ಹಾಕಿ: ವಿಜಯ ಸಿಂಹಾಸನದತ್ತ ಚೆಟ್ರಿ ಪಡೆಯ ಚಿತ್ತ

7

ಹಾಕಿ: ವಿಜಯ ಸಿಂಹಾಸನದತ್ತ ಚೆಟ್ರಿ ಪಡೆಯ ಚಿತ್ತ

Published:
Updated:
ಹಾಕಿ: ವಿಜಯ ಸಿಂಹಾಸನದತ್ತ ಚೆಟ್ರಿ ಪಡೆಯ ಚಿತ್ತ

ನವದೆಹಲಿ: ನಾಲ್ಕು ವರ್ಷದ ಹಿಂದೆ ಅಂಟಿದ ಕಳಂಕವನ್ನು ಯಮುನಾ ನದಿಯಲ್ಲಿ ತೊಳೆದು ಕೊಳ್ಳಲು ಭಾರತದ ಪುರುಷರ ಹಾಕಿ ತಂಡ ಸಿದ್ಧವಾಗಿದೆ.ಮೈನಡುಗಿಸುವ ಚಳಿಯ ತೆಕ್ಕೆಯಲ್ಲಿ ಸಿಕ್ಕಿಹಾಕಿಕೊಂಡಿರುವ ನವದೆಹಲಿಯ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭವಾಗುವ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯ ವಿಜಯ ಸಿಂಹಾಸನದ ಮೇಲೆ ಭರತ್ ಚೆಟ್ರಿ ಬಳಗ ದೃಷ್ಟಿ ನೆಟ್ಟಿದೆ.ಲಂಡನ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕಾದರೆ ಈ ಅರ್ಹತಾ ಟೂರ್ನಿಯಲ್ಲಿ ಶತಾಯಗತಾಯ ಗೆಲ್ಲಲೇಬೇಕಾದ ಸವಾಲು ಭಾರತದ ಯುವಪಡೆಯ ಮುಂದಿದೆ.2008ರಲ್ಲಿ ಬಿಜಿಂಗ್ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಗಳಿಸಲು ವಿಫಲವಾಗಿದ್ದ ಭಾರತಕ್ಕೆ ಇದು ಮರುಜನ್ಮ ಪಡೆಯುವ ಅವಕಾಶ. ಟೂರ್ನಿಯಲ್ಲಿ ಆತಿಥೇಯ ಭಾರತ, ಕೆನಡಾ, ಇಟಲಿ, ಪೊಲೆಂಡ್, ಫ್ರಾನ್ಸ್, ಸಿಂಗಪುರ ತಂಡಗಳು ಸೆಣಸಲಿವೆ. ಟೂರ್ನಿಯ ವಿಜೇತ ತಂಡ ಮಾತ್ರ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುತ್ತದೆ. ಶನಿವಾರ ರಾತ್ರಿ ಎಂಟು ಗಂಟೆಗೆ ನಡೆಯುವ ಪಂದ್ಯದಲ್ಲಿ ಭಾರತ        ತಂಡವು ದುರ್ಬಲ ತಂಡ ಸಿಂಗಪುರವನ್ನು ಎದುರಿಸಲಿದೆ.ಈ ತಂಡದಲ್ಲಿರುವ ಎಲ್ಲ ಆಟಗಾರರಿಗೂ ಇದು ಚೊಚ್ಚಲ ಪಂದ್ಯ. ಸಿಂಗಪುರದ ವಿವಿಧ ವಿಶ್ವವಿದ್ಯಾಲಯಗಳಿಂದ ಆಯ್ಕೆ ಮಾಡಲಾಗಿರುವ 18 ಆಟಗಾರರು ಈ ತಂಡದಲ್ಲಿದ್ದಾರೆ. 41ನೇ ರ‌್ಯಾಂಕಿಂಗ್‌ನ ಸಿಂಗಪುರ ತಂಡ ಭಾರತಕ್ಕೆ ಯಾವುದೇ ರೀತಿಯಲ್ಲಿಯೂ ಸರಿಸಾಟಿಯಲ್ಲ. ಟೂರ್ನಿಯಲ್ಲಿ ಭಾಗವಹಿಸಬೇಕಿದ್ದ ಯುನೈಟೆಡ್ ಸ್ಟೇಟ್ಸ್ ತಂಡವು ಗಾಯಾಳುಗಳ ಸಮಸ್ಯೆಯಿಂದ ಹಿಂದೆ ಸರಿದಿತ್ತು.ಇದರಿಂದಾಗಿ ಸಿಂಗಪುರಕ್ಕೆ ಅವಕಾಶ ಸಿಕ್ಕಿದೆ. 50 ವರ್ಷಗಳ ನಂತರ ಇಂತಹ ಅವಕಾಶ ಪಡೆದಿರುವ ಸಿಂಗಪುರ ತಂಡವನ್ನು ಮರಳಿ ಕಟ್ಟಲು ಇದು ಸದವಕಾಶ ಎಂದು ತಂಡದ ತರಬೇತುದಾರ ಸೊಲೋಮನ್ ಯುಸುಫ್ ಕಸೂಜಿ ಈಗಾಗಲೇ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.ಒಲಿಂಪಿಕ್ಸ್‌ನಲ್ಲಿ ಎಂಟು ಬಾರಿ ಪದಕ ಗೆದ್ದಿರುವ ಮತ್ತು ಪ್ರಸಕ್ತ ಟೂರ್ನಿಯ ಫೆವರಿಟ್ ತಂಡವಾಗಿರುವ ಭಾರತದ ಎದುರಿಗೆ ಆಡಿ ಅನುಭವ ಗಳಿಸುವ ಇರಾದೆ ಅವರದ್ದು. ಆದರೆ ಅತಿ ಆತ್ಮವಿಶ್ವಾಸದಿಂದ ಭಾರತ ತಂಡವು ಎಚ್ಚರ ತಪ್ಪಿದರೆ `ಪವಾಡ~ವೂ ಘಟಿಸಬಹುದು!ಚೆಟ್ರಿಗೆ ದ್ವಿಪಾತ್ರ: ಗೋಲುಪೆಟ್ಟಿಗೆಯ ಮುಂದೆ ಗೋಡೆಯಾಗಿ ನಿಲ್ಲುವುದರ ಜೊತೆಗೆ ನಾಯಕನ ಪಾತ್ರವನ್ನೂ ವಹಿಸುವ ಜವಾಬ್ದಾರಿಯಿದೆ. ಡಿಫೆಂಡರ್ ರೂಪಿಂದರ್ ಪಾಲ್ ಸಿಂಗ್, ಕನ್ನಡಿಗ ವಿ.ಆರ್. ರಘುನಾಥ್, ಸಂದೀಪ್ ಸಿಂಗ್ ಅವರ ಡ್ರ್ಯಾಗ್ ಫ್ಲಿಕ್‌ಗಳು ತಂಡಕ್ಕೆ  ಗೆಲುವಿನ ಕಾಣಿಕೆ ನೀಡುವ ಭರವಸೆ ಅವರಿಗೆ ಇದೆ. ಮಿಡ್‌ಫೀಲ್ಡರ್ ಇಗ್ನೇಸ್ ಟಿರ್ಕಿ, ಸರ್ದಾರ್ ಸಿಂಗ್ ಅವರ ಅನುಭವ, ಫಾರ್ವರ್ಡ್‌ನಲ್ಲಿ ಯುವರಾಜ ವಾಲ್ಮೀಕಿ, ತುಷಾರ್ ಖಾಂಡ್ಕರ್, ದನೀಶ್ ಮುಜ್ತಾಬಾ, ಎಸ್.ವಿ. ಸುನಿಲ್ ಅವರ ಚುರುಕುತನದ ಶಕ್ತಿ ಗೆಲುವಿನತ್ತ ಒಯ್ಯುವ ಭರವಸೆ ತಂಡದ ಕೋಚ್ ಮೈಕೆಲ್ ನಾಬ್ಸ್‌ಗೆ ಇದೆ. ಅನುಭವಿ ಆಟಗಾರರಾದ ರಾಜ್ಪಾಲ್ ಸಿಂಗ್ ಮತ್ತು ಅರ್ಜುನ್ ಹಾಲಪ್ಪ ಅವರ ಕೊರತೆಯನ್ನು ಈಗಿರುವ ಆಟಗಾರರು ನೀಗಿಸುವ ಭರವಸೆಯೂ ಅವರದ್ದು.

