ಸೋಮವಾರ, ಮೇ 23, 2022
21 °C

ಹಾಕಿ: ಜೂನಿಯರ್ ಆಟಗಾರರಿಗೆ ಪ್ರೋತ್ಸಾಹಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ಹಿರಿಯರ ತಂಡದ ಆಟಗಾರರಿಗೆ ಶ್ರೇಣೀಕೃತ ವೇತನ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿರುವ ಹಾಕಿ ಇಂಡಿಯಾ (ಎಚ್‌ಐ) ಇದೀಗ ಜೂನಿಯರ್ ಆಟಗಾರರಿಗೆ ಪ್ರತಿ ತಿಂಗಳು ರೂ. 10 ಸಾವಿರ ಪ್ರೋತ್ಸಾಹಧನ ನೀಡಲು ನಿರ್ಧರಿಸಿದೆ.ಸಂಭವನೀಯರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಜೂನಿಯರ್ ಆಟಗಾರ ಹಾಗೂ ಆಟಗಾರ್ತಿಯರು ಇದರ ಪ್ರಯೋಜನ ಪಡೆಯಲಿದ್ದಾರೆ. `ಹಿರಿಯ ಆಟಗಾರರ ಶ್ರೇಣೀಕೃತ ವೇತನ ವ್ಯವಸ್ಥೆ ಹೇಗಿರಬೇಕು ಎಂಬುದರ ಬಗ್ಗೆ ಈಗಾಗಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಮೊದಲ ಶ್ರೇಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರರು ವರ್ಷಕ್ಕೆ ಎಂಟು ಲಕ್ಷ ರೂ. ಪಡೆಯುವರು. ಆದರೆ ಜೂನಿಯರ್ ತಂಡದವರಿಗೆ ಹಣಕಾಸಿನ ನೆರವು ನೀಡುವುದು ಅಗತ್ಯ ಎಂಬುದನ್ನು ಮನಗಂಡಿದ್ದೇವೆ~ ಎಂದು ಎಚ್‌ಐ ಕಾರ್ಯದರ್ಶಿ ನರೀಂದರ್ ಬಾತ್ರ ತಿಳಿಸಿದರು.`ಜೂನಿಯರ್ ತಂಡದವರಿಗೆ (ಪುರುಷ ಮತ್ತು ಮಹಿಳೆಯರು) ವರ್ಷದಲ್ಲಿ ರೂ. 1.2 ಲಕ್ಷ (ಪ್ರತಿ ತಿಂಗಳು ರೂ. 10,000) ಪ್ರೋತ್ಸಾಹನ ಧನ ನೀಡಲು ನಿರ್ಧರಿಸಲಾಗಿದೆ. ಇದರಿಂದ ಆಟಗಾರರಿಗೆ ತಮಗೆ ಅಗತ್ಯವಿರುವ ಸಲಕರಣೆಗಳನ್ನು ಖರೀದಿಸಲು ಸಾಧ್ಯ. ಹಾಕಿ ಸ್ಟಿಕ್‌ಗಳಿಗೆ ಹೆಚ್ಚಿನ ಬೆಲೆಯಿದೆ. ಅದೇ ರೀತಿ ಆಸ್ಟ್ರೋಟರ್ಫ್‌ನಲ್ಲಿ ಆಡುವ ಸಂದರ್ಭ ಉತ್ತಮ ಶೂಗಳ ಅಗತ್ಯವಿದೆ~ ಎಂದು ಅವರು ನುಡಿದರು.`ಆದರೆ ಗೋಲ್‌ಕೀಪರ್‌ಗಳು ಈ ಹಣದಿಂದ ತಮಗೆ ಅಗತ್ಯವಿರುವ ಸಲಕರಣೆ ಖರೀದಿಸಬೇಕಿಲ್ಲ. ಏಕೆಂದರೆ ಗೋಲ್‌ಕೀಪಿಂಗ್ ಪರಿಕರಗಳು ತುಂಬಾ ದುಬಾರಿ. ನಾವು ನೀಡುವ ಹಣದಲ್ಲಿ ಅದನ್ನು ಕೊಂಡುಕೊಳ್ಳುವುದು ಕಷ್ಟ. ಅದನ್ನು ಎಚ್‌ಐ ಒದಗಿಸಿಕೊಡಲಿದೆ~ ಎಂದರು.

 

`ಎಲ್ಲ ಆಟಗಾರರ ಹಾಗೂ ಅವರ ಹೆತ್ತವರ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದಿದ್ದೇವೆ. 18 ವರ್ಷ ವಯಸ್ಸಿಗಿಂತ ಕೆಳಗಿನ ಆಟಗಾರ ಅಥವಾ ಆಟಗಾರ್ತಿಗೆ ನೀಡುವ ಹಣವನ್ನು ಅವರ ಹೆತ್ತವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು~ ಎಂದು ಬಾತ್ರ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.