ಶುಕ್ರವಾರ, ಏಪ್ರಿಲ್ 16, 2021
25 °C

ಹಾಕಿ: ಮೈಕಲ್ ನಾಬ್ಸ್ ರಾಜೀನಾಮೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ: ಮೈಕಲ್ ನಾಬ್ಸ್ ರಾಜೀನಾಮೆಗೆ ಒತ್ತಾಯ

ರಾಂಚಿ (ಪಿಟಿಐ): ಭಾರತ ಹಾಕಿ ತಂಡಕ್ಕೆ ಮೈಕಲ್ ನಾಬ್ಸ್ ಸೂಕ್ತ ವ್ಯಕ್ತಿಯಲ್ಲ. ಆದ್ದರಿಂದ ಕೂಡಲೇ ಅವರನ್ನು ಕೋಚ್ ಹುದ್ದೆಯಿಂದ ತೆಗೆದು ಹಾಕಬೇಕು ಎಂದು ಒಲಿಂಪಿಯನ್ ಮೈಕಲ್ ಕಿಂಡೊ ಒತ್ತಾಯಿಸಿದ್ದಾರೆ.

`ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಕೆಟ್ಟ ಪ್ರದರ್ಶನ ನೀಡಿದೆ. ನಾಬ್ಸ್ ನಕಾರಾತ್ಮಕ ಮನೋಭಾವ ಹೊಂದಿದ್ದಾರೆ. ಆದ್ದರಿಂದ ಆತನನ್ನು ಇಷ್ಟಪಡುವುದಿಲ್ಲ. ಆಟಗಾರರನ್ನು ಹುರಿದುಂಬಿಸಿ ಪ್ರೋತ್ಸಾಹಿಸುವ ಕೆಲಸವನ್ನು ಅವರು ಮಾಡಲಿಲ್ಲ. ಆದ್ದರಿಂದ ನಾಬ್ಸ್ ಕೂಡಲೇ ರಾಜೀನಾಮೆ ನೀಡಬೇಕು~ ಎಂದು ಕಿಂಡೊ ಆಗ್ರಹಿಸಿದ್ದಾರೆ.

`ಒಲಿಂಪಿಕ್ಸ್‌ನಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲಿಯೂ ಭಾರತ ಸೋಲು ಕಂಡಿದೆ. ಕೊನೆಯ ಎರಡು ಸ್ಥಾನಗಳನ್ನು ನಿರ್ಧರಿಸಲು ಕೊನೆಯ ಪಂದ್ಯವಿದೆ. ಆಟಗಾರರ ಬಗ್ಗೆ ನಾಬ್ಸ್ ಟೀಕೆ ಮಾಡುತ್ತಿರುವುದು ಸರಿಯಲ್ಲ. ಒಲಿಂಪಿಕ್ಸ್‌ನಲ್ಲಿ ಎಂಟು ಸಲ ಚಿನ್ನದ ಪದಕ ಜಯಿಸಿದ ಇತಿಹಾಸ ಹೊಂದಿರುವ ಭಾರತ ಒಲಿಂಪಿಕ್ಸ್‌ನಲ್ಲಿ ನೀಡಿದ ಅತ್ಯಂತ ಕೆಟ್ಟ ಪ್ರದರ್ಶನವಿದು~ ಎಂದು 1972ರ ಮ್ಯೂನಿಕ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಸದಸ್ಯರಾಗಿದ್ದ ಕಿಂಡೊ ನುಡಿದರು.

ಆಟಗಾರರಿಗೆ ಸರ್ದಾರ್ ಸ್ಫೂರ್ತಿಯಾಗಬೇಕು (ಲಂಡನ್ ವರದಿ): ಭಾರತ ತಂಡದ ಎಲ್ಲಾ ಆಟಗಾರರಿಗೆ ಸರ್ದಾರ್ ಸಿಂಗ್ ಸ್ಫೂರ್ತಿಯಾಗಬೇಕು ಎಂದು ನಾಬ್ಸ್ ಹೇಳಿದ್ದಾರೆ.

`ಒಲಿಂಪಿಕ್ಸ್‌ನಲ್ಲಿ ಕೊನೆಯ ಪಂದ್ಯವೊಂದು ಬಾಕಿಯಿದೆ. ಆ ಪಂದ್ಯದಲ್ಲಾದರೂ ಗೆಲುವು ಪಡೆಯಬೇಕು. ಸರ್ದಾರ್ ಎಲ್ಲಾ ವಿಭಾಗಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಾರೆ. ಆದ್ದರಿಂದ ಅವರು ಉಳಿದ ಆಟಗಾರರಿಗೆ ಪ್ರೇರಣೆಯಾಗಬೇಕು~ ಎನ್ನುವ ಅಭಿಪ್ರಾಯವನ್ನು ನಾಬ್ಸ್ ವ್ಯಕ್ತಪಡಿಸಿದ್ದಾರೆ.

ತರಬೇತಿ ಶಿಬಿರದಲ್ಲಿ ಭಾರತದ ಆಟಗಾರರು ಉತ್ತಮ ಫಿಟ್‌ನೆಸ್ ಪಡೆದುಕೊಂಡಿದ್ದರು. ಆತ್ಮ ವಿಶ್ವಾಸ ಕಳೆದುಕೊಂಡಿರುವ ತಂಡಕ್ಕೆ ಸರ್ದಾರ್ ಮಾತ್ರ ಉತ್ತಮ ಪ್ರೇರಕರಾಗಬಲ್ಲರು ಎಂಬುದು ನಾಬ್ಸ್ ಅನಿಸಿಕೆ.

ಆಡಳಿತದ ಭಾಗವಾಗಬೇಕು: (ನವದೆಹಲಿ ವರದಿ): ಹಾಕಿ ಇಂಡಿಯಾ ಹಾಗೂ ಭಾರತ ಹಾಕಿ ಫೆಡರೇಷನ್‌ಗಳ ಗುದ್ದಾಟದಿಂದ ದೇಶದಲ್ಲಿ ಹಾಕಿ ಸೊರಗಿ ಹೋಗಿದೆ. ಆದ್ದರಿಂದ ನಾನೂ ಹಾಕಿ ಆಡಳಿತದ ಭಾಗವಾಗಬೇಕೆಂದು ಬಯಸುತ್ತೇನೆ ಎಂದು ಭಾರತ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೆ ಹೇಳಿದ್ದಾರೆ.

ಈ ಸಂಸ್ಥೆಗಳ ಒಳಜಗಳ ಹೀಗೆಯೇ ಮುಂದುವರಿದರೆ, ಭಾರತದಲ್ಲಿ ಹಾಕಿ ಅಭಿವೃದ್ಧಿಯಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.  ಈ ಸಂಸ್ಥೆಗಳ ನಡುವಿನ ಗುದ್ದಾಟದ ಜೊತೆಗೆ ರಾಜಕೀಯವೂ ಸೇರಿಕೊಂಡಿದೆ. ಇದಕ್ಕೆ ಹಾಕಿ ಬಲಿಯಾಗುತ್ತಿದೆ. ಆದ್ದರಿಂದ ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ಈ ಸಮಸ್ಯೆ ಪರಿಹರಿಸಬೇಕು. ಆದ್ದರಿಂದ ನಾನೂ ಆಡಳಿತದ ಭಾಗವಾಗಿರಬೇಕೆಂದು ಅಪೇಕ್ಷೆ ಪಡುತ್ತೇನೆ~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.