ಪಂದ್ಯದ ಮೊದಲ 20-25 ನಿಮಿಷಗಳಲ್ಲಿ ತಂಡದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವಿಜೃಂಭಿಸುವ ನಿರೀಕ್ಷೆಯಿದೆ. ಕಳೆದ ಬಾರಿಗಿಂತಲೂ ಈಗಿನ ತಂಡ ಅತ್ಯಂತ ಫಿಟ್ ಎಂದು ಹಾಕಿ ಇಂಡಿಯಾ ಘೋಷಿಸಿದೆ.ವಿಶ್ವರ‌್ಯಾಂಕಿಂಗ್‌ನಲ್ಲಿ ಹತ್ತನೇ ಸ್ಥಾನದಲ್ಲಿರುವ ಭಾರತ ಈ ಟೂರ್ನಿಯ ಉಳಿದ ತಂಡಗಳಿಗಿಂತ ಬಲಶಾಲಿ ಮತ್ತು ಅನುಭವಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸುಲ್ತಾನ್ ಅಜ್ಲನ್ ಷಾ ಕಪ್, 2010ರ ಕಾಮನ್‌ವೆಲ್ತ್ ಗೇಮ್ಸನಲ್ಲಿ ಬೆಳ್ಳಿ ಪದಕ ಗಳಿಸಿರುವ ತಂಡದ ಬಹುತೇಕ ಸದಸ್ಯರು ಈಗ ಇದ್ದಾರೆ.ಇದೆಲ್ಲಕ್ಕಿಂತ ಹೆಚ್ಚಾಗಿ ಲಂಡನ್‌ಒಲಿಂಪಿಕ್ಸ್‌ನಲ್ಲಿ ಆಡುವುದು ಶತಸಿದ್ಧ.  ಆ ಮೂಲಕ ರಾಷ್ಟ್ರೀಯ ಕ್ರೀಡೆಯ ಗತವೈಭವವನ್ನು ಮರಳಿ ತರುವುದೇ ತಮ್ಮ ಧ್ಯೇಯ ಎಂದು ಘೋಷಿಸಿರುವ ಭರತ್ ಚೆಟ್ರಿ ಅಗ್ನಿಪರೀಕ್ಷೆಗೆ ಸಿದ್ಧವಾಗಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry