ಹಾಕಿ ತಂಡದ ಎರಡು ದಿನದ ಆಯ್ಕೆ ಟ್ರಯಲ್ಸ್‌ಗೆ ತೆರೆ...

7

ಹಾಕಿ ತಂಡದ ಎರಡು ದಿನದ ಆಯ್ಕೆ ಟ್ರಯಲ್ಸ್‌ಗೆ ತೆರೆ...

Published:
Updated:
ಹಾಕಿ ತಂಡದ ಎರಡು ದಿನದ ಆಯ್ಕೆ ಟ್ರಯಲ್ಸ್‌ಗೆ ತೆರೆ...

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆ ಭಾರತ ತಂಡದ ಆಯ್ಕೆಗಾಗಿ ನಡೆಸಿದ ಎರಡು ದಿನಗಳ ಟ್ರಯಲ್ಸ್ ಭಾನುವಾರ ಕೊನೆಗೊಂಡಿತು. `ಟ್ರಯಲ್ಸ್‌ನಲ್ಲಿ ಪಾಲ್ಗೊಂಡ ಆಟಗಾರರ ಒಟ್ಟಾರೆ ಪ್ರದರ್ಶನ ತೃಪ್ತಿ ನೀಡಿದೆ~ ಎಂದು ಆಯ್ಕೆ ಸಮಿತಿ ಸದಸ್ಯರಲ್ಲೊಬ್ಬರಾದ ಬಲ್ಬೀರ್ ಸಿಂಗ್ ಟ್ರಯಲ್ಸ್ ಬಳಿಕ ಪ್ರತಿಕ್ರಿಯಿಸಿದರು. ಗೋಲ್‌ಕೀಪರ್‌ಗಳ ಪ್ರದರ್ಶನ ಅವರಿಗೆ ಅಷ್ಟು ತೃಪ್ತಿ ನೀಡಿಲ್ಲ.ಹಾಕಿ ಇಂಡಿಯಾ ಆಯ್ಕೆ ಸಮಿತಿಯ ಇತರ ಸದಸ್ಯರಾದ ಬಿ.ಪಿ. ಗೋವಿಂದ, ಎ.ಬಿ. ಸುಬ್ಬಯ್ಯ ಮತ್ತು ಹರ್ಬಿಂದರ್ ಸಿಂಗ್ ಹಾಗೂ ಸರ್ಕಾರ ನೇಮಿಸಿರುವ ನಿರೀಕ್ಷಕ ದಿಲೀಪ್ ಟಿರ್ಕಿ ಅವರು ಎರಡು ದಿನಗಳ ಟ್ರಯಲ್ಸ್‌ನಲ್ಲಿ ಆಟಗಾರರ ಸಾಮರ್ಥ್ಯವನ್ನು ಗಮನಿಸಿದರು.ಆದರೆ ಚೀನಾಕ್ಕೆ ಪಯಣಿಸಲಿರುವ 18 ಸದಸ್ಯರ ತಂಡವನ್ನು ಆಗಸ್ಟ್ 18 ಅಥವಾ 19 ರಂದು ಪ್ರಕಟಿಸಲಾಗುವುದು ಎಂದು ಹಾಕಿ ಇಂಡಿಯಾ ಕಾರ್ಯಕಾರಿ ನಿರ್ದೇಶಕ ಅನುಪಮ್ ಗುಲಾಟಿ ತಿಳಿಸಿದರು. ಚೊಚ್ಚಲ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ಚೀನಾದಲ್ಲಿ ಸೆಪ್ಟೆಂಬರ್ 3 ರಿಂದ 11ರ ವರೆಗೆ ನಡೆಯಲಿದೆ. ಬೆಂಗಳೂರಿನ ಎಸ್‌ಎಐನಲ್ಲಿ ನಡೆಯುತ್ತಿರುವ ಆಟಗಾರರ ಎರಡನೇ ಹಂತದ ತರಬೇತಿ ಶಿಬಿರ ಆ. 27 ಅಥವಾ 28 ರಂದು ಕೊನೆಗೊಳ್ಳಲಿದೆ.ಸಂಭಾವ್ಯ ಆಟಗಾರರ ಶಿಬಿರದಲ್ಲಿರುವ 48 ಆಟಗಾರರಲ್ಲಿ 45 ಮಂದಿ ಎರಡು ದಿನಗಳ ಟ್ರಯಲ್ಸ್‌ನಲ್ಲಿ ಪಾಲ್ಗೊಂಡರು. ಮಾತ್ರವಲ್ಲ ಆಯ್ಕೆ ಸಮಿತಿ ಸದಸ್ಯರ ಗಮನ ಸೆಳೆಯುವ ಪ್ರಯತ್ನ ನಡೆಸಿದರು.ಭಾನುವಾರ ಶಿಬಿರದ ಆಟಗಾರರನ್ನು ನಾಲ್ಕು ತಂಡಗಳನ್ನಾಗಿ ವಿಂಗಡಿಸಿ ಪಂದ್ಯ ನಡೆಸಲಾಯಿತು.ಆ ಮೂಲಕ ಪ್ರತಿ ಯೊಬ್ಬರ ಸಾಮರ್ಥ್ಯವನ್ನು ಪರೀಕ್ಷಿಸುವ ಕೆಲಸ ನಡೆಯಿತು. ಕಳೆದ 45 ದಿನಗಳಿಂದ ತರಬೇತಿ ಪಡೆಯುತ್ತಿರುವ ಹೆಚ್ಚಿನ ಆಟಗಾರರು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು.`ಆಟಗಾರರ ಪ್ರದರ್ಶನದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಡಿಫೆನ್ಸ್ ಮತ್ತು ಮಿಡ್‌ಫೀಲ್ಡ್ ವಿಭಾಗದಲ್ಲಿ ಚೇತರಿಕೆಯ ಪ್ರದರ್ಶನವನ್ನು ನೋಡಿದ್ದೇನೆ. ಫಾರ್ವರ್ಡ್‌ಗಳು ಕೂಡಾ ಚುರುಕಿನ ಆಟವಾಡಿದರು. ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲೂ ಹೊಸ ಪ್ರಯೋಗಗಳು ನಡೆದಿವೆ. ರೂಪಿಂದರ್ ಪಾಲ್ ಸಿಂಗ್ ಮತ್ತು ಸರ್ದಾರ ಸಿಂಗ್ ಈ ವಿಭಾಗದಲ್ಲಿ ಮಿಂಚಿದರು~ ಎಂದು ಬಲ್ಬೀರ್ ನುಡಿದರು.`ಆದರೆ ಗೋಲ್‌ಕೀಪರ್‌ಗಳ ಪ್ರದರ್ಶನದ ಬಗ್ಗೆ ನನಗೆ ತೃಪ್ತಿ ಉಂಟಾಗಿಲ್ಲ. ಕೆಲವೊಂದು ಸುಲಭ ಗೋಲುಗಳನ್ನು ಬಿಟ್ಟುಕೊಟ್ಟರು. ಮುಂದಿನ ದಿನಗಳಲ್ಲಿ ಈ ವಿಭಾಗದಲ್ಲಿ ಸುಧಾರಣೆ ಕಾಣಬೇಕು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry