ಬುಧವಾರ, ಜನವರಿ 22, 2020
24 °C

ಹಾಕಿ: ಮಿಂಚಿದ ಭಾರತದ ಮಹಿಳೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ಮಹಿಳಾ ಹಾಕಿ ತಂಡದವರು ಮತ್ತೆ ಮಿಂಚು ಹರಿಸಿದ್ದಾರೆ. ಅದಕ್ಕೆ ಸಾಕ್ಷಿ ಅಜರ್‌ಬೈಜಾನ್ ಎದುರಿನ ಹಾಕಿ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿದ್ದು.

ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸರಣಿಯ ನಾಲ್ಕನೇ ಹಾಗೂ ಕೊನೆಯ ಪಂದ್ಯದಲ್ಲೂ ಭಾರತ 2-0 ಗೋಲುಗಳಿಂದ ಅಜರ್‌ಬೈಜಾನ್ ತಂಡವನ್ನು ಪರಾಭವಗೊಳಿಸಿತು.ಗೋಲು ಗಳಿಸಲು ನಡೆಸಿದ ಯತ್ನದಲ್ಲಿ  ಭಾರತ ತಂಡದವರು ವಿರಾಮದವರೆಗೆ ಸಫಲರಾಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ರೂಪಿಸಿದ ಯೋಜನೆ ಫಲ ನೀಡಿತು. ಜಸ್ಪೀತ್ ಕೌರ್ (44ನೇ ನಿಮಿಷ) ಹಾಗೂ ರಾಣಿ ರಾಂಪಾಲ್ (68ನೇ ನಿ.) ಚೆಂಡನ್ನು ಗುರಿ ಸೇರಿಸಿದರು.ಗಾಯದ ಕಾರಣ ಜಸ್ಪೀತ್ ಹಾಗೂ ರಾಣಿ ಮೂರನೇ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ ಇಲ್ಲಿ ಗಮನಾರ್ಹ ಪ್ರದರ್ಶನ ತೋರಿದರು. ನಾಯಕಿ ಅಸುಂತಾ ಲಾಕ್ರಾ ಕೂಡ ಚುರುಕಿನ ಆಟದ ಮೂಲಕ ಎದುರಾಳಿ ಆಟಗಾರ್ತಿಯರನ್ನು ಸತಾಯಿಸಿದರು.ಆದರೆ ಹಿಂದಿನ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿದ್ದ ಅಜರ್‌ಬೈಜಾನ್ ಹಲವು ಅವಕಾಶಗಳನ್ನು ತಪ್ಪಿಸಿಕೊಂಡಿತು. ಪುರುಷರಿಗೆ ಸೋಲು: ಆದರೆ ಭಾರತ ಪುರುಷರು ನಿರಾಸೆ ಅನುಭವಿಸಿದರು. ದಕ್ಷಿಣ ಆಫ್ರಿಕಾ ತಂಡದವರು ಹಾಕಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ  3-1 ಗೋಲುಗಳಿಂದ ಆತಿಥೇಯ ಭಾರತ ತಂಡವನ್ನು ಸೋಲಿಸಿದರು.

ಈ ಮೂಲಕ ಸರಣಿಯನ್ನು ಜೀವಂತವಾಗಿಸಿದರು. ಭಾರತ ತಂಡದವರು ಈ ಮೊದಲಿನ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಿಜಯದ ಕನಸಿನಲ್ಲಿದ್ದರು. ಆದರೆ ಅದಕ್ಕೆ ದಕ್ಷಿಣ ಆಫ್ರಿಕಾ ಅವಕಾಶ ನೀಡಲಿಲ್ಲ.

 

ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ 2-1ರಲ್ಲಿ ಮುಂದಿದೆ. ಈ ಪಂದ್ಯದಲ್ಲಿ ಸಂದೀಪ್ ಸಿಂಗ್ ಹೊರತುಪಡಿಸಿ ಉಳಿದವರಿಂದ ಹೇಳಿಕೊಳ್ಳುವ ಆಟ ಮೂಡಿಬರಲಿಲ್ಲ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮೊದಲ ಪಂದ್ಯ ಆಡಿದ ಯುವರಾಜ್ ವಾಲ್ಮೀಕಿ ಕೂಡ ತಮ್ಮ ಎಂದಿನ ಪ್ರದರ್ಶನ ನೀಡಲು ವಿಫಲರಾದರು. ಸರಣಿಯ ನಾಲ್ಕನೇ ಪಂದ್ಯ ಶುಕ್ರವಾರ ನಡೆಯಲಿದೆ.

ಪ್ರತಿಕ್ರಿಯಿಸಿ (+)