ಹಾಕಿ: ದೇಶ ಪ್ರತಿನಿಧಿಸಲು ಕರುಂಬಯ್ಯ ಸಲಹೆ

7

ಹಾಕಿ: ದೇಶ ಪ್ರತಿನಿಧಿಸಲು ಕರುಂಬಯ್ಯ ಸಲಹೆ

Published:
Updated:
ಹಾಕಿ: ದೇಶ ಪ್ರತಿನಿಧಿಸಲು ಕರುಂಬಯ್ಯ ಸಲಹೆ

ಮಡಿಕೇರಿ: ದಕ್ಷಿಣ ವಲಯದ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯಿ) ವಿದ್ಯಾರ್ಥಿನಿಲಯಗಳ ಬಾಲಕಿಯರ ಹಾಕಿ ಪಂದ್ಯಾವಳಿಗೆ ಇಲ್ಲಿನ ಸಾಯಿ ಕ್ರೀಡಾಂಗಣದಲ್ಲಿ ಪ್ರಾಧಿಕಾರದ ನಿವೃತ್ತ ಆಡಳಿತಾಧಿಕಾರಿ ಸಿ.ಎ. ಕರುಂಬಯ್ಯ ಶುಕ್ರವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಮೂರು ದಿನಗಳವರೆಗೆ ನಡೆಯುವ ಈ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ತೋರಿ, ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಬೇಕು ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.

ದಕ್ಷಿಣ ವಲಯದ ಈ ಪಂದ್ಯಾವಳಿಯಲ್ಲಿ ವಿಜೇತರಾಗುವ ತಂಡಕ್ಕೆ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಆಡಲು ಅವಕಾಶ ದೊರೆಯಲಿದೆ. ಅದರಿಂದಾಗಿ ಈ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ತೋರಬೇಕು ಎಂದು ಅವರು ತಿಳಿಸಿದರು.ಅತ್ಯುತ್ತಮ ಆಟ ಪ್ರದರ್ಶಿಸಲು ಇಲ್ಲಿರುವ ಆಸ್ಟ್ರೋಟರ್ಫ್ ಹಾಕಿ ಮೈದಾನ ಸಹಕಾರಿಯಾಗಲಿದೆ. ಕಳೆದ ವರ್ಷ ಅತ್ಯುತ್ತಮ ಆಟ ಪ್ರದರ್ಶಿಸಿದ ಮಡಿಕೇರಿ ಸಾಯಿ ವಿದ್ಯಾರ್ಥಿ ನಿಲಯದ ನಾಲ್ಕು ಬಾಲಕಿಯರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರಂತೆ ನೀವು ಕೂಡ ಆಯ್ಕೆಯಾಗಿ ಎಂದು ಅವರು ಹಾರೈಸಿದರು.ಪಂದ್ಯಾವಳಿಯಲ್ಲಿ ಮಡಿಕೇರಿ, ಕೇರಳದ ಕೊಲ್ಲಂ ಹಾಗೂ ತ್ರಿಶೂರ್, ತಮಿಳುನಾಡಿನ ಚೆನ್ನೈ ಹಾಗೂ ಮೈಲಾರ್‌ತುರೈ ಹಾಗೂ ಆಂಧ್ರ ಪ್ರದೇಶದ ಸಿಕಂದರಾಬಾದ್ ತಂಡಗಳು ಸೇರಿದಂತೆ ಆರು ತಂಡಗಳು ಭಾಗವಹಿಸಿವೆ ಎಂದು ಮಡಿಕೇರಿ ಭಾರತೀಯ ಕ್ರೀಡಾ ಪ್ರಾಧಿಕಾರದ ಆಡಳಿತಾಧಿಕಾರಿ ಬಿ.ಸಿ. ಉಮೇಶ್ ತಿಳಿಸಿದರು.ಶನಿವಾರ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಭಾನುವಾರ ಬೆಳಿಗ್ಗೆ 10 ಗಂಟೆಗೆ ಫೈನಲ್ ಪಂದ್ಯಗಳು ನಡೆಯಲಿವೆ ಎಂದು ಹೇಳಿದರು.(* ಪಂದ್ಯಾಟಗಳ ಫಲಿತಾಂಶ ಕ್ರೀಡಾ ಪುಟದಲ್ಲಿ ನೋಡಿರಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry