ಸೋಮವಾರ, ಜನವರಿ 27, 2020
15 °C

ಹಾಕಿ: ಭಾರತಕ್ಕೆ ಸರಣಿ ಗೆಲುವಿನ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಎರಡನೇ ಅವಧಿಯಲ್ಲಿ ಮರುಹೋರಾಟ ನಡೆಸಿದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಹಾಕಿ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಈ ಮೂಲಕ ಸರಣಿಯನ್ನು 3-1 ರಲ್ಲಿ ಗೆದ್ದುಕೊಂಡಿದೆ. ಒಲಿಂಪಿಕ್ ಅರ್ಹತಾ ಟೂರ್ನಿಗೆ ಸಜ್ಜಾಗುತ್ತಿರುವ ಭಾರತ ತಂಡದವರಿಗೆ ಅಗತ್ಯವಿದ್ದ      ಆತ್ಮವಿಶ್ವಾಸವನ್ನು ಈ ಗೆಲುವು ತಂದುಕೊಟ್ಟಿದೆ.ಭಾನುವಾರ ನಡೆದ ಪಂದ್ಯದ ವಿರಾಮದ ವೇಳೆಗೆ ಭಾರತ 0-3 ರಲ್ಲಿ ಹಿನ್ನಡೆ ಅನುಭವಿಸಿತ್ತು. ಆದರೆ ಎರಡನೇ ಅವಧಿಯಲ್ಲಿ ಅದ್ಭುತ ಹೋರಾಟ ತೋರಿ ಮೂರು ಗೋಲುಗಳನ್ನು ಗಳಿಸಿ ಎದುರಾಳಿ ತಂಡದ ಗೆಲುವಿನ ಕನಸನ್ನು ಭಗ್ನಗೊಳಿಸಿತು. ಯುವರಾಜ್ ವಾಲ್ಮೀಕಿ (43ನೇ ನಿಮಿಷ), ವಿ.ಆರ್. ರಘುನಾಥ್ (49) ಮತ್ತು ಎಸ್.ಕೆ. ಉತ್ತಪ್ಪ (66) ಗೋಲು ತಂದಿತ್ತು ಭಾರತದ ನೆರವಿಗೆ ನಿಂತರು.ಪಂದ್ಯದ ಮೊದಲ ಕೆಲವು ನಿಮಿಷಗಳಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ಭಾರತ ಬಳಿಕ ತನ್ನ ಹಿಡಿತ ಸಡಿಲಗೊಳಿಸಿತು. ಇದರ ಲಾಭ ಪಡೆದ ದಕ್ಷಿಣ ಆಫ್ರಿಕಾ 26ನೇ ನಿಮಿಷದಲ್ಲಿ ಮುನ್ನಡೆ ಪಡೆಯಿತು. ರಿಕಿ ವೆಸ್ಟ್ ತಂಡಕ್ಕೆ ಮೊದಲ ಗೋಲು ತಂದಿತ್ತರು. ಇದಾದ ಐದು ನಿಮಿಷಗಳ ಬಳಿಕ ಇಯಾನ್ ಹಾಲೆ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.ಮೂರು ನಿಮಿಷಗಳ ಬಳಿಕ ಪ್ರವಾಸಿ ತಂಡ ಮತ್ತೊಂದು ಗೋಲು ಗಳಿಸಿತು. ಮಿಗುಯೆಲ್ ಡ ಗ್ರಾಸಾ ಭಾರತದ ಗೋಲ್‌ಕೀಪರ್‌ನ್ನು ತಪ್ಪಿಸಿ ಚೆಂಡನ್ನು ಗುರಿ ಸೇರಿಸಿದರು. ಇದರಿಂದ ವಿರಾಮದ ವೇಳೆ ದಕ್ಷಿಣ ಆಫ್ರಿಕಾ 3-0 ರಲ್ಲಿ ಮೇಲುಗೈ ಪಡೆದಿತ್ತು.ಅಪಾರ ಒತ್ತಡದೊಂದಿಗೆಯೇ ಎರಡನೇ ಅವಧಿಯಲ್ಲಿ ಕಣಕ್ಕಿಳಿದ ಭಾರತ ಚೇತೋಹಾರಿ ಪ್ರದರ್ಶನ ನೀಡಿತು. ರಕ್ಷಣಾ ವಿಭಾಗವನ್ನು ಬಲಪಡಿಸುವ ಜೊತೆಗೆ ಆಕ್ರಮಣಕಾರಿ ಆಟವನ್ನೂ ತೋರಿತು. ಇದರಿಂದ ಮೂರು ಗೋಲುಗಳು ಬಂದವು. ಮಾತ್ರವಲ್ಲ ದಕ್ಷಿಣ ಆಫ್ರಿಕಾ ತಂಡದ ಗೋಲು ಗಳಿಸುವ ಎಲ್ಲ ಪ್ರಯತ್ನವನ್ನು ಯಶಸ್ವಿಯಾಗಿ ತಡೆಯಿತು.ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ 4-0, 2-1 ಅಂತರದ ಗೆಲುವು ಪಡೆದಿದ್ದ ಭಾರತ ಮೂರನೇ ಪಂದ್ಯದಲ್ಲಿ 2-3 ರಲ್ಲಿ ಸೋಲು ಅನುಭವಿಸಿತ್ತು. ಶುಕ್ರವಾರ ನಡೆದ ನಾಲ್ಕನೇ ಪಂದ್ಯದಲ್ಲಿ 4-3 ರಲ್ಲಿ ಜಯ ಪಡೆದ ಆತಿಥೇಯ ತಂಡ ಸರಣಿ ಗೆಲುವನ್ನು ಖಚಿತಪಡಿಸಿಕೊಂಡಿತ್ತು.

ಪ್ರತಿಕ್ರಿಯಿಸಿ (+)