಯಕ ಕೋಚ್ ಆಗಿ ನೇಮಿಸಲು ಕೇಂದ್ರ ಸರ್ಕಾರದ ಸ್ಟಿಯರಿಂಗ್ ಸಮಿತಿ ನಿರ್ಧರಿಸಿದೆ. ಈ ಬಗ್ಗೆ ಮುಖ್ಯ ಕೋಚ್ ಮೈಕಲ್  ನಾಬ್ಸ್ ಮನವಿ ಮಾಡಿದ್ದರು. ನಾನು ಗೋಲ್ ಕೀಪರ್‌ಗಳಿಗೆ ಮಾರ್ಗದರ್ಶನ ನೀಡಲಿದ್ದೇನೆ~ ಎಂದರು.

ಮಾಜಿ ಗೋಲ್ ಕೀಪರ್ ಸುಬ್ಬಯ್ಯ ಈಗ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಸದಸ್ಯ ಕೂಡ. `ನಾನು ಶನಿವಾರ ನವದೆಹಲಿಗೆ ತೆರಳಲಿದ್ದೇನೆ. ಕೋಚ್ ನಾಬ್ಸ್ ಅವರೊಂದಿಗೆ ಸಮಾಲೋಚನೆ ನಡೆಸಿ ಯೋಜನೆ ರೂಪಿಸುತ್ತೇನೆ. ಈಗ ತಂಡದಲ್ಲಿರುವ ಗೋಲ್ ಕೀಪರ್‌ಗಳಾದ ಭರತ್ ಚೆಟ್ರಿ ಹಾಗೂ ಪಿ.ಆರ್.ಶ್ರೀಜೇಶ್ ಪ್ರತಿಭಾವಂತ ಆಟಗಾರರು. ಆದರೂ ಅವರ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಅಗತ್ಯವಿದೆ~ ಎಂದರು.

`ಈ ಬಾರಿ ಒಲಿಂಪಿಕ್ಸ್‌ಗೆ ತಂಡ ಅರ್ಹತೆ ಪಡೆಯಬೇಕು ಎಂಬುದು ನಮ್ಮೆಲ್ಲರ ಗುರಿ. ಹಿಂದಿನ ಕಹಿ ನೆನಪು ಮರೆಯಬೇಕು. ಹಾಗಾಗಿ ಈ ಬಾರಿ ಶಿಬಿರಕ್ಕೆ ಹೆಚ್ಚು ಕೊಡಲಾಗುತ್ತಿದೆ. ಪ್ರತಿ ಆಟಗಾರರ ಮೇಲೆ ನಿಗಾ ಇಟ್ಟು ಮಾರ್ಗದರ್ಶನ ನೀಡುತ್ತಿದ್ದೇವೆ~ ಎಂದು `ಹಾಕಿ ಕರ್ನಾಟಕ~ ಕಾರ್ಯದರ್ಶಿ ಕೂಡ ಆಗಿರುವ ಸುಬ್ಬಯ್ಯ ಹೇಳಿದರು.

ಮಾಜಿ ನಾಯಕರಾದ ಅರ್ಜುನ್ ಹಾಲಪ್ಪ ಹಾಗೂ ರಾಜ್ಪಾಲ್ ಸಿಂಗ್ ಅವರನ್ನು ತಂಡದಿಂದ ಕೈಬಿಟ್ಟ ಕಾರಣ ಉದ್ಭವಿಸಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸುಬ್ಬಯ್ಯ, `ಇದು ಆಯ್ಕೆದಾರರ ತೀರ್ಮಾನವಲ್ಲ. ಬದಲಾಗಿ ಕಳೆದ ಆರು ತಿಂಗಳಿನಿಂದ ಆಟಗಾರರನ್ನು ಗಮನಿಸುತ್ತಿರುವ ಕೋಚ್ ನಾಬ್ಸ್ ನಿರ್ಧಾರ. ನಾಲ್ಕು ಟೂರ್ನಿಗಳಲ್ಲಿ ಅವರು ಆಟಗಾರರ ಸಾಮರ್ಥ್ಯ ಪರೀಕ್ಷಿಸಿದ್ದಾರೆ~ ಎಂದರು.

`ಈಗ ಆಯ್ಕೆ ಮಾಡಲಾಗಿರುವ ತಂಡ ಸಮತೋಲನದಿಂದ ಕೂಡಿದೆ. ಯುವಕರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಅನುಭವಿಗಳೂ ತಂಡದಲ್ಲಿದ್ದಾರೆ. ಆದರೆ ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡರೂ ಅಲ್ಲಿ ವಿವಾದ ಇದ್ದೇ ಇರುತ್ತದೆ~ ಎಂದೂ ಅವರು ನುಡಿದರು.

ಫೆ.18ರಿಂದ 26ರವರೆಗೆ ನವದೆಹಲಿಯ ಧ್ಯಾನಚಂದ್ ರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry