ಶುಕ್ರವಾರ, ಮೇ 7, 2021
20 °C

ಹಾಕಿ: ಭಾರತ-ಪಾಕಿಸ್ತಾನ ಫೈನಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓರ್ಡೊಸ್, ಚೀನಾ (ಪಿಟಿಐ): ಭಾರತ ಹಾಕಿ ತಂಡಕ್ಕೆ ಮತ್ತೆ ಅದೃಷ್ಟ ಖುಲಾಯಿಸಿದೆ. ಶುಕ್ರವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡ ಭಾರತ ಚೊಚ್ಚಲ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿತು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ರಾಜ್ಪಾಲ್ ಸಿಂಗ್ ಬಳಗ ಮತ್ತೆ ಪಾಕಿಸ್ತಾನ ತಂಡವನ್ನೇ ಎದುರಿಸಲಿದೆ.ಅತ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ಭಾರತ- ಪಾಕ್ ನಡುವಿನ ಕೊನೆಯ ಲೀಗ್ ಪಂದ್ಯ 2-2 ಗೋಲುಗಳ ಡ್ರಾದಲ್ಲಿ ಕೊನೆಗೊಂಡಿತು. ಪಾಕ್ ಒಟ್ಟು 10 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆದು ಫೈನಲ್ ಪ್ರವೇಶಿಸಿತು. 9 ಪಾಯಿಂಟ್ ಕಲೆಹಾಕಿದ ಭಾರತ ಎರಡನೇ ಸ್ಥಾನ ಪಡೆದು ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಲು ಅರ್ಹತೆ ಪಡೆಯಿತು.ದಿನದ ಮತ್ತೊಂದು ಪಂದ್ಯದಲ್ಲಿ  ಮಲೇಷ್ಯಾ ತಂಡ 3-2 ರಲ್ಲಿ ಜಪಾನ್‌ಗೆ ಸೋಲಿನ ಕಹಿ ಉಣಿಸಿದ್ದು ಭಾರತಕ್ಕೆ ವರವಾಗಿ ಪರಿಣಮಿಸಿತು. ಈ ಪರಿಣಾಮವಾಗಿಯೇ ಭಾರತ ಫೈನಲ್‌ಗೆ ಲಗ್ಗೆಯಿಟ್ಟಿತು.

ಭಾರತ- ಪಾಕ್ ನಡುವಿನ ಕೊನೆಯ ಲೀಗ್ ಪಂದ್ಯ ಒಂದು ರೀತಿಯಲ್ಲಿ `ಸೆಮಿಫೈನಲ್~ ಹೋರಾಟ ಎನಿಸಿತ್ತು. ಈ ಪಂದ್ಯದಲ್ಲಿ ರೂಪಿಂದರ್ ಪಾಲ್ ಸಿಂಗ್ ಹಾಗೂ ದಾನಿಷ್ ಮುಜ್ತಬಾ ಅವರು ಭಾರತದ ಪರ ಗೋಲು ಗಳಿಸಿದರು.ಪ್ರಸಕ್ತ ಟೂರ್ನಿಯಲ್ಲಿ ಭಾರತ ಆಡಿರುವ ಯಾವ ಪಂದ್ಯದಲ್ಲಿಯೂ ಸೋಲು ಕಂಡಿಲ್ಲ. ಇದುವರೆಗೂ ಒಂದು ಸೋಲು ಕಾಣದ ರಾಜ್ಪಾಲ್ ಸಿಂಗ್ ಪಡೆ ಫೈನಲ್ ಪಂದ್ಯದಲ್ಲಿ ಯಶಸ್ವಿ ಹೋರಾಟ ನಡೆಸಿದರೆ ಪ್ರಶಸ್ತಿ ಮಡಿಲು ಸೇರಲಿದೆ.ಆರಂಭಿಕ ಹೋರಾಟ ನೋಡಿದರೆ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಸುಲಭವಾಗಿ ಗೆಲುವು ಪಡೆಯುತ್ತದೆ ಎನ್ನುವ ಲೆಕ್ಕಾಚಾರವಿತ್ತು. ದ್ವಿತಿಯಾರ್ಧದಲ್ಲಿ ಚುರುಕಿನ ಆಟವಾಡಿದ ಭಾರತ ಅದಕ್ಕೆ ಅವಕಾಶ ನೀಡಲಿಲ್ಲ.ಸ್ಟ್ರೈಕರ್ ಮೊಹಮ್ಮದ್ ವಾಕಾಸ್ 40ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ಪಾಕಿಸ್ತಾನಕ್ಕೆ ಮುನ್ನಡೆ ತಂದುಕೊಟ್ಟರು. ಈ ಗೋಲು ಬಂದ ಮೂರು ನಿಮಿಷದಲ್ಲಿಯೇ ಮೊಹಮ್ಮದ್ ಇರ್ಫಾನ್ ಮತ್ತೊಂದು ಗೋಲು ಕಲೆ ಹಾಕಿ ಎದುರಾಳಿ ತಂಡವನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಿದರು. ಆಗ ಭಾರತ ತಂಡದಲ್ಲಿ ಸೋಲಿನ ಆತಂಕ ಮನೆ ಮಾಡಿತ್ತು.ಆದರೆ, ರೂಪಿಂದರ್ ಪಾಲ್ ಹಾಗೂ ಮುಜ್ತಬಾ ಆತಂಕವನ್ನೆಲ್ಲಾ ದೂರ ಮಾಡಿದರು. ಪೆನಾಲ್ಟಿ ಕಾರ್ನರ್ ಮೂಲಕ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ರೂಪಿಂದರ್ 46ನೇ ನಿಮಿಷದಲ್ಲಿ ಗೋಲು ತಂದಿತ್ತರು. ನಂತರ 53ನೇ ನಿಮಿಷದಲ್ಲಿ ದಾನಿಷ್  ಇನ್ನೊಂದು ಗೋಲು ಸೇರಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು.ಪಂದ್ಯದ ಮೊದಲಾರ್ಧದಲ್ಲಿ ಭಾರತಕ್ಕೆ ಗೋಲು ಗಳಿಸಲು ಸಾಕಷ್ಟು ಅವಕಾಶಗಳು ಲಭಿಸಿದ್ದವು. ಗುರ್ವಿಂದರ್ ಚಾಂದಿ, ಎಸ್.ವಿ. ಸುನಿಲ್, ರಘುನಾಥ್ ಇದರ ಪ್ರಯೋಜನ ಪಡೆಯಲು ಯತ್ನಿಸಿದರಾದರೂ, ಯಶಸ್ಸು ಕಾಣಲಿಲ್ಲ.ದಕ್ಷಿಣ ಕೊರಿಯಾ ಹಾಗೂ ಆತಿಥೇಯ ಚೀನಾ ತಂಡಗಳ ನಡುವಿನ ಪಂದ್ಯವೂ 1-1ರಲ್ಲಿ ಡ್ರಾದಲ್ಲಿ ಅಂತ್ಯ ಕಂಡಿತು. ಪಾಯಿಂಟ್ ಪಟ್ಟಿಯಲ್ಲಿ ಕೊರಿಯಾ ಅಂತಿಮ ಸ್ಥಾನ ಪಡೆಯಿತು. 7 ಪಾಯಿಂಟ್ ಹೊಂದಿದ್ದ ಜಪಾನ್ ಶುಕ್ರವಾರ ಮಲೇಷ್ಯಾ ತಂಡವನ್ನು ಸೋಲಿಸಿದ್ದರೆ, ಮತ್ತು ಚೀನಾ ಗೆಲುವು ಪಡೆದಿದ್ದರೆ ಫೈನಲ್ ಪ್ರವೇಶಿಸುವುದು ಭಾರತಕ್ಕೆ ಕಷ್ಟವಾಗುತ್ತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.